ಪ್ರಶ್ನಿಸುವುದು ಅರಿವಿನ ಹೆಬ್ಬಾಗಿಲಾಗಬೇಕೆ ಹೊರತು ಅಹಂಕಾರದ ತೋರು ಬೆರಳಾಗಬಾರದು…

ಪ್ರಶ್ನಿಸುವುದು ಅರಿವಿನ ಹೆಬ್ಬಾಗಿಲಾಗಬೇಕೆ ಹೊರತು ಅಹಂಕಾರದ ತೋರು ಬೆರಳಾಗಬಾರದು…

" ಕೈ ಮುಗಿದು ಒಳಗೆ ಬಾ ಯಾತ್ರಿಕನೆ ಶಿಲೆಯಲ್ಲವಿದು ಕಲೆಯ ಬಲೆಯೊ "

" ಕೈಮುಗಿದು ಒಳಗೆ ಬಾ ಯಾತ್ರಿಕನೆ ಇದು ಸಸ್ಯ ಕಾಶಿ "

" ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬನ್ನಿ "....

ಕುವೆಂಪು ಅವರು ವಿವಿಧ ಸಂದರ್ಭದಲ್ಲಿ ಹೇಳಿರುವ ಅಥವಾ ಬರೆದಿರುವ ಮಾತುಗಳನ್ನು ವಿವಿಧ ರೀತಿಯಲ್ಲಿ ವಿವಿಧ ಸ್ಥಳಗಳಲ್ಲಿ ಈ ರೀತಿಯಾಗಿ ಉಪಯೋಗಿಸಿಕೊಳ್ಳಲಾಗಿದೆ. ಇದೀಗ ಇದರದೇ ಒಂದು ಭಾವದಲ್ಲಿ ಕರ್ನಾಟಕ ಸರ್ಕಾರ " ಜ್ಞಾನ ದೇಗುಲವಿದು ಧೈರ್ಯವಾಗಿ ಪ್ರಶ್ನಿಸು" ಎಂದು ಬದಲಾವಣೆ ಮಾಡಿಕೊಳ್ಳುವ ಪ್ರಯತ್ನವನ್ನು ಮಾಡಲಾಗಿದೆ.

ಒಬ್ಬ ಸಾಹಿತಿ, ಚಿಂತಕ, ದಾರ್ಶನಿಕ, ವಿಚಾರವಾದಿ, ಪ್ರಜ್ಞಾವಂತ ಯಾರೇ ಆಗಿರಲಿ ಒಂದು ಚಿಂತನೆಯನ್ನು ಆಗಿನ ಸಂದರ್ಭಕ್ಕೆ ತಕ್ಕಂತೆ ತನ್ನ ಅರಿವಿನ ಮಿತಿಯಲ್ಲಿ ಹೇಳಿರುತ್ತಾರೆ. ನಾವು ಅದನ್ನು ಹಾಗೆಯೇ ಉಪಯೋಗಿಸಿಕೊಂಡು ವ್ಯಾಖ್ಯಾನ ಮಾಡಬೇಕೆ ಹೊರತು ಅದನ್ನು, ಅವರ ಪದಗಳನ್ನು ಬದಲಾಯಿಸುವುದು ಅಷ್ಟು ಉತ್ತಮ ನಡೆಯಲ್ಲ. ಅರ್ಥ ಸಂದರ್ಭ ಏನೇ ಇರಲಿ ಅಥವಾ ಅದೇ ಸಾರಾಂಶ ಹೊರಹೊಮ್ಮಲಿ. ಆದರೆ ಆ ವ್ಯಕ್ತಿ ಹೇಳದೆ ಇರುವ ಪದಗಳನ್ನ ನಾವು ಸೇರಿಸುವುದು ಖಂಡಿತ ಸ್ವೀಕಾರಾರ್ಹವಲ್ಲ.

ಧೈರ್ಯವಾಗಿ ಪ್ರಶ್ನಿಸುವ ವಿಷಯವನ್ನು ಬಹಳಷ್ಟು ವಿದ್ವಾಂಸರು, ಚಿಂತಕರು ಹಿಂದಿನಿಂದ ಹೇಳುತ್ತಲೇ ಬಂದಿದ್ದಾರೆ. ಭಾರತೀಯ ಸಮಾಜದಲ್ಲಿ ವೇದ ಉಪನಿಷತ್ತುಗಳು ಸಹ ಪ್ರಶ್ನಿಸುವುದನ್ನು ಸ್ವೀಕರಿಸುತ್ತದೆ. ಗೌತಮ ಬುದ್ಧರು ಪ್ರಶ್ನಿಸದೆ ಏನನ್ನು ಒಪ್ಪಿಕೊಳ್ಳಬೇಡ ಎಂದು ಹೇಳಿದ್ದಾರೆ. ಖ್ಯಾತ ಚಿಂತಕರಾದ ಜಿಡ್ಡು ಕೃಷ್ಣಮೂರ್ತಿಯವರು ಪ್ರಶ್ನಿಸುತ್ತಲೇ ಉತ್ತರವನ್ನು ಕಂಡುಕೊಳ್ಳುವ ವಿಧಾನಗಳನ್ನು ಬಹಳ ಸ್ಪಷ್ಟವಾಗಿ ಮತ್ತು ಅರ್ಥ ಪೂರ್ಣವಾಗಿ ಹೇಳಿದ್ದಾರೆ. ಮತ್ತೊಬ್ಬ ವೈಜ್ಞಾನಿಕ ವಿಚಾರವಾದಿ ಎಚ್‌. ನರಸಿಂಹಯ್ಯನವರು ಸಹ ಪ್ರಶ್ನಿಸದೆ ಏನನ್ನು ಒಪ್ಪಿಕೊಳ್ಳಬೇಡಿ ಎಂದು ಮತ್ತೆ ಮತ್ತೆ ಹೇಳಿದ್ದಾರೆ.

ಇದನ್ನು ಹೊರತುಪಡಿಸಿಯು ಭಾರತದಲ್ಲಿ ಅಷ್ಟೇ ಅಲ್ಲ ವಿಶ್ವದ ಅನೇಕ ಚಿಂತಕರು ಪ್ರಶ್ನಿಸುತ್ತಲೇ ಅದು ಒಪ್ಪಿಗೆಯಾದಲ್ಲಿ ಸ್ವೀಕರಿಸಿ ಅಥವಾ ತಿರಸ್ಕರಿಸಿ ಎನ್ನುವ ಮಾತುಗಳನ್ನು ಹೇಳಿದ್ದಾರೆ. ಈ ವಿಷಯದಲ್ಲಿ ಸರ್ಕಾರಗಳು ಅಥವಾ ಇಲ್ಲಿನ ಅಧಿಕಾರಿಗಳು ಒಂದಷ್ಟು ವಿವೇಚನೆ ಬಳಸಬೇಕಾಗುತ್ತದೆ. ಇಂದಿನ ಎಡಬಲಗಳ ಸೈದ್ಧಾಂತಿಕ ಸಂಘರ್ಷದಲ್ಲಿ ಪ್ರತಿಯೊಂದು ಸಹ ವಿಮರ್ಶೆಗೆ, ಗುಮಾನಿಗೆ, ಅನುಮಾನಕ್ಕೆ ಎಡೆ ಮಾಡಿಕೊಡುತ್ತದೆ. ಸರಿ ತಪ್ಪುಗಳು ಹೆಚ್ಚು ಚರ್ಚೆಯಾಗುವುದಿಲ್ಲ. ಏಕೆಂದರೆ ವಿವಾದವಾಗಲು ಮಾಧ್ಯಮಗಳು ಕಾಯುತ್ತಿರುವಂತೆ ಒಂದು ವಿಷಯದ ಪರವಾಗಿ ವಕೀಲಿಕೆ ಪ್ರಾರಂಭವಾಗುತ್ತದೆ. ಪರ ಮತ್ತು ವಿರೋಧ ಚರ್ಚೆಯಲ್ಲಿ ಎಲ್ಲಕ್ಕೂ ಅನುಕೂಲವಾಗುವ ಕೆಲವು ಅಂಶಗಳನ್ನೇ ತಮ್ಮ ಮೂಗಿನ ನೇರಕ್ಕೆ ಹೇಳುತ್ತಾ ಹೋಗುತ್ತಾರೆ.

ಬದಲಾವಣೆ ಜಗದ ನಿಯಮ ನಿಜ, ಆದರೆ ಬದಲಾವಣೆಯ ದಿಕ್ಕುಗಳು ಸಹ ಅರಿವಿನ ಮೂಲಕ ಬಂದರೆ ಹೆಚ್ಚು ಅರ್ಥಪೂರ್ಣವಾಗಿರುತ್ತದೆ.  ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬನ್ನಿ ಎನ್ನುವುದನ್ನು ಉಳಿಸಿಕೊಂಡು ಗೌತಮ ಬುದ್ಧರ ಪ್ರಶ್ನಿಸದೆ ಏನನ್ನು ಒಪ್ಪಿಕೊಳ್ಳಬೇಡಿ ಎನ್ನುವುದನ್ನು ಇನ್ನೊಂದು ವಾಕ್ಯವಾಗಿ ಬೇರೆ  ಬರೆದಿದ್ದರೆ ಅದು ಹೆಚ್ಚು ವಿವೇಚನೆಯಿಂದ ಕೂಡಿರುತ್ತಿತ್ತು.

ಇನ್ನು ಪ್ರಶ್ನಿಸುವುದು ಎಂದರೇನು ? ಈ ವಿವಾದ ಮಾಧ್ಯಮಗಳಲ್ಲಿ ಪ್ರಸಾರವಾಗುವಾಗ ನನ್ನ ಆತ್ಮೀಯ ಮಿತ್ರರೊಬ್ಬರು ಕರೆ ಮಾಡಿ ಚರ್ಚಿಸುತ್ತಾ ಹೀಗೆ ಹೇಳಿದರು," ಶಾಲಾ ದಿನಗಳಲ್ಲಿಯೇ ಪ್ರಶ್ನಿಸುವ ಮನೋಭಾವ ಉತ್ತಮವೆನೋ ನಿಜ. ಆದರೆ ಅದು ಅಪಾಯಕಾರಿಯೂ ಆಗಬಹುದಲ್ಲವೇ, ಪ್ರಶ್ನಿಸುವುದನ್ನೇ ಒಂದು ಪ್ರಕ್ರಿಯೆಯಾಗಿ ಮಕ್ಕಳು ಬೆಳೆಸಿಕೊಂಡರೆ ಅವರಲ್ಲಿನ ಸ್ವೀಕರಿಸುವ ಮನೋಭಾವ ಕಡಿಮೆಯಾಗುವುದಿಲ್ಲವೇ,  ಪ್ರತಿಯೊಂದನ್ನು ಪ್ರಶ್ನಿಸಲೇಬೇಕು ಎನ್ನುವ ಮನಸ್ಥಿತಿ ಅವರಲ್ಲಿ ಅತಿರೇಕದ ಭಾವನೆಯನ್ನು ತುಂಬುವುದಿಲ್ಲವೇ, ಅವರೊಳಗಿನ ಕಲಿಕೆಯ ಸಂಯಮ ಕಡಿಮೆಯಾಗುವುದಿಲ್ಲವೇ?

ಹೌದು ಪ್ರಶ್ನಿಸಬೇಕು ನಿಜ ಶಾಲೆಗಳಲ್ಲಿ ಸಹ ವಿದ್ಯಾರ್ಥಿಗಳ ಬುದ್ಧಿಮತ್ತೆಯನ್ನು ಪರೀಕ್ಷಿಸಲು ಪ್ರಶ್ನೆಗಳ ಮುಖಾಂತರವೇ ಅಂಕಗಳನ್ನು ನಿಗದಿಪಡಿಸಲಾಗುತ್ತದೆ. ಅದೆಲ್ಲವೂ ಒಂದು ಹಂತಕ್ಕೆ ಸರಿ. ಆದರೆ ಅದನ್ನೇ ಮುಖ್ಯ ಉದ್ದೇಶದಿಂದ ಚಿಕ್ಕ ಮಕ್ಕಳು ಎಲ್ಲವನ್ನೂ ಪ್ರಶ್ನಿಸುತ್ತ ಸಾಗಿದರೆ ಒಂದು ರೀತಿಯ ಅರಾಜಕ ಮನೋಭಾವ ಉಂಟಾಗುವುದಿಲ್ಲವೇ ಎಂದು ಅವರು ನನ್ನನ್ನು ಪ್ರಶ್ನಿಸಿದರು. ಎಲ್ಲಾ ವಿಚಾರಗಳಿಗೂ ಮಿತಿಗಳು ಇವೆ ವೈರುಧ್ಯಗಳೂ  ಇರುತ್ತವೆ . ಏಕೆ ಪ್ರಶ್ನಿಸಬೇಕು, ಏನನ್ನು ಪ್ರಶ್ನಿಸಬೇಕು, ಎಷ್ಟು ಪ್ರಶ್ನಿಸಬೇಕು ಬೇಕು, ಹೇಗೆ ಪ್ರಶ್ನಿಸಬೇಕು, ಯಾವ ಸಂದರ್ಭದಲ್ಲಿ ಪ್ರಶ್ನಿಸಬೇಕು ಹೀಗೆ ಒಂದು ಅರಿವಿನ ಗುಣಮಟ್ಟವು ಸಹ ಇಲ್ಲಿ ಮುಖ್ಯವಾಗುತ್ತದೆ.

ಒಂದು ವಿಷಯಕ್ಕೆ ನಾನಾ ಮುಖಗಳು ಇರುವಂತೆ ಪ್ರಶ್ನಿಸುವ ಮನೋಭಾವ ಯಾವ ಹಂತದಲ್ಲಿ ಎಷ್ಟಿರಬೇಕು ಎಂಬ ಮಾನದಂಡಗಳನ್ನು, ಉದಾಹರಣೆಗೆ ಸರ್ಕಾರಿ ಕೆಲಸಗಳಲ್ಲಿ ಕೆಳಗಿನ ಅಧಿಕಾರಿ ಪ್ರಶ್ನಿಸುವ ರೀತಿ, ಮತದಾರರು ಜನಪ್ರತಿನಿಧಿಗಳನ್ನು  ಪ್ರಶ್ನಿಸುವುದು, ಶಿಕ್ಷಕರು ವಿದ್ಯಾರ್ಥಿಗಳನ್ನು, ವಿದ್ಯಾರ್ಥಿಗಳು ಶಿಕ್ಷಕರನ್ನು, ರೋಗಿ ವೈದ್ಯರನ್ನು ಪ್ರಶ್ನಿಸುವುದು, ಭಕ್ತರು ಧಾರ್ಮಿಕ ನಾಯಕರನ್ನು ಪ್ರಶ್ನಿಸುವುದು, ಗ್ರಾಹಕ ಅಂಗಡಿ ಮಾಲೀಕನನ್ನು ಪ್ರಶ್ನಿಸುವುದು, ಕಕ್ಷಿದಾರ, ವಕೀಲರು ಅಥವಾ  ನ್ಯಾಯಾಧೀಶರನ್ನು ಪ್ರಶ್ನಿಸುವುದು, ಅಪ್ಪ ಮಕ್ಕಳನ್ನು ಪ್ರಶ್ನಿಸುವುದು, ಮಕ್ಕಳು ತಂದೆ ತಾಯಿಯನ್ನು ಪ್ರಶ್ನಿಸುವುದು, ಹೀಗೆ ಇದು ಅನೇಕ ರೂಪಗಳನ್ನು ಸಹ ಪಡೆಯುತ್ತದೆ. ಪ್ರಶ್ನಿಸುವ ಮನೋಭಾವ ಅತ್ಯುತ್ತಮವೆಂಬುದು ನಿಜ, ಆದರೆ ಆ ಮಟ್ಟದ ನಾಗರಿಕತೆ, ಬೌದ್ಧಿಕತೆ, ಸೈದ್ಧಾಂತಿಕತೆ, ಪ್ರಬುದ್ಧತೆ ಇನ್ನೂ ಸಾಮಾನ್ಯ ಜನರಲ್ಲಿ ಮೂಡಿಲ್ಲದೆ ಇರುವಾಗ ಪ್ರಶ್ನೆಗಳು ಸ್ವಾರ್ಥವೂ ಉದ್ದೇಶಪೂರ್ವಕವೂ, ಅಸೂಯೆಯು, ದ್ವೇಷವು ಆಗಬಹುದಲ್ಲವೇ. ಆದ್ದರಿಂದ ಅರಿವಿನ ಜ್ಞಾನದ ತಿಳುವಳಿಕೆಯ ಪ್ರಶ್ನೆಗಳಿಗೆ ಸ್ವಾಗತವನ್ನು ಕೋರುತ್ತಾ...

"ಆಸೆಯೇ ದುಃಖಕ್ಕೆ ಮೂಲ*, "ನನಗೆ ಗೌರವವಿಲ್ಲದ ಜಾಗದಲ್ಲಿ ನಾನು ನನ್ನ ಚಪ್ಪಲಿಯನ್ನು ಬಿಡುವುದಿಲ್ಲ", "ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆಯನ್ನು ತೋರಿಸಿ",... ಹೀಗೆ ಚಿಂತಕರು ಹೇಳಿದ ಅನೇಕ ಅನುಭವದ ನುಡಿಗಳು ವಿಶೇಷ ಅರ್ಥವನ್ನು ಹೊಂದಿರುತ್ತದೆ. ನಾವು ಅದನ್ನು ಪದಗಳ ಅಥವಾ ವಾಕ್ಯಗಳ ರೂಪದಲ್ಲಿ ಮಾತ್ರ ಗ್ರಹಿಸಿದರೆ  ಅದು ಸಂಕುಚಿತ ಅರ್ಥವನ್ನು ನೀಡುತ್ತದೆ. ಅದರೊಳಗಿನ ತಿರುಳು ನಮಗೆ ಮುಖ್ಯವಾಗಬೇಕು. ಪ್ರಶ್ನಿಸದೆ ಏನನ್ನು ಒಪ್ಪಿಕೊಳ್ಳಬೇಡ ಅಥವಾ ಧೈರ್ಯವಾಗಿ ಪ್ರಶ್ನಿಸು ಎನ್ನುವುದು ಶೋಷಣೆ ಮುಕ್ತ ಸಮಾಜಕ್ಕೆ ಒಂದು ಹೆಬ್ಬಾಗಿಲಾಗಬೇಕು, ಗುಲಾಮಿತನದ ವಿರುದ್ಧ ಧ್ವನಿಯಾಗಬೇಕು, ಸ್ವತಂತ್ರ ಚಿಂತನೆ ಮತ್ತು ಸಮಾನತೆ ಹಾಗೂ ಸ್ವಾತಂತ್ರ್ಯ ನಮ್ಮೊಳಗೆ ಬೆಳೆಯಬೇಕು. ಭ್ರಷ್ಟಾಚಾರಿಗಳ ಮತ್ತು ಜಾತಿ ಕೋಮುವಾದಿಗಳ ವಿರುದ್ಧ ಮಾತನಾಡಬೇಕು. ಈ ಅರ್ಥವನ್ನು ಪ್ರಶ್ನಿಸುವ ಪದ ಹೊಂದಿದೆ.

ವಾಸ್ತವದಲ್ಲಿ ಇದೊಂದು ವಿವಾದವೇ ಅಲ್ಲ. ಆದರೂ ಈ ಸಮಾಜ ಅದನ್ನು ವಿವಾದ ಮಾಡುವ ಮುಖಾಂತರ ನಮ್ಮ ನಮ್ಮ ಮನಸ್ಸುಗಳ ದೌರ್ಬಲ್ಯಗಳು, ಮುಖವಾಡಗಳು ಹೊರ ಬರುತ್ತಿದೆ. ದಯವಿಟ್ಟು ಅರ್ಥವಿಲ್ಲದ ಚರ್ಚೆಗಳಿಗಿಂತ ಅರಿವಿನ ಗುಣಮಟ್ಟ ನಮ್ಮೆಲ್ಲರಲ್ಲೂ ಹೆಚ್ಚಾಗಿ ಮತ್ತು ಅದು ಈ ಸಮಾಜದ ಒಳಿತಿಗಾಗಿ ಉಪಯೋಗವಾಗಲಿ, ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳೋಣ.

-ವಿವೇಕಾನಂದ. ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ