ಪ್ರಶ್ನೋತ್ತರಗಳು ಹಾಗು ಪ್ರತಿಕ್ರಿಯೆಗಳು (ಓಷೋ ರಜನೀಶ್ ಚಿಂತನೆಗಳು)
ಅನುಭಾವಕ್ಕೂ ಬಂಡವಾಳಶಾಹಿಯ ಕುರಿತ ಉಪನ್ಯಾಸಕ್ಕೂ ಎತ್ತಣಿಂದೆತ್ತ ಸಂಬಂಧ?
ಬಹಳ ಗಹನವಾದ ಸಂಬಂಧವಿದೆ. ಕಾರ್ಲ್‌ಮಾರ್ಕ್ಸ್ ಮತ್ತೆ ಹುಟ್ಟಿಬಂದರೆ ಅವನನ್ನೂ ತುಳಿದು ಹಾಕುವ ಪರಿಸ್ಥಿತಿ ಈ ದಿನ ರಷ್ಯಾದಲ್ಲಿ ನಿರ್ಮಾಣವಾಗಿದೆ. ಅವಕಾಶವಿಲ್ಲದೆ ಯಾವುದೇ ವಿಕಾಸ ಸಂಭವಿಸದು. ಆತ್ಮವನ್ನೇ ಅನುಮಾನಿಸುವ, ಭೌತಿಕವಾದದಲ್ಲಿ ತನ್ನ ಬೇರುಗಳನ್ನು ಹೊಂದಿರುವ ಸಮಾಜವಾದದ ವ್ಯವಸ್ಥೆಯಲ್ಲಿ ಅನುಭಾವಕ್ಕೆ ಅವಕಾಶವೆಲ್ಲಿದೆ? ಆತ್ಮವನ್ನು ನಿರಾಕರಿಸುವ ಸಿದ್ಧಾಂತ ತನಗರಿವಿಲ್ಲದೇ ಆತ್ಮಗಳನ್ನು ಹೊಸಕಿ ಹಾಕುವ ಕೆಲಸದಲ್ಲಿಯೂ ನಿರತವಾಗಿರುತ್ತದೆ. ದೇವರ ಅಸ್ತಿತ್ವವನ್ನು ನಿರಾಕರಿಸುವ ನೆಲೆಯಿಂದ ಹೊರಟಿದ್ದರಿಂದ ಸಾವಿರಾರು ವರ್ಷಗಳ ತತ್ವಶಾಸ್ತ್ರದ ಇತಿಹಾಸದಲ್ಲಿ ಈವರೆಗಿನ ಎಲ್ಲ ನಾಸ್ತಿಕವಾದೀ ಸಿದ್ಧಾಂತಗಳೂ ಮಣ್ಣುಮುಕ್ಕಿದ್ದವು. ಕಮ್ಯುನಿಸ್ಟರು ಮೊತ್ತ ಮೊದಲ ಬಾರಿಗೆ ಒಂದು ನಾಸ್ತಿಕವಾದೀ ಸಮಾಜವನ್ನು ನಿರ್ಮಿಸಿದರು. ಕಮ್ಯುನಿಸ್ಟರು ದೇವರ ಮೇಲೆ ನೇರ ದಾಳಿ ಮಾಡದೇ ಶ್ರೀಮಂತಿಕೆಯ ವಿರುದ್ಧ ಸಮರ ಸಾರಿದರು. ಈ ಸಮರದಲ್ಲಿ ಗೆಲ್ಲಲು ಶ್ರೀಮಂತರನ್ನು ಕಾಪಾಡುವ ಎಲ್ಲ ದೇವರುಗಳು ಸಾಯಬೇಕಾದುದು ಅನಿವಾರ್ಯ ಎಂದು ಪ್ರಚಾರ ಮಾಡಿದರು. ಮಾರ್ಕ್ಸ್‌ನ ವಾದವನ್ನೇನೂ ತಳ್ಳಿಹಾಕುವಂತಿಲ್ಲ. ಎಲ್ಲ ಧರ್ಮಗಳೂ ಈತನಕ ಎಲ್ಲ ಶ್ರೀಮಂತ ಹೆಗ್ಗಣಗಳನ್ನು ಚೆನ್ನಾಗಿಯೇ ಪೋಷಿಸುತ್ತ ಬಂದಿವೆ. ಆದರೆ ಹೆಗ್ಗಣಗಳು ದೇವಸ್ಥಾನವನ್ನು ಹೊಕ್ಕ ಮಾತ್ರಕ್ಕೆ ದೇವಾಲಯಗಳು ಅಪರಾಧಿಗಳಾಗುವವೇ? ಕಮ್ಯುನಿಸಂ ಹೆಗ್ಗಣಗಳನ್ನು ಬೇಟೆಯಾಡುವ ನೆವದಲ್ಲಿ ದೇವಾಲಯಗಳನ್ನೂ ನೆಲಸಮ ಮಾಡ ತೊಡಗಿತು.
ಅಲ್ಲದೆ ಮಾರ್ಕ್ಸ್ ಮನುಷ್ಯದೇಹ ಪಂಚಭೂತಗಳಿಂದಾದುದು, ಅದರಾಚೆ ಆತ್ಮವಸ್ತು ಎನ್ನುವುದಿಲ್ಲ ಎಂದೂ ಸಿದ್ಧಾಂತ ಮಾಡಿದ. ಈ ಸಿದ್ಧಾಂತದ ನೆರವಿನಿಂದ ಸ್ಟಾಲಿನ್, ಮಾವೋ ಮೊದಲಾದವರು ಲಕ್ಷಾಂತರ ಪ್ರಜೆಗಳನ್ನು ಹತ್ಯೆ ಮಾಡಿದರು. ಮನುಷ್ಯನ ಇತಿಹಾಸದಲ್ಲಿ ಮನಃಸಾಕ್ಷಿಯ ಬಾಧೆಯೇ ಇಲ್ಲದಂತೆ ಲಕ್ಷಾಂತರ ಜನರನ್ನು ಕೊಲ್ಲಲು ಮೊದಲ ಬಾರಿಗೆ ಕಮ್ಯುನಿಸ್ಟರಿಗೆ ಮಾತ್ರ ಸಾಧ್ಯವಾಯಿತು. ಅನಾತ್ಮವಾದದ ಬಹುದೊಡ್ಡ ಅಪಾಯವೆಂದರೆ ಅದು ಮನುಷ್ಯ ಸ್ವಾತಂತ್ರ್ಯವನ್ನು ಸಂಪೂರ್ಣವಾಗಿ ಹೊಸಕಿ ಬಿಡುತ್ತದೆ. ಹೇರಲಾದ ಸಮಾಜವಾದ ಸ್ವಾತಂತ್ರ್ಯದ ಶತ್ರುವಾಗಿ ಪರಿಣಮಿಸುತ್ತದೆ. ಇಂದು ರಷ್ಯಾದ ಚುನಾವಣೆಗಳಲ್ಲಿ ಕೇವಲ ಒಂದು ರಾಜಕೀಯ ಪಕ್ಷ ಮಾತ್ರ ಸ್ಪರ್ಧಿಸುತ್ತದೆಯಂತೆ. ರಷ್ಯಾದಲ್ಲಿ ವಿಜ್ಞಾನಿಗಳು ಕೂಡ ಪ್ರಭುತ್ವ ಹೇಳಿದಂತೆ ಯೋಚಿಸಬೇಕು, ಸಂಶೋಧನೆಗೆ ತೊಡಗಬೇಕು. ಮಾರ್ಕ್ಸ್‌ವಾದಕ್ಕೆ ಅನ್ವಯಿಸಲಾಗದ ವೈಜ್ಞಾನಿಕ ಸಿದ್ಧಾಂತಗಳು ಅಲ್ಲಿ ನಿರ್ನಾಮವಾಗುತ್ತಿವೆ. ಈ ಮೂವತ್ತು ವರ್ಷಗಳಲ್ಲಿ ಜೀವವಿಜ್ಞಾನ ಕ್ಷೇತ್ರದಲ್ಲಿ ಜಗತ್ತಿನಾದ್ಯಂತ ನಡೆದಿರುವ ಆವಿಷ್ಕಾರಗಳಿಗೂ, ರಷ್ಯಾದ ವಿಜ್ಞಾನಿಗಳ ಸಂಶೋಧನೆಗಳಿಗೂ ಅರ್ಥಾರ್ಥ ಸಂಬಂಧ ಏರ್ಪಡುತ್ತಿಲ್ಲ. ೧೯೧೭ರ ಬೋಲ್ಷವಿಕ್ ಕ್ರಾಂತಿಗೆ ಮುನ್ನ ರಷ್ಯಾ ಅತ್ಯಂತ ಶ್ರೇಷ್ಠ ಪ್ರತಿಭೆಗಳಿಗೆ ಜನ್ಮ ನೀಡಿತ್ತು. ಆದರೆ ೧೯೧೭ರ ನಂತರ ಟಾಲ್ಸ್‌ಟಾಯ್, ಚೆಕಾಫ್, ಗೊಗೋಲ್, ಗಾರ್ಕಿಯಂತಹ ಒಬ್ಬ ಮೇಧಾವಿಯೂ ಅಲ್ಲಿ ಜನಿಸಲಿಲ್ಲವಲ್ಲ ಏಕೆ? ಝಾರ್‌ಗಳ ದುರಾಡಳಿತಕ್ಕೂ ಅದುಮಿಡಲಾಗದ ಚೇತನಗಳಿಗೆ ಕಮ್ಯುನಿಸ್ಟ್ ನೆಲದಲ್ಲಿ ತಲೆಯೆತ್ತಲಾಗಲಿಲ್ಲ ಏಕೆ? ಇದಕ್ಕೆ ಅನಾತ್ಮವಾದವೇ ಕಾರಣ ಎಂದು ನನ್ನ ಅನಿಸಿಕೆ. ಟಾಲ್ಸ್‌ಟಾಯ್, ತುರ್ಗೇನೆವ್‌ಗಳು ಹಾಗಿರಲಿ ಲೆನಿನ್‌ನಂತಹ ಮುತ್ಸದ್ದಿಯೂ ಸಹ ಅಲ್ಲಿ ಇನ್ನು ಮುಂದೆ ಜನಿಸಲಾರ.
ಅನಾತ್ಮವಾದವು ತಾರ್ಕಿಕವಾಗಿ ಮನುಷ್ಯರು ಯಂತ್ರಗಳಿಗೆ ಸಮ ಎಂಬ ತೀರ್ಮಾನದೊಡನೆ ಮುಕ್ತಾಯವಾಗುತ್ತದೆ. ಅನ್ನ ಆಹಾರ ವಸತಿ ಈ ಮೂರು ಪದಗಳಾಚೆಗೆ ಯಾವ ಸಮಾಜವಾದೀ ಸಿದ್ಧಾಂತವೂ ಮುಂದುವರೆಯದು. ಇಂದು ರಷ್ಯಾದಲ್ಲಿ ಎರಡು ಬಲಿಷ್ಠ ವರ್ಗಗಳು ನಿರ್ಮಾಣವಾಗಿವೆ. ಬ್ಯೂರೋಕ್ರಾಟ್ ವರ್ಗ ಹಾಗು ಸಾಮಾನ್ಯ ಪ್ರಜೆಗಳ ವರ್ಗ. ಅಲ್ಲಿ ಈ ವರ್ಗಗಳ ನಡುವೆ ಎಂದಿಗೂ ಬೆಸೆಯಲಾಗದ ಅಂತರ ಉಂಟಾಗಿದೆ. ಜಾತಿ ಪದ್ಧತಿಗಿಂತ ವರ್ಗ ವಿಂಗಡಣೆ ಎಷ್ಟೋ ಮೇಲು. ಏಕೆಂದರೆ ಜಾತಿ ಪದ್ಧತಿ ಸ್ಥಿರವಾದುದು ಹಾಗು ಜಡವಾದುದು. ಆದರೆ ಇಂದು ರಷ್ಯಾದಲ್ಲಿ ಜಾತಿ ಪದ್ಧತಿಯಷ್ಟೇ ಸ್ಥಿರವಾದ ಹಾಗು ಜಡವಾದ ಎರಡು ವರ್ಗಗಳು ನಿರ್ಮಾಣವಾಗಿವೆ.
ಹಾಗಾದರೆ ನೀವು ಸಮಾನತೆಯನ್ನು ಒಪ್ಪುವುದಿಲ್ಲವೇ?
ಸಮಾನತೆ ಬೇರೆ ಹಾಗು ಸಾಮಾಜಿಕ ನ್ಯಾಯದ ಪ್ರಶ್ನೆಗಳು ಬೇರೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಸ್ವಭಾವದಲ್ಲೇ ಅಸಮಾನನಾಗಿರುತ್ತಾನೆ. ಒಂದು ಸಮಾಜವಾದೀ ವ್ಯವಸ್ಥೆಯಲ್ಲಿ ವ್ಯಕ್ತಿಗಳು ಅಸಮಾನರಾಗಲು ಸಮಾನ ಅವಕಾಶವಿರಬೇಕೇ ವಿನಃ ಅಸಮಾನತೆಯನ್ನು ನಾಶಮಾಡುವ ವಾತಾವರಣ ಇರಬಾರದು. ಜೀವವಿಕಾಸದೊಂದಿಗೆ ಎಲ್ಲ ಅಸಮಾನತೆಗಳೂ ಹೆಚ್ಚುತ್ತಾ ಹೋಗುತ್ತದೆ. ಜೀವಜಗತ್ತು ವಿಕಾಸಕ್ರಮಕ್ಕೆ ವಿಮುಖವಾದಂತೆಲ್ಲ ಅಸಮಾನತೆ ಕಡಿಮೆಯಾಗುತ್ತದೆ. ಸಮಾನತೆಯ ಸ್ಥಾಪನೆ ಪ್ರಕೃತಿಯಲ್ಲಿ ಬೆಳವಣಿಗೆಯ ಲಕ್ಷಣವೇ ಅಲ್ಲ. ಇಂದು ಸ್ವಾತಂತ್ರ್ಯ ಹಾಗು ಸಮಾನತೆಗಳ ನಡುವಣ ಆಯ್ಕೆ ನಮ್ಮ ಮುಂದಿದೆ. ಆದರೆ ಈ ಆಯ್ಕೆಗೆ ಅರ್ಥ ಸಿಗುವುದು ಸ್ವಾತಂತ್ರ್ಯದ ಆಯ್ಕೆಯಲ್ಲಿ ಮಾತ್ರ. ಸಮಾನತೆ ಎಂಬುದು ತುಂಬ ಅವೈಜ್ಞಾನಿಕ ಪದವಾಗಿದೆ. ಇದನ್ನು ನಂಬಿ ಹೊರಟರೆ ಮನುಷ್ಯರ ವ್ಯಕ್ತಿತ್ವಗಳು ಕ್ರಮೇಣ ನಶಿಸಲಾರಂಭಿಸುತ್ತವೆ.
ಬಂಡವಾಳಶಾಹಿಯ ಬಗ್ಗೆ ಮಾತನಾಡುವ ನೀವು ಬಡವರ ಏಳಿಗೆಯನ್ನು ವಿರೋಧಿಸುವಿರೇ?
ಬಡವರ ಉದ್ಧಾರದ ಹೆಸರಿನಲ್ಲಿ ಅಧಿಕಾರ ವಹಿಸಿಕೊಳ್ಳುವ ನಾಯಕರುಗಳೆಲ್ಲ ಕೂಡಲೇ ಶ್ರೀಮಂತರಾಗುವರಲ್ಲ ಹೇಗೆ? ಸಮಾಜವಾದಕ್ಕೆ ಬಲಿಪಶುಗಳಾಗುವವರಿಗೂ ಹಾಗು ಸಮಾಜವಾದೀ ನಾಯಕರಿಗೂ ಯಾವ ಸಂಬಂಧವೂ ಇರುವುದಿಲ್ಲ. ಬಡವರ ಹೆಸರಿನಲ್ಲಿ ನಡೆದಿರುವ ಯಾವ ಚಳವಳಿ, ಯಾವ ಹೋರಾಟ, ಯಾವ ರಕ್ತಪಾತಗಳೂ ಈತನಕ ಸಾರ್ಥಕವಾಗಿಲ್ಲ. ಬಡವರನ್ನು ಮೆಟ್ಟಿಲುಗಳಂತೆ ಬಳಸಿಕೊಳ್ಳುವ ಸಮಾಜ ಸೇವಕರಿಂದ ದೂರವಿರಿ. ಸ್ಟಾಲಿನ್, ಮಾವೋ, ಹಿಟ್ಲರ್ ಎಲ್ಲರೂ ಬಡವರ ಹೆಸರು ಹೇಳಿ ಮೇಲೆ ಬಂದವರು. ಒಂದು ನಾಡಿನ ಸಂಪತ್ತಿನ ಪ್ರಮಾಣ ಬಡತನದ ಪ್ರಮಾಣಕ್ಕಿಂತ ಹೆಚ್ಚಾಗುವವರೆಗೂ ಬಡವರ ಏಳಿಗೆಯ ಮಾತಿಗೆ ಅರ್ಥವಿಲ್ಲ. ಆದರೆ ಬಡವರನ್ನು ಈ ಸಂಪತ್ತಿನ ಪ್ರಮಾಣವನ್ನು ಹೆಚ್ಚಿಸುವವರ ವಿರುದ್ಧವೇ ಎತ್ತಿ ಕಟ್ಟಿರುವುದು ನಿಜಕ್ಕೂ ದುರದೃಷ್ಟಕರ.
ಹಾಗಿದ್ದರೆ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ದೋಷಗಳೇ ಇಲ್ಲವೇ?
ಖಂಡಿತ ಇವೆ. ವರ್ಗಸಂಘರ್ಷಕ್ಕೆ ಬಂಡವಾಳಶಾಹಿಗಳೇ ಕಾರಣ. ಸಂಪತ್ತನ್ನು ಹೊಂದುವ ವ್ಯಕ್ತಿ ಕೂಡಲೇ ತನಗೂ ಸಮಾಜಕ್ಕೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಾನೆ, ದೊಡ್ಡಸ್ತಿಕೆ ತೋರಿಸುತ್ತಾನೆ. ಹಣವನ್ನು ಸಂಪಾದನೆ ಮಾಡಿ ಯಾರೂ ದೊಡ್ಡವರಾಗುವುದಿಲ್ಲ. ಹಣದಿಂದ ತನ್ನ ಅಹಂಕಾರವನ್ನು ಹೆಚ್ಚಿಸಿಕೊಳ್ಳುವ ಬಂಡವಾಳಶಾಹಿಯು ಇನ್ನೊಂದೆಡೆ ತನಗರಿವಿಲ್ಲದೇ ಬಡವರ ಅಸೂಯೆಯನ್ನೂ ಹೆಚ್ಚಿಸುತ್ತಿರುತ್ತಾನೆ. ಬಡವರ ಹೊಟ್ಟೆಯ ಕಿಚ್ಚಿಗೆ ಅವರ ಬಡತನ ಅರ್ಧ ಕಾರಣವಾದರೆ ಶ್ರೀಮಂತನ ಗರ್ವ ಇನ್ನರ್ಧ ಕಾರಣವಾಗಿದೆ. ಹಣದಿಂದ ನಮಗೆ ಸಂತೋಷ ಸಂಪಾದನೆಯಾಗಬೇಕೇ ವಿನಃ ನಮ್ಮ ಅಹಂಕಾರಕ್ಕೆ ತೃಪ್ತಿಯಾಗಬಾರದು. ಬಡವನ ಹೊಟ್ಟೆಯ ಕಿಚ್ಚು ಸಹಜ ಹಾಗು ಮಾನವೀಯ. ಆದರೆ ಶ್ರೀಮಂತನ ಗರ್ವ ಹುಸಿಯಾದುದು, ಅಮಾನವೀಯವಾದುದು. ಇಷ್ಟು ಸಂಪತ್ತನ್ನು ಹೊಂದಿದ್ದರೂ ನನ್ನೊಳಗೆ ಇನ್ನೂ ತೃಪ್ತಿ ಉಂಟಾಗಿಲ್ಲವಲ್ಲ ಎಂಬ ವಿವೇಕ ಅವನಿಗುಂಟಾಗಬೇಕು. ಬುದ್ಧ, ಮಹಾವೀರರಿಗೆ ಅಂತಹ ವಿವೇಕ ಹುಟ್ಟಿತ್ತು. ಹಣದ ರುಚಿಯನ್ನು ಕಂಡರಿಯದ ಬಡವನ ಕೋಪವನ್ನು ಒಪ್ಪಬಹುದು. ಆದರೆ ಆ ರುಚಿಯನ್ನು ಕಂಡೂ ಅದರ ವ್ಯರ್ಥತೆಯನ್ನು ಮನವರಿಕೆ ಮಾಡಿಕೊಳ್ಳದ ಶ್ರೀಮಂತನ ಮೂರ್ಖತನವನ್ನು ನಿಜಕ್ಕೂ ಒಪ್ಪಲಾಗದು. ಶ್ರೀಮಂತನು ಹಣದ ವ್ಯರ್ಥತೆಯನ್ನು ಮನಗಾಣುತ್ತಲೇ ಬಡವನ ಹೊಟ್ಟೆಯ ಕಿಚ್ಚೂ ಇಳಿದು ಹೋಗುತ್ತದೆ. ಪ್ರಭುತ್ವವಾದರೂ ಬಡವರ ಕಿಚ್ಚನ್ನು ಇನ್ನೂ ಹೆಚ್ಚು ಉರಿಸಲು ಶ್ರೀಮಂತರ ಗರ್ವವನ್ನು ಬೀಸಣಿಗೆಯಂತೆ ಬಳಸಿಕೊಳ್ಳುತ್ತದೆ. ವರ್ಗಸಂಘರ್ಷ ನಿಲ್ಲದೆ ಬಡತನ ನಿರ್ಮೂಲನೆಯಾಗದು. ಇದನ್ನು ನಿಲ್ಲಿಸುವ ಜವಾಬ್ದಾರಿ ಹಾಗು ಸಾಮರ್ಥ್ಯ ಶ್ರೀಮಂತರ ಕೈಲಿದೆ. ಅದು ಬಡವರಿಂದಾಗದು.
ಭಾರತಕ್ಕೆ ಏಕೆ ಸಂಪತ್ತನ್ನು ಸೃಷ್ಟಿಸಲು ಸಾಧ್ಯವಾಗಿಲ್ಲ?
ನಾವು ಸಂಪತ್ತನ್ನು ಸೃಷ್ಟಿಸಲಾಗದೆ ಶ್ರೀಮಂತರ ಬಗೆಗಿನ ಅಸೂಯೆಯನ್ನು ನಿವಾರಿಸಿಕೊಳ್ಳಲು ಬಡತನವನ್ನು ದೇವರಂತೆ ಪೂಜಿಸಲು ಆರಂಭಿಸಿದ ದಿನವೇ ನಮ್ಮ ದುರ್ದಿನಗಳು ಪ್ರಾರಂಭವಾದವು. ವಿಚಿತ್ರವೆಂದರೆ ನಾವು ತ್ಯಾಗವನ್ನೂ ಹಣದಿಂದಲೇ ಅಳೆಯುವುದು. ನಮ್ಮ ತೀರ್ಥಂಕರರೆಲ್ಲರೂ ಏಕೆ ಚಕ್ರವರ್ತಿಗಳಾಗಿಯೇ ಹುಟ್ಟಿದ್ದರು. ಒಬ್ಬನೂ ಏಕೆ ಬಡವನಾಗಿ ಹುಟ್ಟಿರಲಿಲ್ಲ. ಬಡವನ ತ್ಯಾಗಕ್ಕೆ ನಾವು ಬೆಲೆ ಕೊಡುವುದಿಲ್ಲ. ಹಣವನ್ನು ವಿರೋಧಿಸುವ ಭಾರತೀಯ ಮನಸ್ಸು ಹಣದ ಮಾನದಂಡದಿಂದ ವೈರಾಗ್ಯವನ್ನು ಗುರುತಿಸುವುದು ವಿಪರ್ಯಾಸ. ಈ ವ್ಯವಸ್ಥೆಯಲ್ಲಿ ಬಡವರ ಶೋಷಣೆ ನಡೆಯುತ್ತಿರುವುದು ನಿಮಗೆ ಕಾಣಿಸದೇ? ನಿಮ್ಮ ಬಂಡವಾಳಶಾಹಿಯು ಬಡವರಿಂದ ಹತ್ತು ರೂಪಾಯಿಗಳ ದುಡಿಮೆ ಮಾಡಿಸಿಕೊಂಡು ಎರಡು ರೂಪಾಯಿ ಕೂಲಿ ಕೊಟ್ಟು ಕಳಿಸುವನಲ್ಲ ಇದಕ್ಕೆ ಏನೆನ್ನುವಿರಿ?
ಅಂಥವನು ಆ ಎರಡು ರೂಪಾಯಿಗಳೂ ಬೇಡವೆಂದು ಸುಮ್ಮನೆ ಕುಳಿತುಬಿಟ್ಟರೆ ಗತಿಯೇನು? ನಾವು ಸೃಷ್ಟಿಸಿಕೊಂಡಿರುವ ಸಮಾಜದಲ್ಲಿ ಅವನಿಗೆ ಹತ್ತಕ್ಕೆ ಹತ್ತು ರೂಪಾಯಿಯನ್ನು ಯಾರು ಕೊಡುತ್ತಾರೆ? ಬಡವನ ಕೋಪ ದವಡೆಗೆ ಮೂಲ ಎಂಬಂತೆ ಆ ಎರಡು ರೂಪಾಯಿಯೂ ಅವನ ಕೈತಪ್ಪುತ್ತದೆ ಅಷ್ಟೇ. ಸಹಕಾರ ತತ್ವವೇ ಇದಕ್ಕೆ ಪರಿಹಾರ. ಬಡವನು ಸಂಪಾದಿಸುವಾಗ ತಾನು ಉತ್ಪಾದನೆಯನ್ನು ಹೆಚ್ಚಿಸುತ್ತಿದ್ದೇನೆ ಎಂಬಂತೆ ಯೋಚಿಸಬೇಕು. ಹಾಗೆಯೇ ಮಾಲೀಕನು ಸಹ ಸಂಬಳ ನೀಡುವಾಗ ತಾನು ಹೆಚ್ಚಿನ ಉತ್ಪಾದನೆಗೆ ಹೆಚ್ಚು ಹೂಡಿಕೆ ಮಾಡುತ್ತಿದ್ದೇನೆ ಎಂಬಂತೆ ಯೋಚಿಸಬೇಕು. ಸಹಕಾರದ ಧೋರಣೆಯಿಂದ ಈ ಪ್ರಶ್ನೆಯನ್ನು ಬಗೆಹರಿಸಿಕೊಳ್ಳಬೇಕೇ ವಿನಃ ಮತ್ತೆ ಮತ್ತೆ ಶೋಷಣೆ, ಶೋಷಿತರು ಇತ್ಯಾದಿ ಪರಿಕಲ್ಪನೆಗಳ ಸುಳಿಯಲ್ಲೇ ಸುತ್ತುತ್ತ ಕುಳಿತರೆ ವಿಷಮ ಪರಿಣಾಮಗಳಾಗುತ್ತವೆ. ಆಗ ಸಮಾಜವಾದಿಗಳು ಎನಿಸಿಕೊಂಡವರು ಮಧ್ಯೆ ಪ್ರವೇಶಿಸಿ ಇನ್ನೂ ಹೊಲಬುಗೆಡಿಸುತ್ತಾರೆ. ದುಡಿಯದೇ ಬಂಡವಾಳದಲ್ಲಿ ತನಗೆ ಪಾಲು ಸಿಗುತ್ತದೆ ಎಂದು ಭಾವಿಸುವ ಬಡವನು ಸಮಾಜವಾದಿಯನ್ನು ಸುಲಭವಾಗಿ ನಂಬುತ್ತಾನೆ.
ಬಂಡವಾಳಶಾಹೀ ದೇಶಗಳಿಂದ ನಿಮಗೇನಾದರೂ ಅನುದಾನ ಸಿಗುತ್ತಿದೆಯೇ?
ಈತನಕ ಯಾವ ಅನುದಾನವೂ ಸಿಕ್ಕಿಲ್ಲ. ಸಿಗುವ ದಾರಿಗಳೇನಾದರೂ ಇದ್ದರೆ ತಾವು ದಯವಿಟ್ಟು ತಿಳಿಸಬೇಕು. ಈ ಹಿಂದೆ ಸಮಾಜವಾದವನ್ನು ಅನುಮೋದಿಸಿ ಮಾತನಾಡಿದಾಗ ನಿಮಗೆ ಚೀನಾದಿಂದ ಹಣ ಬರುತ್ತಿದೆಯೇ ಎಂದು ಇನ್ನಾರೋ ಕೇಳಿದ್ದರು. ಇನ್ನೊಮ್ಮೆ ಸಮಾಜವಾದವನ್ನು ವಿರೋಧಿಸಿ ಮಾತನಾಡಿದಾಗ ’ನೀವು ಅಮೆರಿಕಾದ ಏಜೆಂಟರೇ?’ ಎಂದು ಕೇಳಿದ್ದರು. ಏಜೆಂಟರುಗಳು ಮಾತ್ರ ಯೋಚಿಸಬೇಕೇ? ಯಾವುದಕ್ಕೂ ಅಂಟಿಕೊಳ್ಳದೆ ಸುಮ್ಮನೆ ಆಲೋಚನೆ ಮಾಡುವುದೂ ಅಪರಾಧವೇ?
ನೀವು ಒಮ್ಮೊಮ್ಮೆ ಸಮಾಜವಾದವನ್ನೂ ಹೊಗಳಿ ವಿರೋಧಾಭಾಸ ಹುಟ್ಟಿಸುತ್ತೀರಿ.
ಸಮಾಜವಾದ, ಬಂಡವಾಳವಾದ ಇವೆರಡೂ ಪರಸ್ಪರ ವೈರಿಗಳು ಎಂದು ಯೋಚಿಸುವವರಿಗೆ ಹಾಗೆನಿಸುತ್ತದೆ. ಸಮಾಜವಾದಿ ನಾಯಕರು ನಿಮ್ಮ ಚಿಂತನೆಯ ಹಾದಿಯನ್ನು ತಪ್ಪಿಸಿರುವುದರಿಂದ ಇಂತಹ ಪ್ರಶ್ನೆಗಳು ಏಳುತ್ತವೆ. ನಾನು ಯಾವ ನಾಯಕನನ್ನೂ ನಂಬಿ ಚಿಂತಿಸುವವನಲ್ಲ.
ಬಂಡವಾಳಶಾಹಿಗಳ ಭ್ರಷ್ಟಾಚಾರ, ಕಳ್ಳಸಾಗಾಣಿಕೆ, ಕಪ್ಪುಹಣ ಇತ್ಯಾದಿಗಳ ಬಗ್ಗೆ ಏನೆನ್ನುವಿರಿ?
ಅದಕ್ಕೆ ಬಂಡವಾಳದ ಕೊರತೆ ಕಾರಣ, ಬಂಡವಾಳವಾದವಲ್ಲ ಎನ್ನುತ್ತೇನೆ. ಸಂಪನ್ಮೂಲಗಳ ಕೊರತೆ ಇದ್ದಲ್ಲಿ ಭ್ರಷ್ಟಾಚಾರ ಇದ್ದೇ ಇರುತ್ತದೆ. ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಕರೆ ನೀಡುವ ಸಮಾಜವಾದಿಗಳಿಗೆ ಸಮಸ್ಯೆಯೇ ಅರ್ಥವಾಗಿಲ್ಲ ಎನಿಸುತ್ತದೆ. ಭ್ರಷ್ಟಾಚಾರ ಬಡತನದ ಪರಿಣಾಮವಾಗಿದೆ. ನೂರು ಜನ ಇದ್ದ ಕಡೆ ಹತ್ತು ಜನರಿಗಾಗುವಷ್ಟು ಊಟ ಇದ್ದಾಗ ಕಳ್ಳತನ ತಾನಾಗಿಯೇ ಹುಟ್ಟಿಕೊಳ್ಳುತ್ತದೆ. ಭ್ರಷ್ಟಾಚಾರವೆಂಬುದು ಸಂಪನ್ಮೂಲಗಳ ಕೊರತೆಯನ್ನು ಸೂಚಿಸುತ್ತದೆ ಅಷ್ಟೆ. ಸಂಪನ್ಮೂಲಗಳನ್ನು ಹೆಚ್ಚಿಸುವತ್ತ ಯೋಚಿಸದೆ ಭ್ರಷ್ಟಾಚಾರದ ವಿರುದ್ಧ ಸಮರ ಸಾರುವ ಸಮಾಜವಾದಿಗಳು ನಿಜಕ್ಕೂ ದಾರಿ ತಪ್ಪಿಸುವ ಕೆಲಸ ಮಾಡುತ್ತಿರುತ್ತಾರೆ. ಇವರು ಭಾವಿಸುವಂತೆ ಭ್ರಷ್ಟಾಚಾರ ಒಂದು ನೈತಿಕ ಪ್ರಶ್ನೆಯಲ್ಲ, ಅದೊಂದು ಸಾಮಾಜಿಕ ಸಮಸ್ಯೆ. ಮನುಷ್ಯ ಆಂತರ್ಯದಲ್ಲಿ ನೈತಿಕನೂ ಅಲ್ಲ, ಅನೈತಿಕನೂ ಅಲ್ಲ. ಒಂದು ಭ್ರಷ್ಟ ವ್ಯವಸ್ಥೆಯಲ್ಲಿ ವ್ಯವಸ್ಥೆಯನ್ನು ಲೆಕ್ಕಿಸದೆ ತನ್ನ ನೈತಿಕತೆಯನ್ನು ಮಾತ್ರ ಕಾಪಾಡಿಕೊಳ್ಳುವ ವ್ಯಕ್ತಿಯೂ ಸಹ ನನ್ನ ದೃಷ್ಟಿಯಲ್ಲಿ ಮಹಾತ್ಮನಲ್ಲ. ಅವನು ತನ್ನ ಪ್ರಲೋಭನೆಗಳನ್ನು ಹತ್ತಿಕ್ಕಿ ತನಗೆ ತಾನೇ ಹಿಂಸಿಸಿಕೊಳ್ಳುತ್ತಿರುತ್ತಾನೆ ಎಂದು ನಾನು ಭಾವಿಸುತ್ತೇನೆ. ಸಂಪತ್ತನ್ನು ಹೆಚ್ಚಿಸಿದಾಗ ಯಾರೂ ಭ್ರಷ್ಟರಾಗುವುದಿಲ್ಲ, ಯಾರೂ ನೈತಿಕರೂ ಆಗುವುದಿಲ್ಲ.
ಸಾಧು ಸಂತರು, ಅನುಭಾವಿಗಳು ತ್ಯಾಗ ವಿರಕ್ತಿಗಳನ್ನು ಬೋಧಿಸುತ್ತಿದ್ದರೆ ನೀವು ಸಂಪತ್ತಿನ ಕುರಿತು ಉಪನ್ಯಾಸ ಕೊಡುವಿರಲ್ಲ.
ಸಂಪತ್ತೇ ಇಲ್ಲದ ಬಡವರೆದುರು ತ್ಯಾಗದ ಕುರಿತು ಮಾತನಾಡುವುದಾದರೂ ಹೇಗೆ? ಸಂಪತ್ತಿನ ನಡುವೆಯೇ ಹುಟ್ಟಿ ಬೆಳೆದಿದ್ದ ಬುದ್ಧ ತ್ಯಾಗದ ಬಗ್ಗೆ ಮಾತನಾಡಿದ್ದು ಸರಿ. ಭಾರತದ ಬಹುಪಾಲು ತತ್ವಜ್ಞಾನಿಗಳೂ, ಮೇಧಾವಿಗಳೂ ಶ್ರೀಮಂತಿಕೆಯ ನಡುವೆಯೇ ಹುಟ್ಟಿ ಬೆಳೆದದ್ದು. ಆದರೆ ಇಲ್ಲಿ ಏನೂ ಇಲ್ಲದವರು ಉಳ್ಳವರ ಸಿದ್ಧಾಂತಗಳನ್ನು ಪಾಲಿಸಲು ತೊಡಗಿದರು. ಇದರ ಹಿಂದೆ ಬಡವರ ಒಂದು ಹುನ್ನಾರವಿದೆ. ’ಸಂಪತ್ತಿನಲ್ಲೇನಿದೆ? ಬುದ್ಧನಂತಹವರೇ ಅದನ್ನು ತೊರೆದ ಮೇಲೆ ನಾವೇಕೆ ಅದರ ಹಿಂದೆ ಹೋಗಬೇಕು?’ ಎಂದು ಇಲ್ಲಿನ ಇಲ್ಲದವರು ಆತ್ಮಸಮರ್ಥನೆಯನ್ನು, ಆತ್ಮಸಮಾಧಾನವನ್ನು ಕಂಡುಕೊಂಡರು. ಬುದ್ಧ ಮಹಾವೀರರಂತಹ ರಾಜಕುಮಾರರು ಬೀದಿಗಳಲ್ಲಿ ಭಿಕ್ಷೆ ಬೇಡುವುದನ್ನು ಕಂಡು ನಮಗೆ ಒಂದು ವಿಚಿತ್ರವಾದ ಸಂತೋಷವಾಗುತ್ತಿತ್ತು. ಅವರು ನಮ್ಮ ಹೀನಸ್ಥಿತಿಗೆ ಒಂದು ಊರುಗೋಲಾದರು ಎಂಬ ಕಾರಣದಿಂದ ಅವರನ್ನು ಗೌರವಿಸಿದೆವೇ ವಿನಃ ಅವರ ವ್ಯಕ್ತಿತ್ವ ನಮ್ಮ ಕಣ್ಣಿಗೆ ಕಾಣಿಸಲಿಲ್ಲ. ಹಣವನ್ನು ಸಂಪಾದನೆ ಮಾಡಿದಾಗಲೇ ಅದನ್ನು ಮೀರಲು ಸಾಧ್ಯ ಎಂದು ಇನ್ನಾದರೂ ನಾವು ಮನವರಿಕೆ ಮಾಡಿಕೊಳ್ಳಬೇಕು.
ಹಣವಂತರಲ್ಲದಿದ್ದರೂ ನಿಜವಾದ ವೈರಾಗ್ಯ ಸಾಧಿಸಿಕೊಂಡಿರುವ ಕೆಲವು ಅಪರೂಪದ ಸಾಧುಗಳು ನಮ್ಮ ನಡುವೆ ಇರುವರಲ್ಲ!
ಅಪರೂಪದ ನಿದರ್ಶನಗಳನ್ನು ನಂಬಿ ನಿಯಮಗಳನ್ನು ಮಾಡಲಾದೀತೇ? ಒಂದು ಹಳ್ಳಿಯಲ್ಲಿ ಮಲೇರಿಯಾ ಲಸಿಕೆ ತೆಗೆದುಕೊಳ್ಳದೆಯೇ ಒಬ್ಬ ವ್ಯಕ್ತಿ ಮಲೇರಿಯಾದಿಂದ ಪಾರಾದನೆಂದರೆ ಲಸಿಕೆ ನಿರುಪಯುಕ್ತವೆಂದು ತೀರ್ಮಾನಿಸಲಾಗುವುದೇ? ಅಂಥವನನ್ನು ನಂಬಿ ಇಡೀ ಹಳ್ಳಿಗೆ ಅನ್ವಯಿಸುವ ಸಿದ್ಧಾಂತವನ್ನು ಮಾಡಹೊರಟರೆ, ಇಡೀ ಹಳ್ಳಿಯೇ ಸ್ಮಶಾನವಾಗುತ್ತದೆ. ಭಾರತದಲ್ಲಿ ಆದದ್ದು ಅದೇ. ಅಪರೂಪಗಳನ್ನು, ಅಸಾಮಾನ್ಯಗಳನ್ನು ನೆಚ್ಚಿಕೊಂಡೇ ಸಿದ್ಧಾಂತಗಳನ್ನು ಮಾಡಿಕೊಳ್ಳುವುದು ನಮ್ಮ ಜಾಯಮಾನವಾಗಿದೆ.
ಜನನ ನಿಯಂತ್ರಣ ಕಡ್ಡಾಯವಾಗಬೇಕು ಎಂದು ವಾದಿಸುವ ನೀವು ಸ್ವಾತಂತ್ರ್ಯಕ್ಕೆ ಬೆಲೆ ಕೊಡುವಿರಿ ಎಂದು ಹೇಗೆ ನಂಬುವುದು?
ಹಾಗಲ್ಲ, ಸಮಾಜದ ಹಿತಕ್ಕಾಗಿ ಇದು ಕಡ್ಡಾಯವಾದರೆ ಒಳಿತು ಎಂಬುದು ನಮಗೆ ಮನವರಿಕೆಯಾಗಬೇಕು. ಸಮಾಜದ ಬಹುಸಂಖ್ಯಾತರಿಗೆ ಇದು ಮನವರಿಕೆಯಾದರೆ ಅದರಿಂದ ಸಮಾಜಕ್ಕೆ ಹಿತವಾಗುತ್ತದೆ. ಸಮಾಜದ ಅಲ್ಪಸಂಖ್ಯಾತರು ಇದನ್ನು ಕಡ್ಡಾಯಗೊಳಿಸಿದಾಗ ಇದು ಸ್ವಾತಂತ್ರ್ಯಹರಣವಾಗುತ್ತದೆ. ಈಗ ನಮ್ಮಲ್ಲಿ ಕಡ್ಡಾಯ ಶಿಕ್ಷಣ ಇಲ್ಲವೇ? ಇದನ್ನೂ ಸ್ವಾತಂತ್ರ್ಯ ಹರಣ ಎನ್ನುವಿರೇ? ಆದ್ದರಿಂದ ಇದು ’ಸ್ವಾತಂತ್ರ್ಯ’ದ ಕುರಿತು ತಾತ್ವಿಕ ಚರ್ಚೆ ಮಾಡುವ ಸಮಯವಲ್ಲ.೨೦
ಸರ್ಕಾರವು ನಿಮ್ಮ ಪುಸ್ತಕಗಳು ಪ್ರಕಟಣೆಗೆ ಮುನ್ನ ಒಮ್ಮೆ ಅವುಗಳ ಪೂರ್ವ ಪರಿಶೀಲನೆ ನಡೆಸಿ ತಜ್ಞರ ಅನುಮೋದನೆ ಪಡೆದ ನಂತರ ಪ್ರಕಟಿಸಬೇಕೆಂಬ ಆದೇಶವನ್ನು ಹೊರಡಿಸಲು ಯೋಚಿಸುತ್ತಿದೆಯಲ್ಲ!
ಸುಪ್ರೀಂ ಕೋರ್ಟಿನಲ್ಲಿ ನನ್ನೊಂದಿಗೆ ವಾದಿಸುವ ಶಕ್ತಿಯಿದ್ದರೆ ಅಂತಹ ಆದೇಶವನ್ನು ಧೈರ್ಯವಾಗಿ ಹೊರಡಿಸಲಿ. ನನ್ನ ಪುಸ್ತಕದಲ್ಲಿನ ಒಳಿತು ಕೆಡುಕು ಅಂಶಗಳನ್ನು ಇವರು ಹೇಗೆ ಪರಿಶೀಲಿಸಬಲ್ಲರು? ಇಂದು ನನಗೆ ಹೀಗೆ ಹೇಳುವ ಈ ಅಧಿಕಾರಿಗಳು ನಾಳೆ ವಿಜ್ಞಾನಿಗಳಿಗೂ ’ನಿಮ್ಮ ಸಂಶೋಧನಾ ಪ್ರಬಂಧಗಳನ್ನೂ ಪ್ರಕಟಿಸುವ ಮುನ್ನ ನಾವು ಪರಿಶೀಲಿಸುತ್ತೇವೆ’ ಎನ್ನಬಹುದು. ಸರ್ಕಾರೀ ಅಧಿಕಾರಿಗಳಿಗೆ ವಿಜ್ಞಾನ, ಕಲೆ, ಸಂಗೀತ ತತ್ವಶಾಸ್ತ್ರಗಳ ಗಂಧವೇನಾದರೂ ಇರುತ್ತದೆಯೇ? ಅಂತಹ ಗಂಧವೇನಾದರೂ ಇದ್ದಿದ್ದರೆ ಅವರಿಗೆ ಸರ್ಕಾರೀ ಅಧಿಕಾರಿಗಳಾಗುವ ಹಣೆಬರಹ ಇರುತ್ತಿತ್ತೇ.