ಪ್ರಸಂಗ

ಪ್ರಸಂಗ

ಕವನ

ಗದ್ದುಗೆಯನೇರುವುದು ಎದ್ದು ಮೆರೆದಾಡುವುದು

ಸುದ್ದಿಯಲ್ಲಿಯೆ ಇರುವ ಮಹದಾಸೆ ಜೊತೆಗೆ

ಹದ್ದಿನಂತೆಯೆ ಇರುವ ಜಿದ್ದು ತುಂಬಿದ ಮನದಿ

ಕದ್ದು ಕೋಳಿಯ ತಿನುವ ಕುಹಕ ನಡವಳಿಕೆ.

 

ಅದ್ದುತ್ತ ವಾಂಛೆಗಳ ಸಿದ್ಧಿಸಲು ಬಯಕೆಗಳು

ಗೆದ್ದು ಬರಲೇ ಬೇಕು ಎನುವ ಹಪ ಹಪಿಕೆ

ಉದ್ದುತಲಿ ನಯವಿನಯ ಉದ್ದಂಡ ನಟನೆಗಳ

ಖುದ್ದಾಗಿ ಮಾಡುತ್ತ ಸದ್ದು ದಿನ ಬಳಕೆ

 

ಪೆದ್ದುತನವೇನಲ್ಲ ಮದ್ದಿರದ ರೋಗವಿದು

ಬಿದ್ದರೂ ಮೂಗು ಮಣ್ಣಾಗಿರದ ಹಾಗೆ

ಮುದ್ದು ಮಾಡುತಲಿದ್ದ‌ ಮರಿಯನ್ನೆ ಹಸಿವಾಗಿ

ಮೆದ್ದು ಬಿಡುವಂತಿರುವ ಮಾರ್ಜಾಲ ಹೀಗೆ

 

ರದ್ದು ಮಾಡುವುದಿಲ್ಲ ಸಡ್ಡು ಹೊಡೆಯುವ ವಾಂಛೆ

ಒದ್ದರೂ ಪಾದರಸದುಂಡೆಯಂತೆ

ಖೆಡ್ಡಕ್ಕೆ ಬೀಳಿಸಲು ಒದ್ದಾಡಿ ಬಸವಳಿವ

ದಡ್ಡ ಜನ ಕೂಟದಲಿ ರಾಜನಂತೆ.

 

-ಡಾ ಸುರೇಶ ನೆಗಳಗುಳಿ, ಮಂಗಳೂರು

ಚಿತ್ರ್