ಪ್ರಸಾದವೇ ನಂಬಿಕೆ
ನನಗೆ ದೇವರಲ್ಲಿ ನಂಬಿಕೆ ಇಲ್ಲದಿರಬಹುದು. ಆದರೆ ಅವನ ಹೆಸರಿನಲ್ಲಿ ನೀಡುವ ಪ್ರಸಾದದಲ್ಲಿ ಅಚಲ ನಂಬಿಕೆ ಇದೆ. "ದೇವನೊಬ್ಬ ನಾಮ ಹಲವು" ಎಂದಿದ್ದರೂ ದೇವರುಗಳು ಹಲವಾರು ಇದ್ದಂತೆ ಪ್ರಸಾದಗಳೂ ಹಲವು ಬಗೆ - ರುಚಿಯಲ್ಲಿ, ಗಾತ್ರದಲ್ಲಿ, ಬಣ್ಣದಲ್ಲಿ. ನಾನು ಪ್ರಸಾದದ ಆಸೆಯಿಂದ ಬಾಯಿಯಲ್ಲಿ ನೀರೂರಿಸಿಕೊಂಡು ದೇವಸ್ಥಾನಗಳಿಗೆ ಹೋಗುತ್ತೇನೆ ಎಂದು ನೀವೇನೂ ಭಾವಿಸಬೇಕಿಲ್ಲ. ಆದರೆ ದೇವರಿಗೆ ನನ್ನನ್ನು ನೋಡಲೇಬೇಕಾದ ಅನಿವಾರ್ಯತೆ ಒದಗಿದರೆ ನಾನು ದೇವಾಲಯಕ್ಕೆ ಹೋಗಲೇಬೇಕಾಗಿಬರುತ್ತದೆ. ಅಂತಹ ಅನಿವಾರ್ಯ ಸಂದರ್ಭಗಳಲ್ಲಿ ನಾನು ಅಲ್ಲಿ ಏನು ಪ್ರಸಾದ ಸಿಗಬಹುದು ಎಂದು ಕುತೂಹಲದಿಂದ ಕಾಯುತ್ತಿರುತ್ತೇನೆ. ಆದುದರಿಂದಲೇ ಏನು ಪ್ರಸಾದ ಸಿಗಬಹುದು ಎಂದು ಕುತೂಹಲದಿಂದ ಕಾಯುತ್ತಿರುತ್ತೇನೆ. ಆದುದರಿಂದಲೇ ಯಾರಾದರೂ ತಿರುಪತಿಗೆ ಹೋಗುತ್ತಾರೆಂದು ತಿಳಿದುಬಂದರೆ ನನಗಾಗಿ ತಿಮ್ಮಪ್ಪನ ಪ್ರಸಾದವಾದ ಲಡ್ಡು ತರಲು ನೆನೆಪಿಸುತ್ತೇನೆ. ತಿರುಪತಿ ಲಡ್ಡೂಗೆ ಸಮಾನವಾದದ್ದು ಬೇರೇನಾದರೂ ಇದೆಯೇ ಈ ಪ್ರಸಾದಗಳ ಪ್ರಪಂಚದಲ್ಲಿ? ನನಗಂತೂ ಗೊತ್ತಿಲ್ಲ. ಹಲವಾರು ದೇವಾಲಯಗಳಲ್ಲಿ ಪ್ರಸಾದ ರೂಪದಲ್ಲಿ ಲಾಡು ಕೊಡುತ್ತಾರೆ ನಿಜ. ಆದರೆ "ದಾಸರೆಂದರೆ ಪುರಂದರ ದಾಸರಯ್ಯ..." ಎಂದು ಹೇಳುವಂತೆ "ಲಾಡು ಎಂದರೆ ತಿರುಪತಿ ಲಾಡುವಯ್ಯ..." ಎಂದು ಹೇಳಲು ನಾನು ಎವರ್ ರೆಡಿ. ನನ್ನ ಒಂದೇ ಆಕ್ಷೇಪಣೆ ಎಂದರೆ ಏಲಕ್ಕಿಯನ್ನು ಸಿಪ್ಪೆ ಸಮೇತ ಬಳಸುವುದು. ಇದರಿಂದಾಗಿ ಲಾಡು ಚಪ್ಪರಿಸಿಕೊಂಡು ತಿನ್ನುತ್ತಿರುವಾಗ ಏಲಕ್ಕಿ ಸಿಪ್ಪೆ ಹಲ್ಲಿಗೆ ಸಿಕ್ಕಿ ರುಚಿಭಂಗವಾಗುತ್ತದೆ. ಇರಲಿ ಬಿಡಿ. ಗುಲಾಬಿ ಜತೆ ಮುಳ್ಳು ಎಂಬಂತೆ ಲಾಡು ಜತೆ ಸಿಪ್ಪೆ. ಧರ್ಮಸ್ಥಳದ ಪಂಚಕಜ್ಜಾಯ, ಮಂತ್ರಾಲಯದ ಮೈಸೂರು ಪಾಕ್ ರೀತಿಯ ಮಿಠಾಯಿ, ಗುರುವಾಯೂರಿನ ಮಲರ್, ಮಧುರೈ ಮೀನಾಕ್ಷಿಯ ಚಕ್ಕರ್ ಪೊಂಗಲ್ - ಹೀಗೆ ದೇವರು ಹಲವರು, ಪ್ರಸಾದಗಳೂ ಹಲವಾರು. ಆದರೆ ತಿರುಪತಿ ಲಡ್ಡು ಮಾತ್ರ ಫಸ್ಟ್ ಆನ್ ದಿ ಲಿಸ್ಟ್.
ನನ್ನ ಇನ್ನೊಂದು ಫೇವರಿಟ್ ಪ್ರಸಾದ ಎಂದರೆ ಪೊಂಗಲ್. ಆದರೆ ಇದರ ವಿತರಣೆ ಚಳಿಗಾಲಕ್ಕೆ ಮಾತ್ರ ಸೀಮಿತ. ಧನುರ್ಮಾಸದಲ್ಲಿ ಬೆಳಿಗ್ಗೆ ಬೇಗನೆಎದ್ದು ದೇವಸ್ಥಾನಕ್ಕೆ ಹೋಗಬೇಕು. ಆಗ ಮಾತ್ರ ಪೊಂಗಲ್ ಲಭ್ಯ. ಅದೂ ಬಿಸಿ ಬಿಸಿ. ಒಂದು ದಿನ ಸಿಹಿ ಪೊಂಗಲ್, ಇನ್ನೊಂದು ದಿನ ಖಾರದ ಪೊಂಗಲ್. ಆದರೆ ದೇವರ ದಯೆ, ನನ್ನ ಅದೃಷ್ಟ ನೋಡಿ. ನಾನು ಚಳಿಯೆಂದು ರಗ್ ಹೊದ್ದಿ ಮಲಗಿದ್ದರೆ ನನ್ನ ಹೆಂಡತಿ ಬೇಗ ಎದ್ದು ನನಗಾಗಿ ಎಂದಲ್ಲದಿದ್ದರೂ ದೇವಾಲಯಕ್ಕೆ ಹೋಗಿ ಪೊಂಗಲ್ ತರುತ್ತಾಳೆ. ನನಗೆ ಅದರಲ್ಲಿ ಪಾಲು ಸಿಕ್ಕೇ ಸಿಗುತ್ತದೆ. ಹುಟ್ಟಿಸಿದ ದೇವರು (ನನ್ನಂತಹವರಿಗೂ) ಪೊಂಗಲ್ ನೀಡದೇ ಇರನೆ?
ಅಮೃತಸರದ ಸುವರ್ಣ ಮಂದಿರದಲ್ಲಿ ಪ್ರಸಾದ ತಿಂದದ್ದು ನೆನಪಿದೆ. ಆದರೆ ಹೆಸರು ನೆನಪಿಲ್ಲ. ದಿನ್ನೆಯಲ್ಲಿ ನೀಡಿದ ಶುದ್ಧ ತುಪ್ಪ ಮತ್ತು ರವೆಯಿಂದ ಮಾಡಿದ ಮಿಶ್ರಣ ಅದಾಗಿತ್ತು. ಬೆಚ್ಚಗೆ ಸಿಹಿಯಾಗಿದ್ದ ಅದನ್ನು ಚಪ್ಪರಿಸಿ ತಿನ್ನುತ್ತಿದ್ದಾಗ ಭಾರಿ ಗಾತ್ರದ ಸರ್ದಾರ್ಜಿಯೊಬ್ಬ ನನ್ನನ್ನೇ ದಿಟ್ಟಿಸಿ ನೋಡುತ್ತಿದ್ದ. ನಾನು ಪ್ರಸಾದಕ್ಕಾಗಿಯೇ ಅಲ್ಲಿಗೆ ಬಂದಿರಬಹುದು ಎಂಬ ಅನುಮಾನ ಅವನನ್ನು ಕಾಡುತ್ತಿತ್ತೇ ಎಂಬ ಅನುಮಾನ ನನ್ನುನ್ನು ಕಾಡುತ್ತಿತ್ತು. ಆದರೆ ಉತ್ತರಭಾರತದಲ್ಲಿ ದೇವಾಲಯಗಳು ದೇವರಿಗೆ ಮಾತ್ರ ಪ್ರಸಿದ್ಧಿಯೇ ಹೊರತು ಅವು ನೀಡುವ ಪ್ರಸಾದಗಳಿಗಾಗಿ ಅಲ್ಲ. ಕೆಲವೊಮ್ಮೆ ಕಲ್ಲು ಸಕ್ಕರೆ, ಸಕ್ಕರೆ ಗುಳಿಗೆ, ಕಲ್ಯಾಣ ಸೇವೆಯನ್ನು ಪ್ರಸಾದವೆಂದು ಕೈಗೆ ಹಾಕಿ ಭಕ್ತಾದಿಗಳನ್ನು ಸಾಗಿಹಾಕುತ್ತಾರೆ. ಅದನ್ನು ನನ್ನಂತಹ ಭಕ್ತಾದಿಗಳು ಚಪ್ಪರಿಸಿ ತಿನ್ನುವಂತೆಯೂ ಇಲ್ಲ. ಆದರೇನು ಮಾಡುವುದು, ಅದೇ ಲಭ್ಯ. ಅಷ್ಟೇ ಲಭ್ಯ. ಒಮ್ಮೆ ಪಾಲಕ್ಕಾಡ್ ಅಥವಾ ಪಾಲ್ಗಾಟ್‍ಗೆ ಹೋಗಿದ್ದಾಗ ನನ್ನನ್ನು ಹನುಮಂತನ ದರ್ಶನಕ್ಕೆಂದು ಹನುಮಂತನ ದರ್ಶನಕ್ಕೆಂದು ಹನುಮಾನ್ ದೇವಾಲಯಕ್ಕೆ ಕರೆದೊಯ್ದಿದ್ದರು. ಅಲ್ಲೇನು ಪ್ರಸಾದ ಗೊತ್ತೆ? ಬಿಸಿ ಬಿಸಿ ಉದ್ದಿನ ವಡೆ! ಒಬ್ಬರಿಗೆ ಒಂದೇ. ನನಗೆ ಇನ್ನೊಂದು ಬೇಕಿತ್ತು. ಆದರೆ ಮತ್ತೆ ಸರದಿಯಲ್ಲಿ ನಿಲ್ಲಬೇಕಿತ್ತು. ನಮ್ಮಗಳ ಮನೆಯಲ್ಲಿ ವೈದೀಕದಲ್ಲಿ ಮಾತ್ರ ಮಾಡುವ ಈ ವಡೆ ಅಲ್ಲಿ ಪ್ರಸಾದ ಹೇಗಾಯಿತೊ ದೇವರೇ ಬಲ್ಲ. ಇತ್ತೀಚಿಗೆ ನಾನು ಬೆಂಗಳೂರಿನ ಒಂದು ಶಿರಡಿ ಸಾಯಿಬಾಬ ಮಂದಿರಕ್ಕೆ ಹೋಗಿದ್ದೆ. ಅಲ್ಲಿ ನನಗೆ ಸಿಕ್ಕಿದ ಪ್ರಸಾಧ ಎರಡು "ಮಾರಿ" ಬಿಸ್ಕತ್! ಛೆ! ಕ್ರೀಂ ಬಿಸ್ಕತ್ತಾದರೂ ಕೊಡಬಾರದಿತ್ತೆ ಎಂದು ಮನಸ್ಸು ಬಯಸಿದರೂ "ಮಾರಿ" ಬಿಸ್ಕತ್ ಅಲ್ಲಿ ಹೇಗೆ ಬಂದಿತು ಎಂದು ತಲೆ ಕೆಡಿಸಿಕೊಳ್ಳುತ್ತಾ ಅದನ್ನೇ ತಿಂದು ಮುಗಿಸಿದೆ. ಪ್ರಸಾದವಾಗಿ ಬಿಸ್ಕತ್ ಎಂದರೆ ಕಮ್ಯುನಿಸ್ಟರು ಹೇಳುವಂತೆ ಅದೊಂದು ಕ್ರಾಂತಿಕಾರಿ ಬದಲಾವಣೆ ಎಂದೆನಿಸಿತು. ಅಥವಾ ದೇವರ ಮಹಿಮೆಯೆ?ದೇವರ ಮಹಿಮೆ ಎಂದಾಗ ಅವನ ಮಹಿಮೆಗೂ, ಹೆಸರಿಗೂ ಒಂದು ಸಂಬಂಧ ಇರುವಂತೆ ನನಗೆ ತೋರುತ್ತದೆ. ಇಷ್ಟಸಿದ್ಧಿ ವಿನಾಯಕ ದೇವಾಲಯ ಎಂದರೆ ಆ ದೇವಾಲಯಕ್ಕೆ ಹೋದವರ ಇಷ್ಟ ಈಡೇರುತ್ತದೆ ಎಂಬ ನಂಬಿಕೆ ಇದೆ. ಆದುದರಿಂದಲೇ ಅದನ್ನು ಇಷ್ಟಸಿದ್ಧಿ ವಿನಾಯಕ ಎಂದು ಕರೆಯಲಾಗುತ್ತದೆ. ವಿನಾಯಕ ಒಬ್ಬನೇ ಎಂದ ಮೇಲೆ ಇಲ್ಲಿರುವ ವಿನಾಯಕ ಮಾತ್ರ ಕೋರಿಕೆ ಈಡೇರಿಸುತ್ತಾನೆ. ಉಳಿದ ಕಡೆ ಇಲ್ಲ ಎಂದರೇನು ಎಂದು ನನಗಂತೂ ಅರ್ಥವಾಗಿಲ್ಲ. ಅಭಯ ಗಣಪತಿಯೂ ಇದ್ದಾನೆ.
ಮಹಿಮೆಗಳು ಬಿಡಿ. ನಮ್ಮ ನಿಮ್ಮಗಳ ಹೆಸರಿಗೊಂದು ಸರ್‍ನೇಮ್ ಅಂಟಿಕೊಂಡಂತೆ ದೇವರುಗಳಿಗೂ ಒಂದು ಸರ್‍ನೇಮ್ ಇದೆ. "ಸ್ಯಾಂಕಿ ಅಂಜನೇಯ" ಎಂದಾಗ ಅವನೇನು ಫಾರಿನ್ ರಿಟರ್ನ್ ಆಂಜನೇಯ ಅಲ್ಲ. ಬೆಂಗಳೂರಿನ ಸ್ಯಾಂಕಿ ರಸ್ತೆಯಲ್ಲಿ ನೆಲೆಸಿರುವ ದೇವ. ಆ ರಸ್ತೆಯಲ್ಲಿರುವ ದೇವಾಲಯದಲ್ಲಿ ಪ್ರತಿಷ್ಠಾಪನೆಗೊಂಡಿರುವ ಆಂಜನೇಯನಿಗೆ ಆ ಹೆಸರು. ಅಡ್ರೆಸ್ ಸರಿಯಾಗಿರಲಿ ಎಂದು "ಸ್ಯಾಂಕಿ ಆಂಜನೇಯ" ಎಂಬ ಹೆಸರು ಬಂದಿದೆ. "ರಾಗಿಗುಡ್ಡ ಆಂಜನೇಯ"ಎಂದಾಗ ನಿಮ್ಮ ಊಹೆ ಕರೆಕ್ಟು. ರಾಗಿಗುಡ್ಡದ ಮೇಲಿನ ದೇವಾಲಯದಲ್ಲಿ ಪೂಜಿಸಿಕೊಳ್ಳುತ್ತಿರುವಾತ. ಗಾಳಿ ಆಂಜನೇಯನೂ ಬೆಂಗಳೂರಿನಲ್ಲಿದ್ದಾನೆ. ಪ್ರತಿ ಮಳೆಗಾಲದಲ್ಲಂತೂ ಇವನು ಖಂಡಿತ ಸುದ್ಧಿ ಮಾಡುತ್ತಾನೆ. ಮಳೆ ತರಿಸಿದ್ದಕ್ಕಲ್ಲ. ಮಳೆ ನೀರು ಇವನ ಮಂದಿರಕ್ಕೆ ಹರಿದು ಅದು ದ್ವೀಪವಾದಾಗ, ಆದರೆ "ಗಾಳಿ" ಎಂಬ ಸರ್‍ನೇಮ್ ಹೇಗೆ ಬಂದಿತು? ಬಹುಶಃ ದಶಕಗಳ ಹಿಂದೆ ಆ ಪ್ರದೇಶ ಜನರಹಿತವಾಗಿದ್ದು ಅಲ್ಲಿ ಗಾಳಿ ಜೋರಾಗಿ ಬೀಸುತ್ತಿದ್ದುದರಿಂದ, ಅದು "ಗಾಳಿ ಆಂಜನೇಯ ದೇವಾಲಯ" ಎಂದು ನಾಮಕರಣಗೊಂಡಿತೋ ಏನೋ?
ಗಾಳಿ ಆಂಜನೇಯನಂತೆ ಬಯಲು ಆಂಜನೇಯನೂ ಇದ್ದಾನೆ. ಇವನೂ ಒಮ್ಮೆ ಬಯಲಿನಲ್ಲೇ ಇದ್ದನೇನೋ? ಪ್ರಸನ್ನ ವೀರಾಂಜನೇಯನೂ ಪೂಜಿಸಿಕೊಳ್ಳುತ್ತಿದ್ದಾನೆ. ಇವನು ಹೀಗೆ, ಏಕೆ ಏಕಕಾಲದಲ್ಲಿ ಪ್ರಸನ್ನ ಮತ್ತು ವೀರ ಆದ ಎಂದು ನನಗೆ ಆಂಜನೇಯನಾಣೆ ಗೊತ್ತಿಲ್ಲ. ಅದರಂತೆ ಅಭಯ ಆಂಜನೇಯನೂ ಇದ್ದಾನೆ. ಬಂಡೆ ಆಂಜನೇಯ ಇದ್ದ ಮೇಲೆ ಕಂಬದ ಅಭಯ ಆಂಜನೇಯನೂ ಇದ್ದಾನೆ. ಬಂಡೆ ಆಂಜನೇಯ ಇದ್ದ ಮೇಲೆ ಕಂಬದ ವೆರೈಟಿ ಏಕಿರಬಾರದು? ಇದ್ದಾನೆ. ಭಕ್ತಾದಿಗಳನ್ನು ಕೈ ಬೀಸಿ ಕರೆಯುತ್ತಿದಾನೆ. ನಾನು ಅಹಮದಾಬಾದಿನಲ್ಲಿ ಇದ್ದಾಗ "ಕ್ಯಾಂಪ್ ಹನುಮಾನ್" ನೋಡಿದ್ದೆ. ಕ್ಯಾಂಪ್ ಹನುಮಾನ್? ಅವನೇನು ಅಲ್ಲಿ ಕ್ಯಾಂಪ್ ಮಾಡಿರಲಿಲ್ಲ. ಈ ದೇವಾಲಯ ಇದ್ದದ್ದು ಮಿಲಿಟರಿ ಕ್ಯಾಂಪ್‍ನಲ್ಲಿ. ಹಾಗಾಗಿ ಇಲ್ಲಿನ ಹನುಮಂತ "ಕ್ಯಾಂಪ್ ಹನುಮಾನ್" ಆದ ಅಷ್ಟೆ. ಆದರೆ ಅವನಿಗೆ ಮಿಲಿಟರಿ ಶಕ್ತಿ ಇದ್ದಂತೆ ಕಾಣಲಿಲ್ಲ. "ಸಂಜೀವಿನಿ ಆಂಜನೇಯ"ನನ್ನು ಭೇಟಿ ಮಾಡಿದ್ದೀರ? ಪಂಚಮುಖಿ ಆಂಜನೇಯ, ಹೊರಗೈ ಆಂಜನೇಯ, ಕೋಟೆ ಆಂಜನೇಯ, ಗೋಪುರ ಆಂಜನೇಯ, ಇನ್ನು ಎಷ್ಟು ಬಗೆಯ ಆಂಜನೇಯರಿದ್ದಾರೋ ಏನೋ? ಈ ಪರಿಯ ಹೆಸರು ಸೊಬಗಿನ ಆಂಜನೇಯನನ್ನು ಇನ್ನಾವ ದೇವರಲ್ಲು ಕಾಣೆ. ಎಂದು ಹಾಡಬೇಕೆನಿಸುತ್ತೆ. ಮಂಗನಾಗಬಾರದು, ಆಂಜನೇಯನಾಗಿ ಬೆಳೆಯಬೇಕು ಎನ್ನುತ್ತಾರೆ (ಆಂಜನೇಯನನ್ನು) ತಿಳಿದವರು. "ಸರ್ಕಲ್ ಮಾರಮ್ಮ" ಸಹ ಇದ್ದಾಳೆ. ಇದು ", ಮಾರಮ್ಮ ಸರ್ಕಲ್" ಎಂದಿರಬೇಕಿತ್ತು. ಏಕೆಂದರೆ ಆ ಮಂದಿರದ ಮುಂದೊಂದು ದೊಡ್ಡ ಸರ್ಕಲ್ ಇದೆ. ಆದರೆ ಅದರ ಬದಲು ಸರ್ಕಲ್ ಮಾರಮ್ಮ ಆಗಿದೆ. ಮಾರಮ್ಮನಲ್ಲಿ ಸರ್ಕಲ್ ಇದೆಯೋ ಅಥವಾ ಸರ್ಕಲಿನಲ್ಲಿ ಮಾರಮ್ಮ ಇದೆಯೋ? ಆದರೆ ಅಲ್ಲಿಗೆ ಬರುವ ಭಕ್ತರಿಗೆ ಅದರ ಬಗ್ಗೆ ಚಿಂತೆ ಇಲ್ಲ. ಮಾರಮ್ಮನನ್ನು ನೋಡಲು ಸರ್ಕಲ್ ಸುತ್ತು ಹಾಕಿ ಬರುತ್ತಾರೆ. ಪ್ರಸಾದದ ಆಸೆಗೆಂದೇ ದೇವಾಲಯಕ್ಕೆ ಹೋಗುವವರಿದ್ದಾರೆ. ಅದು ಸರ್ಕಲ್ ಮಾರಮ್ಮನಾಗಿರಬಹುದು. ಪ್ರಸನ್ನ ವೀರಾಂಜನೇಯ ಆಗಿರಬಹುದು, ಇಷ್ಟ ಸಿದ್ಧಿ ವಿನಾಯಕನಾಗಿರಬಹುದು.
(ಚಿತ್ರ ಕೃಪೆ)