ಪ್ರಾಕೃತಿಕ ವಿಕೋಪಗಳು ಮತ್ತು ಬದಲಾಗುತ್ತಿರುವ ನಮ್ಮ ಪರಿಸರ
ಮನುಷ್ಯನ ನಾಗರಿಕತೆ ಬೆಳೆಯುತ್ತಿದ್ದಂತೆ ಪರಿಸರ ಅವನ ಮೇಲೆ ಮುನಿಸಿಕೊಳ್ಳುವುದು ಹೆಚ್ಚುತ್ತಿದೆ. ಪ್ರಾಕೃತಿಕ ಅವಘಡಗಳ ಮೂಲಕ ಮನುಷ್ಯನ ಮೇಲೆ ಗುದ್ದು ನೀಡುವ ಪ್ರಕೃತಿಯ ನಡೆ ಯಾಕೆ ಈ ರೀತಿ ರೌದ್ರವಾಗುತ್ತದೆ ಎಂಬ ಬಗ್ಗೆ ಕೆಲವೊಂದು ಊಹೆಗಳು ಇಲ್ಲಿವೆ.
ನಮ್ಮ ಹಿರಿಯರ ಕಾಲದಲ್ಲಿ ಭೂಮಿಗೆ ಸಿಡಿಲು ಹೊಡೆಯುವುದು, ಅದರಿಂದ ಮನುಷ್ಯನ ಅಪಮೃತ್ಯು, ಬೆಳೆ ನಷ್ಟ ಮುಂತಾದ ಸಂಭವನೀಯತೆಗಳು ತುಂಬಾ ಕಡಿಮೆ ಇದ್ದವು. ಈ ಬಗ್ಗೆ ಕೆಲವು ಹಿರಿಯರನ್ನು ಮಾತಾಡಿಸಿದಾಗ ಅವರ ಜೀವಮಾನದಲ್ಲಿ ಎಲ್ಲೋ ಹತ್ತು- ಇಪ್ಪತ್ತು ವರ್ಷಗಳಿಗೆ ಒಮ್ಮೊಮ್ಮೆ ಅಲ್ಲಲ್ಲಿ ಒಂದು -ಎರಡು ಕಡೆ ಮನುಷ್ಯನಿಗೆ ಸಿಡಿಲು ಬಡಿದುದು, ಸತ್ತು ಹೋದದ್ದು, ಬೆಳೆಗಳಿಗೆ ಸಿಡಿಲು ಬಡಿದು ಅದು ಹಾಳಾಗಿ ಹೋದದ್ದು ಮುಂತಾದ ಘಟನಾವಳಿಗಳನ್ನು ನೆನಪಿಸಿಕೊಳ್ಳುತ್ತಾರೆ. ಆದರೆ ಈಗ ಹಾಗಿಲ್ಲ, ಮಳೆಗಾಲ ಪ್ರಾರಂಭವಾಗುವ ಸಮಯ, ಮಳೆಗಾಲ ಮುಗಿಯುವ ಸಮಯದಲ್ಲಿ ಬರುವ ಭಾರೀ ಸಿಡಿಲುಗಳ ಅಬ್ಬರಕ್ಕೆ, ಬದುಕಿ ಉಳಿದರೆ ಒಂದು ವರ್ಷ ಆಯುಷ್ಯ ಹೆಚ್ಚು ಎಂಬಂತಾಗಿದೆ. ಪ್ರತೀ ವರ್ಷವೂ ಅಲ್ಲಲ್ಲಿ ಸಿಡಿಲಾಘಾತವಾಗುವುದು, ಮನುಷ್ಯ ಸ್ಥಳದಲ್ಲೇ ಮೃತ್ಯುವಿಗೆ ಬಲಿಯಾಗುವುದು, ಭಾಗಶಃ ಸಿಡಿಲಾಘಾತದಿಂದ ಅಂಗ ಊನತೆ ಹೊಂದುವುದು, ತೋಟದ ಬೆಳೆಗಳಾದ ಅಡಿಕೆ , ತೆಂಗು, ರಬ್ಬರ್ ಮುಂತಾದವುಗಳಿಗೆ ಸಿಡಿಲು ಬಡಿದು ಒಂದಷ್ಟು ಮರಗಳು ಹಾಳಾಗಿ ಹೋಗುವುದು ಸಾಮಾನ್ಯವಾಗಿ ಊರಿಗೆ ಒಂದರಂತೆಯಾದರೂ ಕೇಳಿ ಬರುತ್ತದೆ. ಕಳೆದ ವರ್ಷ ಪತ್ರಿಕೆಯಲ್ಲಿ ವರದಿಯಾದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು ೧೦-೧೫ ಕ್ಕೂ ಹೆಚ್ಚು ಕಡೆ ಮನುಷ್ಯ ಜೀವಕ್ಕೆ ಸಿಡಿಲಾಘಾತವಾಗಿಬಹುದು. ಇದಕ್ಕಿಂತಲೂ ಹೆಚ್ಚು ಕಟ್ಟಡಗಳಿಗೆ ಹಾನಿಯಾಗಿರಬಹುದು. ತೋಟಕ್ಕೆ ಹಾನಿಯಾದ ಬಗ್ಗೆ ಪ್ರಕಟಿತ ವರದಿಗಳು ತುಂಬಾ ಕಡಿಮೆಯಾದರೂ ಪ್ರತೀ ಊರಿಗೆ ಒಂದು ಇಲ್ಲವೇ ಎರಡು ಇಂತಹ ಘಟನೆಗಳಾಗುತ್ತಿದೆ.
ಸಿಡಿಲು ಮಿಂಚುಗಳ ಬಗ್ಗೆ ಎಲ್ಲರಿಗೂ ಗೊತ್ತಿದೆ. ಮಿಂಚು ಎನ್ನುವುದು ಧನ ಮತ್ತು ಋಣ ವಿದ್ಯುತ್‌ಗಳು ಪರಸ್ಪರ ಡಿಕ್ಕಿ ಹೊಡೆದಾಗ ಉಂಟಾಗುವ ಅತೀ ದೊಡ್ಡ ಬೆಂಕಿ (ಸ್ಪಾರ್ಕ್). ಇದನ್ನು ಸ್ಥಾಯೀ ವಿದ್ಯುತ್ ಎನ್ನುತ್ತಾರೆ. ಭೂಮಿಯಲ್ಲಿ ತಾಪಾಮಾನ ಹೆಚ್ಚಾದಂತೆ ವಾತಾವರಣ ಬಿಸಿಯಾಗುತ್ತದೆ. ಈ ಬಿಸಿ ಗಾಳಿ ಮೇಲೇರುತ್ತದೆ. ಹೀಗೇ ಮೇಲೇರಿದಾಗ ವಾತಾವರಣದಲ್ಲಿ ಸೇರಿರುವ ನೀರಿನ ಅಂಶಗಳು ಮೋಡಗಳಾಗಿ ಪರಿವರ್ತನೆಯಾಗುತ್ತವೆ. ಗಾಳಿ ಮೇಲೇರಿದಂತೆ ಮೋಡಗಳು ದೊಡ್ಡದು ದೊಡ್ಡದು ಆಗುತ್ತಾ ಬರುತ್ತದೆ. ಮೋಡಗಳ ಮೇಲ್ಪ್ಭಾದಲ್ಲಿನ ತಾಪಮಾನ ಮಂಜುಗಡ್ಡೆಯಾಗುವಷ್ಟು ತಣ್ಣಗಿರುತ್ತದೆ. ಆ ಕಾರಣ ನೀರಾವಿಗಳು ಅಲ್ಲಿ ಮಂಜುಗಡ್ಡೆಯಾಗುತ್ತವೆ. ಹಲವಾರು ಮಂಜುಗಡ್ಡೆಗಳಾಗಿ ಅವು ಅತ್ತಿತ್ತ ಚಲಿಸುತ್ತಿರುತ್ತವೆ. ಅವುಗಳಲ್ಲಿ ಧನ ಮತ್ತು ಋಣ ವಿದ್ಯುತ್ ಆಗರಗಳಿರುತ್ತವೆ. ಅವು ಪರಸ್ಪರ ತಾಗಿಕೊಂಡಾಗ ಉಂಟಾಗುವ ಘರ್ಷಣೆಯ ಬೆಂಕಿಯೇ ಮಿಂಚು. ಸಾಮಾನ್ಯವಾಗಿ ಎಲ್ಲಾ ಮೋಡಗಳಲ್ಲಿಯೂ ವಿದ್ಯುತ್ ಚಾರ್ಜ್ ಇರುತ್ತದೆ. ಸಣ್ಣ ಗಾತ್ರದವು, ಅದರಲ್ಲೂ ಧನ ವಿದ್ಯುತ್ ಅಂಶ ಒಳಗೊಂಡವುಗಳು ಮೋಡದ ಮೇಲ್ಭಾಗದಲ್ಲಿಯೂ, ಬೃಹತ್ ಗಾತ್ರದವು ಋಣ ವಿದ್ಯುತ್ ಅಂಶ ಒಳಗೊಂಡವುಗಳು ಕೆಳ ಭಾಗದಲ್ಲೂ ಇರುತ್ತವೆ. ಈ ಧನ ಮತ್ತು ಋಣ ವಿದ್ಯುತ್ ಅಂಶಗಳೊಳಗೊಂಡ ಮೋಡ ಬಂಡೆಗಳು ಪರಸ್ಪರ ಡಿಕ್ಕಿ ಇಲ್ಲವೇ ಒರಸಿಕೊಳ್ಳುವಾಗ ಭಾರೀ ಬೆಂಕಿ ಕಾಣುತ್ತದೆ. ಭಾರೀ ಶಬ್ಧ ಬರುತ್ತದೆ. ಬೆಂಕಿಯು ತೀವ್ರವಾದಷ್ಟು ಅದರ ಆಘಾತ ಬೇರೆ ಕಡೆಯಲ್ಲಿ ಭೂಮಿಗೆ ತಾಗಿ ತಟಸ್ಥೀಕರಣ ಹೊಂದಲೇ ಬೇಕಾಗುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಘರ್ಷಣೆಯಾಗುವಾಗ ಉಂಟಾಗುವ ಬೆಂಕಿ (ವಿದ್ಯುತ್) ಮೋಡಗಳೊಳಗೇ ಮುಗಿದರೆ ಕೆಲವು ಭೂಮಿ ತನಕವೂ ಬರುತ್ತದೆ. ಭೂಮಿಯ ಧನ ಮತ್ತು ಋಣ ವಿದ್ಯುದಾಂಶವು ಅದನ್ನು ಎಳೆದುಕೊಳ್ಳುತ್ತವೆ. ಹೀಗೇ ಎಳೆದುಕೊಳ್ಳುವಾಗ ಅದು ಮರಮಟ್ಟು, ಮನೆ, ಮುಂತಾದ ಎತ್ತರದ ಗೋಪುರಗಳ ಮೂಲಕ ನೆಲಕ್ಕೆ ತಲುಪುತ್ತದೆ. ಸಿಡಿಲು ಎಂಬುದು ಮೋಡಗಳು ಪರಸ್ಪರ ಡಿಕ್ಕಿ ಹೊಡೆಯುವಾಗ ಉಂಟಾಗುವ ಶಬ್ಧ. ಇದರಲ್ಲಿ ಅಪಾಯಗಳು ಇರುವುದಿಲ್ಲ. ಎಷ್ಟೇ ದೊಡ್ಡ ಶಬ್ದದ ಸಿಡಿಲಾದರೂ ಅದು ಮನುಷ್ಯರಿಗಾಗಲೀ, ಮನೆ ಗೋಪುರ, ಬೆಟ್ಟ, ಮರ ಮಟ್ಟುಗಳಿಗಾಗಲೀ ಹಾನಿಯನ್ನುಂಟುಮಾಡುವುದಿಲ್ಲ. ಇದಕ್ಕಿಂತ ಮುಂಚೆ ಬರುವ ಮಿಂಚು ಮಾತ್ರ ಹಾನಿಯನ್ನುಂಟುಮಾಡುತ್ತದೆ. ಮಿಂಚು ಬಂದು ಸುಮಾರು ೧೦ ಸೆಕುಂಡಿನ ತರುವಾಯ ಸಿಡಿಲು ಕೇಳಿಸುತ್ತದೆ. ಕಾರಣ ಶಬ್ಧದ ವೇಗಕ್ಕಿಂತ ಬೆಳಕಿನ ವೇಗ ಹೆಚ್ಚು.
ಸಿಡಿಲಿನಲ್ಲಿ ಇರುವುದು ಭಾರೀ ಪ್ರಮಾಣದ ವಿದ್ಯುತ್. ಇದು ಸುಮಾರು ೨೭೦೦೦ ಡಿಗ್ರಿ ಸೆಲ್ಸಿಯಸ್ ನಷ್ಟಿರುತ್ತದೆ. ಸೂರ್ಯನ ಬಿಸಿಗಿಂತಲೂ ಇದು ೬ ಪಟ್ಟು ಅಧಿಕವಾಗಿರುತ್ತದೆ.
ಮಿಂಚು ಆಘಾತಗಳಿಗೆ ಕಾರಣಗಳೇನು?
ಪ್ರತೀಯೊಂದಕ್ಕೂ ಒಂದೊಂದು ಕಾರಣ ಇದ್ದೇ ಇರುತ್ತದೆ. ಯಾವುದಾದರೂ ಒಂದು ಅಸಮತೋಲನದ ಫಲಿತಾಂಶವು ಇನ್ನೊಂದು ಪ್ರತಿ ಪರಿಣಾಮದ ಮೂಲಕ ತೋರ್ಪಡಿಕೆಯಾಗುತ್ತದೆ ಎಂಬುದು ಪ್ರಕೃತಿ ನಿಯಮ. ಹಿಂದೆಯೂ ಸಿಡಿಲಾಘಾತಗಳಾಗುತ್ತಿತ್ತಂತೆ. ಆದರೆ ಅದು ಯಾವುದಾದರೂ ಮರ ಮಟ್ಟು, ಎತ್ತರದ ಬೆಟ್ಟಗಳಿಗೆ ಬಡಿಯಲ್ಪಟ್ಟು ಅಲ್ಲಿ ಭೂಮಿಗೆ ಅರ್ಥಿಂಗ್ ಆಗುತ್ತಿತ್ತು. ಆದರೆ ಈಗ ಮರಮಟ್ಟುಗಳು
ಕಡಿಮೆಯಾಗಿ ಅದು ಮನೆ, ಮನುಷ್ಯ ತೋಟಗಳಿಗೆ ತಾಗುತ್ತಿದೆ ಎನ್ನುತ್ತಾರೆ. ಮಳೆ ಬರುವಾಗ ಮರಮಟ್ಟುಗಳಿಗೆ ಮಿಂಚಾಘಾತವಾದರೆ ಅದು ನೀರಿನೊಂದಿಗೆ ( ನೀರು ವಿದ್ಯುತ್ ವಾಹಕ) ಭೂಮಿಗೆ ಅದರಷ್ಟಕ್ಕೇ ಅರ್ಥಿಂಗ್ ಆಗುತ್ತದೆ. ಆಗ ಮರ ಸಾಯುವುದೂ ಇಲ್ಲ.
ಮಿಂಚಿನಾಘಾತಕ್ಕೆ ಕಾರಣ ಇಂತದ್ದೇ ಎಂದು ಸ್ಪಷ್ಟವಾಗಿ ಹೇಳಲಾಗುತ್ತಿಲ್ಲ. ಆದರೂ ಭೂಮಿಯ ಮೇಲೆ ಮಿಂಚಿನಿಂದ ಉಂಟಾಗುವ ಭಾರೀ ವಿದ್ಯುತ್ ಶಕ್ತಿ ಅರ್ಥಿಂಗ್ ಆಗಲು ಅನುಕೂಲಗಳು ಹೆಚ್ಚಾಗಿವೆ ಎಂಬುದಾಗಿ ಹೇಳಬಹುದು. ನಮ್ಮ ಸುತ್ತ ಮುತ್ತ ಇರುವ ವಿದ್ಯುತ್ ಪ್ರಸರಣ ವ್ಯವಸ್ಥೆಯ ಲೋಹದ ಕಂಬಗಳು, ಅದರಲ್ಲಿ ಶಕ್ತಿಯನ್ನು ಆಕರ್ಷಿಸುವ ವಯರುಗಳು ಒಂದು ಕಾರಣವಾಗಿವೆ. ಇದರ ಜೊತೆಗೆ ಎತ್ತರದ ಬೆಟ್ಟ ಗುಡ್ಡಗಳಲ್ಲಿ ಮರಮಟ್ಟುಗಳು ಕಡಿಮೆಯಾದುದೂ ಕಾರಣ. ಭೂಮಿಯ ಒಳಗಿನ ಕಾಂತ ಶಕ್ತಿ ಕೆಲವೆಡೆ ಹೆಚ್ಚು ಶಕ್ತಿ ಶಾಲಿಯಾಗಿದ್ದಾಗಲೂ ಮಿಂಚಿನಾಘಾತ ಆ ಸ್ಥಳದಲ್ಲಿ ಉಂಟಾಗುತ್ತದೆ ಎನ್ನುತ್ತಾರೆ. ಮಾನವ ನಿರ್ಮಿತ ಕೃತ್ಯಗಳು ಮಿಂಚಿನಾಘಾತಕ್ಕೆ ಪ್ರಮುಖ ಕಾರಣ.
ತಡೆಯುವ ವಿಧಾನ: ಮಿಂಚಿನ ರೂಪದಲ್ಲಿ ಭೂಮಿಯತ್ತ ಬರುವ ಭಾರೀ ಪ್ರಮಾಣದ ವಿದ್ಯುತ್ ಶಕ್ತಿಯನ್ನು ಅರ್ಥಿಂಗ್ ಮಾಡುವ ಮೂಲಕ ಮಾತ್ರವೇ ತಟಸ್ಥೀಕರಣಗೊಳಿಸಲು ಸಾಧ್ಯ. ಇದಕ್ಕೆ ಈಗ ಇರುವ ಉಪಾಯ ಮಿಂಚು ಬಂಧಕಗಳು. ಸಾಮಾನ್ಯವಾಗಿ ಪೇಟೆ ಪಟ್ಟಣದ ಬಹುಮಹಡಿ ಕಟ್ಟಡಗಳು, ಎತ್ತರದ ಗೋಪುರಗಳಿಗೆ, ಮಿಂಚಿನ ಶಕ್ತಿಯನ್ನು ಎಳೆದುಕೊಂಡು ಭೂಮಿಗೆ ಇಳಿಸಲು ಬೇರೆ ಬೇರೆ ಪ್ರಮಾಣದ ಮಿಂಚು ಬಂಧಕಗಳನ್ನು ಅಳವಡಿಸುತ್ತಾರೆ. ಮಿಂಚು ಬಂಧಕಗಳ ತುದಿಯಲ್ಲಿ ತಾಮ್ರದ ಆಕರ್ಷಕಗಳು ಮತ್ತು ಅದನ್ನು ಕೆಳಕ್ಕೆ ಪ್ರವಹಿಸುವ ತಾಮ್ರದ ವಯರುಗಳು ಇರುತ್ತವೆ. ಇವು ಸಾಮಾನ್ಯ ವಯರುಗಳಾಗಿದ್ದರೆ ಪ್ರಯೋಜನಕಾರಿಯಾಗಿರುವುದಿಲ್ಲ. ಎಷ್ಟು ದಪ್ಪ ಇರುತ್ತದೆಯೋ ಅಷ್ಟು ಅದರ ಪ್ರಯೋಜನ ಹೆಚ್ಚು. ಇನ್ನು ಭೂಮಿಗೆ ತಟಸ್ಥೀಕರಣವಾಗಲು ನೆಲದಲ್ಲಿ ಇದ್ದಿಲು ಮತ್ತು ಉಪ್ಪು ಹಾಕಿ ಅರ್ಥಿಂಗ್ ವ್ಯವಸ್ಥೆ ಮಾಡಲಾಗುತ್ತದೆ. ಇದೂ ಸಹ ಎಷ್ಟು ದೊಡ್ಡ ಪ್ರಮಾಣದಲ್ಲಿರುತ್ತದೆಯೋ ಅಷ್ಟು ಅದರ ಫಲಿತಾಂಶ ಹೆಚ್ಚು. ಸಾಮಾನ್ಯವಾಗಿ ದೊಡ್ಡ ದೊಡ್ಡ ಕಟ್ಟಡಗಳಿಗೆ ನಾಲ್ಕೂ ದಿಕ್ಕಿನಲ್ಲಿ ಒಂದೊಂದರಂತೆ, ಕೆಲವು ಅತೀ ದೊಡ್ಡ ಕಟಡಗಳಿಗೆ ಅದಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಹಾಕುವುದನ್ನು ಕಾಣಬಹುದು. ಇದೇ ವ್ಯವಸ್ಥೆಯನ್ನು ಮನೆಗಳಿಗೆ ಅಳವಡಿಸಿ ಮನೆಗೆ ಮಿಂಚಾಘಾತವಾಗುದನ್ನು ತಪ್ಪಿಸಬಹುದು. ಆದರೆ ತೋಟ ಮುಂತಾದವುಗಳಿಗೆ ಇದನ್ನು ಅಳವಡಿಸುವಿಕೆ ಭಾರೀ ದುಬಾರಿ ಎನಿಸುತ್ತದೆ. ಪ್ರತೀ ಮಿಂಚು ಬಂಧಕಕ್ಕೆ ಇಂತಿಷ್ಟೇ ಚದರ ಮೀಟರು ವಿಸ್ತೀರ್ಣದ ಶಕ್ತಿಯನ್ನು ಹೀರಿಕೊಳ್ಳುವ ಸಾಮರ್ಥ್ಯ ಇರುತ್ತದೆ. ಎಷ್ಟು ದೊಡ್ಡ ಅರ್ಥಿಂಗ್ ವ್ಯವಸ್ಥೆ ಮತ್ತು ಎಷ್ಟು ಪ್ರಮಾಣದ ವಿದ್ಯುತ್ ಶಕ್ತಿಯನ್ನು ಹೀರಿಕೊಳ್ಳುವ ಸಾಮರ್ಥ್ಯದ ತಾಮ್ರದ ಮಿಂಚಾಕರ್ಶಕ ಮತ್ತು ಪ್ರವಹಕಗಳನ್ನು ಅಳವಡಿಸಲಾಗಿದೆಯೋ ಅದರ ಮೇಲೆ ಅದರ ಫಲಿತಾಂಶ ಇರುತ್ತದೆ. ಅಸಮರ್ಪಕ ವ್ಯವಸ್ಥೆಯಾದಲ್ಲಿ ಅದರಿಂದ ತೊಂದರೆಗಳಾಗುವಿಕೆಯೂ ಇದೆ.
ಕೃಷಿ ಹೊಲ ಮತ್ತು ಇನ್ನಿತರ ಆಸ್ತಿ ಪಾಸ್ತಿಗಳಿಗೆ ಎರಗುವ ಮಿಂಚನ್ನು ನಿಯಂತ್ರಿಸಲು ಈ ವ್ಯವಸ್ಥೆಗಳನ್ನು ಅವಲಂಭಿಸಲು ಸಾಧ್ಯವಿಲ್ಲ. ಇದನ್ನು ಸಾಮೂಹಿಕವಾಗಿ ಮಾಡಬೇಕೇ ವಿನಃ ವೈಯಕ್ತಿಕವಾಗಿ ಮಾಡುವುದು ಕಷ್ಟ. ರೈತಾಪಿ ವರ್ಗ ಸಾಧ್ಯವಾದಷ್ಟು ಎತ್ತರದ ಮರಮಟ್ಟುಗಳನ್ನು ಕಡಿಯದೆ ಉಳಿಸುವುದು, ಊರಿನಲ್ಲಿ ಗುಡ್ಡ ಬೆಟ್ಟಗಳ ಮೇಲಿರುವ ಮರಮಟ್ಟುಗಳನ್ನು ಕಡಿಯಲು ಆಕ್ಷೇಪ ಎತ್ತುವುದು, ತಮ್ಮ ತೋಟ ಹೊಲದಲ್ಲಿ ಅಲ್ಲಲ್ಲಿ ಎತ್ತರಕ್ಕೆ ಬೆಳೆಯುವ ಮರಮಟ್ಟುಗಳನ್ನು ಬೆಳೆಸುವುದನ್ನು ಮಾಡಿದರೆ ಸ್ವಲ್ಪ ಮಟ್ಟಿಗೆ ಮಿಂಚಿನ ಆಘಾತದಿಂದ ತಪ್ಪಿಸಿಕೊಳ್ಳಬಹುದು.
ಚಿತ್ರ ಕೃಪೆ: ಅಂತರ್ಜಾಲ ತಾಣ