ಪ್ರಾಚೀನ ಪುಣ್ಯ ಕ್ಷೇತ್ರ ಅರೆಯೂರು ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನ

ಪ್ರಾಚೀನ ಪುಣ್ಯ ಕ್ಷೇತ್ರ ಅರೆಯೂರು ಶ್ರೀ ವೈದ್ಯನಾಥೇಶ್ವರ ಸ್ವಾಮಿ ದೇವಸ್ಥಾನ

ಜ್ಯೋತಿರ್ಲಿಂಗುವಿರುವ ವೈದ್ಯನಾಥೇಶ್ವರ ಸ್ವಾಮಿಯ ಬೀಡು ಅರೆಯೂರು. ಜ್ಯೋತಿರ್ಲಿಂಗದ ದರ್ಶನ ಮಾತ್ರದಿಂದ ಸಕಲ ಪಾಪ: ದುರಿತಗಳು ದೂರವಾಗಿ ಸಕಲಾಭಿಷ್ಠ ನೆರವೇರಿ ಸಾಕ್ಷಾತ್ ಶಿವನ ದರ್ಶನ ಮಾಡಿದ ಪುಣ್ಯ: ಶ್ರೇಯಸ್ಸು ಪ್ರಾಪ್ತಿ ಆಗುವುದೆಂದು ವೇದಗಳಲ್ಲೆ ಇದೆ.

ಶ್ರೀ ವೈದ್ಯನಾಥೇಶ್ವರ ಸ್ವಾಮಿಯ ಜ್ಯೋತಿರ್ಲಿಂಗುವನ್ನು ಪ್ರಾತ: ಸಾಯಂಕಾಲಗಳಲ್ಲಿ ಆರಾಧಿಸುವುದರಿಂದ ಏಳೇಳು ಜನ್ಮಗಳ ಪಾಪಗಳೂ ನಿವಾರಣೆಯಾಗುವುದಲ್ಲದೆ ಕ್ಯಾನ್ಸರ್ನಂತ ಮಾರಕ ರೋಗಗಳೂ ಕೂಡ ವಾಸಿಯಾಗಿರುವವು. ಹಿಂದೊಮ್ಮೆ ಎಡೆಯೂರು ಶ್ರೀ ಸಿದ್ದಲಿಂಗೇಶ್ವರರಿಗೆ ಬಿನ್ನಿನಲ್ಲಿ ಹುಣ್ಣಾಗಿತ್ತಂತೆ. ರಾಜ ವೈದ್ಯರಿಂದಲೂ ವಾಸಿಯಾಗದೆ ಸಿದ್ದಲಿಂಗೇಶ್ವರರು ಹಾಸಿಗೆ ಹಿಡಿದಾಗ ವೈದ್ಯನಾಥೇಶ್ವರ ಸ್ವಾಮಿ ಭಿಕ್ಷುಕನ ವೇಷದಲ್ಲಿ ಹೋಗಿ ಸಿದ್ದಲಿಂಗೇಶ್ವರರ ಹುಣ್ಣನ್ನು ತಮ್ಮ ಹಸ್ತ ಸ್ಪರ್ಶದಿಂದ ವಾಸಿಮಾಡಿದರಂತೆ. ಆಗ ಗುಣಮುಖರಾದ ಸಿದ್ದಲಿಂಗೇಶ್ವರರು ತಮ್ಮ ಭಕ್ತರು ನೀಡುವ ಮುಡಿಯ ಅರ್ಧ ಮುಡಿಯನ್ನು ವೈದ್ಯನಾಥೇಶ್ವರ ಸ್ವಾಮಿಗೆ ಅರ್ಪಿಸಿದರಂತೆ. ಈಗಲೂ ಎಡೆಯೂರು ಸಿದ್ದಲಿಂಗೇಶ್ವರರಿಗೆ ಬಿಟ್ಟ ಮುಡಿಯನ್ನು ಅರೆಯೂರಿನ ವೈದ್ಯನಾಥೇಶ್ವರ ಸ್ವಾಮಿಯ ಸನ್ನಿಧಿಯಲ್ಲಿ ಪ್ರಾರ್ಥಿಸುತ್ತಾರೆ

ವೈದ್ಯನಾಥೇಶ್ವರ ಸ್ವಾಮಿಯ ಪ್ರಸಾದ ಮಾತ್ರದಿಂದ ಹಲವಾರು ರೋಗಗಳು ವಾಸಿಯಾಗಿರುವ ಐತಿಹ್ಯವಿದೆ. ಬೆಂಗಳೂರಿನ ಹೈಟೆಕ್ ಆಸ್ಪತ್ರೆಗಳಲ್ಲಿ ವಾಸಿಯಾಗುವುದಿಲ್ಲ ಎಂದು ಕೈಸೋಸಿ ಬಿಟ್ಟಿದ್ದ ರೋಗಿ ಶ್ರೀ ವೈದ್ಯನಾಥೇಶ್ವರ ಸ್ವಾಮಿಗೆ ಮೊರೆ ಇಟ್ಟು ಶ್ರೀ ಕ್ಷೇತ್ರಕ್ಕೆ ಬಂದು ಸ್ವಾಮಿ ದರ್ಶನ ಮಾಡಿದ ಮಾತ್ರಕ್ಕೆ ಹುಷಾರಾಗಿರುತ್ತಾರೆ. ಈಗಲೂ ಆರೋಗ್ಯವಾಗಿರುವ ಅವರು ವೈದ್ಯನಾಥೇಶ್ವರ ಸ್ವಾಮಿಯ ಮಹಿಮೆಗೆ ಸಾಕ್ಷಿಯಾಗಿದ್ದಾರೆ.

ಕ್ಯಾನ್ಸರ್ನಂತ ಮಾರಕ ರೋಗಗಳಾದಿ ಸರ್ವರೋಗಗಳನ್ನು ವಾಸಿಮಾಡುವುದರಿಂದ ಶ್ರೀ ವೈದ್ಯನಾಥೇಶ್ವರ ಸ್ವಾಮಿಗೆ ಭವರೋಗ ವೈದ್ಯ ಎಂತಲೂ ಕರೆಯುತ್ತಾರೆ. ಶ್ರೀ ಕ್ಷೇತ್ರದಲ್ಲಿ ಆಚಾರ್ಯ ತಪ ಸಾಮ್ನಾಯ ಜಪೇನ ನಿಯಮೇನ ಚಾ/ ಉತ್ಸವೇನಾನ್ನದಾನೇನ ಕ್ಷೇತ್ರ ವೃದ್ಧಿಸ್ತು ಪಂಚದಾ// ಎಂಬಂತೆ ಪಂಚ ಕಾರ್ಯಗಳು ಇಂದಿಗೂ ನಿರ್ವಿಘ್ನವಾಗಿ ಸಾಗುತ್ತಿವೆ. ನಿತ್ಯ ರುದ್ರಾಭಿಷೇಕ, ನಿತ್ಯ ದಾಸೋಹ ನಿರಂತರವಾಗಿ ಸಾಗುತ್ತಿವೆ. ಪ್ರತಿ ಶಿವರಾತ್ರಿಯಂದು ಸ್ವಾಮಿಗೆ ರಥೋತ್ಸವ ಹಾಗೂ ಶಿವರಾತ್ರಿಯ ಹಿಂದಿನ ದಿನದಿಂದ ಹಿಡಿದು 9 ದಿನಗಳ ಕಾಲ ಪ್ರತಿ ವರ್ಷ ಜಾತ್ರೆ ನಡೆಯುತ್ತದೆ. ಜಾತ್ರೆಯ ಕೊನೆಯ ದಿನದಂದು ಸ್ವಾಮಿಯ ತೆಪ್ಪೋತ್ಸವ ಜರುಗುತ್ತದೆ.

ವಿಜಯದಶಮಿಯಂದು ಸಂಭ್ರಮದಿಂದ ದಸರಾ ಆಚರಿಸಲಾಗುತ್ತದೆ.ಇನ್ನುಳಿದಂತೆ ಹಬ್ಬ ಶ್ರಾವಣ,ಕಾರ್ತಿಕ ಮಾಸಗಳಲ್ಲಿ ವಿಷೇಶ ಉತ್ಸವಗಳು ಜರುಗುತ್ತವೆ. ಶ್ರೀ ಕ್ಷೇತ್ರ ಹಿಂದೊಮ್ಮೆ ಋಷಿಮುನಿಗಳ, ಸಾಧಕರ ಕರ್ಮಭೂಮಿಯಾಗಿತ್ತು. ಎಂದು ಹೇಳಲಾಗುತ್ತದೆ. ಇದಕ್ಕೆ ಪೂರಕವಾಗಿ ಶ್ರೀ ಗದ್ದಿಗೆಯಪ್ಪನವರ ಗದ್ದಿಗೆ, ಮಠದ ಗದ್ದುಗೆಗಳು ಸಾಕ್ಷಿಯಾಗಿವೆ. ಕೆರೆಯಂಗಳದಲ್ಲಿ ಪ್ರಶಾಂತ ಸ್ಥಳದಲ್ಲಿರುವ ದೇವಾಲಯದಲ್ಲಿ ಶಾಂತಿ-ನೆಮ್ಮದಿ ಸದಾ ನೆಲೆಸಿರುವಂತೆ ಭಾವವಾಗುತ್ತದೆ. ಸಾಮಾನ್ಯವಾಗಿ ಇಂಥ ಪ್ರಶಾಂತ ಪರಿಸರ ಸಾಕಷ್ಟು ರೋಗಗಳನ್ನು ವಾಸಿಮಾಡುವಂತದ್ದಾಗಿದೆ ಎಂದು ವೈದ್ಯರೊಬ್ಬರು ವೈಜ್ಞಾನಿಕವಾಗಿ ವಿಶ್ಲೇಷಿಸುತ್ತಾರೆ.

ಅರೆಯೂರಿನಲ್ಲಿ ವೈದ್ಯನಾಥೇಶ್ವರ ಸ್ವಾಮಿಯ ದೇವಾಲಯವಲ್ಲದೆ, ಆಂಜನೇಯ, ಗ್ರಾಮದೇವತೆ, ಹಾಲುಮಲ್ಲಪ್ಪ, ಗದ್ದಿಗೆಯಪ್ಪ, ದೇವಾಲಯಗಳಲ್ಲದೆ. ಇನ್ನು ಮುಂತಾದ ದೇವಾಲಯಗಳಿವೆ. ಹರಪುರಿ ಎಂದು ಕರೆಯಲ್ಪಡುವ ಅರೆಯೂರಿನಲ್ಲಿ ಹಿಂದೊಮ್ಮೆ ಹೊನ್ನಾದೇವಿ ದೇವಸ್ಥಾನ ಇತ್ತೆಂದು ಹೇಳಲಾಗುತ್ತದೆ. ಆದರೆ ಹೊನ್ನಾದೇವಿ ಸಹಿತ ಹಲವಾರು ಶಾಸನಗಳು ನಮ್ಮ ಪೂರ್ವಜರ ನಿರ್ಲಕ್ಷದಿಂದ ಕಾಲಗರ್ಭದಲ್ಲಿ ಲೀನವಾಗಿರಬಹುದೆಂದು ಊಹಿಸಲಾಗಿದೆ.ಆದರೆ ಆ ಕುರಿತು ಇಂದಿಗೂ ಸರಿಯಾದ ರೀತಿಯಲ್ಲಿ ಚರ್ಚೆ ಸಂಶೋಧನೆಗಳಾಗಿಲ್ಲ ಎಂಬುದು ನೋವಿನ ವಿಚಾರ.

ದನ ಕರುಗಳಿಗೆ ಆರೋಗ್ಯ ಹದಗೆಟ್ಟಾಗ ಗದ್ದಿಗೆಯಪ್ಪನಿಗೆ ಮೊರೆಯಿಟ್ಟರೆ ದನ ಕರುಗಳು ಸಲೀಸಾಗುತ್ತವೆ. ಸಕಾಲದಲ್ಲಿ ಮಳೆಯಾಗದಿದ್ದರೆ ಹಾಲುಮಲ್ಲಪ್ಪನಿಗೆ 101 ಕೊಡಗಳ ಅಭಿಷೇಕ ಮಾಡಿದರೆ ಅಭಿಷೇಕ ಪೂರ್ಣವಾಗುವುದರೊಳಗೆ ಭಾರಿ ಮಳೆಯಾಗುತ್ತದೆ ಎಂದು ಹೇಳಲಾಗುತ್ತದೆ. ಮಕ್ಕಳಿಲ್ಲದವರು ದೇವಸ್ಥಾನದಲ್ಲಿ ತಲೆಮೇಲೆ ನೀರನ್ನು ಹಾಕಿಸಿಕೊಂಡು ಒದ್ದೆ ಬಟ್ಟೆಯಲ್ಲಿ ಸ್ವಾಮಿಯ ದೇವಸ್ಥಾನಕ್ಕೆ ಮೂರು ಬಾರಿ ಪ್ರದಕ್ಷಿಣೆ ಹಾಕಿ 9 ದಿನಗಳ ಕಾಲ ಸ್ವಾಮಿಯ ಸೇವೆ ಮಾಡಿದರೆ ಸುಸಂಸ್ಕೃತ ಮಕ್ಕಳಾಗುತ್ತವೆ ಎಂದು ಹೇಳಲಾಗುತ್ತದೆ. ಎಷ್ಟೋ ಜನ ಹೆಣ್ಣು ಮಕ್ಕಳು ಬಂಜೆ ಎಂದು ಗಂಡನ ಮನೆಯಿಂದ ತಿರಸ್ಕೃತಗೊಂಡವರು ಸ್ವಾಮಿಯ ಸೇವೆ ಮಾಡಿ ಮಕ್ಕಳ ಭಾಗ್ಯ ಪಡೆದುದ್ದರ ಬಗ್ಗೆ ಇಂದಿಗೂ ಜೀವಂತ ಸಾಕ್ಷಿಗಳಿದ್ದಾರೆ. ಸರ್ವ ರೋಗಗಳನ್ನೂ ನಿವಾರಿಸುವಂತೆ ಮನೋರೋಗವನ್ನು ಕೂಡ ತಹಬದಿಗೆ ತರುವ ಸ್ವಾಮಿಯ ಸನ್ನಿಧಿಗೆ ಒಮ್ಮೆ ತಪ್ಪದೇ ಬನ್ನಿ.

ಲೇಖಕರು: ಅರೆಯೂರು ಚಿ.ಸುರೇಶ್