ಪ್ರಾಣಿಗಳೇ ಗುಣದಲ್ಲಿ ಮೇಲು…!

ಪ್ರಾಣಿಗಳೇ ಗುಣದಲ್ಲಿ ಮೇಲು…!

ದೊಡ್ಡ ಮೀನುಗಳು ಸಣ್ಣ ಮೀನುಗಳನ್ನು ತಿಂದು ಬದುಕುತ್ತವಂತೆ, ಏಡಿಗಳು ಮೇಲಕ್ಕೇರಲು ಪ್ರಯತ್ನಿಸುವ ಮತ್ತೊಂದು ಏಡಿಯ ಕಾಲು ಹಿಡಿದು ಕೆಳಕ್ಕೆ ಎಳೆಯುತ್ತವಂತೆ, ತಲೆತಗ್ಗಿಸಿ ನಡೆಯುವ ಕುರಿಗಳು ಮುಂದೆ ಸಾಗುತ್ತಿದ್ದ ಕುರಿಯೊಂದು ಹಳ್ಳಕ್ಕೆ ಬಿದ್ದರೆ ಹಿಂಬಾಲಿಸುತ್ತಿದ್ದ ಎಲ್ಲಾ ಕುರಿಗಳು ಹಳ್ಳಕ್ಕೆ ಬೀಳುತ್ತವಂತೆ, ಕೆರೆ ತಟದ ಕಪ್ಪೆಯೊಂದು ಒಮ್ಮೆ ವಟವಟ ಶುರು ಮಾಡಿದರೆ ಇಡೀ ಕಪ್ಪೆಗಳ ಸಮೂಹವೇ ವಟವಟ ಎನ್ನಲು ಪ್ರಾರಂಭಿಸುತ್ತವಂತೆ, ಕೋಗಿಲೆಗಳು ಮರಿ ಮಾಡಿಸಲು ತಮ್ಮ ಮೊಟ್ಟೆಗಳನ್ನು ಕಾಗೆಗಳ ಗೂಡಿನಲ್ಲಿ ಇಟ್ಟು ಹೋಗುತ್ತದಂತೆ, ಇನ್ನೊಂದು ಪ್ರಾಣಿಯ ಆಹಾರವನ್ನು ವಂಚಿಸಿ ತಿನ್ನುವುದೇ ನರಿ ಬುದ್ದಿಯಂತೆ, ಇನ್ನೊಬ್ಬರ ರಕ್ತಹೀರಿ ಬದುಕುವುದೇ ಸೊಳ್ಳೆಗಳ ಕೆಲಸವಂತೆ, ಮೋರಿಗಳಲ್ಲಿ ಹೊರಳಾಡಿ ತನ್ನ ದೇಹವನ್ನು ಗಲೀಜು ಮಾಡಿಕೊಳ್ಳುವುದೇ ಹಂದಿಗಳಿಗೆ ಸಂಭ್ರಮವಂತೆ, ಊಸರವಳ್ಳಿ ತನ್ನ ಬಣ್ಣ ಆಗಾಗ ಬದಲಾಯಿಸುತ್ತಾ ಇತರ ಪ್ರಾಣಿಗಳನ್ನು ವಂಚಿಸುತ್ತದಂತೆ.

ಇನ್ನೊಂದೆಡೆ,

ನಾಯಿಯು ಅನ್ನ ಹಾಕಿದ ಒಡೆಯನಿಗೆ ತುಂಬಾ ನಿಯತ್ತಾಗಿರುತ್ತದಂತೆ, ಹೊಟ್ಟೆ ಹಸಿವಾದಾಗ ಮಾತ್ರ ಹುಲಿಯು ಬೇಟೆಯಾಡುತ್ತದಂತೆ, ಗೀಜಗ ಮಳೆ ಗಾಳಿ ಚಳಿಗೂ ನಾಶವಾಗದ ಗೂಡನ್ನು ನಿರ್ಮಿಸುತ್ತದಂತೆ,  ವಿಷದ ಹಾವುಗಳು ಕೂಡ ತಮ್ಮ ಜೀವಕ್ಕೆ ಅಪಾಯವಾದಾಗ ಮಾತ್ರ ಇತರರನ್ನು ಕಚ್ಚುತದಂತೆ, ಅನೇಕ ಚಿಟ್ಟೆಗಳು, ಕೀಟಗಳು ಸಸ್ಯಗಳಿಗೆ ಪರಾಗಸ್ಪರ್ಶ ಮಾಡಿಸಿ ರೈತರ ಫಸಲು ಉತ್ತಮವಾಗಲು ಸಂಜೀವಿನಿಯಂತೆ ಕೆಲಸ ಮಾಡುತ್ತವಂತೆ, ಎರೆ ಹುಳುಗಳು ಕೃಷಿ ಭೂಮಿಯನ್ನು ಫಲವತ್ತು ಮಾಡುತ್ತವಂತೆ, ಹಸುವಿನ ಹಾಲು ತುಪ್ಪ ಬೆಣ್ಣೆ ಮೊಸರು ಕೊನೆಗೆ ಅದರ ಮಾಂಸವು ವಿಶ್ವದ ಆಹಾರ ಪದ್ದತಿಯ ಬಹುಮಖ್ಯ ಭಾಗವಂತೆ, ಇವೆಲ್ಲವೂ ನಮ್ಮ ಸುತ್ತಲ ಪರಿಸರದ ಪ್ರಾಣಿ ಪಕ್ಷಿಗಳ ಗುಣ ದೋಷಗಳು.

ಈ ಮನುಷ್ಯನೆಂಬ ಪ್ರಾಣಿ ಬಹುತೇಕ ಈ ಎಲ್ಲಾ ಗುಣಗಳನ್ನೂ ತನ್ನಲ್ಲಿ ಅಡಗಿಸಿಕೊಂಡಿದ್ದಾನೆ. ಆದರೆ ತನ್ನ ಚಿಂತನಾಕ್ರಮದ, ಸ್ವಾರ್ಥ ದುರಾಸೆಯಿಂದ ಯಾವ ಗುಣ, ಯಾವ ಸಾಮರ್ಥ್ಯ, ಯಾವ ಕಲೆ  ಯಾವ ವಿದ್ಯೆ ಯಾವಾಗ ಉಪಯೋಗಿಸಬೇಕು ಎಂದು ಸರಿಯಾಗಿ ಅರ್ಥಮಾಡಿಕೊಳ್ಳದೆ ಗೊಂದಲಕ್ಕೆ ಒಳಗಾಗಿದ್ದಾನೆ. ಅದಕ್ಕಾಗಿ ತನ್ನದಲ್ಲದ ಮುಖವಾಡ ತೊಟ್ಟಿದ್ದಾನೆ.

ಒಂದುವೇಳೆ ಆತ ಈ ಮುಖವಾಡ ಕಳಚಿ ಸ್ವಾರ್ಥ ತ್ಯಜಿಸಿ ತಾನು ಸಂಘಜೀವಿ ತ್ಯಾಗಜೀವಿ ಎಂದು ಭಾವಿಸಿ ಆ ರೀತಿ ವರ್ತಿಸಿದ್ದೇ ಆದರೆ ಅವನಂತ ಅತ್ಯದ್ಭುತ ಪ್ರಾಣಿ ಈ ವಿಶ್ವದಲ್ಲೇ ಇಲ್ಲ. ನಾವೆಲ್ಲ ಹಾಗಾಗೋಣ ಎಂಬ ನಿರೀಕ್ಷೆಯ ಆಶಯದೊಂದಿಗೆ... 

  • 326 ನೆಯ ದಿನ ನಮ್ಮ ಜ್ಞಾನ ಭಿಕ್ಷಾ ಪಾದಯಾತ್ರೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಿಂದ ಸುಮಾರು 32 ಕಿಲೋಮೀಟರ್ ದೂರದ ಯಗಚಿಹಳ್ಳಿ ಗ್ರಾಮ ತಲುಪಿತು. ಇಂದು 23/9/2021 ಗುರುವಾರ 327 ನೆಯ ದಿನ ನಮ್ಮ ಕಾಲ್ನಡಿಗೆ  ತುಮಕೂರು ಜಿಲ್ಲೆಯ ಯಗಚಿಹಳ್ಳಿ ಗ್ರಾಮದಿಂದ ಸುಮಾರು 23 ಕಿಲೋಮೀಟರ್ ದೂರದ ಬುಕ್ಕಾಪಟ್ಟಣ ಗ್ರಾಮ ತಲುಪಲಿದೆ. ನಾಳೆ 24/9/2021 ಶುಕ್ರವಾರ 328 ನೆಯ ದಿನ ನಮ್ಮ ಪ್ರಯಾಣ ಶಿರಾ ತಾಲ್ಲೂಕಿನ ಕಡೆಗೆ..

-ವಿವೇಕಾನಂದ. ಹೆಚ್.ಕೆ., ಬೆಂಗಳೂರು 

ಚಿತ್ರ: ಇಂಟರ್ನೆಟ್ ತಾಣ