ಪ್ರಾಣಿ ಪರಿಸರ

ಪ್ರಾಣಿ ಪರಿಸರ

ಪುಸ್ತಕದ ಲೇಖಕ/ಕವಿಯ ಹೆಸರು
ಕೃಷ್ಣಾನಂದ ಕಾಮತ
ಪ್ರಕಾಶಕರು
ಮನೋಹರ ಗ್ರಂಥಮಾಲಾ, ಧಾರವಾಡ
ಪುಸ್ತಕದ ಬೆಲೆ
ರೂ: ೨೦/-

ಈಗಿನ ಇಂಟರ್-ನೆಟ್ ಕಾಲಮಾನದಲ್ಲಿ ಗೂಗಲ್‌ನಲ್ಲಿ ಹುಡುಕಾಡಿದರೆ ಪ್ರಾಣಿಗಳ ಮತ್ತು ಪರಿಸರದ ಬಗ್ಗೆ ಲಕ್ಷಗಟ್ಟಲೆ ಪುಟಗಳ ಮಾಹಿತಿ ಮತ್ತು ಫೋಟೋಗಳು ಕ್ಷಣಾರ್ಧದಲ್ಲಿ ಸಿಗುತ್ತವೆ. ಆದರೆ ಐವತ್ತು ವರುಷಗಳ ಮುಂಚೆ ಇಂತಹ ಮಾಹಿತಿ ಸಂಗ್ರಹ ಸವಾಲಾಗಿತ್ತು. ಹಾಗಾಗಿ, ನವಂಬರ ೧೯೭೪ರಲ್ಲಿ ಪ್ರಕಟವಾದ ಈ ಪುಸ್ತಕದಲ್ಲಿ ಪ್ರಾಣಿಗಳು ಮತ್ತು ಪರಿಸರದ ಬಗ್ಗೆ ೧೪೪ ಮುದ್ರಿತ ಪುಟಗಳ ಮಾಹಿತಿ ಸಂಗ್ರಹಿಸಿ, ವಿಷಯಾನುಕ್ರಮವಾಗಿ ಸರಳ ಭಾಷೆಯಲ್ಲಿ ಕನ್ನಡದ ಓದುಗರಿಗೆ ಒದಗಿಸಿದ ಕೃಷ್ಣಾನಂದ ಕಾಮತರಿಗೆ ಅಭಿನಂದನೆ ಸಲ್ಲಿಸಲೇ ಬೇಕು.

ಮುನ್ನುಡಿಯಲ್ಲಿ ಈ ಪುಸ್ತಕದ ಉದ್ದೇಶವನ್ನು ಲೇಖಕರು ಹೀಗೆಂದು ಸ್ಪಷ್ಟ ಪಡಿಸಿದ್ದಾರೆ: “ಹಿಂದೆಂದೂ ಇಲ್ಲದಷ್ಟು ಇಂದು ಮಾನವನು ಸಂಕುಚಿತ ದೃಷ್ಟಿಯವ ಮತ್ತು ಸ್ವಾರ್ಥಿಯಾಗ ಹತ್ತಿದ್ದಾನೆ. ಅಂತೆಯೆ ತನ್ನ ಸಂತತಿಯಿಂದ ಜಗತ್ತೆಲ್ಲವನ್ನು ಕಿಕ್ಕಿರಿಯುವಂತೆ ತುಂಬಿ ಅವರ ಅನ್ನ-ಬಟ್ಟೆಗಾಗಿ ಪರಿಸರವನ್ನೆಲ್ಲ ಕಲುಷಿತವನ್ನಾಗಿ ಮಾಡಿದ್ದಾನೆ. ಅವನ ಯಂತ್ರಗಳು, ವಾಹನಗಳು, ಕಾರ್ಖಾನೆಗಳು ಎಡೆಬಿಡದೆ ಹೊಗೆ ಕಾರುತ್ತಿದ್ದರೆ, ಆತನ ಧಾನ್ಯ, ಹಣ್ಣು-ಹಂಪಲಗಳ ರಕ್ಷಣೆಗಾಗಿ ಅತ್ಯಂತ ವಿಷಕಾರಿ ರಸಾಯನಗಳು ಭೂ-ಜಲ-ವ್ಯೋಮಗಳಲ್ಲಿ ಹರಡುತ್ತಿವೆ. ತೊಗಲು, ನೆಣ, ಮಾಂಸಗಳಿಗಾಗಿ ಕೊಂದು ನಿರ್ನಾಮ ಮಾಡುತ್ತಿರುವ ಪ್ರಾಣಿಗಳಿಗಂತೂ ಲೆಕ್ಕವಿಲ್ಲ. ಇದೇ ಸ್ಥಿತಿ ಮುಂದುವರಿದರೆ ನಮ್ಮ ಪರಿಸರದ ಪ್ರಾಣಿಗಳು ಹೆಚ್ಚು ಕಾಲ ನಮ್ಮೊಂದಿಗೆ ಇರಲಾರವು ಎಂದು ವಿಜ್ನಾನಿಗಳು ಹೌಹಾರಿದ್ದಾರೆ. ಪ್ರಾಣಿ ರಕ್ಷಣೆಯ ಹೆಸರಿನಲ್ಲಿ ರಾಜ್ಯ, ಕೇಂದ್ರ, ಅಂತರರಾಷ್ಟ್ರೀಯ ಸಂಸ್ಥೆಗಳು ಹಣದ ಹೊಳೆಯನ್ನೇ ಹರಿಸಿದರೂ ಪ್ರಾಣಿವಧೆ ಯಥಾಪ್ರಕಾರ ನಡೆದೇ ಇದೆ. (ಗಮನಿಸಿ: ಈಗ, ಸುಮಾರು ೫೦ ವರುಷಗಳ ನಂತರ, ಲೇಖಕರು ವಿವರಿಸಿದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ.)

ನಮ್ಮ ಪೂರ್ವಜರು ಪ್ರಾಣಿಗಳನ್ನು ತಮ್ಮಂತೆ ನಿಸರ್ಗದ ಅಂಗವೆಂದು ತಿಳಿದು ಅವುಗಳನ್ನು ಸಾಕಿದರು, ಪ್ರೀತಿಸಿದರು, ಪೂಜಿಸಿದರು. ಜನಸಾಮಾನ್ಯರಿಗೆ ಅವುಗಳ ಮಹತ್ವ ತಿಳಿಯಲೆಂದು ಅವಕ್ಕೆ ದೇವ-ದೇವತೆಗಳ ಸ್ಥಾನ ಕೊಟ್ಟರು. ದೈವೀವಾಹನಗಳನ್ನಾಗಿಸಿದರು. ಪ್ರಾಣಿರೂಪದಲ್ಲಿ ದೇವರ ಅವತಾರವಾಗುವದೆಂದರು. ರಾಜ-ಮಹಾರಾಜರು ಪ್ರಾಣಿ ಚಿಹ್ನೆಗಳನ್ನು ಲಾಂಛನವಾಗಿ ಸ್ವೀಕರಿಸಿದರು. ವಿವಿಧ ಪ್ರಾಣಿಗಳಿಗಾಗಿಯೇ ಹಬ್ಬ-ಹುಣ್ಣಿಮೆಗಳನ್ನು ಮೀಸಲಿಟ್ಟರು. ಕಥೆಗಳಲ್ಲಿ ಪಶು-ಪಕ್ಷಿಗಳಿಗೆ ಅಗ್ರಸ್ಥಾನ ಕೊಟ್ಟು, ಮಕ್ಕಳಿಗೂ ಅವುಗಳ ಬಗ್ಗೆ ಗೌರವಾದರ ಹುಟ್ಟುವಂತೆ ಮಾಡಿದರು. ಆಳರಸರು ಭಿತ್ತಿಚಿತ್ರ, ವಾಸ್ತುಶಿಲ್ಪ, ಇನ್ನಿತರ ಕಲೆಗಳಲ್ಲಿ ಅವುಗಳಿಗೆ ಸ್ಥಾನವೊದಗಿಸಿದರು. ದುರ್ದೈವದಿಂದ ಇಂದು ನಾವು ಪರಂಪರಾಗತವಾಗಿ ಬಂದ ಪ್ರಾಣಿಗಳ ನೆನಪಿನ ಹಬ್ಬಗಳನ್ನು ಮಾಡುತ್ತಿದ್ದರೂ ಅವುಗಳ ಬಗ್ಗೆ ಆದರೆ, ಪ್ರೀತಿಗಳನ್ನು ತಾಳಿಲ್ಲ. …. ಕಲೆ, ಧರ್ಮ, ವಿಜ್ನಾನ ಯಾವ ದೃಷ್ಟಿಯಿಂದ ನೋಡಿದರೂ ನಮ್ಮ ಸಹ-ಪ್ರಾಣಿಗಳನ್ನು ಹೆಚ್ಚೆಚ್ಚಾಗಿ ತಿಳಿದುಕೊಂಡು ಬೇಕಾದಾಗ ಅವನ್ನು ರಕ್ಷಿಸಿ, ಬೇಡಾದವುಗಳನ್ನು ಶಿಕ್ಷಿಸಿ, ನಿಸರ್ಗದಲ್ಲಿ ಸಮತೋಲನವನ್ನು ಕಾಯುವದು ಅವಶ್ಯ. ಇಲ್ಲಿ ಈ ದೃಷ್ಟಿಕೋನ ಮೂಡಿಸಲು ಯತ್ನಿಸಿದ್ದೇನೆ. ಇದರಿಂದ ಓದುಗರಿಗೆ ಪರಿಸರದ ಪ್ರಾಣಿಗಳ ಬಗ್ಗೆ ಪ್ರೀತಿ, ಆದರ, ಅರಿವುಗಳು ಕಿಂಚಿತ್ತಾದರೂ ಹೆಚ್ಚಾಗುವಂತಾದರೆ ಈ ನನ್ನ ಯತ್ನ ಸಾರ್ಥಕವಾಗುವದು.”

ಪುಸ್ತಕದ ಶೀರ್ಷಿಕೆಯ ಕೆಳಗಡೆಯೇ “ವಿಜ್ನಾನದ ತಿಳಿವಳಿಕೆಗೆ ಬರೆದದ್ದು" ಎಂದು ಘೋಷಿಸಿರುವ ಕೃಷ್ಣಾನಂದ ಕಾಮತರು, ಪುಸ್ತಕದ ಉದ್ದಕ್ಕೂ ಆ ಎಚ್ಚರ ವಹಿಸಿಯೇ ಬರೆದಿದ್ದಾರೆ. ಪ್ರತಿಯೊಂದು ಅಧ್ಯಾಯದಲ್ಲಿಯೂ ಇದಕ್ಕೆ ನಿದರ್ಶನಗಳನ್ನು ಕಾಣಬಹುದು. ಉದಾಹರಣೆಗೆ ಐದನೆಯ ಅಧ್ಯಾಯ “ಸಹಜೀವನ”ದಲ್ಲಿ ಅವರ ಬರಹ ಹೀಗಿದೆ : "ಪ್ರಾಣಿಗಳು ಸಹಜೀವನಕ್ಕೆ ಹೊಂದುವಂತೆ ತಮ್ಮ ಚಟುವಟಿಕೆಗಳನ್ನು ರೂಪಿಸಿಕೊಂಡಿವೆ. ಗಾತ್ರದಲ್ಲಿ ತನಗಿಂತ ಹತ್ತು ಪಟ್ಟು ದೊಡ್ಡದಿರುವ ತಿಮಿಂಗಿಲದ ಮೇಲೆ ಆಕ್ರಮಣ ನಡೆಸುವ ಶಾರ್ಕ ಮೀನು ಸದಾಕಾಲ ಗೇಣುದ್ದ ಮೀನನ್ನು ಹಿಂಬಾಲಿಸುತ್ತಿರುತ್ತದೆ. ಇದರಿಂದಾಗಿ ಶಾರ್ಕಿಗೆ ಆಹಾರ ಸುಲಭವಾಗಿ ಸಿಗುವಂತೆ ಆದರೆ, ಕಿರಿಮೀನಿಗೆ ಶಾರ್ಕ ಮೀನು ತನ್ನ ಬೇಟೆ ತಿನ್ನುವಾಗ ಸಿಕ್ಕ ಸಣ್ಣ ಪುಟ್ಟ ಮಾಂಸದ ತುಣುಕುಗಳದ್ದೇ ಆಹಾರ ಸಿಗುತ್ತದೆ. ಒಂದು ಜಾತಿಯ ಏಡಿ ಹಾಯಡ್ರಾ ಜಾತಿಯ ಪ್ರಾಣಿಗೆ ತನ್ನ ಅಂಗಾಂಗದ ಮೇಲೆ ಬೆಳೆಯಲು ಬಿಡುತ್ತದೆ. ಇದರಿಂದಾಗಿ ಕಿರಿ ಮೀನು ಇದು ಸಭ್ಯಪ್ರಾಣಿ ಎಂದು ಏಡಿಯ ಸನಿಹಕ್ಕೆ ಬಂದಾಗ ಅದನ್ನು ತಿಂದು ಏಡಿ ತನ್ನ ಹಸಿವನ್ನು ಹೋಗಲಾಡಿಸಿಕೊಳ್ಳುತ್ತದೆ. ಈ ಸಹಾಯಕ-ಪ್ರಾಣಿಗಳಿಗೆ ಹೆಚ್ಚು ಶ್ರಮ ವಹಿಸದೇ ಆಹಾರ ಸಿಗುವುದಲ್ಲದೆ ಪೆಟ್ರೋಲ್ ತುಟ್ಟಿಯಾದ ದಿನಗಳಲ್ಲೂ ಪುಕ್ಕಟೆ ಪ್ರಯಾಣದ ಸೌಲಭ್ಯ ಸಿಕ್ಕೇ ಸಿಗುತ್ತದೆ. ಹುಲಿಯು ದನದ ಗೋಣು ಮುರಿದು ತಿಂದು ತೇಗುವಾಗ ಸಣ್ಣ ಪುಟ್ಟ ಮಾಂಸಾಹಾರಿ ಪ್ರಾಣಿಗಳು ತಮ್ಮ ಪಾಲನ್ನು ಪಡೆಯುತ್ತವೆ. ಹುಲಿರಾಯ ಹೋದ ನಂತರ ನರಿ, ರಣಹದ್ದುಗಳು ತಮ್ಮ ಹಕ್ಕನ್ನು ಸಾಧಿಸುತ್ತವೆ. ಜೇನ್ನೊಣ, ಪಾತರಗಿತ್ತಿ, ಪುಟ್ಟ ಹಕ್ಕಿಗಳಿಗೆ ಮಧುವನ್ನು ಪೂರೈಸಿದ ಹೂವಿನ ಪರಾಗದ ಪ್ರಸಾರವನ್ನು ಈ ಪ್ರಾಣಿಗಳು ಮಾಡುತ್ತವೆ. ಎಫಿಡಗಳ ಮೈಯಿಂದ ಹೊರ ಬರುವ ದ್ರವ್ಯ ಸಿಹಿಯಾಗಿ ಇರುವೆಗೆ ಸೇರುವುದರಿಂದ, ಅವನ್ನು ಇರುವೆಗಳು ತಮ್ಮ ದವಡೆಗಳಲ್ಲಿ ಹೊತ್ತು ತಂದು ತಮ್ಮ ಗೂಡಿನಲ್ಲಿ ಅವುಗಳಿಗಾಗಿಯೇ ಬೇರೆ ಜಾಗ ಮೀಸಲಿಟ್ಟು ಅವುಗಳಿಗಾಗಿಯೇ ಕೃಷಿ ಮಾಡುವವು.”

ಪ್ರಾಣಿಗಳ ವಿಕಾಸ, ಜೀವೋತ್ಪತ್ತಿ, ಶರೀರ-ರಚನೆ, ಪ್ರಾಣಿ ಮತ್ತು ಪರಿಸರ, ಸಹಜೀವನ, ಚಲನವಲನ, ಸಾಮಾಜಿಕ ಸಂಘಟನೆ, ನಾದಲೋಲರು, ನಾಮಕರಣ, ಕುಟುಂಬಯೋಜನೆ, ಗಂಡು-ಹೆಣ್ಣು, ಮರುಬೆಳವಣಿಗೆ ಮತ್ತು ಸರ್ವವ್ಯಾಪಿಗಳು ಎಂಬ ಹದಿಮೂರು ಅಧ್ಯಾಯಗಳಲ್ಲಿ “ಪ್ರಾಣಿ ಪರಿಸರ”ದ ವಿರಾಟ್ ಸ್ವರೂಪವನ್ನು ಕೃಷ್ಣಾನಂದ ಕಾಮತರು ಪರಿಚಯಿಸಿದ್ದಾರೆ. ಹನ್ನೆರಡು ಪುಟಗಳಲ್ಲಿ (ಉಬ್ಬು-ಚಿತ್ರಗಳು ಮತ್ತು ಶಿಲ್ಪಗಳನ್ನು ಆಧರಿಸಿ) ಅವರೇ ಬಿಡಿಸಿರುವ ಹಲವಾರು ಚಿತ್ರಗಳು ವಿವಿಧ ಅಧ್ಯಾಯಗಳ ಮಾಹಿತಿಗೆ ಪೂರಕವಾಗಿವೆ. ಮುಖಪುಟದ ಚಿತ್ರವು ಬೇಲೂರಿನ ದೇವಸ್ಥಾನದ ಅಪೂರ್ವ ಶಿಲ್ಪವೊಂದನ್ನು ಪ್ರತಿನಿಧಿಸಿದೆ.