ಪ್ರಾಣಿ ಪ್ರೀತಿಯ ಜಾಗೃತಿ ಮೂಡಿಸಿದ ಚಲನಚಿತ್ರಗಳು


ನಾಯಿಯೊಂದು ಪ್ರಧಾನ ಪಾತ್ರದಲ್ಲಿರುವ 'ಚಾರ್ಲಿ 777' ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಅದ್ಭುತ ಯಶಸ್ಸು ಕಂಡಿದೆ, ಅದೇ ರೀತಿ ಹಲವಾರು ಮಂದಿಯ ಮನಸ್ಸಿನಲ್ಲಿ ಪ್ರಾಣಿದಯೆಯ ಬಗ್ಗೆ ಜಾಗೃತಿ ಮೂಡಿಸಲು ಸಫಲವಾಗಿದೆ. ಪ್ರಾಣಿಗಳನ್ನು ಬಳಸಿ ಚಲನ ಚಿತ್ರಗಳನ್ನು ತಯಾರಿಸಿರುವುದು ಇದೇ ಮೊದಲೂ ಅಲ್ಲ, ಕೊನೆಯದ್ದೂ ಅಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರಾಣಿಯ ಮೇಲೆ ಚಿತ್ರೀಕರಣದ ಸಂದರ್ಭದಲ್ಲಿ ನಡೆಯುತ್ತಿದ್ದ ದೌರ್ಜನ್ಯಗಳನ್ನು ಗಮನಿಸಿ ಚಿತ್ರಗಳಲ್ಲಿ ಪ್ರಾಣಿಗಳನ್ನು ಬಳಕೆ ಮಾಡುವುದರ ಮೇಲೆ ನಿಯಮಾವಳಿಗಳನ್ನು ಸರಕಾರ ಹೇರಿತ್ತು. ಈ ನಿಯಮಾವಳಿಗಳಿಗೆ ಅಂಜಿ ಅನೇಕ ನಿರ್ಮಾಪಕರು ತಮ್ಮ ಚಿತ್ರಗಳಲ್ಲಿ ಅಗತ್ಯವಿದ್ದರೂ ಪ್ರಾಣಿಗಳನ್ನು ಬಳಸದೇ ಅಥವಾ ಗ್ರಾಫಿಕ್ ರೂಪದಲ್ಲಿ ಪ್ರಾಣಿಗಳನ್ನು ನಿರ್ಮಿಸಿ ಚಿತ್ರಗಳನ್ನು ತಯಾರು ಮಾಡಿದ್ದರು. ಇವುಗಳು ಅಷ್ಟಾಗಿ ಜನರನ್ನು ಸೆಳೆದಿರಲಿಲ್ಲ.
ಆದರೆ ಇತ್ತೀಚಿಗೆ ಬಿಡುಗಡೆಯಾದ ‘ಚಾರ್ಲಿ 777’ ಎಂಬ ಚಿತ್ರದ ನಾಯಕಿಯೇ ಒಂದು ಶ್ವಾನ. ನಾಯಿ ಮಾನವನ ನಂಬಿಕಸ್ಥ ಪ್ರಾಣಿ. ಅದು ಉಂಡ ಮನೆಗೆ ಎಂದೂ ದ್ರೋಹ ಮಾಡಿಲ್ಲ. ಅದೇ ರೀತಿ ಈ ಚಿತ್ರದಲ್ಲೂ ನಾಯಕನಾಗಿ ನಟಿಸಿದ್ದ ರಕ್ಷಿತ್ ಶೆಟ್ಟಿಗೆ ಇನ್ನಿಲ್ಲದ ತೊಂದರೆ ಕೊಟ್ಟು ಆತನ ವಿಶ್ವಾಸವನ್ನು ಗಳಿಸಿ, ಅಶಿಸ್ತಿನ ಜೀವನದಲ್ಲಿ ಬದುಕುತ್ತಿದ್ದ ಆತನನ್ನು ಸಮಾಜದ ಮುಖ್ಯವಾಹಿನಿಗೆ ತಂದು, ತನ್ನ ಬದುಕನ್ನೇ ಕೊನೆಗಾಣಿಸುವ ನಾಯಿಯ ಕಥೆ ಇದು. ಈ ಚಲನ ಚಿತ್ರದಲ್ಲಿ ನಟನೆಗಾಗಿ ನಾಲ್ಕು ಲ್ಯಾಬ್ರಡಾರ್ ಜಾತಿಯ ನಾಯಿಗಳನ್ನು ತಂದಿದ್ದರಂತೆ, ಕೊನೆಗೆ ಎರಡು ನಾಯಿಗಳನ್ನು ಬಳಸಿ ಸುಮಾರು ಮೂರು -ನಾಲ್ಕು ವರ್ಷ ಶ್ರಮ ಪಟ್ಟು ಚಿತ್ರೀಕರಣ ಮಾಡಿದ್ದಾರೆ. ನಾಯಿಗೆ ಅದರದ್ದೇ ಆದ ಮೂಡ್ ಇರುತ್ತದೆ. ಆದುದರಿಂದ ಅದನ್ನು ಬಳಸಿ ಚಿತ್ರೀಕರಣ ಮಾಡುವುದು ಅಷ್ಟು ಸುಲಭವಲ್ಲ. ಆದರೂ ಚಾರ್ಲಿ ಚಿತ್ರತಂಡ ಈ ಸಾಹಸ ಮಾಡಿ ಗೆದ್ದು ತೋರಿಸಿದೆ. ಚಿತ್ರದಲ್ಲಿ ನಟಿಸಿದ ಎರಡು ನಾಯಿಗಳ ಪೈಕಿ ಒಂದು ನಾಯಿ ಬಿಡುಗಡೆಯಾಗುವ ಸಮಯದಲ್ಲಿ ನಿಧನಹೊಂದಿತ್ತು. ಅದಕ್ಕಾಗಿ ಟೈಟಲ್ ಕಾರ್ಡ್ ನಲ್ಲಿ ಗೌರವ ಸೂಚಿಸಿದ್ದಾರೆ.
ಈ ಚಿತ್ರದ ಯಶಸ್ಸಿನ ಬಳಿಕ ನಾಯಿ ಪ್ರೀತಿ ಇಂದಿಷ್ಟು ಜಾಸ್ತಿ ಆದಂತಿದೆ. ಲ್ಯಾಬ್ರಡಾರ್ ನಾಯಿಗಳನ್ನು ಕೊಳ್ಳುವವರ ಸಂಖ್ಯೆಯೂ ಅಧಿಕವಾಗಿದೆ ಅದೇ ರೀತಿ ಈ ಜಾತಿಯ ನಾಯಿ ಮರಿಗಳ ಬೆಲೆಯೂ ಹೆಚ್ಚಾಗಿದೆ. ಏನೇ ಇರಲಿ, ಪ್ರಾಣಿಗಳನ್ನು ಪ್ರೀತಿಯಿಂದ ಸಾಕುವುದು ಉತ್ತಮ ಹವ್ಯಾಸ. ಹಿಂದಿನ ಹಳೆಯ ಚಲನಚಿತ್ರಗಳಲ್ಲಿ ಎಷ್ಟೊಂದು ಪ್ರಾಣಿಗಳಿದ್ದವು. ಕನ್ನಡ, ಹಿಂದಿ ಅಥವಾ ಯಾವುದೇ ಭಾರತೀಯ ಭಾಷೆಗಳ ಚಿತ್ರಗಳಲ್ಲಿ ಪ್ರಾಣಿಗಳ ಬಳಕೆ ಮಾಮೂಲಾಗಿತ್ತು. ಆಗ ಮಂಗ, ಚಿಂಪಾಂಜಿ, ನಾಯಿ, ಬೆಕ್ಕು, ಹಸು, ಕುದುರೆ, ಒಂಟೆ, ಆನೆ, ಹುಲಿ, ಸಿಂಹ, ಚಿರತೆ, ಗಿಳಿ, ಡಾಲ್ಫಿನ್, ತಿಮಿಂಗಿಲ, ಜಿರಾಫೆ, ಹಾವು, ಗೂಬೆ, ಕಾಗೆ, ನವಿಲು, ಕರಡಿ, ಹದ್ದು ಇವುಗಳ ಬಳಕೆ ಸರ್ವೇ ಸಾಮಾನ್ಯವಾಗಿತ್ತು. ಯಾವಾಗ ಸರಕಾರವು ಪ್ರಾಣಿ ಪಕ್ಷಿಗಳ ಬಳಕೆಗೆ ನಾನಾ ಬಗೆಯ ನಿರ್ಬಂಧಗಳನ್ನು ಹಾಕಿತೋ ಆ ಬಳಿಕ ಇವುಗಳ ಬಳಕೆಗೂ ಬ್ರೇಕ್ ಬಿತ್ತು. ಪ್ರತೀ ಚಲನ ಚಿತ್ರವನ್ನು ಪ್ರದರ್ಶಿಸುವ ಮೊದಲು 'ಈ ಚಿತ್ರದಲ್ಲಿ ಪ್ರಾಣಿ ಪಕ್ಷಿಗಳನ್ನು ಬಳಕೆ ಮಾಡಿಕೊಂಡಿಲ್ಲ, ಮಾಡಿದ್ದರೆ ಅವುಗಳಿಗೆ ಹಿಂಸೆ ನೀಡಲಾಗಿಲ್ಲ' ಎಂಬ ಸಾಲುಗಳನ್ನು ತೋರಿಸಬೇಕಾಗಿದೆ.
ಗ್ರಾಫಿಕ್ ಮೂಲಕ ಸೃಷ್ಟಿಸುವ ಯಾವುದೇ ಪ್ರಾಣಿ ಪಕ್ಷಿಗಳು ಪ್ರೇಕ್ಷಕರ ಮನಸ್ಸು ತಟ್ಟುವುದಿಲ್ಲ ಎಂಬುದು ಹಲವಾರು ಪ್ರಯೋಗಗಳಿಂದ ಸ್ಪಷ್ಟವಾಗಿದೆ. ಕನ್ನಡದ ಗಾಳಿಪಟ ಚಿತ್ರದ ಹಂದಿಯಾಗಲಿ, ಅಥವಾ ಇತ್ತೀಚೆಗೆ ಬಿಡುಗಡೆಯಾದ ಕೆಲವು ಹಿಂದಿ ಚಿತ್ರಗಳಲ್ಲಿ ಗ್ರಾಫಿಕ್ ಮೂಲಕ ಸೃಷ್ಟಿಸಿದ ಪ್ರಾಣಿಗಳು ಪ್ರೇಕ್ಷಕರ ಮನಗೆದ್ದಿಲ್ಲ. ಬಹುಷಃ ಗ್ರಾಫಿಕ್ ಮೂಲಕ ಪ್ರಾಣಿಗಳನ್ನು ಸೃಷ್ಟಿಸಿ ಯಶಸ್ಸು ಕಂಡ ಚಿತ್ರ 'ಜುರಾಸಿಕ್ ಪಾರ್ಕ್' ಇರಬೇಕು. ಡೈನೋಸಾರಸ್ ನಾವು ಪ್ರತ್ಯಕ್ಷವಾಗಿ ನೋಡದೇ ಇದ್ದ ಕಾರಣ ನಮಗೆ ಆ ಚಿತ್ರ ಇಷ್ಟವಾಗಲು ಕಾರಣವಾಗಿರಬಹುದು ಅಲ್ಲವೇ?
ಇದೇ ಕಥೆ 'ಸರ್ಕಸ್' ಪ್ರದರ್ಶನಗಳದ್ದೂ ಆಗಿದೆ. ಯಾವಾಗ ಸರ್ಕಸ್ ನಲ್ಲಿ ಪ್ರಾಣಿಗಳ ಪ್ರದರ್ಶನಕ್ಕೆ ಬ್ರೇಕ್ ಬಿತ್ತೋ ಆಗ ಅದರ ಜನಪ್ರಿಯತೆ ಕುಸಿಯಿತು. ನೈಜ ಪ್ರಾಣಿಗಳ ಪ್ರದರ್ಶನವನ್ನು ಆನಂದಿಸುತ್ತಿದ್ದ ಮಕ್ಕಳೂ ಈಗ ಸರ್ಕಸ್ ನೋಡಲು ಆಸಕ್ತಿ ತೋರಿಸುತ್ತಿಲ್ಲ. ಈ ಕಾರಣದಿಂದ ಬಹುತೇಕ ಸರ್ಕಸ್ ಕಂಪೆನಿಗಳು ಬಾಗಿಲು ಮುಚ್ಚಿಕೊಂಡಿವೆ.
ಈಗ ನಾವು ಹಳೆಯ ಚಿತ್ರರಂಗದ ಕಡೆಗೆ ಗಮನಿಸುವುದಾದರೆ ಆ ಸಮಯ ಚಲನ ಚಿತ್ರಗಳಲ್ಲಿ ಒಂದಾದರೂ ಪ್ರಾಣಿ ಇದ್ದೇ ಇರುತ್ತಿತ್ತು. ಆ ಪ್ರಾಣಿಗೆ ತರಬೇತಿ ನೀಡಲು ಚೆನ್ನೈನಿಂದ ತರಬೇತುದಾರರು ಬರುತ್ತಿದ್ದರು. ಕನ್ನಡದಲ್ಲಿ ವರನಟ ಡಾ ರಾಜ್ ಕುಮಾರ್ ಅವರ ಗಂಧದ ಗುಡಿ ಚಿತ್ರದಲ್ಲಿ ಯಥೇಚ್ಛವಾಗಿ ಪ್ರಾಣಿಗಳನ್ನು ಬಳಸಲಾಗಿತ್ತು. ಆನೆ, ಕುದುರೆ, ಹುಲಿ, ಗಿಳಿ ಹೀಗೆ ಪ್ರಾಣಿ ಪಕ್ಷಿಗಳನ್ನು ಬಳಸಲಾಗಿತ್ತು. ಆ ಸಮಯದಲ್ಲಿ ಎಂ ಪಿ ಶಂಕರ್, ದ್ವಾರಕೀಶ್ ಅಂತಹ ನಿರ್ಮಾಪಕರು ತಮ್ಮ ಚಿತ್ರಗಳಲ್ಲಿ ಪ್ರಾಣಿಗಳನ್ನು ಬಳಕೆ ಮಾಡಿದ್ದರು. ದ್ವಾರಕೀಶ್ ಅವರ 'ಆಫ್ರಿಕಾದಲ್ಲಿ ಶೀಲಾ' ಚಿತ್ರದಲ್ಲೂ ಹಲವಾರು ಪ್ರಾಣಿಗಳನ್ನು ಬಳಸಲಾಗಿತ್ತು. ಅಂಬರೀಶ್ ಅವರ 'ಮೃಗಾಲಯ', ಬೇಬಿ ಶ್ಯಾಮಿಲಿಯ ಭೈರವಿ, ಶಾಂಭವಿ, ವಿಷ್ಣುವರ್ಧನ್ ಅವರ ಜಯಸಿಂಹ, ರವಿಚಂದ್ರನ್ ಅವರ ಚಿತ್ರಗಳಲ್ಲಿನ ಹಕ್ಕಿಗಳು ಹೀಗೆ ಹಲವಾರು ಚಿತ್ರಗಳಲ್ಲಿ ಪ್ರಾಣಿ-ಪಕ್ಷಿಗಳು ಬಳಕೆಯಾಗಿವೆ. ಗರುಡರೇಖೆ, ಅಂಜದ ಗಂಡು ಮುಂತಾದ ಹಲವಾರು ಚಿತ್ರಗಳಲ್ಲಿ ಹಾವುಗಳಂತೂ ಸಾವಿರಾರು ಬಾರಿ ಬಳಕೆಯಾಗಿರಬಹುದು. ಗಣೇಶ್ ಅಭಿನಯದ ಮುಂಗಾರು ಮಳೆಯ 'ದೇವದಾಸ್' ಮೊಲವನ್ನು ಮರೆಯಲು ಸಾಧ್ಯವೇ?
ಹಿಂದಿ ಚಿತ್ರರಂಗವೂ ಹಲವಾರು ಚಿತ್ರಗಳಲ್ಲಿ ಪ್ರಾಣಿ ಪಕ್ಷಿಗಳನ್ನು ಬಳಸಿಕೊಂಡಿದೆ. ಸಫೇದ್ ಹಾಥಿ (ಬಿಳಿ ಆನೆ), ಹಾಥಿ ಮೇರಿ ಸಾಥಿ, ನಾಗಿನ್, ಶಿಕಾರಿ, ಜಂಗ್ಲಿ, ಎಂಟರ್ ಟೈನ್ ಮೆಂಟ್, ಆಂಖೇ ಹೀಗೆ ಹತ್ತು ಹಲವಾರು ಚಿತ್ರಗಳಲ್ಲಿ ಪ್ರಾಣಿಗಳ ಬಳಕೆಯಾಗಿದೆ. ಆನೆ, ಮಂಗ, ನಾಯಿ ಮೊದಲಾದುವುಗಳನ್ನು ಬಳಸಿದ ಚಿತ್ರಗಳು ಭಾವನಾತ್ಮಕ ರೂಪದಲ್ಲಿ ಮನಸ್ಸು ಮುಟ್ಟಿವೆ. ಅವುಗಳ ಪ್ರೇಮ, ನಿಷ್ಟೆ, ನಿಯತ್ತು ಪ್ರೇಕ್ಷಕರ ಮನಸ್ಸನ್ನು ತಟ್ಟಿವೆ.
ಹಿಂದೆ ಕೆಲವೊಂದು ಚಿತ್ರಗಳಲ್ಲಿ ಪ್ರಾಣಿಗಳಿಗೆ ವಿಪರೀತ ಹಿಂಸೆ ನೀಡಿ ನಟನೆ ಮಾಡಿಸಲಾಗುತ್ತಿತ್ತು. ಚಿತ್ರವೊಂದರಲ್ಲಿ ಚಿರತೆಯ ಬಾಯಿಯನ್ನು ಹೊಲಿದು ನಟಿಸಲಾಗಿತ್ತು. ಕೆಲವೊಂದು ಚಿತ್ರಗಳಲ್ಲಿ ಪಾರಿವಾಳಗಳ ಮತ್ತು ಗಿಳಿಗಳ ರೆಕ್ಕೆಗಳನ್ನು ಕತ್ತರಿಸಿ ಹಾರದಂತೆ ಮಾಡಿ ಬಳಸಿಕೊಳ್ಳಲಾಗಿತ್ತು. ಇವೆಲ್ಲಾ ಪ್ರಾಣಿ ಹಿಂಸೆಯ ವಿವಿಧ ರೂಪಗಳು. ಈ ಕಾರಣದಿಂದಲೇ ಚಲನಚಿತ್ರಗಳಲ್ಲಿ ಪ್ರಾಣಿಗಳ ಬಳಕೆಯ ಮೇಲೆ ನಿಯಮಾವಳಿಗಳನ್ನು ತಂದದ್ದು. ಪ್ರಾಣಿ ದಯಾ ಸಂಘದವರ ಹಲವಾರು ನಿಯಮಾವಳಿಗಳೂ ಇವೆ. ಇವುಗಳನ್ನು ಪಾಲಿಸದಿದ್ದರೆ ಅವರ ಕಡೆಯಿಂದ ಚಿತ್ರೀಕರಣಕ್ಕೆ ತಡೆಯೂ ಬರುವ ಸಾಧ್ಯತೆ ಇದೆ. ಆದರೂ ಈಗಲೂ ಚಾರ್ಲಿಯಂತಹ ಚಿತ್ರಗಳು ತೆರೆ ಕಾಣುತ್ತಿರುವುದು ಉತ್ತಮ ಸಂಗತಿ. ಶ್ವಾನ ಪ್ರೀತಿಯ ಈ ಚಿತ್ರ ಬಹಳಷ್ಟು ನೋಡುಗರ ಕಣ್ಣಾಲಿಗಳನ್ನು ಒದ್ದೆ ಮಾಡಿದೆ, ಹಲವರು ನಾಯಿಗಳನ್ನು ಸಾಕುವತ್ತ ಮನಸ್ಸು ಮಾಡಿದ್ದಾರೆ. ಚಲನಚಿತ್ರವೊಂದು ಮನೋರಂಜನೆಯ ಜೊತೆಗೆ ಸಾಮಾಜಿಕವಾಗಿ ಜಾಗೃತಿಯನ್ನು ಉಂಟು ಮಾಡುವುದು ಅತ್ಯಗತ್ಯ.
ಚಿತ್ರ ಕೃಪೆ: ಅಂತರ್ಜಾಲ ತಾಣ