ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಕ್ಕೆ ಸರಕಾರ ತಕ್ಷಣ ಕ್ರಮ ಕೈಗೊಳ್ಳಲಿ

ರಾಜ್ಯದ ಸರಕಾರಿ ಶಾಲೆಗಳಲ್ಲಿ ಗಣಿತ ಮತ್ತು ವಿಜ್ಞಾನ ಶಿಕ್ಷಕರ ಭಾರೀ ಕೊರತೆ ಇರುವುದು ಬಹಳ ದೊಡ್ಡ ವಿಪರ್ಯಾಸ. ಈ ಎರಡು ಪ್ರಮುಖ ವಿಷಯಗಳ ಸಹಿತ ರಾಜ್ಯದ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಟ್ಟು ೫೦ ಸಾವಿರ ಶಿಕ್ಷಕರ ಹುದ್ದೆಗಳು ಭರ್ತಿಯಾಗದೆ ಖಾಲಿ ಇವೆ. ಪ್ರಾಥಮಿಕ ತರಗತಿಗಳಲ್ಲಿ ಗಣಿತ, ವಿಜ್ಞಾನ ಸಹಿತ ಎಲ್ಲ ವಿಷಯಗಳ ಬೋಧನೆ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಬಹುಮುಖ್ಯ. ‘ಒಂದು ಕಾಲದಲ್ಲಿ ಸರಕಾರಿ ಕನ್ನಡ ಶಾಲೆಗಳಲ್ಲಿ ಕಲಿತವರು ಮುಂದೆ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿದರು.’ ಎಂಬ ಸಾಮಾನ್ಯವಾಗಿ ಕೇಳಿ ಬರುವ ಮಾತಿಗೆ ಆ ಒಂದು ಕಾಲದಲ್ಲಿ ಸರಕಾರಿ ಶಾಲೆಗಳಲ್ಲಿ ಅಧ್ಯಾಪನವು ಸಶಕ್ತವಾಗಿತ್ತು ಎಂಬುದೇ ಕಾರಣ. ಪ್ರಸ್ತುತ ಪ್ರಾಥಮಿಕ ತರಗತಿಗಳಲ್ಲಿ ಬೋಧನೆಯು ಶಿಕ್ಷಕರ ಕೊರತೆಯಿಂದ ಬಹಳ ದುರ್ಬಲವಾಗಿದೆ ಎಂದರೆ ಭವಿಷ್ಯದ ಹಲವು ತಲೆಮಾರುಗಳು ದುರ್ಬಲಗೊಳ್ಳುತ್ತವೆ ಎಂದರೆ ಅತಿಶಯವಾಗದು. ಸರಕಾರವು ಉಪೇಕ್ಷೆ ಮಾಡದೆ ಕೂಡಲೇ ಪ್ರಾಥಮಿಕ ಶಾಲೆಗಳಿಗೆ ಸಮರ್ಥ ಶಿಕ್ಷಕರನ್ನು ಅಗತ್ಯವಿದ್ದಷ್ಟು ಸಂಖ್ಯೆಯಲ್ಲಿ ನೇಮಕ ಮಾಡಲು ಸೂಕ್ತ ಕ್ರಮವನ್ನು ಕೈಗೊಳ್ಳಬೇಕಾದುದು ಅತೀ ಅಗತ್ಯ.
ವೈದ್ಯಕೀಯ, ಎಂಜಿನಿಯರಿಂಗ್ ಇತ್ಯಾದಿ ಉನ್ನತ ಕಲಿಕೆಗೆ ಮಾತ್ರವಷ್ಟೇ ಅಲ್ಲದೆ ಎಲ್ಲ ವಿದ್ಯಾರ್ಥಿಗಳ ಭವಿಷ್ಯಕ್ಕೂ ಪ್ರಾಥಮಿಕ ತರಗತಿಗಳಲ್ಲಿ ಗಣಿತ, ವಿಜ್ಞಾನ ಬೋಧನೆ ಸಶಕ್ತವಾಗಿ ನಡೆಯುವುದು ಅಗತ್ಯ. ಪ್ರಸ್ತುತ ರಾಜ್ಯದ ಪ್ರಾಥಮಿಕ ಶಾಲೆಗಳಲ್ಲಿ ಗಣಿತ ಮತ್ತು ವಿಜ್ಞಾನ ವಿಷಯಗಳ ಬೋಧನೆಗೆ ೧೯,೦೭೨ ಮಂದಿ ಶಿಕ್ಷಕರ ಕೊರತೆ ಇದೆ. ಒಟ್ಟಾರೆಯಾಗಿ ೫೦ ಸಾವಿರ ಶಿಕ್ಷಕರ ಹುದ್ದೆಗಳು ಭರ್ತಿಯಾಗಬೇಕಾಗಿವೆ. ಗಣಿತ ಮತ್ತು ವಿಜ್ಞಾನ ಶಿಕ್ಷಕರ ಕೊರತೆಯೂ ಒಂದು ಕಾರಣವಾಗಿ ಸರಕಾರಿ ಹಾಗೂ ಖಾಸಗಿ ಶಾಲೆಗಳ ವಿದ್ಯಾರ್ಥಿಗಳಲ್ಲಿ ಗಣಿತ ಕೌಶಲ ಕಡಿಮೆ ಇರುವುದಾಗಿ ರಾಜ್ಯದ ಶೈಕ್ಷಣಿಕ ಸ್ಥಿತಿಗತಿ ಕುರಿತಾದ ವಾರ್ಷಿಕ ವರದಿ (ಎ ಎಸ್ ಇ ಆರ್) ತಿಳಿಸಿದೆ. ಗಣಿತ ಶಿಕ್ಷಕರ ಕೊರತೆ ರಾಯಚೂರು, ಬೆಳಗಾವಿ, ಚಿಕ್ಕೋಡಿ, ಮೈಸೂರು ಭಾಗಗಳಲ್ಲಿ ಹೆಚ್ಚಿದ್ದರೆ ವಿಜ್ಞಾನ ಶಿಕ್ಷಕರ ಅಲಭ್ಯತೆ ರಾಯಚೂರು, ಕಲಬುರಗಿ, ಯಾದಗಿರಿ ಭಾಗದಲ್ಲಿ ಅಧಿಕವಿದೆ. ೧ ರಿಂದ ೫ನೇ ತರಗತಿಗಳಲ್ಲಿ ಗಣಿತ ಬೋಧನೆಗೆ ೮,೪೫೨ ಮಂದಿ ಶಿಕ್ಷಕರ ಕೊರತೆ ಇದ್ದರೆ, ವಿಜ್ಞಾನ ವಿಷಯಕ್ಕೆ ಸಂಬಂಧಿಸಿ ೧,೦೯೮ ಶಿಕ್ಷಕರ ಹುದ್ದೆಗಳು ಭರ್ತಿಯಾಗದೆ ಖಾಲಿ ಇವೆ. ಪ್ರಾಥಮಿಕ ಶಾಲೆಗಳು ಮಾತ್ರವಲ್ಲದೆ ಪ್ರೌಢಶಾಲೆಗಳಲ್ಲಿಯೂ ಸಾವಿರಾರು ಸಂಖ್ಯೆಯಲ್ಲಿ ಗಣಿತ, ವಿಜ್ಞಾನ ಶಿಕ್ಷಕರ ನೇಮಕಾತಿ ಆಗಬೇಕಾಗಿದೆ. ಶಿಕ್ಷಕರ ಕೊರತೆಯ ಸಮಸ್ಯೆ ಸಮಾಜ ವಿಷಯ, ಭಾಷಾ ವಿಷಯಗಳನ್ನೂ ಬಿಟ್ಟಿಲ್ಲ. ಸರಕಾರವು ಅತಿಥಿ ಶಿಕ್ಷಕರನ್ನು ನೇಮಿಸಿ ವಿವಿಧ ವಿಷಯಗಳ ಬೋಧನೆಯಲ್ಲಿ ತೊಡಗಿಸಿಕೊಂಡಿದ್ದರೂ ಇದು ತಾತ್ಕಾಲಿಕ ಪರಿಹಾರ ಮಾತ್ರ; ಶಾಶ್ವತವಲ್ಲ.
ಪ್ರಾಥಮಿಕ ತರಗತಿಗಳಲ್ಲಿ ಗಣಿತ, ವಿಜ್ಞಾನ ಸಹಿತ ಎಲ್ಲ ಮುಖ್ಯ ವಿಷಯಗಳು ಮತ್ತು ಭಾಷೆಗಳ ಬೋಧನೆ ಸಶಕ್ತವಾಗಿ ನಡೆಯುವುದು ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಬಹಳ ಮುಖ್ಯ. ಬಹಳ ವಿಶಾಲ ದೃಷ್ಟಿಯನ್ನಿರಿಸಿಕೊಂಡು ಹೇಳುವುದಾದರೆ ರಾಜ್ಯ, ದೇಶ ಭವಿಷ್ಯದ ದೃಷ್ಟಿಯಿಂದ ಯೋಗ್ಯರಾದ, ವಿವೇಕಿಗಳಾದ, ಕೌಶಲಯುಕ್ತ ನಾಗರಿಕರನ್ನು ರೂಪಿಸುವ ಕಾರ್ಯ ಪ್ರಾಥಮಿಕ ತರಗತಿಗಳಲ್ಲಿ ನಡೆಯುತ್ತದೆ. ಇಲ್ಲಿ ಅಧ್ಯಾಪಕರ ಕೊರತೆಯಾದರೆ ಅದು ದೇಶದ ಭವಿಷಯದ ದೃಷ್ಟಿಯಿಂದ ಒಳಿತಲ್ಲ. ಈ ಹಿನ್ನಲೆಯಲ್ಲಿ ಸರಕಾರ ಮತ್ತು ಶಿಕ್ಷಣ ಇಲಾಖೆಗಳು ತತ್ ಕ್ಷಣ ಅಗತ್ಯವಿರುವಷ್ಟು ಸಂಖ್ಯೆಯಲ್ಲಿ ಶಿಕ್ಷಕರ ನೇಮಕಾತಿಗೆ ಕ್ರಮ ಕೈಗೊಳ್ಳಬೇಕು. ಈ ಮೂಲಕ ಮುಂದಿನ ಶೈಕ್ಷಣಿಕ ವರ್ಷದ ಆರಂಭದಿಂದಲೇ ವಿದ್ಯಾರ್ಥಿಗಳಿಗೆ ಉತ್ತಮವಾದ ಕಲಿಕೆಯ ವಾತಾವರಣ ಲಭ್ಯವಾಗುವಂತೆ ನೋಡಿಕೊಳ್ಳಬೇಕು.
ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೨೫-೦೩-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ