ಪ್ರಾದೇಶಿಕ ಅಸಮಾನತೆ ನಿವಾರಣೆಯೇ ಆದ್ಯತೆಯಾಗಲಿ

ಪ್ರಾದೇಶಿಕ ಅಸಮಾನತೆ ನಿವಾರಣೆಯೇ ಆದ್ಯತೆಯಾಗಲಿ

ಕರ್ನಾಟಕ ಒಂದು ಪರಿಪೂರ್ಣ ರಾಜ್ಯವಾಗಿ ಆರೂವರೆ ದಶಕಗಳೇ ಕಳೆದರೂ ಪ್ರಾದೇಶಿಕ ಅಸಮತೋಲನದ ಕೂಗು ಕೊನೆಯಾಗಿಲ್ಲ. ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಅಗತ್ಯ ಶಿಫಾರಸುಗಳನ್ನು ಮಾಡಲೆಂದೇ ನೇಮಿಸಿದ್ದ ನಂಜುಂಡಪ್ಪ ಸಮಿತಿ ವರದಿ ಸರಕಾರಕ್ಕೆ ಸಲ್ಲಿಕೆಯಾಗಿ ೨೨ ವರ್ಷಗಳು ಕಳೆದಿವೆ. ಅಷ್ಟಾದರೂ ಅಸಮತೋಲನದ ನಿವಾರಣೆಗೆ ನೀಡಬೇಕಾದಷ್ಟು ಆದ್ಯತೆಯನ್ನು ಸರಕಾರ ನೀಡಿಲ್ಲ. ಪರಿಣಾಮವಾಗಿ ಆಗಾಗ್ಗೆ ಗಡಿ ಭಾಗದ ಜಿಲ್ಲೆಗಳಿಂದ ಭಿನ್ನ ಕೂಗುಗಳು ಕೇಳಿ ಬರುತ್ತಿವೆ. ಸಮಗ್ರ ಅಭಿವೃದ್ಧಿಯ ವಿಚಾರದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಕಲ್ಯಾಣ ಕರ್ನಾಟಕದ (ಹಿಂದೆ ಹೈದರಾಬಾದ್ ಕರ್ನಾಟಕ ಎಂದು ಕರೆಯಲಾಗುತ್ತಿತ್ತು) ಜಿಲ್ಲೆಗಳ ಪೈಕಿ ರಾಯಚೂರು ಜಿಲ್ಲೆ ತೆಲಂಗಾಣದ ಜತೆ ಗಡಿ ಹಂಚಿಕೊಂಡಿದೆ. ಇದೀಗ ತೆಲಂಗಾಣದ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಬೇಕು ಎಂಬ ಹೇಳಿಕೆ ನೀಡಿ ಹೊಸ ವಿವಾದ ಹುಟ್ಟು ಹಾಕಿದ್ದಾರೆ. ವಾಸ್ತವದಲ್ಲಿ ಸತತ ನಿರ್ಲಕ್ಷ್ಯದಿಂದ ಬೇಸತ್ತ ಜನತೆ ಆಗೊಮ್ಮೆ ಈಗೊಮ್ಮೆ ತಮ್ಮ ಭಾವನೆಗಳನ್ನು ಹೊರಹಾಕುತ್ತಿರುವುದು ತಪ್ಪಲ್ಲ. ಆದರೆ ಅಂತಹ ಅಸಮಧಾನದ ಧ್ವನಿಗಳನ್ನೇ ಆಧರಿಸಿ ಹೊಸದೊಂದು ಗಡಿ ತಗಾದೆ ಸೃಷ್ಟಿಸಲು ಕೆಸಿಆರ್ ಹೊರಟಿದ್ದಾರೆ. ಕಳೆದ ವರ್ಷದ ಅಕ್ಟೋಬರ್ ನಲ್ಲಿ ರಾಯಚೂರಿನ ಬಿಜೆಪಿ ಶಾಸಕ ಡಾ ಶಿವರಾಜ ಪಾಟೀಲ ಅವರು ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ರಾಯಚೂರನ್ನು ತೆಲಂಗಾಣಕ್ಕೆ ಸೇರಿದರೆ ಈ ಭಾಗದ ಜನರ ಜೀವನ ಮಟ್ಟ ಎಷ್ಟೋ ಸುಧಾರಿಸಬಹುದು ಎನ್ನುವ ಅರ್ಥದಲ್ಲಿ ಟ್ವೀಟ್ ಮಾಡಿದ್ದರು. ಅದನ್ನೇ ಹಿಡಿದುಕೊಂಡು ಕೆಸಿಆರ್ ಈಗ ರಾಯಚೂರಿನ ಜನತೆಯೇ ತಮ್ಮ ಜಿಲ್ಲೆಯನ್ನು ತೆಲಂಗಾಣಕ್ಕೆ ಸೇರಿಸಬೇಕೆಂಬ ಒತ್ತಾಯ ಮಾಡುತ್ತಿದ್ದಾರೆ. ಅದಕ್ಕೆ ತಮ್ಮ ಬೆಂಬಲವಿದೆ ಎಂದು ಹೇಳಿಕೊಂಡಿದ್ದಾರೆ. ಬೆಳಗಾವಿಯ ಹೆಸರಿನಲ್ಲಿ ಮಹಾರಾಷ್ಟ್ರ ಆಗಾಗ್ಗೆ ತಗಾದೆ ಎತ್ತುವ ಮೂಲಕ ಕಿರಿಕಿರಿ ಸೃಷ್ಟಿಸುತ್ತಿರುವುದು ಹೊಸತೇನಲ್ಲ. ಅದರ ಜತೆಗೆ ಇದೀಗ ಉತ್ತರದ ತುದಿಯ ರಾಯಚೂರು ಜಿಲ್ಲೆಯನ್ನೂ ವಿವಾದಕ್ಕೆ ಎಳೆಯುವ ಪ್ರಯತ್ನವನ್ನು ಕೆಸಿಆರ್ ಮಾಡಿದ್ದಾರೆ. ರಾಜ್ಯ ಸರಕಾರ ಸ್ಥಳೀಯರ ಅಹವಾಲುಗಳನ್ನು ಆಲಿಸಿ ಅಭಿವೃದ್ಧಿ ವಿಚಾರದಲ್ಲಿ ಅಗತ್ಯವಿರುವಷ್ಟು ಆದ್ಯತೆಗಳನ್ನು ನೀಡುವ ಮೂಲಕ ಅಸಮಧಾನದ ಕಿಡಿಗಳನ್ನು ಅಲ್ಲಲ್ಲೇ ನಂದಿಸಬೇಕಾಗಿದೆ. ಆಗ ಮಾತ್ರ ಕೆಸಿಆರ್ ಅಂಥವರಿಗೆ ರಾಜ್ಯದ ವ್ಯವಹಾರಗಳಲ್ಲಿ ಮೂಗು ತೂರಿಸಲು ಅವಕಾಶ ಸಿಗದಂತಾಗುತ್ತದೆ.

ಕೃಪೆ: ವಿಶ್ವವಾಣಿ, ಸಂಪಾದಕೀಯ, ದಿ: ೧೯-೦೮-೨೦೨೨     

ಚಿತ್ರ ಕೃಪೆ: ಇಂಟರ್ನೆಟ್ ತಾಣ