ಪ್ರೀತಿಯೆಂಬ ಚುಂಬಕ

ಪ್ರೀತಿಯೆಂಬ ಚುಂಬಕ

ಅಮೃತ ಮತ್ತು ವಿಕಾಸ ಮದುವೆಯಾಗಿ ಎರಡು ವರ್ಷವಾಗುತ್ತಾ ಬಂತು. ಅಮೃತಳಿಗೆ ಗಂಡನ ಮೇಲೆ ಆತ ತನ್ನನ್ನು ಕಡೆಗಣಿಸುತ್ತಾ ಬರುತ್ತಿದ್ದಾನೆ ಎನ್ನುವ ಸಂಶಯವೊಂದು ಪ್ರಾರಂಭವಾಗಿದೆ. ಹಾಗಂತ ವಿಕಾಸ ಅಮೃತಾಳನ್ನು ಪ್ರೀತಿಸುವುದಿಲ್ಲ ಎಂದಲ್ಲ. ಆತ ಅಮೃತಾಳಿಗೆ ಯಾವುದೇ ಕಷ್ಟವಾಗದಂತೆ ವ್ಯವಸ್ಥೆ ಮಾಡಿದ್ದಾನೆ. ಆದರೂ ಅಮೃತಾ ಆತನ ಮೇಲೆ ಯಾವಾಗಲೂ ಸಿಟ್ಟು ಮಾಡುತ್ತಲೇ ಇದ್ದಾಳೆ. 

ಅದೊಂದು ದಿನ ವಿಕಾಸನ ಆಫೀಸಿಗೆ ಪತ್ನಿಯ ಆಫೀಸಿನಿಂದ ಫೋನ್ ಬಂದಿತ್ತು. ಕೂಡಲೇ ವಿಕಾಸ ಅವಳಿದ್ದಲ್ಲಿಗೆ ಹೋದ. ಕಾರಣವಿಷ್ಟೇ, ಅಮೃತಾ ಆಫೀಸಿನ ಟೆರೇಸಿಗೆ ಹತ್ತುವಾಗ ಕೆಳಗೆ ಬಿದ್ದು ಗಾಯಗೊಂಡಿದ್ದಳು. ಕಾಲು ಉಳುಕಿ ಹೋಗಿ ನೆಲಕ್ಕೆ ಕಾಲು ಊರುವುದೇ ಕಷ್ಟವಾಗಿತ್ತು. ವಿಕಾಸ ಹೋದವನೇ ಅಮೃತಾಳನ್ನು ಆಸ್ಪತ್ರೆಗೆ ಸೇರಿಸಿದ. ಆಸ್ಪತ್ರೆಯಲ್ಲಿ ಕಾಲಿಗೆ ಔಷಧಿಯನ್ನು ಕೊಟ್ಟು ಮನೆಗೆ ಹೋಗಿ ಕೆಲವು ವಾರಗಳ ವಿಶ್ರಾಂತಿಯನ್ನು ತೆಗೆದುಕೊಳ್ಳುವಂತೆ ಸಲಹೆ ನೀಡಿದರು. ಅಮೃತಾ ವಿಶ್ರಾಂತಿ ತೆಗೆದುಕೊಳ್ಳುವ ಹೊತ್ತಿಗೆ ವಿಕಾಸ ತನ್ನ ಕೆಲಸಕ್ಕೆ ಎರಡು ವಾರ ರಜೆ ಹಾಕಿದ. ಅವಳನ್ನು ಹೂವಿನಂತೆ ಅವಳನ್ನು ಹೂವಿನಂತೆ ನೋಡಿಕೊಂಡ. ಅಮೃತಳಾಗಿ ಒಂದು ಕಾಲು ಊರುವುದೇ ಕಷ್ಟವಾಗಿರುವಾಗ ವಿಕಾಸ ಆಕೆಯನ್ನು ಹೆಚ್ಚು ಕಮ್ಮಿ ಎತ್ತಿಕೊಂಡೇ ಸ್ನಾನ ಮಾಡಿಸುತ್ತಿದ್ದ, ಟಾಯ್ಲೆಟ್‌ಗೂ ಎತ್ತಿಕೊಂಡೇ ಹೋಗುತ್ತಿದ್ದ. ಅಮೃತಾಳಿಗೆ ನಾಚಿಕೆಯಾದರೂ ಏನೂ ಮಾಡುವ ಹಾಗಿರಲಿಲ್ಲ. ಆಕೆ ಸ್ನಾನ ಮಾಡುವಾಗ ವಿಕಾಸನನ್ನೇ ನೋಡುತ್ತಿದ್ದಳು. ಆದರೆ ವಿಕಾಸ ಇದ್ಯಾವುದರ ಪರಿವೆ ಇಲ್ಲದೆ ಅಮೃತಾಳ ಆರೈಕೆ ಮಾಡತ್ತಿದ್ದ. ಮಾತ್ರವಲ್ಲ ಅಡುಗೆ ಮಾಡಲು ಹೋಗಿ ಕೈಯನ್ನೂ ಸುಟ್ಟುಕೊಂಡಿದ್ದ. ಆದರೂ ಆತ ಅಮೃತಾಳಿಗೆ ಏನೂ ಅನ್ನಲಿಲ್ಲ. ಬೇರೆ ಗಂಡಂದಿರಂತೆ ನೀನ್ಯಾಕೆ ಆಫೀಸಿಗೆ ಟೆರೇಸ್ ಹತ್ತಲು ಹೋಗಬೇಕಾಗಿತ್ತು ಎಂದೆಲ್ಲಾ ಸಿಡಿಮಿಡಿ ಪ್ರಶ್ನೆಯನ್ನು ಕೇಳಲಿಲ್ಲ. ಅಮೃತಾಳಿಗೆ ಆವತ್ತು ಅನ್ನಿಸಿತ್ತು, ನಾನು ಪ್ರೀತಿಸುವುದು ಎಂದರೆ ವಾರಾಂತ್ಯದಲ್ಲಿ ತನ್ನ ಗಂಡ ತನ್ನನ್ನು ಪಾರ್ಕು, ಬೀಚು ಎಂದೆಲ್ಲಾ ಸುತ್ತಿಸುವುದು, ಐಸ್‌ಕ್ರೀಮ್ ಪಾರ್ಲರಿಗೆ ಹೋಗಿ ಫ್ರುಟ್‌ಸಲಾಡ್ ತಿನ್ನಿಸುವುದು ಎಂದು ಕೊಂಡಿದ್ದಳು. ಆದರೆ ಈಗ ಗೊತ್ತಾಗಿತ್ತು. ನಿಜವಾದ ಪ್ರೀತಿ ಯಾವತ್ತೂ ತೋರಿಕೆಯದ್ದಾಗಿರುವುದಿಲ್ಲವೆಂದು ಅದನ್ನೇ ವಿಕಾಸನಿಗೆ ಹೇಳಿದಾಗ ಆತ ಸುಮ್ಮನೆ ನಕ್ಕುಬಿಟ್ಟ.

ಈ ಪುಟ್ಟ ಕತೆಯಲ್ಲಿ ನಿಜವಾದ ಪ್ರೀತಿ ತುಂಬಿದೆ. ಹಾಗಂತ ನಿಜವಾದ ಪ್ರೀತಿಯನ್ನು ತೋರ್ಪಡಿಸಲು ಪತ್ನಿ ಆಸ್ಪತ್ರೆಗೆ ಸೇರಲೇಬೇಕಾ. ಅಥವಾ ಟರೇಸ್‌ನಿಂದ ಕೆಳಗೆ ಬೀಳಲೇಬೇಕಾ? ಈಗಿನ ಯುವ ಜನಾಂಗ ನಿಜವಾದ ಪ್ರೀತಿಯನ್ನೇ ಮರೆತುಬಿಟ್ಟಿದೆಯಲ್ಲವೇ. ಎಲ್ಲವೂ ಕೃತಘ್ನತೆ ತುಂಬಿರುವ ಈ ಜಗತ್ತಿನಲ್ಲಿ ನಿಜವಾದ ಪ್ರೀತಿಗೆ ಸ್ಥಾನ ಎಲ್ಲಿದೆ? ತಂದೆ ತಾಯಿಯನ್ನು ನಿತ್ಯ ಮಾನಸಿಕವಾಗಿ ಹಿಂಸೆ ಕೊಟ್ಟು ಪೇರೆಂಟ್ಸ್ ಡೇಯಂದು ಮಾತ್ರ ಅವರನ್ನು ಪ್ರೀತಿ ಮಾಡುವುದು ಸರಿಯೇ? ಹಾಗಾದರೆ ನಿಜವಾದ ಪ್ರೀತಿ ಯಾವುದು? ನಿಜವಾದ ಪ್ರೀತಿಗೆ ಏನಂತ ಕರೆಯುವುದು? ನಿಜವಾಗಿಯೂ ನಿಜವಾದ ಪ್ರೀತಿ ಎಂಬುದಿದೆಯೇ ಎಂಬ ಪ್ರಶ್ನೆಗಳು ಉದ್ಭವಿಸುತ್ತಿವೆ. 

ಯಾಕೋ ಏನೋ ಇವೆಲ್ಲಾ ಪ್ರಶ್ನೆಗಳು ನೆನಪಾದಾಗ ಪ್ರಿಯತಮ ದಕ್ಕದ ಕಾರಣಕ್ಕೆ ಪ್ರಿಯಕರ ಆತ್ಮಹತ್ಯೆ ಎನ್ನುವ ಪೇಪರು ಹೆಡ್ಡಿಂಗುಗಳು ಒಂದು ಕ್ಷಣ ಮನದಲ್ಲಿ ಹಾದು ಹೋಗುತ್ತದೆ. ಪ್ರೀತಿಗಾಗಿ ಆತ ನಿಜವಾಗಿಯೂ ಸತ್ತು ಹೋದನಾ ಎಂಬ ಅಂಶ ಕ್ಷಣ ಕಾಲ ಮೂಡಿ ಬಂದು ನಮ್ಮನ್ನು ತಬ್ಬಿಬ್ಬುಗೊಳಿಸು ತ್ತದೆ. ಯಾಕಾಗಿ ಇವರೆಲ್ಲಾ ಪ್ರೀತಿಯ ಹುಚ್ಚಿರಿಸಿಕೊಂಡಿದ್ದಾರೆ. ಜಗತ್ತಿನಲ್ಲಿ ಹೆಚ್ಚಿನ ಸಾವುಗಳು ಪ್ರೀತಿಗೆ ಸಂಭವಿಸುವುದಾದರೇ ಪ್ರೀತಿ ಎಂಬುದು ಸಾಮಾನ್ಯವಲ್ಲ ಅಲ್ಲವೇ?

ಪ್ರೀತಿಯೆಂಬ ಚುಂಬಕ ಹೇಗೆ ಜಗತ್ತನ್ನು ಹಿಡಿದಿಟ್ಟುಕೊಂಡಿವೆ ಅಲ್ಲವೇ? ಯಾಕೋ ಏನೋ ಪ್ರೀತಿ ಎಂಬ ಅಂಶವೇ ಇಲ್ಲದೇ ಹೋದರೆ ಈ ಜಗತ್ತು ಏನಾಗಿರುತ್ತಿತ್ತು? ಆಡಂ ಮತ್ತು ಈವ್ ಪ್ರೀತಿಯಿಂದಲೇ ಅಲ್ಲವೇ ಇಂದಿಗೂ ಅಜರಾಮರವಾಗಿರುವುದು. ನಮ್ಮ ತಂದೆ ತಾಯಿಗಳು ಪ್ರೀತಿ ಮಾಡದೇ ಇದ್ದಿದ್ದರೆ ನಾವೆಲ್ಲಾ ಇರುತ್ತಿದ್ದೆವೇ, ಈ ಪ್ರೀತಿಯಿಂದ ಅದೆಷ್ಟು ಸ್ವಾರ್ಥ, ನಿಸ್ವಾರ್ಥಗಳು, ರಾಗ ದ್ವೇಷಗಳು ಉದ್ಭವಿಸುತ್ತಿವೆ ಅಲ್ಲವೇ? ಹೌದು. ಈ ಜಗತ್ತಿನಲ್ಲಿ ಪ್ರೀತಿ ಎಂಬುದು ಇಲ್ಲದಿದ್ದರೆ ಏನಾಗುತ್ತಿತ್ತು? ಉತ್ತರ ನಿಮಗೆ ಗೊತ್ತೇ?

(ಆಧಾರ) ಮನು ಶಕ್ತಿನಗರ

ಚಿತ್ರ ಕೃಪೆ: ಇಂಟರ್ನೆಟ್ ತಾಣ