ಪ್ರೀತಿಯೇ ದೇವರು
ಒಂದು ಊರಿನಲ್ಲಿ ಒಂದು ಕುಟುಂಬ ವಾಸವಾಗಿತ್ತು. ಆ ಮನೆಯಲ್ಲಿ ಯಜಮಾನ, ಪತ್ನಿ , ಮಗಳು ಹಾಗೂ ಒಂದು ಚಿಕ್ಕ ಮಗು ಇತ್ತು. ಯಜಮಾನ ವಯಸ್ಸಿಗೆ ಬಂದ ಮಗಳನ್ನು ಪಕ್ಕದ ಊರಿಗೆ ವಿವಾಹ ಮಾಡಿಕೊಟ್ಟಿದ್ದನು. ಈ ಊರು ಮತ್ತು ಅಳಿಯನ ಊರಿನ ಮಧ್ಯೆ ಒಂದು ದೊಡ್ಡ ಅರಣ್ಯ ಇತ್ತು. ಮದುವೆ ಆದಮೇಲೆ ಮಗಳನ್ನು ಅಳಿಯನ ಮನೆಗೆ ಮೊದಲ ಬಾರಿಗೆ ಕರೆದುಕೊಂಡು ಹೋಗಬೇಕಾಗಿತ್ತು. ಮಗಳಿಗೆ ಬೇಕಾದ ಒಡವೆ, ವಸ್ತ್ರ ಮತ್ತು ವಸ್ತುಗಳನ್ನೆಲ್ಲ ತನ್ನ ಮುದ್ದಿನ ಮಗಳಿಗೆ ಕೊಡಿಸಿದ್ದನು. ಅದನ್ನೆಲ್ಲಾ ಕಟ್ಟಿಕೊಂಡು ಹಿಂದಿನ ಕಾಲದ ಮರದ ಗಾಡಿಯಲ್ಲಿ ಯಜಮಾನ, ಪತ್ನಿ, ಮಗಳು ಹಾಗೂ ಸಣ್ಣ ಮಗುವನ್ನು ಕುಳ್ಳಿಸಿಕೊಂಡು ಅಳಿಯನ ಊರಿಗೆ ಹೊರಟನು. ಅರಣ್ಯದ ಸಮೀಪ ಹೋಗುತ್ತಿದ್ದಂತೆ ಕತ್ತಲಾಯಿತು. ಅರಣ್ಯದಲ್ಲಿ ದರೋಡೆಕೋರರ ಕಾಟ ಅಧಿಕವಿತ್ತು. ಹಾಗಾಗಿ ಅರಣ್ಯದ ಅಂಚಿನಲ್ಲಿ ಈ ರಾತ್ರಿ ಕಳೆದು ಬೆಳಿಗ್ಗೆ ಹೋಗಲು ನಿರ್ಧರಿಸಿದರು. ಅದೇ ಗಾಡಿಯಲ್ಲಿ ಅಡುಗೆ ಮಾಡಲು ಬೇಕಾದ ದಿನಸಿ ಪಾತ್ರೆಗಳನ್ನೆಲ್ಲ ಇಟ್ಟುಕೊಂಡಿದ್ದರು. ಅದನ್ನು ಬಳಸಿ ಮಡದಿ ರೊಟ್ಟಿ ಪಲ್ಯ ಮಾಡುತ್ತಿದ್ದಳು. ಒಂದು ರೊಟ್ಟಿ ತುಣುಕನ್ನು ಮಗುವಿನ ಕೈಗೆ ಕೊಟ್ಟಿದ್ದಳು. ಅದೇ ಸಮಯಕ್ಕೆ ಒಬ್ಬ ದರೋಡೆಕೋರ ಬಂದನು. ದೈತ್ಯ ಶರೀರ, ಕೈಯಲ್ಲಿ ಆಯುಧವಿತ್ತು. ಬಂದವನೆ ಧಾಳಿ ಮಾಡಿದ. ಮಗಳಿಗಾಗಿ ಪ್ರೀತಿಯಿಂದ ತಂದು ಕೊಟ್ಟಿದ್ದ ಎಲ್ಲಾ ಒಡವೆ, ವಸ್ತ್ರ, ವಸ್ತುಗಳನ್ನು ಕಟ್ಟಿಕೊಂಡನು. ಯಜಮಾನ, ಮಡದಿ ಮತ್ತು ಮಗಳು ಹೆದರಿ ನಡುಗುತ್ತಿದ್ದರು. ಮುಗ್ಧ ಮಗು ಮಾತ್ರ ನಗುತಿತ್ತು. ದರೋಡೆಕೋರನ ದೃಷ್ಟಿ ಆ ಮಗುವಿನ ಕಡೆ ಹೋಯಿತು. ಮಗು ನಗುತಿತ್ತು. ದರೋಡೆಕೋರ ನಕ್ಕನು. ಮಗು ತನ್ನ ಕೈಲಿದ್ದ ರೊಟ್ಟಿ ತುಣುಕನ್ನು ದರೋಡೆಕೋರನಿಗೆ ತೋರಿಸಿತು. ದರೋಡೆಕೋರ ಕಟ್ಟಿದ ಸಾಮಗ್ರಿ ಅಲ್ಲಿಟ್ಟನು. ಮಗು ನೀಡಿದ ರೊಟ್ಟಿ ತುಣುಕನ್ನು ತಿಂದನು. ಆತನಲ್ಲಿದ್ದ ದರೋಡೆಕೋರತನ ಸತ್ತಿತ್ತು. ಮನುಷ್ಯ ಬದಲಾಗಿದ್ದನು. ಅವನನ್ನು ಬದಲಾಯಿಸಿದ್ದು ಮಗುವಿನ ಮುಗ್ಧ ಪ್ರೀತಿಯ ನಗು. ಒಂದು ತುಣುಕು ರೊಟ್ಟಿ. ದರೋಡೆಕೋರ ಹೇಳಿದ ಹೆದರಬೇಡಿ, ನಾನು ನಿಮ್ಮನ್ನು ರಕ್ಷಣೆ ಮಾಡುತ್ತೇನೆ. ಬೆಳಿಗ್ಗೆ ಸುರಕ್ಷಿತವಾಗಿ ನೀವು ತಲುಪಬೇಕಾದ ಊರಿಗೆ ತಲುಪಿಸುತ್ತೇನೆ. ಮಗುವೆ ನನಗೆ ಗುರುವಾಯಿತು ಎಂದು ಹೇಳಿದನು. ಮುಂದೆ ಈ ದರೋಡೆಕೋರನೇ ಸಂತನಾಗುತ್ತಾನೆ. ಜೀವನ ಸುಂದರಗೊಳಿಸುವುದು ಪ್ರೀತಿ. ಜೀವನ ಮಧುರ ಗೊಳಿಸುವುದು ಪ್ರೀತಿ. ಜಗತ್ತನ್ನು ಅನುಭವಿಸಲು ಬೇಕಾಗಿರುವುದು ಪ್ರೀತಿ. ಜೀವಿಗಳ ಮನಸ್ಸನ್ನು ಬದಲಾಯಿಸುವ ಶಕ್ತಿ ಪ್ರೀತಿಗೆ ಇದೆ. ಅದಕ್ಕೆ ಬಲ್ಲವರು ಹೇಳಿದ್ದು ಪ್ರೀತಿಯೇ ದೇವರು. ದೇವರೆಂದರೆ ಸತ್ಯಂ, ಶಿವಂ, ಸುಂದರಂ. ಸತ್ಯಂ ಅಂದರೆ ಯಾವಾಗಲೂ ಇರುವಂತದ್ದು. ಶಿವಂ ಎಂದರೆ ಶಾಂತವಾಗಿರುವುದು. ಸುಂದರಂ ಎಂದರೆ ಸುಂದರವಾಗಿದ್ದು ಸಂತೋಷ ಕೊಡುವಂಥದ್ದು. ಅಂತ ದೇವರನ್ನು ನಾವು ಪ್ರೀತಿಸಬೇಕು. ಪ್ರೀತಿಯಿಂದ ಪ್ರತಿಯೊಂದನ್ನು ನೋಡಿದರೆ ಎಲ್ಲವೂ ದೇವರೇ, ಅಲ್ಲವೇ?
-ಎಂ.ಪಿ. ಜ್ಞಾನೇಶ್, ಮಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ