ಪ್ರೀತಿಯ ಅಂತ್ಯ

ಪ್ರೀತಿಯ ಅಂತ್ಯ

ಬರಹ

ಒಂದು ಸುಂದರವಾದ ದ್ವೀಪ ಇತ್ತು. ಆ ದ್ವೀಪದಲ್ಲಿ ಎಲ್ಲಾ ಭಾವನೆಗಳೂ ಸಾಮರಸ್ಯದಿಂದ ಸುಖವಾಗಿ ಬಾಳುತ್ತಿದ್ದವು. ಒಮ್ಮೆ ದೊಡ್ಡ ಪ್ರವಾಹ ಬಂದು ದ್ವೀಪ ಮುಳುಗುವ ಸ್ಥಿತಿಗೆ ಬಂತು. ಎಲ್ಲಾ ಭಾವನೆಗಳೂ ಜೀವಭಯದಿಂದ ನಡುಗುತ್ತಿದ್ದವು. ಆಗ ಪ್ರೀತಿ ಒಂದು ದೋಣಿಯನ್ನು ಸಿದ್ಧಪಡಿಸಿತು. ಜೀವ ಉಳಿಸಿಕೊಳ್ಳಲು ಎಲ್ಲಾ ಭಾವನೆಗಳೂ ಗಡಿಬಿಡಿಯಿಂದ ದೋಣಿ ಏರಿದವು. ಒಂದು ಭಾವನೆ ಮಾತ್ರ ದೋಣಿಯಲ್ಲಿ ಕಾಣಲಿಲ್ಲ. ಪ್ರೀತಿ ದೋಣಿಯಿಳಿದು ಬಂದು ನೋಡಿದರೆ ದುರಭಿಮಾನ ಒಂದುಕಡೆ ಮುಖ ಊದಿಸಿಕೊಂಡು ಕುಳಿತಿತ್ತು. ಪ್ರೀತಿ ಅದನ್ನು ಓಲೈಸಿ ದೋಣಿ ಹತ್ತಲು ಹೇಳಿತು. ದುರಭಿಮಾನ ಹತ್ತಲಿಲ್ಲ. ಪ್ರೀತಿ ಪರಿಪರಿಯಾಗಿ ಕೇಳಿಕೊಂಡರೂ ದುರಭಿಮಾನ ಜಗ್ಗಲಿಲ್ಲ. ಪ್ರವಾಹ ಏರುತ್ತಲೇ ಇತ್ತು. ಉಳಿದ ಭಾವನೆಗಳು ಪ್ರೀತಿಯನ್ನು ಕುರಿತು ದುರಭಿಮಾನವನ್ನು ಅಲ್ಲೇ ಬಿಟ್ಟು ದೋಣಿ ಹತ್ತಿ ಜೀವ ಉಳಿಸಿಕೊಳ್ಳಲು ಕೋರಿಕೊಂಡವು. ಪ್ರೀತಿ ದುರಭಿಮಾನವನ್ನು ಓಲೈಸುತ್ತಲೇ ಇತ್ತು. ಪ್ರವಾಹ ಹೆಚ್ಚಾಗಿ ದ್ವೀಪ ಮುಳುಗಿ ದುರಭಿಮಾನದೊಂದಿಗೆ ಪ್ರೀತಿಯೂ ಸತ್ತುಹೋಯಿತು.