ಪ್ರೀತಿಯ ಅಪ್ಪನಿಗೂ ಒಂದು ದಿನದ ಹಂಗೇಕೆ...?!

ಪ್ರೀತಿಯ ಅಪ್ಪನಿಗೂ ಒಂದು ದಿನದ ಹಂಗೇಕೆ...?!

ಹುಟ್ಟಿದ ಮಗುವಿನ ಮೊದಲ ತೊದಲ ಮಾತು ಅಮ್ಮ ಮತ್ತು ಅಪ್ಪ. ಹೊತ್ತು, ಹೆತ್ತು, ಕಾಳಜಿಯಿಂದ ಸಾಕಿ ಸಲಹುವ ದೇವತೆ ತಾಯಿಯಾದರೆ, ಬದುಕಿನ ಅರ್ಥವ, ಸಾರವ, ಜೀವನವ ಕಲಿಸಿದವ, ಕಲಿಸುವವ ಅಪ್ಪನೆಂಬ ಮೌನಮುಖಿ. ಜೀವವನ್ನೇ ಪಣವಾಗಿಡುವ ಅಮ್ಮ ಎಲ್ಲರಿಗೂ ಕಾಣಿಸುವವಳು. ಆದರೆ ಅಪ್ಪನ ಕಷ್ಟವನ್ನು ಮಕ್ಕಳು ಅರ್ಥಮಾಡಿಕೊಳ್ಳುವುದು ಕಡಿಮೆ. ಅಪ್ಪ ಸರಿಯಾಗಿ ಅರ್ಥವಾಗುವಾಗ ಒಮ್ಮೊಮ್ಮೆ ಅಪ್ಪನೇ ಇಲ್ಲದ ಪರಿಸ್ಥಿತಿಯೂ ಇದೆ.

‘ವಿಶ್ವ ಅಪ್ಪಂದಿರ ದಿನವನ್ನು ಎಲ್ಲಾ ಅಪ್ಪಂದಿರಿಗೂ ಕೃತಜ್ಞತೆ ಮತ್ತು ಗೌರವದ ಧ್ಯೋತಕವಾಗಿ ಪ್ರತಿವರ್ಷದ ಜೂನ್ ಮೂರನೇ ಆದಿತ್ಯವಾರ (ಈ ವರ್ಷ ೧೮ ಜೂನ್) ಆಚರಿಸಲಾಗುತ್ತಿದೆ. (ವಿಶ್ವದ ಕೆಲವೆಡೆ ಬೇರೆ ದಿನಾಂಕದಲ್ಲೂ ಆಚರಣೆಯಿದೆಯೆಂದು ಗೂಗಲ್ ಮಾಹಿತಿಯಿಂದ ತಿಳಿದು ಬಂತು) ಅಪ್ಪನೆಂದರೆ ಆಕಾಶದಷ್ಟೇ ವಿಶಾಲ ಮನಸ್ಸಿದ್ದವ, ನಿರ್ಮಲ, ಶುದ್ಧ, ಗಾಂಭೀರ್ಯ, ತೇಜಸ್ಸಿನಿಂದ ಕೂಡಿದವ. ಶಾಲೆಯ ಪುಟ್ಟ ಮಕ್ಕಳ ಹತ್ತಿರ 'ಅಪ್ಪ, ಅಮ್ಮ ಯಾರಿಷ್ಟ' ಎಂದರೆ ಹೆಚ್ಚಿನ ಮಕ್ಕಳು ಅಪ್ಪ ಎಂದೇ ಹೇಳುವುದು ಸಹಜ. 'ಯಾಕೆ ಅಪ್ಪ ಇಷ್ಟ, ಅಮ್ಮ ಎಷ್ಟು ಕಷ್ಟ ಪಡ್ತಾರಲ್ವ?' ಎಂದಾಗ 'ಅಪ್ಪ ಬಯ್ಯುವುದಿಲ್ಲ, ಕೊಂಡಾಟ ಮುದ್ದು ಮಾಡ್ತಾರೆ, ತಿಂಡಿ, ಆಟಿಕೆಗಳನ್ನು ತರ್ತಾರೆ ಹೇಳ್ತಾರೆ. 'ಅಮ್ಮನೂ ಮುದ್ದು ಮಾಡ್ತಾರಲ್ಲ' ಹೇಳಿದರೆ, ಅಮ್ಮ ಹೊಡೆಯುತ್ತಾಳೆ, ಬಯ್ಯುತ್ತಾಳೆ, ಗದರಿಸುತ್ತಾಳೆ ಹೇಳುವುದಿದೆ. ಇದೆಲ್ಲ ಮಕ್ಕಳ ಮಾತುಗಳು, ಅವರ ಮಟ್ಟಕ್ಕೆ ಅದೇ ಸರಿ.

ಅಪ್ಪ ಮಕ್ಕಳ ಪಾಲಿಗೆ ಆಲದ ಮರವೇ ಸರಿ. ಮಕ್ಕಳನ್ನು ಕೈಹಿಡಿದು ನಡೆಸುವವ, ಸಮಾಜದಲ್ಲಿ ತನ್ನ ಕಾಲ ಮೇಲೆ ತಾನೇ ನಿಲ್ಲುವುದಕ್ಕೆ ಬೇಕಾದ ಸಹಕಾರ ಕೊಡುವವ, ರಕ್ಷಣೆ, ಬೆಂಬಲ ನೀಡುವವ, ನಿಷ್ಕಲ್ಮಶ ಪ್ರೀತಿಯನ್ನು ಉಣಬಡಿಸುವವ ಅಪ್ಪನೆಂಬ ಗೌರವಯುತ ವ್ಯಕ್ತಿ. ಮಕ್ಕಳ ಕಣ್ಣಿಗೆ ಘನಗಾಂಭೀರ್ಯವಾಗಿ, ಶಿಸ್ತಿನ ಸಿಪಾಯಿಯಂತೆ ಕಂಡರೂ ಬೆನ್ನ ಹಿಂದಿನ ಶಕ್ತಿ ಅಪ್ಪ. ಅಪ್ಪನ ಕಣ್ಣೀರು ಯಾರಿಗೂ ಕಾಣಿಸದು. ಆತ ಮೌನಿ ಮತ್ತು ಎಲ್ಲವೂ ತೆರೆಯ ಮರೆಯಲ್ಲಿ. ಕಾಲ ಬದಲಾದಂತೆ ಹೆಣ್ಣು ಮಕ್ಕಳೂ ಸಂಪಾದನೆ ಆರಂಭಿಸಿದಾಗ 'ನಾವು ಸಹ ಮಕ್ಕಳಿಗೆ ಆರ್ಥಿಕ ಸಹಾಯ ಮಾಡ್ತೇವೆ ಹೇಳುವುದಿದೆ. ಮನೆ, ಕುಟುಂಬ ಅಂದ ಮೇಲೆ ಹೊಂದಾಣಿಕೆಯಲ್ಲಿ ಕುಟುಂಬದ ಪ್ರಗತಿಗಾಗಿ ಸಹಕರಿಸಲೇಬೇಕು. ಏನಿದ್ದರೂ ಅಪ್ಪನ ತ್ಯಾಗ ಬೇರೆಯೇ. ಮಗಳನ್ನು ವಿದ್ಯಾಭ್ಯಾಸಕ್ಕೆ ಹೊರಗೆ ಕಳುಹಿಸುವಾಗ, ಮದುವೆ ಮಾಡಿ ಗಂಡನ ಮನೆಗೆ ಕಳುಹಿಸುವಾಗ ಅಪ್ಪನ ಕಣ್ಣಂಚು ಒದ್ದೆಯಾಗಿ, ಕಣ್ಣೀರಿನ ಹನಿಗಳ ಶೇಖರಣೆಯ ಹಿಂದಿನ ನೋವು ಅಸದಳವಾದದ್ದಾಗಿದೆ. ಎಷ್ಟು ಮೌನಿಯಾಗಿ ಬಿಡುತ್ತಾನೆ ಅಪ್ಪ ಆ ಸನ್ನಿವೇಶದಲ್ಲಿ. ಆದರೂ ಅಪ್ಪನನ್ನು ದೇವನೆಂದು ಹೇಳುವುದನ್ನು ನಾನು ಕೇಳಿಲ್ಲ. ಹೆತ್ತವರು ದೇವರಿಗೆ ಸಮ ಎಂಬುದಾಗಿ ಮಕ್ಕಳಿಗೆ ಹೇಳ್ತೇವೆ ಅಷ್ಟೆ. ನನ್ನ ಲೆಕ್ಕದಲ್ಲಿ ಅಪ್ಪ ದೇವರಿಗಿಂತಲೂ ಮಿಗಿಲು.  

ಮಕ್ಕಳನ್ನು ಭೂಮಿಗೆ ತರಲು ಕಾರಣಕರ್ತನಾದ, ಸಮಾಜದಲ್ಲಿ ಮಕ್ಕಳಿಗೊಂದು ಅಸ್ತಿತ್ವ ನಿರ್ಮಿಸಿಕೊಟ್ಟ ಅಪ್ಪನನ್ನು ಪ್ರಾಯಸಂದಕಾಲದಲ್ಲಿ ಒಂದಷ್ಟು ಪ್ರೀತಿ, ಮಮಕಾರ, ವಾತ್ಸಲ್ಯ, ಹೊಟ್ಟೆಗೆ ಅನ್ನ, ನೆಮ್ಮದಿಯ ಬದುಕು (ಇರುವಷ್ಟು ದಿನ) ಕೊಡುವುದು ಮಕ್ಕಳ ಕರ್ತವ್ಯ. ಆಚರಣೆಗೂ ಬೆಲೆ. ಜೀವಮಾನವಿಡೀ ದುಡಿದ ಅಪ್ಪನಿಗೆ ಬಂಗಾರದ ರಾಶಿ, ಮಹಡಿ ಮನೆಗಿಂತ, ಹತ್ತಿರ ಕುಳಿತು ನಾಲ್ಕು ಮಾತನಾಡಿದರೆ ಅದಕ್ಕಿಂತ ಮಿಗಿಲಾದ್ದು ಬೇರೊಂದಿಲ್ಲ. ಲೇಖನ, ಪದ್ಯಗಳಲ್ಲಿ ಅಪ್ಪ ಎನ್ನದೆ ನಿಜವಾದ ಗೌರವ ತೋರಿಸಿದಾಗ ಆಚರಣೆಗೂ ಅರ್ಥವಿದೆ, ಸಾರ್ಥಕ್ಯ ಭಾವವಿದೆ. ನನ್ನ ಅಪ್ಪನೊಂದಿಗೆ ಪ್ರಪಂಚದ ಎಲ್ಲಾ ಅಪ್ಪಂದಿರಿಗೂ ಈ ಸಂದರ್ಭದಲ್ಲಿ ನನ್ನದೊಂದು ಸೆಲ್ಯೂಟ್.

-ರತ್ನಾ ಕೆ ಭಟ್,ತಲಂಜೇರಿ, ಪುತ್ತೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ