"ಪ್ರೀತಿಯ ಪತ್ರ "
ಪ್ರಿಯಂವದೆ, ಇಲ್ಲಿ ಸೊಗಸಾದ ಚಳಿಗಾಲವೊಂದು ವೃಥಾ ಹೋಗುತ್ತಿದೆ. ನೀನಿಲ್ಲ. ಬಂದು ಹೋಗುತ್ತೇನೆಂದು ಮಾತು ಕೊಟ್ಟವಳು ನೀನು. ಪ್ರತೀ ಸಂಜೆ ಬರುವ ರೇಲಿನ ಹಾದಿ ಕಾಯುತ್ತೇನೆ. ನಾನಿರುವ ಜಾಗ ಊರಿನಿಂದ ದೂರ. ಸಂಜೆ ಹತ್ತಿರಾದಂತೆಲ್ಲ ಏನೋ ಸಂಭ್ರಮ. ಕುಳಿತಲ್ಲೇ ಕಾತರಗೊಳ್ಳುತ್ತೇನೆ. ಇಷ್ಟಕ್ಕೂ ಸಿಂಗಾರಗೊಳ್ಳಲು ನನ್ನಲ್ಲೇನಿದೆ? ಅದೇ ಮಾಸಿಹೋದ ತಿಳಿನೀಲಿ ಜೀನ್ಸ್ ಪ್ಯಾಂಟು. ಸದಾ ತೊಡುವ ಕಪ್ಪನೆಯ ದೊಗಳೆ ಅಂಗಿ. ಇಷ್ಟು ಪುರಾತನವಾದ ಇಂಥ ದೊಡ್ಡ ಮನೆಯಲ್ಲಿ ನಾನು ಒಬ್ಬಂಟಿಯಾಗಿ ಹೀಗೆ ಯಾಕಾದರೂ ಇದ್ದೇನೋ? ಬೆಳಗ್ಗೆ ಬೇಗನೆ ಎದ್ದು ಒಂದು ಟೀ ಕಾಯಿಸಿಕೊಳ್ಳುತ್ತೇನೆ. ಹಿಂದೆಯೇ ಹೊತ್ತಿಕೊಳ್ಳುವ ಸಿಗರೇಟು. ಕತ್ತಲಲ್ಲಿ ಬಂದು ತಾಕಿ ಹೋಗುವ ಹಕ್ಕಿಯ ಹಾಗೆ ಹಾಡೊಂದು ಸುಮ್ಮನೆ ನೆನಪಾಗುತ್ತದೆ. ಜೊತೆಯಲ್ಲೇ ನಿನ್ನ ಮೈಯ ಮಚ್ಚೆ. ಹಿತವಾಗಿ ಹಾಡಿಕೊಳ್ಳುತ್ತೇನೆ. ಹೊರಗಡೆ ಇನ್ನೂ ತಿಳಿಗತ್ತಲು. ಬೂಟು ಮೆಟ್ಟಿಕೊಂಡವನೇ ಬಂಗಲೆಯಾಚೆಗಿನ ಅರಾಜಕ ಕಾಡಿನಲ್ಲಿ ಗೊತ್ತು ಗುರಿಯಿಲ್ಲದೆ ಹೆಜ್ಜೆ ಹಾಕುತ್ತೇನೆ. ಹಾಡು ಹಿಂಬಾಲಿಸಿ ಬರುತ್ತದೆ.
ಗಿಡಗೆಟಿಗಳ ಮೇಲೆಲ್ಲ ಇಬ್ಬನಿ ಚಿಮುಕಿಸಿದಂತೆ. ಈ ಚಳಿಗಾಲದ ಸೊಬಗೇ ವಿಭಿನ್ನ. ನೀನು ಜೊತೆಯಲ್ಲಿರಬೇಕು ಅನ್ನಿಸುತ್ತದೆ. ಹಾಗೆ ತುಂಬ ಹೊತ್ತು ನಡೆದಾಡಿ ಹಿಂತಿರುಗಿದ ಮೇಲೆ ಒಂದು ನಿರ್ವಿಘ್ನ ಸ್ನಾನ. ಎದೆ, ಬೆನ್ನು, ತೋಳು, ತೊಡೆ ಹಿತವಾದ ಬಿಸಿ ನೀರಿನಲ್ಲಿ ತೋಯುತ್ತಿದ್ದರೆ ಮತ್ತೆ ನಿನ್ನದೇ ನೆನಪು. ಕಳೆದ ಬೇಸಗೆಯಲ್ಲಿ ನಾವು ಸಮುದ್ರ ಸ್ನಾನ ಮಾಡಿದು ಅವತ್ತು ನೀನು ಕೆರಳಿ ನಿಂತ ಮೊಸಳೆಯಂತಾಗಿದ್ದೆ. ನೀರಿಗಿಳಿದರೆ ನಾನು ಶುದ್ಧ ರಾಕ್ಷಸ. ನಮ್ಮ ಕಾಳಗದಂಥ ಮಿಲನಕ್ಕೆ ಸಮುದ್ರದಂಚಿನ ಸಕ್ಕರೆ ಮರಳು ನಲುಗಿ, ಕೆದರಿ ಹೋಗಿತ್ತು. ಎಲ್ಲ ಮುಗಿದ ಆಯಾಸದ ಅಂತ್ಯದಲ್ಲಿ ಯಾಕೋ ನಿನ್ನ ಕಣ್ಣ ತುಂಬ ನೀರು.
ಆಗ ನಾನು ಕೇಳುವ ಪ್ರಶ್ನೆಗಳಿಗೆ ನೀನು ಉತ್ತರಿಸುವುದಿಲ್ಲ. ಸುಮ್ಮನೆ ನನ್ನನ್ನೇ ನೋಡುತ್ತ ಉಳಿಯುತ್ತೀಯ. ನಿನ್ನ ಕಣ್ಣುಗಳಲ್ಲಿ ಹೊರಳುವುದು ಪ್ರಶ್ನೆಗಳಾ? ಉತ್ತರಗಳಾ? ಅರ್ಥವಾಗುವುದಿಲ್ಲ. ನನ್ನ-ನಿನ್ನ ನಡುವೆ ಪ್ರೇಮ ಪ್ರಜ್ವಲಿಸತೊಡಗಿದ ದಿನದಿಂದಲೇ ನನಗೆ ಹಾಗೆ ಭಾಸವಾಗತೊಡಗಿತ್ತು. ನಿನು ಸರಳವಾಗಿ ಅರ್ಥವಾಗುವ ಹುಡುಗಿಯಲ್ಲ. ನಿನ್ನ ಮನಸ್ಸಿನಲ್ಲಿ ಸಾವಿರ ಮಾತುಗಳಿವೆ. ಆದರೆ ನೀನು ದನಿಯಾಗುವುದಿಲ್ಲ. ನಿನ್ನ ಮೌನದಲ್ಲೂ ಒಂದು ಹಾಡಿದೆ. ಅದರ ರಾಗ ಯಾವುದೆಂದು ನೀನು ಬಿಟ್ಟುಕೊಡುವುದಿಲ್ಲ. ಪೂರ್ತಿ ನನ್ನವಳಾಗಿ ನನ್ನ ತೆಕ್ಕೆಗೆ ಸಿಕ್ಕ ನಂತರವೂ ನೀನು ನನ್ನಿಂದ ದೂರ. ತನು ಕರಗಿದ ನಂತರವೂ ಒಲಿಯಲೊಲ್ಲದ ಪುಟ್ಟದೇವತೆ ನೀನು.
ಆದರೆ ಒಮ್ಮೆ ನೀನು ಈ ಕಾಡಮಧ್ಯದ ಬಂಗಲೆಗೆ ಬರಬೇಕು. ದಿನದಲ್ಲಿ ಬಂದು ಹೋಗುವುದು ಒಂದೇ ರೈಲು. ಸುಮ್ಮನೆ ಬಂದು ಒಮ್ಮೆ ರೇಲಿಳಿದು ನೋಡು. ಅದೆಷ್ಟು ಪ್ರೀತಿಯಿಂದ ನಿನ್ನನ್ನು ಕಾಡಮಧ್ಯದ ಈ ಮನೆಗೆ ಕರೆತರುತ್ತೇನೋ? ಪ್ರತಿ ಹೂವೂ ನಿನ್ನ ಆಗಮನದಿಂದ ಸಂಭ್ರಮಿಸಿ ನಗುತ್ತದೆ. ಬಂಗಲೆಯೆದುರಿನ ಹೆಮ್ಮರದ ಕೊಂಬೆಗಳಿಗೆ ಚಿಕ್ಕಚಿಕ್ಕ ಗೆಜ್ಜೆ ಕಟ್ಟಿದ್ದೇನೆ. ವಿಶಾಲವಾದ ಬಂಗಲೆಯ ಪ್ರತಿ ಕೋಣೆಯೂ ತಂಪು. ಸಾಯಂಕಾಲವಾಯಿತೆಂದರೆ ಸಾಕು, ದೇವತೆಗಳು ಕುಳಿತು ಸಂಗೀತ ಸಭೆ ನಡೆಸುತ್ತಿದ್ದಾರೇನೋ ಎಂಬಂತೆ ಹಕ್ಕಿಗಳ ಚಿಲಿಪಿಲಿ. ಚಳಿಗಾಲವಾದ್ದರಿಂದ ಬೇಗ ಕತ್ತಲು ಬೀಳುತ್ತದೆ. ಹಿಮ ಕುಡಿದ ಕೋಗಿಲೆ ಅವತ್ತಿನ ಮಟ್ಟಿಗೆ ಮೂಕ. ಒಳಗಿನ ಸಣ್ಣದೀಪಗಳ ಅಡಿಯಲ್ಲಿ, ಬಂಗಲೆಯ ಕಾರಿಡಾರುಗಳಲ್ಲಿ, ವಿಶಾಲವಾದ ಕೋಣೆಗಳಲ್ಲಿ ಸುಮ್ಮನೆ ಓಡಾಡೋಣ.
ಬಂಗಲೆ ಬೇಸರವಾಯಿತಾ, ಹೇಳು. ಕಾಡಿನಲ್ಲಿರುವ ಮರಮರಕ್ಕೂ ಉಯ್ಯಾಲೆ ಕಟ್ಟಿಬಿಡ್ತೀನಿ. ಜೀಕಿ ಜೀಕಿ ದಣಿಯುವುದರಲ್ಲಿ ದಿವ್ಯ ಸಂತೋಷವಿದೆ. ಬರ್ತೀಯಲ್ಲ? ರೇಲಿಗಾಗಿ ಕಾಯುತ್ತೇನೆ.
ಇಂತಿ ನಿನ್ನ ಪ್ರೀತಿಯ ...
ಮೋಹನ್ ಮಡಿಕೇರಿ ..............