ಪ್ರೀತಿಯ ಭಾಷೆ ಅದ್ಬುತ - ಆದರೆ ಅದು ಎಲ್ಲಿದೆ ...?
4000 ಕಿಲೋಮೀಟರ್, 150 ದಿನ - 75 ಜಿಲ್ಲೆಗಳು....ಕನ್ಯಾಕುಮಾರಿಯಿಂದ ಕಾಶ್ಮೀರದವರೆಗಿನ ರಾಹುಲ್ ಗಾಂಧಿಯವರ " ಭಾರತ್ ಜೋಡೋ " ಯಶಸ್ವಿಯಾಗಿ ಪಾದಯಾತ್ರೆ ಮುಗಿಸಿದೆ. ಅದಕ್ಕೆ ಅಭಿನಂದನೆಗಳು. ಪರಿಣಾಮ - ಫಲಿತಾಂಶ - ಪ್ರಯೋಜನ - ದೇಶದ ಹಿತದೃಷ್ಟಿಯಿಂದ ಏನು...?
ಪಾದಯಾತ್ರೆಯ " ಆಶಯ ಮತ್ತು ಶೀರ್ಷಿಕೆ - ಅತ್ಯುತ್ತಮ.
ಪಾದಯಾತ್ರೆಯ " ರೀತಿ ನೀತಿ " - ಸಾಧಾರಣ.
ಪಾದಯಾತ್ರೆಗೆ " ಸಾಮಾನ್ಯ ಜನರ ಪ್ರತಿಕ್ರಿಯೆ " ತೃಪ್ತಿಕರವಾಗಿಲ್ಲ.
ಪಾದಯಾತ್ರೆಗೆ " ಮಾಧ್ಯಮಗಳ ಪ್ರಾಮುಖ್ಯತೆ " - ಸಮಾಧಾನಕರವಾಗಿಲ್ಲ.
ವೈಯಕ್ತಿಕ ಲಾಭ - ನಿಜವಾಗಿಯೂ ರಾಹುಲ್ ಗಾಂಧಿಯವರ ವ್ಯಕ್ತಿತ್ವ ರೂಪುಗೊಳ್ಳುವಲ್ಲಿ ಮತ್ತು ಸಾರ್ವಜನಿಕ ಇಮೇಜ್ ಹೆಚ್ಚುವುದರಲ್ಲಿ ಸಂದೇಹವಿಲ್ಲ. ರಾಜಕೀಯ ಲಾಭ - ಈ ಕ್ಷಣದಲ್ಲಿ ಅಂತಹ ಲಾಭ ಗೋಚರಿಸುತ್ತಿಲ್ಲ. ಭವಿಷ್ಯದಲ್ಲಿ ಸಿಗಬಹುದು.
ಶತಮಾನದಷ್ಟು ಇತಿಹಾಸವಿರುವ ಭಾರತ ರಾಷ್ಟ್ರೀಯ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷರು ಮತ್ತು ಪ್ರಮುಖ ನಾಯಕರು ಆದ ಸುಮಾರು 52 ವರ್ಷ ವಯಸ್ಸಿನ ಆಸುಪಾಸಿನ ಶ್ರೀ ರಾಹುಲ್ ಗಾಂಧಿಯವರು ತಮ್ಮ ಪಕ್ಷ ಎದುರಿಸುತ್ತಿರುವ ಅತ್ಯಂತ ಬಿಕ್ಕಟ್ಟಿನ ಸಂದರ್ಭದಲ್ಲಿ ಕೊನೆಗೂ ಅತ್ಯಂತ ಸುರಕ್ಷಿತವಾಗಿ ಯಾತ್ರೆ ಮುಗಿಸಿ ಕಾಶ್ಮೀರದ ಲಾಲ್ ಚೌಕಿನಲ್ಲಿ ರಾಷ್ಟ್ರೀಯ ಧ್ವಜ ಹಾರಿಸಿ ಯಾತ್ರೆ ಮುಗಿಸಿದ್ದಾರೆ.
ಆ ಸಂದರ್ಭದಲ್ಲಿ ಪ್ರೀತಿಯ ಭಾಷೆಯ ಬಗ್ಗೆ ಮಾತನಾಡಿದ್ದಾರೆ ರಾಹುಲ್ ಗಾಂಧಿಯವರು. ಈ ನೆಲ ಪ್ರೀತಿಯ ಭಾಷೆಯನ್ನು ಮರೆತು ಶತಮಾನಗಳೇ ಉರುಳಿದವು. ಬುದ್ದ, ಮಹಾವೀರ, ಬಸವ, ವಿವೇಕಾನಂದ, ಗಾಂಧಿ, ಅಂಬೇಡ್ಕರ್ ಅವರ ಪ್ರೀತಿ, ಅಹಿಂಸೆ, ಸರಳತೆ, ಸಮಾನತೆಯ ವಿಚಾರಗಳನ್ನೇ ಗಾಳಿಗೆ ತೂರಿ ಬಹಳ ಮುಂದಕ್ಕೆ ಹೋಗಿದೆ. ಈಗ ರಾಹುಲ್ ಗಾಂಧಿ ಅದರ ಬಗ್ಗೆ ಮಾತನಾಡುತ್ತಿದ್ದಾರೆ.
ಮೊದಲಿಗೆ ಅರ್ಥಮಾಡಿಕೊಳ್ಳಿ ರಾಹುಲ್, ಸುಮಾರು ಒಂದು ಶತಮಾನಕ್ಕೂ ಹೆಚ್ಚು ವರ್ಷಗಳ ಕಾಂಗ್ರೇಸ್ ಇತಿಹಾಸದ ಸಂಪೂರ್ಣ ಭಾರ ನಿಮ್ಮ ಮೇಲಿದೆ. ಅದರ ಹಲವು ಒಳ್ಳೆಯ ಮತ್ತು ಕೆಲವು ಕೆಟ್ಟ ಅಂಶಗಳಲ್ಲಿ ಒಳ್ಳೆಯದನ್ನು ಮರೆತು ಕೆಟ್ಟ ಅಂಶಗಳನ್ನು ನಿಮ್ಮ ತಲೆಗೆ ಕಟ್ಟಿ ಎಳೆಯಲಾಗುತ್ತಿದೆ. ಅದನ್ನು ನೀವು ಅನುಭವಿಸಬೇಕಾದ ಅನಿವಾರ್ಯತೆ ಇದೆ. ದಲಿತ, ಹಿಂದುಳಿದ, ಮುಸ್ಲಿಂ, ಕ್ರಿಶ್ಚಿಯನ್, ಬಡವರು ಮುಂತಾದವರ ಸಂಘಟನೆ ಮತ್ತು ಓಟಿನ ಬ್ಯಾಂಕ್ ಛಿದ್ರ ಛಿದ್ರವಾಗಿರುವಾಗ ನೀವು ಪಕ್ಷದ ಕಟ್ಟುವುದು ತುಂಬಾ ಕಷ್ಟದ ಸಮಯವಿದು ನೆನಪಿರಲಿ.
ಸುಮಾರು 80-90 ವರ್ಷಗಳಿಂದ ನಿಮ್ಮ ಪಕ್ಷದ ವಿರುದ್ಧ ಚಿಂತನೆಯ ಪಕ್ಷವೊಂದು ನಿಧಾನವಾಗಿ ಬೇರು ಬಿಡುತ್ತಾ ಈಗ ಹೆಮ್ಮರವಾಗಿ ಬೆಳೆದಿರುವಾಗ ಶಿಥಿಲಗೊಂಡ ಪಕ್ಷದ ನಾಯಕತ್ವ ನಿಮಗೆ ದೊರೆತಿದೆ. ಎಂತಹ ದೊಡ್ಡ ಜವಾಬ್ದಾರಿ ಯೋಚಿಸಿ. ಮಾನವೀಯ ಮೌಲ್ಯಗಳು ಕುಸಿತಗೊಂಡು, ವಾಣಿಜ್ಯೀಕರಣ ವ್ಯಾಪಕವಾಗಿ ಹಣವೇ ನಿನ್ನಯ ಗುಣ ಎಂಬ ಪರಿಸ್ಥಿತಿಯಲ್ಲಿ ನೀವು ಪಕ್ಷದ ಮುಂದಾಳತ್ವ ವಹಿಸಿದ್ದೀರಿ. ಯಶಸ್ಸು ಎಂದರೆ ಹಣ ಮಾಡುವುದು, ಜನಪ್ರಿಯತೆ ಗಳಿಸುವುದು, ಅಧಿಕಾರ ಹಿಡಿಯುವುದು ಮಾತ್ರ ಎಂಬ ಅಭಿಪ್ರಾಯ ಜನಮಾನಸದಲ್ಲಿ ಮೂಡಿದ ದಿನಗಳಲ್ಲಿ ನಿಮ್ಮ ಮಾತುಗಳು ಹೇಗಿರಬೇಕು ಅವಲೋಕನ ಮಾಡಿಕೊಳ್ಳಿ.
ಮಾತಿನ ಮೋಡಿಗಾರರು, ಹೆಚ್ಚು ಕಡಿಮೆ ಕೌಟುಂಬಿಕ ಜಂಜಾಟಗಳಿಂದ ಮುಕ್ತರಾದವರು, ಮಹತ್ವಾಕಾಂಕ್ಷಿಗಳು, ಗುಜರಾತಿನ ವ್ಯಾಪಾರಿ ಗುಣದ ಸಮುದಾಯಕ್ಕೆ ಸೇರಿದವರು, ಜನರ ನಾಡಿಮಿಡಿತವನ್ನು ಚೆನ್ನಾಗಿ ಗ್ರಹಿಸಿರುವವರು ಆದ ಶ್ರೀ ನರೇಂದ್ರ ಮೋದಿಯವರು ಬಲಿಷ್ಠವಾಗಿರುವ ಮತ್ತು ಉತ್ತುಂಗದಲ್ಲಿರುವ ಸಮಯದಲ್ಲಿ ನಿಮಗೆ ಅವರ ವಿರೋಧ ಪಕ್ಷದ ನಾಯಕರಾಗಿ ಮಾಡಲಾಗಿದೆ. ಇದು ನಿಮಗೆ ಅರಿವಿರಲಿ. ಸಾಮಾಜಿಕ ಜಾಲತಾಣಗಳ ಸಂಪರ್ಕ ಕ್ರಾಂತಿಯ ಸಂದರ್ಭದಲ್ಲಿ, ಚುನಾವಣೆಗಳನ್ನು ತಂತ್ರ ಪ್ರತಿತಂತ್ರಗಳ ಚಾಣಾಕ್ಷತನದಿಂದ ಗೆಲ್ಲುವ ಸಮಯದಲ್ಲಿ ನೀವು ಒಂದು ಪಕ್ಷದ ಪ್ರಮುಖರಾಗಿದ್ದೀರಿ.
ಇದನ್ನು ಹೇಗೆ ಎದುರಿಸುವುದು ಎಂದು ಮನನ ಮಾಡಿಕೊಳ್ಳಿ. ನೂರಕ್ಕೂ ಹೆಚ್ಚು ವರ್ಷಗಳ ಇತಿಹಾಸದಿಂದ ಜಡ್ಡುಗಟ್ಟಿದ ವ್ಯವಸ್ಥೆಯ ಪಕ್ಷದಲ್ಲಿ, ಧಾರ್ಮಿಕ ನಂಬಿಕೆಗಳು ಬಲವಾಗುತ್ತಿರುವ ಪರಿಸ್ಥಿತಿಯಲ್ಲಿ, ಇವಿಎಂ ಎಂಬ ಆಧುನಿಕ ಮತ ಯಂತ್ರಗಳ ದಿನಗಳಲ್ಲಿ, ನೀವು ನಿಮ್ಮ ಪಕ್ಷವನ್ನು ಮುನ್ನಡೆಸುತ್ತಿರುವಿರಿ, ಎಚ್ಚರಿಕೆಯಿಂದ ಇರಿ. ಮಾತುಗಳು - ಅಕ್ಷರಗಳ - ಜೋಡಣೆಯಿಂದ ಇಡೀ ಇತಿಹಾಸವನ್ನೇ ತಿರುಚಿ ಹೊಸ ಕಾಲ್ಪನಿಕ ಇತಿಹಾಸವನ್ನು ಆಕರ್ಷಕವಾಗಿ ಭಾಷಣಗಳಲ್ಲಿ ಹೇಳುವ, ಅಂಕಣಗಳಲ್ಲಿ ಬರೆಯುವ ನವ ಪೀಳಿಗೆಯ ಜನರು ಸಾಗರೋಪಾದಿಯಲ್ಲಿ ಉದಯಿಸುತ್ತಿರುವ ಸನ್ನಿವೇಶದಲ್ಲಿ ನೀವು ಪಕ್ಷದ ರಥ ಎಳೆಯುತ್ತಿರುವಿರಿ. ಹುಷಾರು...
ಮಿಸ್ಟರ್ ರಾಹುಲ್ ಗಾಂಧಿ, ದಯವಿಟ್ಟು ಸ್ವಲ್ಪ ಇತ್ತ ಗಮನಕೊಡಿ. ಮುಖವಾಡಗಳಿಗೂ ಮೇಕಪ್ ಮಾಡಿ ಮಿಂಚುವ ಸಮಾಜದಲ್ಲಿ ನಿಮ್ಮನ್ನು ಒಬ್ಬ ಬುದ್ದಿಮಾಂದ್ಯನ ರೀತಿ ಟೀಕಿಸಿ ಅದನ್ನು ಟ್ರೋಲ್ ಮಾಡುವ ಸ್ವಯಂ ಘೋಷಿತ ಸಂಸ್ಕೃತಿಯ ವಕ್ತಾರರ ಬಗ್ಗೆ ನಿಮಗೂ ಮಾಹಿತಿ ಇರುತ್ತದೆ. ನಮ್ಮನ್ನು ಎಷ್ಟೇ ಕೆಟ್ಟದಾಗಿ ನಿಂದಿಸಿದರೂ ಸಹಿಸಿಕೊಳ್ಳಬಹುದು. ಆದರೆ ಬುದ್ದಿ ಮಾಂಧ್ಯನ ಮಟ್ಟಕ್ಕೆ ಹೋಲಿಸಿದರೆ ಆಗುವ ಮಾನಸಿಕ ಹಿಂಸೆ ಸಹಿಸಲಸಾಧ್ಯ. ಅದೂ ಫಲಿತಾಂಶಗಳು ಸೋಲಿನ ಉತ್ತರ ನೀಡಿರುವಾಗ....
ನಿಮಗೆ ತುಂಬಾ ನೋವಾಗಿರಬಹುದು. ದುಃಖವಾಗಿರಬಹುದು. ಅದನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುವುದು ಕಷ್ಟ. ಸೋಲು ಗೆಲುವು ಕೇವಲ ಬದುಕಿನ ಒಂದು ಪ್ರಕ್ರಿಯೆ. ನಿಜಕ್ಕೂ ನೀವು ರಾಜೀವ್ - ಸೋನಿಯಾ ಗಾಂಧಿಯವರ ಪುತ್ರರಾದರೋ ಅಂದೇ ಈ ನೆಲದ ಕೆಲವೇ ಅದೃಷ್ಟವಂತರಲ್ಲಿ ನೀವೂ ಒಬ್ಬರಾದಿರಿ. ಅದಕ್ಕಿಂತ ಸೌಭಾಗ್ಯ ಇನ್ನೇನಿದೆ. ಅಂದೇ ನೀವು ಬಹುತೇಕ ವಿಜಯಿಯಾದಿರಿ. ನೀವು ಕೊರಗುವುದಕ್ಕೆ ಯಾವುದೇ ಕಾರಣವಿಲ್ಲ.
ನಮ್ಮ ಹಳ್ಳಿಗಳನ್ನು, ಅಲ್ಲಿನ ಜನರನ್ನು ಅವರ ಬದುಕನ್ನು ನೀನು ಹತ್ತಿರದಿಂದ ಈ ಪಾದಯಾತ್ರೆಯ ಸಮಯದಲ್ಲಿ ನೋಡದ್ದೀರಿ. ಹೌದು ಗೆಳೆಯ/ಗೆಳತಿಯರೆ, ಬಡತನದಲ್ಲಿದ್ದು ಟೀ ಮಾರುತ್ರಿದ್ದ ವ್ಯಕ್ತಿ ಒಂದು ಬೃಹತ್ ದೇಶದ ಪ್ರಧಾನಿಯಾಗುವುದು ಅದ್ಭುತ ಆಶ್ಚರ್ಯ ಮತ್ತು ಪ್ರಜಾಪ್ರಭುತ್ವದ ಯಶಸ್ಸನ್ನು ಸಾರುತ್ತದೆ. ಅದು ಆ ವ್ಯಕ್ತಿಯ ಸಂಭ್ರಮವನ್ನು ನೂರು ಪಟ್ಟು ಹೆಚ್ಚಿಸುತ್ತದೆ. ಅದನ್ನು ಮುಕ್ತವಾಗಿ ಪ್ರಶಂಸಿಸೋಣ.
ಹಾಗೆಯೇ ಅದೇ ಸಂದರ್ಭದಲ್ಲಿ ಮುತ್ತಾತ, ಅಜ್ಜಿ, ತಂದೆ ಪ್ರಧಾನಿಯಾಗಿದ್ದು, ತಾಯಿ ಬಹುತೇಕ ಅದರಷ್ಟೆ ಅಧಿಕಾರ ಅನುಭವಿಸಿರುವ ವಂಶದ ಕುಡಿ ಇಂದು ಕಾರಣವೇನೇ ಇರಲಿ ಸೋಲುಗಳನ್ನೇ ಕಾಣುತ್ತಾ ಅಧ್ಯಾತ್ಮಿಕತೆಯ ತವರೂರು ಎಂದು ಕರೆಯಲಾಗುವ ಭಾರತದಲ್ಲಿ ಅತ್ಯಂತ ಶೋಚನೀಯ ಪದಗಳಿಂದ ನಿಂದನೆಗೆ ಒಳಗಾಗುತ್ತಿರುವಾಗ ಅವರಿಗೆ ಒಬ್ಬ ವ್ಯಕ್ತಿಯಾಗಿ ( ಪಕ್ಷವಾಗಿಯಲ್ಲ) ಬೆಂಬಲಿಸುವುದು ಒಂದು ಸಣ್ಣ ಜವಾಬ್ದಾರಿ ಎಂದು ಭಾವಿಸಬಹುದೆ ? ಇದರ ಅರ್ಥ ರಾಹುಲ್ ಗಾಂಧಿ ಗೆಲ್ಲಬೇಕು ಮತ್ತು ನರೇಂದ್ರ ಮೋದಿ ಸೋಲಬೇಕು ಎಂದು ಖಂಡಿತ ಅಲ್ಲ. ಇದು ಪ್ರಜಾಪ್ರಭುತ್ವ. ಜನರ ಮನಸ್ಸಿನಲ್ಲಿ ಯಾರು ಭರವಸೆ ಮೂಡಿಸುತ್ತಾರೋ ಅವರು ಗೆಲ್ಲುತ್ತಾರೆ. ಆ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಇಷ್ಟ ಇದೆಯೋ ಇಲ್ಲವೋ ಆದರೆ ಬಹುಮತವನ್ನು ಒಪ್ಪಿಕೊಳ್ಳಲೇಬೇಕು. ಹಾಗೆ ಧ್ವನಿ ಕ್ಷೀಣವಾದರೂ ಅದನ್ನು ವಿರೋಧಿಸುವ ಸ್ವಾತಂತ್ರ್ಯವೂ ಇದೆ. ಆದರೆ ಈ ಪ್ರಕ್ರಿಯೆಯಲ್ಲಿ ಸೋತ ವ್ಯಕ್ತಿಯನ್ನು ಬುದ್ಧಿಮಾಂದ್ಯನಂತೆ ಚಿತ್ರಿಸಿ ಸಂಭ್ರಮಿಸುವುದು ಮಾನವೀಯತೆಗೆ ಮಾಡುವ ದ್ರೋಹವಾಗುತ್ತದೆ.
ನೆನಪಿಡಿ, ಇಲ್ಲಿ ರಾಹುಲ್ ಗಾಂಧಿ ಕೇವಲ ಸಾಂಕೇತಿಕ . ಈ ರೀತಿಯ ಅಪಮಾನ ಯಾರಿಗೆ ಆಗಲಿ, ಯಾವ ಕ್ಷೇತ್ರದಲ್ಲೇ ಆಗಲಿ, ಯಾವ ಹಂತದಲ್ಲೇ ಆಗಲಿ, ಯಾವ ಸಂದರ್ಭದಲ್ಲೇ ಆಗಲಿ, ಯಾವ ರೀತಿಯಲ್ಲೇ ಆಗಲಿ ಮಾಡಬಾರದು. ನಿಮಗೆ ಯಾವುದೇ ವ್ಯಕ್ತಿಯನ್ನು ಪಕ್ಷವನ್ನು ಬೆಂಬಲಿಸುವ ಸ್ವಾತಂತ್ರ್ಯ ಮತ್ತು ಹಕ್ಕು ಇದೆ. ಆದರೆ ಕೀಳಾಗಿ ಹಿಂಸಿಸುವ ವಿಧಾನ ತಪ್ಪು. ನಾವು ಹೆಚ್ಚು ಹೆಚ್ಚು ಮುಂದುವರಿದಂತೆ ನಾಗರಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕೆ ಹೊರತು ಅನಾಗರಿಕ ವರ್ತನೆ ತೋರಬಾರದು.
-ವಿವೇಕಾನಂದ ಎಚ್. ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ