ಪ್ರೀತಿ ಎಂಬ ಭಾವ ಹುಡುಕುತ್ತಾ...

ಪ್ರೀತಿಯ ಮಾಯೆಯೊಳಗೆ, ಪ್ರೀತಿ ಪ್ರೀತಿಯಾಗಿಯೇ ಇದ್ದಾಗ ಅದೇ ನಿಜವಾದ ಭಾವ ಮತ್ತು ಮೌಲ್ಯ. ಪ್ರೀತಿ ಪ್ರೀತಿಯಂತೆ ಆದಾಗ ಅದೇ ವ್ಯಾಪಾರೀಕರಣ. ಪ್ರೀತಿ ತೋರ್ಪಡಿಕೆಯಾದಾಗ ಅದೇ Hypocrisy. ಪ್ರೀತಿ ಕೃತಕವಾದಾಗ ಅದೇ ಮೌಲ್ಯಗಳ ಅಧಃಪತನ.
ಇದು ಸ್ನೇಹ - ವಿಶ್ವಾಸ - ಭಕ್ತಿ - ಶ್ರಮ - ಶ್ರದ್ಧೆ - ಪ್ರಾಮಾಣಿಕತೆಗಳಿಗಷ್ಟೇ ಅಲ್ಲ ಮನುಷ್ಯ ಸಂಬಂಧಗಳಿಗೂ ಅನ್ವಯಿಸುತ್ತದೆ.
ತಾಯಿ ತಂದೆ ಅಣ್ಣ ತಮ್ಮ ಅಜ್ಜ ಅಜ್ಜಿ ತಮ್ಮ ತಂಗಿ ಮಗ ಮಗಳು ಸೊಸೆ ಅಳಿಯ ಹೀಗೆ ಎಲ್ಲರನ್ನೂ ಒಳಗೊಂಡಿರುತ್ತದೆ. ಈ ಶಿಥಿಲತೆಯನ್ನೇ ನಾವು ಮೌಲ್ಯಗಳ ಕುಸಿತ ಎಂದು ಬೊಬ್ಬೆ ಹೊಡೆಯುತ್ತಿರುವುದು. ಆಧುನಿಕತೆ ಅಥವಾ ನಗರೀಕರಣ ಅಥವಾ ತಾಂತ್ರಿಕ ಬೆಳವಣಿಗೆ ಇದರ ಹಿಂದಿನ ಮರ್ಮ ಎಂದು ಊಹಿಸಲಾಗುತ್ತದೆ.
ಕಣ್ಣಿಗೆ ಕಾಣುವಷ್ಟು ಮನಸ್ಸಿಗೆ ನಾಟುವಷ್ಟು. ನೇರವಾಗಿಯೇ ಇದು ಗೋಚರಿಸುತ್ತಿದೆ. ಬಹುತೇಕರ ಮಾತಿನಲ್ಲಿ ಇದು ಆಗಾಗ ಸುಳಿಯುತ್ತಿರುತ್ತದೆ. ಕಾಲ ಬದಲಾಗಿದೆ ಅಥವಾ ಕಾಲ ಕೆಟ್ಟಿದೆ ಎಂದು ಸಾಂಕೇತಿಕವಾಗಿ ಕಾಲದ ಮಹಿಮೆಯನ್ನು ಉದಾಹರಿಸುತ್ತಾರೆ.
ಹಣ ಅಧಿಕಾರ ಅಂತಸ್ತು ಜನಪ್ರಿಯತೆ ದುರಾಸೆ ಇದಕ್ಕೆ ಬಹುಮುಖ್ಯ ಕಾರಣ ಎಂದು ಗುರುತಿಸಲಾಗುತ್ತದೆ. ಜಾಗೃತ ಮನಸ್ಥಿತಿಯವರ ಗೊಂದಲವೆಂದರೆ ಈ ವ್ಯವಸ್ಥೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋಗಬೇಕೆ ಅಥವಾ ಇದರ ವಿರುದ್ಧ ಹೋಗಬೇಕೆ? .
ಹೊಂದಾಣಿಕೆ ಮಾಡಿಕೊಂಡರೆ ಆತ್ಮ ವಂಚನೆ ಮಾಡಿಕೊಂಡಂತಾಗುತ್ತದೆ. ವಿರುದ್ಧ ಹೋದರೆ ಅರೆ ಹುಚ್ಚರಾಗುತ್ತೇವೆ. ಕನಿಷ್ಠ ನಿರ್ಲಕ್ಷತೆ ಅಥವಾ ನಿರ್ಲಿಪ್ತತೆ ತಾಳಲು ಇಂದಿನ ವಾಸ್ತವ ಬದುಕು ಬಿಡುವುದಿಲ್ಲ. ಎರಡರಲ್ಲಿ ಒಂದನ್ನು ಆಯ್ಕೆಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಏಕೆಂದರೆ ಮೊದಲೇ ಹೇಳಿದಂತೆ ನಿಮ್ಮ ಮನಸ್ಥಿತಿ ಜಾಗೃತವಾಗಿದೆ.
ಆದ್ದರಿಂದ...
ಪ್ರೀತಿಯ ಅಂಗಡಿಗೆ ನಿಮಗೆ ಸ್ವಾಗತ.
ಪ್ರೀತಿ ಬೇಕೆ ಪ್ರೀತಿ ಗೆಳತಿಯರೇ,
ಪ್ರೀತಿ ಬೇಕೆ ಪ್ರೀತಿ ಗೆಳೆಯರೇ,
ಬನ್ನಿ ನನ್ನೊಂದಿಗೆ ನನ್ನ ಮನದಂಗಳಕ್ಕೆ,
ಯಾವ ಪ್ರೀತಿ ಬೇಕು - ಎಷ್ಟು ಪ್ರೀತಿ ಬೇಕು,
ತೆಗೆದುಕೊಳ್ಳಿ - ಮೊಗೆದುಕೊಳ್ಳಿ ನಿಮ್ಮ ಭಾವನೆಗಳಿಗನುಗುಣವಾಗಿ,
ಬೊಗಸೆ ಕಂಗಳಲ್ಲಿ -
ವಿಶಾಲ ಹೃದಯದಲ್ಲಿ -
ತುಂಬು ಮನಸ್ಸಿನಲ್ಲಿ,
ಹುಚ್ಚುಹಿಡಿಸಲಷ್ಟು ಪ್ರೀತಿ -
ಹುಚ್ಚು ಬಿಡಿಸಲಷ್ಟು ಪ್ರೀತಿ,
ಹಣದ ಆಕರ್ಷಣೆಗೊಂದಷ್ಟು ಪ್ರೀತಿ - ದೇಹದ ಆಕರ್ಷಣೆಗೊಂದಷ್ಟು ಪ್ರೀತಿ,
ಸುಂದರ ಯುವಕನಿಗೊಂದಷ್ಟು ಪ್ರೀತಿ,
ಕುರೂಪಿಯೊಬ್ಬಳಿಗೊಂದಷ್ಟು ಪ್ರೀತಿ,
ಶ್ರೀಮಂತರ ಮನೆಯ ರಾಜಕುಮಾರಿಗೊಂದಷ್ಟು ಪ್ರೀತಿ,
ರೈಲು ನಿಲ್ದಾಣದ ಕೂಲಿಯವನಿಗೊಂದಷ್ಟು ಪ್ರೀತಿ,
ವಿಧುರನಿಗೊಂದಷ್ಟು ಪ್ರೀತಿ - ವಿಚ್ಛೇದಿತೆಗೊಂದಷ್ಟು ಪ್ರೀತಿ,
ಮುದುಕನಿಗೊಂದಷ್ಟು ಪ್ರೀತಿ -
ಎಳೆ ಹುಡುಗಿಗೊಂದಷ್ಟು ಪ್ರೀತಿ,
ಹೃದಯಕ್ಕೆ ಚೂರಿ ಹಾಕುವವಳಿಗೊಂದಷ್ಟು ಪ್ರೀತಿ,
ಬದುಕಿಗೆ ಕೊಳ್ಳಿ ಇಡುವವನೊಬ್ಬನಿಗೊಂದಷ್ಟು ಪ್ರೀತಿ.
ಆಡಂಬರವಾಗಿ ನುಲಿಯುವವಳೊಬ್ಬಳಿಗೊಂದಷ್ಟು ಪ್ರೀತಿ,
ಹೃದಯಕ್ಕೇ ಕಿಚ್ಚುಹಚ್ಚುವ ತ್ಯಾಗಜೀವಿಗೊಂದಷ್ಟು ಪ್ರೀತಿ,
ಕ್ಯಾನ್ಸರ್ ರೋಗಿಯೊಬ್ಬಳಿಗೊಂದಷ್ಟು ಪ್ರೀತಿ,
ಜೈಲಿನ ಖೈದಿಯೊಬ್ಬನಿಗೊಂದಷ್ಟು ಪ್ರೀತಿ,
ದೂರದ ಸೈನಿಕನ ಹೃದಯಕ್ಕೊಂದಷ್ಟು ಪ್ರೀತಿ,
ಪಕ್ಕದ ಮನೆಯ ಕಿಟಕಿಯ ಚೆಲುವೆಗೊಂದಷ್ಟು ಪ್ರೀತಿ,
ಮೋಸ ಮಾಡಿದವನಿಗೊಂದಷ್ಟು ಪ್ರೀತಿ,
ಮೋಸ ಹೋದವಳಿಗೊಂದಷ್ಟು ಪ್ರೀತಿ,
ಅಂಗವಿಕಲೆಗೊಂದಷ್ಟು ಪ್ರೀತಿ - ಮನೋರೋಗಿಗೊಂದಷ್ಟು ಪ್ರೀತಿ,
ಜಾತಿ ಬಿಟ್ಟವಳಿಗೊಂದಷ್ಟು ಪ್ರೀತಿ - ಧರ್ಮಭ್ರಷ್ಟನಿಗೊಂದಷ್ಟು ಪ್ರೀತಿ,
ಗಂಡ ಬಿಟ್ಟವಳಿಗೊಂದಷ್ಟು ಪ್ರೀತಿ - ಹೆಂಡತಿಕೊಂದವನಿಗೊಂದಷ್ಟು ಪ್ರೀತಿ,
ದೂರ ಪ್ರಯಾಣಕ್ಕೊಂದಷ್ಟು ಪ್ರೀತಿ - ಫೇಸ್ ಬುಕ್ ಸ್ನೇಹಕ್ಕೊಂದಷ್ಟು ಪ್ರೀತಿ,
ಕಾಮುಕನಿಗೊಂದಷ್ಟು ಪ್ರೀತಿ - ನಪುಂಸಕನಿಗೊಂದಷ್ಟು ಪ್ರೀತಿ,
ಬನ್ನಿ ಗೆಳೆಯ - ಗೆಳತಿಯರೇ ನನ್ನ ಮನದಂಗಳಕ್ಕೆ,
ನಾನೊಬ್ಬ ಪ್ರೀತಿಯ ವ್ಯಾಪಾರಿ,
ಪ್ರೀತಿಯ ವ್ಯಾಪಾರದಲ್ಲಿ ಭರ್ಜರಿ ಲಾಭ ಗಳಿಸುತ್ತಲೇ ಇದ್ದೇನೆ,
ವರ್ಷದಿಂದ ವರ್ಷಕ್ಕೆ ವ್ಯಾಪಾರ ವೃದ್ಧಿಸುತ್ತಲೇ ಇದೆ,
ಪ್ರೀತಿಯನ್ನು ಕೊಳ್ಳುವವರಿಲ್ಲದೆ ವ್ಯಾಪಾರ ನಾಶವಾಗಿ,
ಪ್ರೇಮಿಗಳ ಹೃದಯದಲ್ಲಿ ನಿಜ ಪ್ರೀತಿ
ಶಾಶ್ವತವಾಗಿ ನೆಲೆಗೊಳ್ಳುವವರೆಗೂ ........
ವ್ಯಾಪಾರ ಮಾಡುತ್ತಲೇ ಇರುತ್ತೇನೆ ...,,,,,,,,,,,
ಆದರೆ,
ಮನದಾಳದಿಂದ ಹೇಳುತ್ತೇನೆ.......
ಪ್ರೀತಿ ವ್ಯಾಪಾರವಲ್ಲ, ಅದು ಜೀವಸೆಲೆ. ಅದು ಭ್ರಮೆಯನ್ನು ಕಳಚಿ ವಾಸ್ತವವಾಗಿ ಅಮರವಾಗುವವರೆಗೂ ವ್ಯಾಪಾರ ಮಾಡುತ್ತಲೇ ಇರುತ್ತೇನೆ.........
ಪ್ರೀತಿ ಪ್ರೀತಿಯಾಗಿಯೇ ನಿಮಗೆ ದೊರೆತಾಗ ನನ್ನ ವ್ಯಾಪಾರ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತದೆ.
ಅಲ್ಲಿಯವರೆಗೂ ನಾನೊಬ್ಬ ಪ್ರೀತಿಯ ವ್ಯಾಪಾರಿ.
ಬನ್ನಿ ಗೆಳೆಯ ಗೆಳತಿಯರೆ....
ನಿಮಗಿಷ್ಟದ ಪ್ರೀತಿ ಕೊಳ್ಳಲು ನನ್ನ ಮನಸ್ಸಿನ ಅಂಗಳಕ್ಕೆ....
- ಜ್ಞಾನ ಭಿಕ್ಷಾ ಪಾದಯಾತ್ರೆಯ 214 ನೆಯ ದಿನ ಶಿವಮೊಗ್ಗ ನಗರದಿಂದ ಕಾಚಿನಕಟ್ಟೆ ಗ್ರಾಮದಲ್ಲಿ ವಾಸ್ತವ್ಯದ ಸಮಯದಲ್ಲಿ ಬರೆದ ಬರಹ..
-ವಿವೇಕಾನಂದ. ಹೆಚ್.ಕೆ., ಬೆಂಗಳೂರು
ಚಿತ್ರ: ಇಂಟರ್ನೆಟ್ ತಾಣ