ಪ್ರೀತಿ ಪ್ರೇಮ -ಪುಸ್ತಕದಾಚೆಯ ಬದನೇಕಾಯಿ

ಪ್ರೀತಿ ಪ್ರೇಮ -ಪುಸ್ತಕದಾಚೆಯ ಬದನೇಕಾಯಿ

ಪುಸ್ತಕದ ಲೇಖಕ/ಕವಿಯ ಹೆಸರು
ಪೂರ್ಣಿಮಾ ಮಾಳಗಿಮನಿ
ಪ್ರಕಾಶಕರು
ಸಾವಣ್ಣ ಪ್ರಕಾಶನ, ಜಯನಗರ, ಬೆಂಗಳೂರು
ಪುಸ್ತಕದ ಬೆಲೆ
ರೂ.೨೦೦.೦೦, ಮುದ್ರಣ ೨೦೨೧

ಪೂರ್ಣಿಮಾ ಮಾಳಗಿಮನಿಯವರು ‘ಪ್ರೀತಿ ಪ್ರೇಮ-ಪುಸ್ತಕದಾಚೆಯ ಬದನೇಕಾಯಿ' ಎಂಬ ಸೊಗಸಾದ ಪುಸ್ತಕವನ್ನು ಬರೆದಿದ್ದಾರೆ. ಪುಸ್ತಕದ ಬೆನ್ನುಡಿಯಲ್ಲಿ ಓದುಗರ ಅನಿಸಿಕೆಯನ್ನು ಮುದ್ರಿಸಿದ್ದಾರೆ. ಲೇಖಕರಾದ ಗೋಪಾಲಕೃಷ್ಣ ಕುಂಟಿನಿಯವರು "ಇದು ಪ್ರೇಮ ಮತ್ತು ಯಾತನೆಯ ಕತೆ. ನೆಲದ ಮುಖದಿಂದ ಎದ್ದು ಬಂದ ಬದುಕುಗಳ ಕತೆ. ಈ ಪುಸ್ತಕ ಬೋಲ್ಡ್ ಮತ್ತು ಬ್ಯೂಟಿಫುಲ್!” ಎಂದಿದ್ದಾರೆ.

ಪತ್ರಕರ್ತ, ಲೇಖಕ ಜೋಗಿಯವರು ತಮ್ಮ ಅಭಿಪ್ರಾಯದಲ್ಲಿ ‘ಒಂದು ಗುಪ್ತ ಪ್ರೇಮ, ಮತ್ತೊಂದು ಭಗ್ನ ಪ್ರೇಮ, ಮುಗಿಯದ ಹುಡುಕಾಟ, ತೀವ್ರ ಹಂಬಲ, ಪ್ರಾಮಾಣಿಕತೆಯ ಬಲೂನು ಒಡೆಯುವ ಕ್ಷಣ, ಅನುಕಂಪದ ಅಕ್ಕರೆ, ಹತ್ತಾರು ವರ್ಷ ಹಿಂದಕ್ಕೆ ಜಿಗಿಯಲೆತ್ನಿಸುವ ರಾಗೋದ್ರೇಕ, ವರ್ತಮಾನದಿಂದ ಪಾರಾಗಲು ಪ್ರೇಮದ ಮೊರೆಹೋಗುವ ಜೀವ-ಹೀಗೆ ಈ ಕಾದಂಬರಿಯಲ್ಲಿ ಏನೆಲ್ಲ ಇದೆ. ಪರಸ್ಪರ ಸಂಬಂಧವಿಲ್ಲದ ಸಂಗತಿಗಳನ್ನು ಪೂರ್ಣಿಮಾ ಅತ್ಯಪೂರ್ವ ವಿನ್ಯಾಸದಲ್ಲಿ ಜೋಡಿಸಿದ್ದಾರೆ. ಇದೊಂದು ಕೊಲಾಜ್ ಮಾದರಿಯ ಕೃತಿ. ಹತ್ತಾರು ಪ್ರಸಂಗಗಳು ಒಟ್ಟಾಗಿ ನಮ್ಮಲ್ಲಿ ಹುಟ್ಟಿಸುವ ಭಾವದಂತೆ ಈ ಕೃತಿ ನಮ್ಮನ್ನು ಅವಾಕ್ಕಾಗಿಸುತ್ತದೆ. ಎಂದಿದ್ದಾರೆ. 

ಅರ್ಪಣ ಎಚ್ ಎಸ್. ಎಂಬವರ ಅನಿಸಿಕೆಯಲ್ಲಿ “ಈ ಕಾದಂಬರಿ ಕನ್ನಡದಲ್ಲಿ ಹೆಚ್ಚು ಎಕ್ಸ್ ಪ್ಲೋರ್ ಮಾಡಿಲ್ಲದ ವಿಷಯವನ್ನು ಕುತೂಹಲಕಾರಿಯಾಗಿ, ವಿಭಿನ್ನ ಶೈಲಿಯಲ್ಲಿ ನಿರೂಪಿಸುತ್ತದೆ. ಪ್ರಸ್ತುತ ಆಧುನಿಕ ಲೋಕ, ಜನರು, ಜೀವನಶೈಲಿ, ಬದಲಾಗಿರುವ ಮೌಲ್ಯಗಳು, ಆಕಾಂಕ್ಷೆಗಳು, ಗುರಿಗಳು ಇವೆಲ್ಲವನ್ನು ಕಟ್ಟಿಕೊಡುವ ಕೃತಿಗಳು ಹೆಚ್ಚಿಲ್ಲ ಎಂಬ ಕೊರತೆಯನ್ನು ಇದು ನೀಗಿಸುತ್ತದೆ. ಪೂರ್ಣಿಮಾ ಬರವಣಿಗೆಯಲ್ಲಿ ಹೊಸದೇನನ್ನೋ ಪ್ರಯತ್ನಿಸುವ ಸಾಹಸ ಮಾಡುತ್ತಲೇ ಇದ್ದಾರೆ. ಇದೇ ಕಾರಣಕ್ಕೆ ಕುತೂಹಲ ಮೂಡಿಸುವ ಲೇಖಕಿ" ಎಂದಿದ್ದಾರೆ.

ಪ್ರಶಾಂತ್ ಭಟ್ ಅವರ ಪ್ರಕಾರ “ಈ ಕಾದಂಬರಿಯು ಕನ್ನಡ ಸಾಹಿತ್ಯವು ಇದುವರೆಗೆ ಚಿಪ್ಪೊಳಗೆ ಅಡಗಿಸಿಕೊಂಡು ಒಳಬಿಟ್ಟುಕೊಳ್ಳದ ಹೊಸ ತಲೆಮಾರಿನ ಗೊಂದಲಗಳನ್ನು ಸಮರ್ಥವಾಗಿ ಹೇಳಿದೆ. ಕ್ಷಣ ಕ್ಷಣಕ್ಕೂ ಬದಲಾಗುವ ಸಂಬಂಧಗಳ ವ್ಯಾಖ್ಯಾನವನ್ನು, ಅದರ ತವಕ ತಲ್ಲಣಗಳನ್ನು ಹೇಳಬಲ್ಲ ಇಂಥ ಒಂದು ಗಟ್ಟಿ ದನಿ ಬೇಕಿತ್ತು. ಇಲ್ಲಿರುವ ಪಾತ್ರಗಳು ಆ ಕೆಲಸವನ್ನು ಮಾಡಿವೆ. ಆ ನಿಟ್ಟಿನಲ್ಲಿ ಇದು ಸ್ತುತ್ಯಾರ್ಹ ಪ್ರಯತ್ನ. ಪಾತ್ರಗಳ ಒಳತೋಟಿ ನಮ್ಮದೂ ಆಗುವುದು ಕೃತಿಯ ಯಶಸ್ಸು.” 

ಈ ನಾಲ್ಕು ಅಭಿಪ್ರಾಯಗಳನ್ನು ಓದಿದ ಮೇಲೆ ಕಾದಂಬರಿಯನ್ನು ಓದಲೇ ಬೇಕೆಂಬ ತುಡಿತ ನಿಮ್ಮಲ್ಲಿ ಮೂಡಿದರೆ ಆಶ್ಚರ್ಯವೇನಿಲ್ಲ.  ಆ ನಿಟ್ಟಿನಲ್ಲಿ ಲೇಖಕಿ ಪೂರ್ಣಿಮಾ ಮಾಳಗಿಮನಿ ಅವರ ಪ್ರಯತ್ನ ಸ್ವಾಗತಾರ್ಹ.