ಪ್ರೀತಿ ಸಂಕ್ರಾಂತಿ

ಪ್ರೀತಿ ಸಂಕ್ರಾಂತಿ

ಬರಹ

ಪ್ರೀತಿ ಸಂಕ್ರಾಂತಿ

ಆಯನಾಯನಗಳಾಚೆ
ಮನಸು ಹಾರಿದೆ ಇಂದು
ದೂರ ದೃಷ್ಟಿಯಲೊಂದು
ಹೊಸತು ಕ್ರಾಂತಿ,
ಆ ನಯನಗಳಾಚೆ
ಕನಸು ಸರಿದಿದೆ ಇಂದು
ಮನದ ಸೃಷ್ಟಿಯೊಳಿಂದು
ಪ್ರೀತಿ ಸಂಕ್ರಾಂತಿ.

ಶ್ರಾವಣದ ಅಂಗಳದಿ
ಕೋಗಿಲೆಯ ಕರೆತಂದು
ಚೈತ್ರದನುರಣನೆಯನು
ಆಶಿಸುವ ಪ್ರೀತಿ,
ಬಾಡಿರುವ ಹೂವೊಂದು
ಭ್ರಾಮರದ ಜೊತೆ ನಿಂದು
ಮತ್ತೆ ಅರಳುವ ಬಯಕೆ
ತಂದಂಥ ಪ್ರಿತಿ.

ಬೆಳಕಿನಾಚಿನ ಇರುಳ
ಹಗಲ ಮಡಿಲೊಳಗಿಕ್ಕಿ
ಬೆಳಕನಿನ್ನೂ ಮುಂದೆ
ಹರಡಿಸುವ ಪ್ರೀತಿ,
ನಾಳೆ ನಾಳೆಯ ನಡುವೆ
ನಿನ್ನೆಯನು ತಂದಿಕ್ಕಿ
ಮಧುರ ನೆನೆಪಲಿ ಮನವ
ಮೀಯಿಸುವ ಪ್ರೀತಿ.

ಚಾಂಚಲ್ಯ ಚಿತ್ತದಲಿ
ತಹತಹಿತ ಅಲೆ ತರಿಸಿ
ಭ್ರಮನಿರಸ ತುಡಿತವನು
ಉಕ್ಕಿಸುವ ಪ್ರೀತಿ,
ಕಣ್ಗಳಿಗೆ ಇರುಳಾಗಿ
ವಾಸ್ತವದೊಳುರುಳಾಗಿ
ಅರುಳು - ಮರುಳಾಗಿಸುವ
ಹುಡುಗಾಟ ಪ್ರೀತಿ.

ನಗುತಿರುವ ಅಳುವಾಗಿ
ಅಳುವಿನೊಳು ನಗುವಾಗಿ
ಅಳುತಳುತ ಮಗುವಂತೆ
ನಗುವಂಥ ಪ್ರೀತಿ,
ಉತ್ತರದ ಉಡಿಯೊಳಗೆ
ಮತ್ತೆ ಪ್ರಶ್ನೆಯನಿರಿಸಿ
ಮರಳಿ ಪ್ರಶ್ನೆಯ ಪಡೆವ
ಹೊಸ ಕ್ರಾಂತಿ ಪ್ರೀತಿ.

ದಿಶಾಂತಯಾತ್ರಿ

- ‘ಹೊಸ ಬಯಕೆ ಬಯಸುವ ಹೃದಯದ, ಹೊಸ ಕನಸ ಹೊಸೆವ ಕಣ್ಗಳ, ಮೌನ ಮುರಿಯದ ಮನಸುಗಳ..... ಹೊಸತು ನೋಟ.’