ಪ್ರೀತ್ಯರ್ಥ

ಪ್ರೀತ್ಯರ್ಥ

ಕೆಲವೊಮ್ಮೆ ನಮಗಿಷ್ಟವಿಲ್ಲದ ಅಥವಾ ನಮಗೆ ವಿಶ್ವಾಸವಿಲ್ಲದ ಕೆಲಸಗಳನ್ನು ಇನ್ನೊಬ್ಬರ ಪ್ರೀತ್ಯರ್ಥ ಮಾಡಬೇಕಾಗುತ್ತದೆ. ದೇವರು, ದೇವಸ್ಥಾನ, ಪೂಜೆ, ಇತ್ಯಾದಿಗಳಲ್ಲಿ ನಂಬಿಕೆಯಿಲ್ಲದಿರುವವರು ಈ ರೀತಿಯ ಪ್ರಸಂಗಗಳಿಗೆ ಒಳಗಾಗುತ್ತಾರೆ. ಇಂಥವರು ತಮ್ಮ ಆತ್ಮೀಯರು, ಮುಖ್ಯವಾಗಿ ಮಕ್ಕಳು, ಆಕಸ್ಮಿಕ/ಅಪಘಾತಕ್ಕೊಳಗಾಗಿ ಅತ್ಯಂತ ದಾರುಣ ಪರಿಸ್ಥಿತಿಯಲ್ಲಿರುವಾಗ ಹರಕೆ-ಬೇಡಿಕೆಗಳನ್ನು ಮಾಡಿಕೊಂಡು ಸೇವೆಸಲ್ಲಿರುವದನ್ನು ನಾವು ನೋಡಿರುತ್ತೇವೆ. ತಮ್ಮದೇ ಆದರ್ಶ-ದರ್ಶನಗಳಿಗೆ ಕಟ್ಟುಬಿದ್ದುಕೊಂಡಿರುವ ಸಂದರ್ಭದಲ್ಲಿ ಇನ್ನೊಬ್ಬರನ್ನು ಸಂತೋಷಪಡಿಸಲು ಈ ಕಾರ್ಯಗಳನ್ನು ಮಾಡುವಾಗ ಮೊದಲಿಗೆ ಮುಜುಗರ, ಕಿರಿಕಿರಿಯಾದರೂ, ಬಳಿಕ ನಿಧಾನವಾಗಿ ಯೋಚಿಸಿದಾಗ ಒಂದು ಕೆಲಸವನ್ನು ಸಂಪೂರ್ಣಗೊಳಿಸಿದಾಗ ಸಿಗುವ ತೃಪ್ತಿಯ ಅನುಭವವಾಗುತ್ತದೆ. ಈ ರೀತಿಯ ಪರಿಸ್ಥಿತಿಯ ಒಂದು ಲಘು ಅನುಭವ ಇಲ್ಲಿದೆ. *** ಊರಿಗೆ ಹೋಗಿ, ಹಿಂತಿರುಗಿ ಬರುವಾಗಲೆಲ್ಲಾ ಪದ್ಧತಿಯಂತೆ ತಾಯ್ತಂದೆಯರ ಕಾಲ್ಮುಟ್ಟಿ ನಮಸ್ಕರಿಸಿ ಹೊರಡುವದು ವಾಡಿಕೆ. ಪ್ರತಿ ಬಾರಿಯೂ ತಾಯಿ, "ಒಳಗೆ ದೇವರಿಗೆ ನಮಸ್ಕಾರ ಮಾಡಿದ್ಯೇನಪ್ಪಾ?" ಎಂದು ಕೇಳುವದೂ, ನಾನು, "ಹೂಂ, ಅವ್ವಯ್ಯಾ" ಎಂದು ಹೇಳುವದೂ ಸಂಪ್ರದಾಯದಂತಾಗಿಬಿಟ್ಟಿತ್ತು. ನನಗೋ ದೇವರಲ್ಲಿ ಅಂಥಾ ಭಕ್ತಿಯೇನೂ ಇರಲಿಲ್ಲ. ‘ದೇವರಿದ್ದಾನಾ? ಇರಲಿ ಬಿಡು. ಅವನ ಪಾಡಿಗೆ ಅವನಿರಲಿ; ನನ್ನ ಪಾಡಿಗೆ ನಾನಿರ್ತೇನೆ. ನನಗೆ ಅದು ಕೊಡಯ್ಯಾ, ನನಗೆ ಇದು ಮಾಡಯ್ಯಾ, ಅಂತ ನಾನೇನೂ ಅವನನ್ನ ಗೋಳು ಹುಯ್ದುಕೊಳ್ಳೂದಿಲ್ಲ’ ಅಂತ ನನ್ನ ಹೇಳಿಕೆ. ದೇವರಿಗೆ ಅಡ್ಡ ಬಿದ್ದು ನಮಸ್ಕರಿಸುತ್ತಿರಲಿಲ್ಲ. ತಾಯಿ ಕೇಳುವದಕ್ಕೆ, ಸುಮ್ಮನೇ ಸುಳ್ಳುಸುಳ್ಳೇ ಹೂಙ್ಗುಟ್ಟುತ್ತಿದ್ದೆ. ಇದನ್ನು ಊಹಿಸಿದ ತಾಯಿ, "ಹೋಗು, ಒಳಗ್ ಹೋಗಿ ನಮಸ್ಕಾರ ಮಾಡಿ ಬಾ" ಎಂದು ಗದರುವಂತೆ ಹೇಳಿ ಒಳಗೆ ಕಳುಹಿಸುತ್ತಿದ್ದರು. ನಾನು ದೇವರ ಕೋಣೆಗೆ ನುಗ್ಗಿ, ಎರಡು ನಿಮಿಷ ಸುಮ್ಮನೆ ನಿಂತಿದ್ದು, ಮತ್ತೆ ಹೊರಬರುತ್ತಿದ್ದೆ. ಒಮ್ಮೆ ಹೀಗೆಯೇ ತಾಯಿ, "ಒಳಗೆ ದೇವರಿಗೆ ನಮಸ್ಕಾರ ಮಾಡಿದ್ಯೇನಪ್ಪಾ?" ಎಂದು ಕೇಳಿದ್ದಕ್ಕೆ ಎಂದಿನ ಸುಳ್ಳು ಹೇಳಿದೆ: "ಹೂಂ, ಅವ್ವಯ್ಯಾ" ಎಂದು. "ನಿನಗೆ ನಮಸ್ಕಾರ ಮಾಡಿದ್ ಮೇಲೆ ದೇವರಿಗೆ ಮಾಡಿದ್ ಹಾಗೇನೇ ಬಿಡವ್ವಯ್ಯಾ", ಎಂದು ನಕ್ಕೆ. ತಾಯಿ, "ಅಲ್ಲಾ ಮಗೂ! ನೀನು ಅಷ್ಟು ದೂರ ಪ್ರಯಾಣ ಮಾಡ್ತಾ ಇದ್ದೀಯಾ. ನೀನು ಹೋಗೀ ನಿನ್ನ ಮನೆ ತಲುಪವಾಗ ರಾತ್ರಿಯಾಗಿರುತ್ತದೆ. ಆಮೇಲೆ ನಾಳೆ ನಿನ್ನ ಆಫೀಸೂ, ಕೆಲಸಾಂತ ಆಗಿ, ನಾಳೆ ಸಾಯಂಕಾಲಾನೋ, ನಾಡಿದ್ದೋ ನಮಗೆ ಪತ್ರ ಬರೆದೂ, ಅದನ್ನು ಪೋಸ್ಟ್ ಮಾಡೀ, ಅದು ನಮಗೆ ತಲುಪುವಾಗ ಒಂದ್ ವಾರಾನೆ ಆಗುತ್ತದೆ. ಅಲ್ಲೀವರೆಗೆ ನಿನ್ನ ಸ್ಥಿತಿ-ಗತಿ ಏನೂ ಗೊತ್ತಾಗೂದಿಲ್ಲ... ಹಾಳು ಮನಸ್ಸೋ ಕೆಟ್ಟದ್ದನ್ನೇ ಯೋಚಿಸುತ್ತಿರುತ್ತದೆ. ಪೇಪರ್, ರೇಡಿಯೊ ವಾರ್ತೆಗಳಲ್ಲಿ ಅಂಥವೇ ಇರುತ್ತವೆ... ನೀನು ಸುಮ್ಮಗೆ ದೇವರ ಕೋಣೆಗೆ ಹೋಗಿ ಕೈಮುಗಿದು ನಿಂತುಕೋ. ನಾನು ಬೇಡಿಕೊಳ್ತೇನೆ, ‘ನನ್ನ ಮಗನ್ನ ಕ್ಷೇಮವಾಗಿ ನೋಡಿಕೊಳ್ಳಪ್ಪಾ’ ಅಂತ... ಅಷ್ಟೂ ಮಾಡೂದಕ್ಕಾಗಲ್ವೇನಪ್ಪಾ, ನಿನ್ ಕೈಲಿ?" ಎಂದರು. ಆ ದಿನಗಳಲ್ಲಿ ಮೊಬೈಲ್ ಫೋನಿರಲಿ; ಎಸ್ ಟಿ ಡಿ ಅನುಕೂಲತೆಯೂ ಇರಲಿಲ್ಲ. ಏನಿದ್ದರೂ ಟ್ರಂಕ್ ಕಾಲ್ ಮಾಡಬೇಕಿತ್ತು. ಮನೆಯಲ್ಲಿ ಫೋನಿಟ್ಟಿದ್ದರೆ ಆದು ಶ್ರೀಮಂತಿಕೆಯ ಒಂದು ಗುರುತಾಗಿತ್ತು! ತಾಯಿಯ ಕಳವಳದ ಪ್ರಶ್ನೆ ಕೇಳಿ ನನ್ನ ಬಗ್ಗೆ ನನಗೇ ತೀರಾ ಬೇಸರವಾಯಿತು. ಮಾತಾಡದೆ ಒಳಕ್ಕೆ ದೇವರ ಕೋಣೆಗೆ ಹೋಗಿ ತಾಯ್ತಂದೆಯರಿಗೆ ನಮಸ್ಕರಿಸುವಾಗ ಇರುವ ಭಾವದಿಂದ ತೂಗುದೀಪವನ್ನು ಮುಟ್ಟಿ ನಮಸ್ಕರಿಸಿದೆ.

Comments