ಪ್ರೇತ ಮದುವೆ ಗೊತ್ತಾ?

ಪ್ರೇತ ಮದುವೆ ಗೊತ್ತಾ?

ಬರಹ

ಈ ಬಾರಿ ಊರಿಗೆ ಹೋಗಿದ್ದಾಗ ಅಮ್ಮ ಏನೋ ಪ್ರೇತಗಳ ಬಗ್ಗೆ ಹೇಳ್ತಾನೆ ಇದ್ರು..ಪ್ರೇತ ಭೂತ ಏನೂ ಇಲ್ಲ ಎಂದು ಅಪ್ಪ ವಾದಿಸಿದರೂ ಅಮ್ಮನ ಪ್ರೇತ ಪಾರಾಯಣ ಮುಂದುವರಿಯುತ್ತಲೇ ಇತ್ತು. ಹೀಗೆ ಮಾತನಾಡುತ್ತಿರುವಾಗ "ಪ್ರೇತಮದುವೆಯ" ವಿಷಯವೂ ಅಮ್ಮನ ಬಾಯಿಂದ ಬಿತ್ತು. ಮದುವೆಯಾಗದೇ ಯಾರಾದರೂ ಸಾವನ್ನಪ್ಪಿದರೆ ಅವರು ಪ್ರೇತಗಳಾದ ನಂತರ ಮದುವೆ ಮಾಡಿ ಬಿಡ್ತಾರಂತೆ. ಹೀಗೆ ಹೇಳುವಾಗಲೇ ನೆನಪದಾದ್ದು..,ನಮ್ಮೂರಿನಲ್ಲಿ ಒಬ್ಬಳು ಓರ್ವನನ್ನು ಪ್ರೀತಿಸಿದ್ದು, ನಂತರ ಮದುವೆಗೆ ಮನೆಯವರು ಒಪ್ಪದ ಕಾರಣ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿದ್ದಳು. ಒಂದು ತಿಂಗಳು ಕಳೆದ ನಂತರ ಅದೇ ಹುಡುಗ ಅಪಘಾತವೊಂದರಲ್ಲಿ ಸತ್ತು ಹೋದ. ಇದಾಗಿ ತಿಂಗಳು ಎರಡು ಕಳೆದ ನಂತರ ಅದೇ ಹುಡುಗ- ಹುಡುಗಿಗೆ ಮದುವೆಯಂತೆ! ಅಂದ್ರೆ "ಪ್ರೇತ ಮದುವೆ". ಈ ವಿಷಯ ಅಮ್ಮ ಹೇಳ್ತಾ ಇರುವಾಗ ನಾನಂದೆ "ಈ ಮೊದಲೇ ಅವರ ಮದುವೆಗೆ ಸಮ್ಮತಿ ಸೂಚಿಸಿದ್ದರೆ ಪಾಪ ಆ ಹುಡುಗಿಯ ಜೀವ ಉಳಿಯುತ್ತಿತ್ತು .ಇದೀಗ ಅವರಿಬ್ಬರೂ ಸತ್ತ ನಂತರ ಮದುವೆ ಮಾಡಿ ಏನು ಪ್ರಯೋಜನ? "

"ಅವಳ ಪ್ರೇತವೇ ಅವನಿಗೆ ಆಕ್ಸಿಡೆಂಟ್ ಮಾಡಿಸಿತಂತೆ. ಹಾಗೆ ಅವರಿಬ್ಬರೂ ಸ್ವರ್ಗದಲ್ಲಿ ಒಂದಾದರು" ಎಂಬ ಅಮ್ಮನ ಉತ್ತರ. ಎಂತಹಾ ಲವ್‌ಸ್ಟೋರಿ! ಇದೀಗ ಅವರ ಪ್ರೇತ ಮದುವೆ..ಅದರ ಬಗ್ಗೆ ಅಮ್ಮ ಹೇಳಿದ ಒಂದಿಷ್ಟು ಮಾಹಿತಿ ತುಂಬಾ ಆಸಕ್ತಿಕರವಾಗಿತ್ತು. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳೋಣ ಅಂತ ಈ ಲೇಖನ ಬರೆದೆ.

ಸದ್ಯ ಪ್ರೇತ ಮದುವೆಯಂತೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (ತುಳುವರಲ್ಲಿ) ಕಂಡುಬರುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಲೆ ಗ್ರಾಮಗಳಲ್ಲಿ ಒಂದೊಂದು ರೀತಿಯಲ್ಲಿ ಇಂತಹ ಪ್ರೇತಮದುವೆ ಮಾಡ್ತಾರಂತೆ. ನಮ್ಮೂರು ಕಾಸರಗೋಡು ಆದ ಕಾರಣ ಈ ಮದುವೆಯಲ್ಲಿ "ಕೇರಳೀಯತೆ" ಸಮ್ಮಿಶ್ರವಾಗಿದೆ. ಆದುದರಿಂದಲೇ ಕಾಸರಗೋಡಿನ ಪ್ರೇತ ಮದುವೆ ಸ್ವಲ್ಪ ಬೇರೇಯೇ ಎಂದು ಅಮ್ಮ ಹೇಳಿದರು.

ನಮ್ಮಲ್ಲಿ ಸಾಮಾನ್ಯವಾಗಿ ಮದುವೆ ನಡೆಯುವಂತೆಯೇ ಮೊದಲು ಈ ಪ್ರೇತಗಳಿಗ ವಧು(ಪ್ರೇತ)ಪರೀಕ್ಷೆ ನಡೆಯುತ್ತದೆ. ಈ ಮೊದಲು ಯಾರಾದರೂ ಅವಿವಾಹಿತರು ಸಾವನ್ನಪ್ಪಿದ್ದರೆ ಅಂತಹ ಪ್ರೇತಗಳಿಗಾಗಿ "ಪ್ರೇತಾನ್ವೇಷಣೆ" ನಡೆಯುತ್ತದೆ. ಸೂಕ್ತ ಗಂಡು ಅಥವಾ ಹೆಣ್ಣು ಪ್ರೇತ ದೊರೆತಲ್ಲಿ ನಿಶ್ಚಿತಾರ್ಥ ನೆರವೇರುವುದು. ಪ್ರೇತಗಳ ಗೋತೃ (ತುಳುವಿನಲ್ಲಿ "ಬರಿ") ಒಂದೇ ಆಗಿರಬಾರದು. ಅದರಂತೆಯೇ ವಯಸ್ಸೂ ಮುಖ್ಯ. ಹೀಗೆ ಹೆಣ್ಣು ಗಂಡಿನ ಕಡೆಯವರಿಗೆ ಸಂಬಂಧ ಸೂಕ್ತವೆನಿಸಿದರೆ ಹೆಣ್ಣಿನ ಮನೆಯಲ್ಲಿ ನಿಶ್ಚಿತಾರ್ಥ ಸಮಾರಂಭ. ಈ ಸಮಾರಂಭದಲ್ಲಿ ಗಂಡಿನ ಕಡೆಯವರು ಹೆಣ್ಣಿನ ಮನೆಗೆ ಭೇಟಿ ನೀಡುತ್ತಾರೆ. ನಿಶ್ಚಿತಾರ್ಥ ಮುಹೂರ್ತದಲ್ಲಿ ಸಾಮಾನ್ಯವೆಂಬಂತೆ ಎಲೆ ಅಡಿಕೆ ಹಂಚುವುದು ವಾಡಿಕೆ. ಇಲ್ಲಿ ಹಿರಿಯರನ್ನು ಆದರದಿಂದ ಸ್ವಾಗತಿಸಿ ಹೊಸ ಚಾಪೆಯಲ್ಲಿ ಕುಳ್ಳಿರಿಸಲಾಗುತ್ತದೆ. ಈ ಚಾಪೆಯನ್ನು ಉತ್ತರ ದಕ್ಷಿಣವಾಗಿ ಹಾಕಬೇಕು ಎಂಬುದು ಕಡ್ಡಾಯ. ನಂತರ ಹೆಣ್ಣು-ಗಂಡು ಕಡೆಯವರಿಂದ ಮಾತುಕತೆ ನಡೆಯುತ್ತದೆ. ಮಾತುಕತೆ ನಡೆದ ನಂತರ ಎರಡೂ ಕಡೆವರು ಪರಸ್ಪರ ಎಲೆ ಅಡಿಕೆ(ವೀಳ್ಯದೆಲೆ- ಅಡಿಕೆ) ಬದಲಾಯಿಸುತ್ತಾರೆ. ಇಲ್ಲಿ ಅರ್ಧ ವೀಳ್ಯದೆಲೆ, ತಿರುಳು ತೆಗೆಯದ ಅಡಿಕೆಯ ಅರ್ಧ ಭಾಗವನ್ನು ಹಸ್ತಾಂತರಿಸಲಾಗುತ್ತದೆ. ಹೀಗೆ ನಿಶ್ಚಿತಾರ್ಥದಂದು ಮದುವೆ ದಿನ ನಿಗದಿಪಡಿಸಿ ನೆರೆದವರಿಗೆಲ್ಲ ಭೋಜನ ಕೂಟವಿರುತ್ತದೆ.

ಇನ್ನು ಮುಂದೆ ಮದುವೆ..ಈ ಮದುವೆಯು ಹೆಚ್ಚಾಗಿ ವಧೂಗೃಹದಲ್ಲಿ ನಡೆಯುತ್ತದೆ. ವರನ ದಿಬ್ಬಣವು ವಧೂಗೃಹಕ್ಕೆ ತಲುಪುತ್ತಿದ್ದಂತೆ ದಿಬ್ಬಣವನ್ನು ಆದರದಿಂದ ಬರಮಾಡಿಕೊಳ್ಳುತ್ತಾರೆ. ಒಂದು ಕೋಲನ್ನು ಶಿಲುಬೆಯಾಕಾರದಲ್ಲಿ ಮಾಡಿ ಅದಕ್ಕೆ ಹೊಸ ಬಟ್ಟೆಯನ್ನು ಸುತ್ತಲಾಗುತ್ತದೆ. ಆ ಕೋಲಿನ ಶಿರಭಾಗಕ್ಕೆ ಮುಂಡಾಸು ಇರಲೇ ಬೇಕು. ಹೀಗೆ ವರನ ಆಪ್ತ ಸಂಬಂಧಿಯೋರ್ವ ವರ(ಕೋಲಿಗೆ ಸುತ್ತಿದ ರೂಪ)ವನ್ನು ಹಿಡಿದುಕೊಂಡು ವಧೂಗೃಹಕ್ಕೆ ಪ್ರವೇಶಿಸುತ್ತಾನೆ. ವಧುವಿನ ಮನೆಯಲ್ಲಿ ವಧುವಿನ ಸಹೋದರನು ಆ ವ್ಯಕ್ತಿಯ ಕಾಲಿಗೆ ನೀರೆರೆದು ಬರಮಾಡಿಕೊಳ್ಳುತ್ತಾನೆ. ವರನ ದಿಬ್ಬಣವನ್ನು ಸ್ವಾಗತಿಸಿ ಬಾಯಾರಿಕೆ ನೀಡುತ್ತಾರೆ. ವರನ ಕಡೆಯವರು ವಧುವಿಗಾಗಿ ತಂದ ಸೀರೆ( ಒಂದು ಜರಿಸೀರೆಯ ತುಂಡು) ಬಳೆ, ಹೂ, ಶೃಂಗಾರ ಮೊದಲಾದವುಗಳನ್ನು ವಧುವಿಗೊಪ್ಪಿಸಿದ ನಂತರ ವರನ ಕಡೆಯಲ್ಲಿ ಬಂದಂತಹ ಸ್ತ್ರೀಯರು ವಧುವನ್ನು ಶೃಂಗರಿಸುತ್ತಾರೆ. ಇಲ್ಲಿಯೂ ಕೋಲಿಗೆ ಬಟ್ಟೆಯನ್ನು ಸುತ್ತಿ ವಧೂಶೃಂಗಾರ ಮಾಡಲಾಗುತ್ತದೆ. ಇದೆಲ್ಲಾ ಮುಗಿದ ನಂತರ ವಧೂ ವರರನ್ನು ಒಟ್ಟಿಗೆ ಕುಳ್ಳಿರಿಸಿ ಮದುವೆಯ ಕ್ರಮ ಕೈಗೊಳ್ಳಲಾಗುತ್ತದೆ ಅಂದ್ರೆ ಅವರಿಗೆ ‘ಆರತಕ್ಷತೆ’ ನಡೆಯುತ್ತದೆ. ಇಲ್ಲಿ ಹೆಚ್ಚಿಗೆಯೇನೂ ಕ್ರಮವಿರುವುದಿಲ್ಲ, ಹಿರಿಯರು ಇವರಿಬ್ಬರೂ ಒಟ್ಟಿಗೆ ಬಾಳಲಿ ಎಂಬುದಾಗಿ ಆಶೀರ್ವದಿಸಿ, ವಿವಾಹ ಘೋಷಣೆಯನ್ನು ನಡೆಸುತ್ತಾರೆ. ಇದೆಲ್ಲಾ ಮುಗಿದ ನಂತರ ವಧೂಗೃಹದಲ್ಲಿ ಭೋಜನ ಕೂಟ. ಮತ್ತೆ ವಧುವಿನ ಬೀಳ್ಕೊಡುಗೆ. ಹೀಗೆ ವರನು ವಧುವನ್ನು ತನ್ನ ಮನೆಗೆ ಕರೆದುಕೊಂಡು ಬರುತ್ತಾನೆ.

ವಧುವನ್ನು ವರನ ಮನೆಯಲ್ಲಿ ಸ್ವಾಗತಿಸುವಾಗ ಮುಟ್ಟಾಳೆ (ಹಾಳೆಯಿಂದ ಮಾಡಿದ ಟೋಪಿ), ಕುಡ್ತೆಯ ಒಳಗೆ ಕಲ್ಲು ಹಾಕಿ ಕುಟುಕುಟು ಶಬ್ದಮಾಡಿ ಕೂ ಕೂ ಎಂದು ಕೂಗುತ್ತಾ ನೆರೆದವರೆಲ್ಲ ವಧುವನ್ನು ಸ್ವಾಗತಿಸುತ್ತಾರೆ. ವರನ ಗೃಹಕ್ಕೆ ಕಾಲಿರಿಸಿದ ವಧುವನ್ನು ಆದರಿಸಿದ ನಂತರ ಇಲ್ಲಿರುವ ಆಪ್ತ ಬಂಧುಗಳು ಮಾತ್ರನವದಂಪತಿಗಳನ್ನು ಆಶೀರ್ವದಿಸುತ್ತಾರೆ. ಇದು ಮುಗಿದ ನಂತರ ನಡುಕೋಣೆಯಲ್ಲಿ 7 ಅಥವಾ 11 ಬಾಳೆಲೆ ತುಂಡುಗಳನ್ನು ಹಾಕಿ ಭೋಜನವನ್ನು ಬಡಿಸುತ್ತಾರೆ. ನಂತರ ಆ ಕೋಣೆಗೆ ಸುಮಾರು ಹತ್ತು ನಿಮಿಷಗಳ ಕಾಲ ಯಾರೂ ಪ್ರವೇಶಿಸುವುದಿಲ್ಲ. ಅಲ್ಲಿ ಈ ಪ್ರೇತಗಳು ಬಂದು ಭೋಜನ ಸ್ವೀಕರಿಸುತ್ತವಂತೆ!. ವಧೂ ವರರ ಭೋಜನವಾದ ನಂತರ ನೆರೆದವರಿಗೆ ಸತ್ಕಾರವೇರ್ಪಡಿಸಲಾಗುತ್ತದೆ. ಈ ಕಾರ್ಯಕ್ರಮ ಮುಗಿದ ನಂತರ ನವದಂಪತಿಗಳನ್ನು ಹಿತ್ತಿಲಿನಲ್ಲಿರುವ ಕಾಸರಕನ ಮರದ ಬುಡದಲ್ಲಿಯೋ ಅಥವಾ ಹಲಸಿನ ಮರದ ಬುಡದಲ್ಲಿಯೋ ಇರಿಸಿ, ಕುಟುಂಬದವರು ಮನೆಗೆ ಮರಳುತ್ತಾರೆ. ಈ ಮರದ ಬುಡದಲ್ಲಿ ನಂತರ ಪ್ರೇತಾತ್ಮಗಳು ಸಂಸಾರ ಹೂಡುತ್ತವೆ ಎಂಬ ನಂಬಿಕೆ ಜನರಲ್ಲಿ ನೆಲೆವೂರಿದೆ. ಅದರಂತೆಯೇ ಆಯಾ ಪ್ರದೇಶ(ಗ್ರಾಮ)ಗಳಿಗೆ ಸಂಬಂಧಿಸಿದಂತೆ ಈ ಮದುವೆಯು ಮಧ್ಯಾಹ್ನ ಅಥವಾ ರಾತ್ರಿ ಕಾಲದಲ್ಲಿ ನೆರವೇರುತ್ತದೆ.

"ಪ್ರೇತ ಮದುವೆ" ತುಂಬಾ ಆಸಕ್ತಿಕರವಾಗಿಲ್ಲವೇ? ಅಂತೂ ಮದುವೆಯ ಬಗ್ಗೆ ಕೇಳಿದ್ದೇನೆ ಹೊರತು ನೋಡಿಲ್ಲ. ಇಂತಿಷ್ಟು ನನಗೆ ಗೊತ್ತಿರುವ ವಿಷಯಗಳು. ಇದರ ಬಗ್ಗೆ ನಿಮಗೆ ಇನ್ನಷ್ಟು ತಿಳಿದಿದ್ದರೆ ದಯವಿಟ್ಟು ನನಗೆ ತಿಳಿಸಿ.