ಪ್ರೇಮದ ಕಡಲು

ಈ ಪ್ರಪಂಚವು ಪ್ರೇಮದ ಮೇಲೆಯೇ ನಿಂತಿದೆ. ಮತ್ತೆ ನಾವು ನೀವೆಲ್ಲ ಪ್ರೇಮವನ್ನೆ ಬಲವಾಗಿ ತಬ್ಬಿ ಬದುಕುತ್ತಿದ್ದೇವೆ. ಪ್ರೇಮವೆಂದರೆ ಮೊಗೆದಷ್ಟೂ ಮುಗಿಯದ ಭರವಸೆ, ಹಾಗೆಯೇ ಸೂರ್ಯ, ಚಂದ್ರ ಇರುವವರೆಗೂ ವಿಶ್ವವನ್ನೆ ವ್ಯಾಪಿಸಿರುವ ಮೌಲ್ಯಯುತ ಸಾಧನ, ಇಂದಿಗೂ ಎಲ್ಲರಿಂದಲೂ ಬೊಗಸೆ ತುಂಬ ಪ್ರಾಂಜಲ ಪ್ರೀತಿಯನ್ನು ಅಪೇಕ್ಷಿಸಿ ಬದುಕು ನೂಕುತ್ತಿದ್ದೇವೆ. ಈ ಪ್ರೀತಿ ಪ್ರೇಮದ ಆಳ ಅಗಲವನ್ನು ಹುಡುಕುವುದು ಸುಲಭದ ಕೆಲಸವಲ್ಲ, ಹುಡುಕಲೂ ಹೋಗಬಾರದು. ಸಾಗರದಷ್ಟು ಆಳ, ಆಕಾಶದಷ್ಟು ವಿಶಾಲವಾದದ್ದೇ ಈ ಪ್ರೇಮ. ನಮ್ಮ ಫಲವತ್ತಾದ ಬದುಕೆನ್ನುವ ಹೊಲದಲ್ಲಿ ದೇಷವನ್ನು ಬಿತ್ತಿದರೆ ದ್ವೇಷವೇ ಬೆಳೆಯುತ್ತದೆ, ಭಯದ ಬೀಜವನ್ನು ಬಿತ್ತಿದರೆ ಭಯವೇ ಹುಟ್ಟುತ್ತದೆ. ಇದೇ ರೀತಿಯಲ್ಲಿ ಪ್ರೀತಿಯ ಉತ್ಪನ್ನ ಪ್ರೀತಿಯೇ ಆಗಿದೆ. ಇಲ್ಲಿ ಪ್ರೀತಿಯನ್ನು ಬಿತ್ತಿ, ಪ್ರೀತಿಯನ್ನೆ ಬೆಳೆಯೋಣ. ನಮ್ಮ ಬದುಕಿನ ಬಹುದೊಡ್ಡ ಆಸ್ತಿಯೆಂದರೆ ಅದು ಪ್ರೀತಿಯೇ. ಪ್ರಪಂಚದ ಧರ್ಮಗ್ರಂಥಗಳು ಬೋಧಿಸುವುದು ಎಲ್ಲವನ್ನೂ, ಎಲ್ಲರನ್ನೂ ಪ್ರೀತಿಸುವ ಮನಸ್ಥಿತಿ ಹೊಂದಿ, ಪ್ರೀತಿಯಿಂದಲೇ ಬಾಳಿ ಬದುಕೋಣ ಎನ್ನುವ ಸಂದೇಶವನ್ನು. ಪ್ರೀತಿ, ಪ್ರೇಮವಿಲ್ಲದ ಬದುಕು ನಿಜಕ್ಕೂ ಕಸವಿದ್ದಂತೆ, ಜೀವಂತ ಶವವಿದ್ದಂತೆ. ಇಳೆಗೆ ಮಳೆಯು, ಕಡಲಿಗೆ ನದಿಯು, ಹೂವಿಗೆ ದುಂಬಿಯು, ಓಡುವ ಮೇಘಗಳು, ಮೂಡುವ ಕಾಮನಬಿಲ್ಲು, ಗರಿಬಿಚ್ಚುವ ನವಿಲು ಇವೆಲ್ಲವುಗಳಲ್ಲಿ ಒಂದಕ್ಕೊಂದರ ನಡುವೆ ಬಿಟ್ಟಿರಲಾಗದ ವಿಪರೀತ ಪ್ರೇಮ ಇರುವುದರಿಂದಲೇ ಇಂತಹ ಕೆಲಸಗಳು ನಿತ್ಯ ನಿರಂತರ ಸಾಧ್ಯ. ಸಮಸ್ತ ಜೀವಸಂಕುಲ ನಿಂತಿರುವುದೇ ಪ್ರೇಮದ ಕಡಲಿನಲಿ ತೇಲುವ ಧರಣಿ ಎನ್ನುವ ದೋಣಿಯ ಮೇಲೆ. ಈ ಪ್ರೇಮ ಅನ್ನೋ ಕಲ್ಪನೆಗೆ ಈಗಿನ ವಿಚಾರಗಳಿಗೂ, ಹಿಂದಿನ ವಿಚಾರಗಳಿಗೂ ಅಜಗಜಾಂತರ ವ್ಯತ್ಯಾಸವಿದೆ.
ಇಂದು ಪ್ರೇಮದ ಮಧ್ಯ ಕಾಮ ಬಂದು ಪರಿಶುದ್ಧ ಪ್ರೇಮದ ಹಾಲು ಕಲುಷಿತಗೊಂಡಿದೆ. ಪ್ರೇಮಕ್ಕೆ, ಕಾಮಕ್ಕೆ ಭೂಮಿ, ಆಕಾಶದಷ್ಟು ಅಂತರವಿದೆ. ಪವಿತ್ರವಾದ ಪ್ರೇಮಕ್ಕೆ ಕಾಮದ ಕಿರುಬೆರಳು ಕೂಡಾ ತಾಕದಂತೆ ನೋಡಿಕೊಳ್ಳುವ ಗುರುತರ ಹೊಣೆ ನಮ್ಮದಾಗಬೇಕು. ಮನುಷ್ಯ ಮನುಷ್ಯರೆಲ್ಲ ಒಂದೆಡೆ ಸೇರಿ ತಮ್ಮೊಳಗಿನ ಎಲ್ಲ ಅಹಂ, ಹಮ್ಮು, ಬಿಮ್ಮು, ಹಗೆತನವನ್ನು ಕಿತ್ತೆಸೆದಾಗಲೇ ಮನುಷ್ಯತ್ವ ಒಡಮೂಡುತ್ತದೆ. ಮನುಷ್ಯರಲ್ಲಿ ಬರೀ ಪ್ರೇಮವೇ ತುಂಬಿದ ಮನಸು, ಮನಸುಗಳು ಬೆರೆತಾಗಲೇ ಪ್ರೇಮತ್ವ ಕೊನರುತ್ತದೆ. ಎಲ್ಲರೂ ಕೂಡಿ ಪ್ರೇಮದ ಹಾಡನು ಹಾಡೋಣ,ಪ್ರೇಮದ ನುಡಿಗಳ ನುಡಿಯೋಣ.
-ರಂಗನಾಥ್ ಗುಡಿಮನಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ