ಪ್ರೇಮಪತ್ರದ ಆಫೀಸು ಮತ್ತು ಅವಳು

ಪ್ರೇಮಪತ್ರದ ಆಫೀಸು ಮತ್ತು ಅವಳು

ಪುಸ್ತಕದ ಲೇಖಕ/ಕವಿಯ ಹೆಸರು
ಶಿವಕುಮಾರ ಮಾವಲಿ
ಪ್ರಕಾಶಕರು
ಮಾವಲಿ ಪಬ್ಲಿಕೇಷನ್, ಸೊರಬ, ಶಿವಮೊಗ್ಗ
ಪುಸ್ತಕದ ಬೆಲೆ
ರೂ. ೧೬೦.೦೦, ಮುದ್ರಣ: ೨೦೨೩

ಕಥೆಗಾರ ಶಿವಕುಮಾರ ಮಾವಲಿ ಅವರು ‘ಪ್ರೇಮದ ಆಫೀಸು ಮತ್ತು ಅವಳು' ಎಂಬ ಕುತೂಹಲ ಭರಿತ ಶೀರ್ಷಿಕೆಯನ್ನು ಹೊಂದಿರುವ ಕಥಾ ಸಂಕಲನವನ್ನು ಹೊರತಂದಿದ್ದಾರೆ. "ಕೆಲವೊಮ್ಮೆ ನಾಟಕೀಯತೆ ಈ ಕತೆಗಳ ಸಂವಿಧಾನವೇನೋ ಅನ್ನಿಸುವಷ್ಟರಲ್ಲೇ, ಬದುಕಿನಲ್ಲಿರುವ ನಾಟಕೀಯತೆಯನ್ನು ಅವು ನೆನಪಿಸುತ್ತವೆ. 'ಕತೆ ಕಟ್ಟುವಿಕೆ' ಎಂಬುದನ್ನೇ ನಾನು ನಂಬುತ್ತೇನೆ. ಕೆಲವೇ ನಿಮಿಷಗಳಲ್ಲಿ ಓದಿ ಮುಗಿಸಬಹುದಾದ ಕತೆಯೊಂದು ಅನಂತರದಲ್ಲಿ ಓದುಗನಲ್ಲಿಯೂ ಮುಂದುವರೆಯಬಹುದು" ಎನ್ನುವುದು ಲೇಖಕರಾದ  ಶಿವಕುಮಾರ ಮಾವಲಿ ಅವರ ಮಾತು . “ಪ್ರೇಮಪತ್ರದ ಆಫೀಸು ಮತ್ತು ಅವಳು” ಕಥಾ ಸಂಕಲನಕ್ಕೆ ಅವರೇ ಬರೆದ ಮಾತುಗಳು ಹೀಗಿವೆ...

“ಹಾಗೆ ನೋಡಿದರೆ ನಮ್ಮೆಲ್ಲರ ಬದುಕು ಮತ್ತಷ್ಟು ಗಟ್ಟಿಯಾಗುವುದು 'ಸಹಿಷ್ಣುತೆ'ಯಿಂದಲೇ ಹೊರತು, ಪ್ರೀತಿಯಿಂದಲ್ಲ ಎಂಬ ವಾದವೂ ಇದೆ. ಆದರೆ ನಾವು ಸಹಿಷ್ಣುಗಳಾಗುವುದೆಂದರೆ, ನಮ್ಮಲ್ಲಿರುವ ಪ್ರೀತಿಯನ್ನು ಹೊರ ಹಾಕುವುದು ಎಂದೇ ಅರ್ಥ. ಇಲ್ಲಿ ಪ್ರೇಮದ ಕತೆಗಳಿವೆ, ವಿರಹದ ಕತೆಗಳಿವೆ, ಸಂಬಂಧಗಳ ತಾಕಲಾಟದ ಕತೆಗಳಿವೆ. ಇವೆಲ್ಲ ವೈಯಕ್ತಿಕವೇನೋ ಅನ್ನಿಸಬಹುದು. ಆದರೆ, ನಾವು ದೇಶದ ಬಗ್ಗೆ ಯೋಚಿಸಿದಷ್ಟೇ ನಮ್ಮ ದೇಹದ ಬಗ್ಗೆಯೂ ಯೋಚಿಸಬೇಕು. ಎಲ್ಲಾ ಸಮುದಾಯಿಕ ಬಿಕ್ಕಟ್ಟುಗಳ ಪರಿಹಾರ,ವೈಯಕ್ತಿಕ ಬದಲಾವಣೆಯಿಂದಲೇ ಪ್ರಾರಂಭವಾಗಬೇಕಿರುತ್ತದೆ. ಆ ಅರಿವಿನಂದಲೇ, ಇಲ್ಲಿನ ಸಣ್ಣ ಕತೆಗಳಲ್ಲಿನ ಪಾತ್ರಗಳು,ವೈಯಕ್ತಿಕ ನೆಲೆಯಲ್ಲಿ ಎದುರಾಗುವ ಸಂದಿಗ್ದಗಳು, ನಮ್ಮೊಳಗನ್ನು ಪ್ರಶ್ನಿಸುತ್ತವೆ.

ಕೆಲವೊಮ್ಮೆ ನಾಟಕೀಯತೆ ಈ ಕತೆಗಳ ಸಂವಿಧಾನವೇನೋ ಅನ್ನಿಸುವಷ್ಟರಲ್ಲೇ, ಬದುಕಿನಲ್ಲಿರುವ ನಾಟಕೀಯತೆಯನ್ನು ಅವು ನೆನಪಿಸುತ್ತವೆ. 'ಕತೆ ಕಟ್ಟುವಿಕೆ' ಎಂಬುದನ್ನೇ ನಾನು ನಂಬುತ್ತೇನೆ. ಹಾಗೆ ಕತೆ ಕಟ್ಟುವಾಗ ಓದುಗರಲ್ಲಿ ಒಂದು ವಿಸ್ಮಯ ಹುಟ್ಟಿಸುತ್ತಲೇ, ಅವು ವೈಯಕ್ತಿಕವಾಗಿ ಅವರಿಗೆ ಏನನ್ನೋ ನೆನಪಿಸುವಂತಿರಬೇಕು ಎಂಬುದನ್ನು ನಾನು ಪ್ರಜ್ಞಾಪೂರ್ವಕವಾಗಿ ಇಲ್ಲಿನ‌ ಕತೆಗಳಲ್ಲಿ ತಂದಿದ್ದೇನೆ. ಕೆಲವೇ ನಿಮಿಷಗಳಲ್ಲಿ ಓದಿ ಮುಗಿಸಬಹುದಾದ ಕತೆಯೊಂದು ಅನಂತರದಲ್ಲಿ ಓದುಗನಲ್ಲಿಯೂ ಮುಂದುವರೆಯಬಹುದು. ಮುಂದುವರೆಯಬೇಕು. ಬಹುತೇಕ ಕತೆಗಳಲ್ಲಿ ಪಾತ್ರಗಳಿಗೆ ಹೆಸರು ನೀಡದೆ ಸರ್ವನಾಮಗಳನ್ನು ಬಳಸಿದ್ದೇನೆ. ಆ ಪಾತ್ರಗಳಿಗೆ ಯಾವ ಹೆಸರು ಕೊಡದಿದ್ದರೂ ನಡೆಯುತ್ತದೆ. ಹಾಗೆಯೇ ಈ ಕತೆಗಳಲ್ಲಿ ಬರುವ 'ನಾನು', ಯಾರಾದರೂ ಆಗಬಹುದು ಅಥವಾ ಯಾರೂ ಆಗದೆಯೂ ಇರಬಹುದು. ಒಟ್ಟಿನಲ್ಲಿ ಎಲ್ಲರ ಎದೆಯೊಳಗೆ ಹೋಲ್ ಸೇಲಾಗಿ ಇರುವ ಪ್ರೇಮವೆಂಬ ಸರಕಿನ ವ್ಯಾಪಾರ ಜಗದೊಳಗೆ ನಡೆಯುತ್ತಲೇ ಇರುತ್ತದೆ. ದ್ವೇಷವು ವೈಯಕ್ತಿಕ ನೆಲೆಯಿಂದ ಸಮೂಹದ ನೆಲೆಗೆ ತಿರುಗಿದಾಗ ಅನಾಹುತ ಉಂಟು ಮಾಡಿದರೆ, ಪ್ರೇಮವು ವೈಯಕ್ತಿಕ ನೆಲೆಯಲ್ಲಿದ್ದಾಗಲೂ ಉಪಕಾರಿ ಮತ್ತು ಸಮೂಹದ ನೆಲೆಗೆ ಬಂದಾಗಲೂ ಪರೋಪಕಾರಿಯಾಗಿರುತ್ತದೆ. ಅಂಥ ಪ್ರೇಮದ ಬಗ್ಗೆ ಓದುವುದು, ಬರೆಯುವುದು, ಮಾತನಾಡುವುದು ಎಲ್ಲವೂ ಒಂದು ಬಗೆಯ ಪ್ರೇಮಕಾರ್ಯಗಳೇ ಆಗಿರುತ್ತವೆ.

೧೫೨ ಪುಟಗಳ ಈ ಕಥಾ ಸಂಕಲನವು ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ಇಂಗ್ಲೀಷ್ ಭಾಷೆಯಲ್ಲಿ ಎಂ ಎ ಪದವೀಧರರಾದ ಶಿವಕುಮಾರ ಮಾವಲಿ ಅವರು ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. “ದೇವರು ಅರೆಸ್ಟ್ ಆದ" ಇವರ ಮೊದಲ ಕಥಾ ಸಂಕಲನ. “ಸುಪಾರಿ ಕೊಲೆ" ಎಂಬ ನಾಟಕವನ್ನೂ ರಚಿಸಿದ್ದಾರೆ.