ಪ್ರೇಮಬೇಗೆಯಲುದಿಸಿದ ಸಡಗರದ ಫಲ
ಕವನ
ಕಡಲಜಲದಲಿ ಸೂರ್ಯತೇಜದಿ ಪ್ರೇಮಬೇಗೆಯಲುದಿಸಿದ
ಸಡಗರದ ಫಲದನಿಲ ರೂಪದೆನ್ನೊಡಲ ಸೇರಿದೆನೀನು
ಧನ ಋಣ ಕಣದಿ ವಿಭಜಿಸಿ ಕಾಪಾಡಿ ಕಾಪಿಟ್ಟೆ ಒಡಲೊಳು
ಹನಿಯಾಗುವ ಮುನ್ನ ಘನದ ಘನತೆಯಲಿ ನಭದ ಕೂಸಾದೆ
ವಾಯುಭಾರ ಬಂಧನಿಭಂದನೆಯ ಮೀರದಾದೆನಾ
ವಿಯೋಗವಿದು ತಪ್ಪದೆಂದುಮ್ಮಳಿಸಿ ಬಡಬಡಿಸಿ ರೋದಿಸಿ
ಕಣ್ಣಾಲೆ ಕೆಂಪಡರಿ ಬಿಸಿಯುಸರ ಬೇಸರದಿ ನೇಸರನ
ಬಣ್ಣ ಬಯಲಾಗಿ ಕಣ್ಣೀರ ಸುರಿಸುತಲಿ ಧರೆಗುರುಳಿಸಿದೆ
ತಪ್ಪದೆಂದಿಗೂ ವಿಧಿಲಿಖಿತವಿದು ಮತ್ತೆ ಪಡೆಯುವೆ ನಿನ್ನ
ತಪ್ತವಾಗಲಿ ಜೀವ ಧರೆಯರಳಿಸು ನೀ ಶುಭಸಿಂಚನದಿ.