ಪ್ರೇಮಾಯತನ

ಪ್ರೇಮಾಯತನ

ಪುಸ್ತಕದ ಲೇಖಕ/ಕವಿಯ ಹೆಸರು
ಜಬೀವುಲ್ಲಾ ಎಂ. ಅಸದ್
ಪ್ರಕಾಶಕರು
ಕೆ ಎನ್ ಎಸ್ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೨೧೦.೦೦, ಮುದ್ರಣ: ೨೦೨೨

‘ಪ್ರೇಮಾಯತನ’ ಜಬೀವುಲ್ಲಾ ಎಂ.ಅಸದ್ ಅವರ ಕವನ ಸಂಕಲನ. ಈ ಕೃತಿಗೆ ಡಾ.ಮೀರಾಸಾಬಿಹಳ್ಳಿ ಶಿವಣ್ಣ ಅವರು ಬೆನ್ನುಡಿ ಬರಹ ಬರೆದಿದ್ದಾರೆ. ಏಕಾಂಗಿಯ ಕನವರಿಕೆಗಳು ಮೂಲಕ ಕಾವ್ಯಲೋಕ ಪ್ರವೇಶಿಸಿದ ಅವರ ಆಧ್ಯಾತ್ಮಿಕ ಸ್ಪರ್ಶ ಪಡೆದ ಎರಡನೆ ಸಂಕಲನ ಗಾಳಿಗೆ ಕಟ್ಟಿದ ಗೆಜ್ಜೆಯ ಮೂಲಕ ಧೃಡವಾದ ಹೆಜ್ಜೆಯೂರಿ ಬೆಳೆಯುತ್ತಿದ್ದಾರೆ. ಅವರ ಕಾವ್ಯಾಭಿವ್ಯಕ್ತಿ ಮಾಗಿದೆ. ಅವರೊಳಗಿದ್ದ ಚಿತ್ರಕಾರ, ವಿಮರ್ಶಕ ಹೊರಬಂದು ಅವರ ಬರವಣಿಗೆಗೆ ಹೊಸ ಆಯಾಮ ನೀಡುತ್ತಿರುವುದು ವಿಶೇಷ ಎಂದಿದ್ದಾರೆ ಡಾ. ಮೀರಾಸಾಬಿಹಳ್ಳಿ ಶಿವಣ್ಣ.

ಪ್ರೇಮಾಯತನ ಕೃತಿಗೆ ಮುನ್ನುಡಿಯನ್ನು ಬರೆದಿದಾರೆ ಲೇಖಕರಾದ ನಟರಾಜ್ ಕೆ ಪಿ ಇವರು. ಇವರು ತಮ್ಮ ಮುನ್ನುಡಿಯಲ್ಲಿ ಅಭಿಪ್ರಾಯ ಪಟ್ತಂತೆ “ಯುವ ವಿಮರ್ಶಕ ಜಬಿವುಲ್ಲಾ ಎಂ ಅಸದ್ ಅವರ "ಅನಾವರಣ " ಸಾಹಿತ್ಯೋತ್ಸಾಹಿ ವಿಮರ್ಶಕನೊಬ್ಬನ ಸಮಸ್ತ ಚಹರೆಗಳನ್ನೂ ಹೊತ್ತ ವಿಮರ್ಶಾಸಂಕಲನವಾಗಿದೆ . ಈ ಸಂಗ್ರಹವು ಗಜಲ್, ಕವಿತೆ ಅನುವಾದ, ವಿಮರ್ಶೆ, ಹೀಗೆ ಭಿನ್ನ ಪ್ರಕಾರಗಳ ಪುಸ್ತಕಗಳನ್ನು ಸಹೃದಯ ಉತ್ಸಾಹದಿಂದ ಓದಿ , ಆ ಓದಿನ ಹಿತಾಹಿತಗಳಿಗೆ ಮನಗೊಟ್ಟು ಸ್ಪಂದಿಸಿದ ದಾಖಲೆಯಾಗಿದೆ . ಹೀಗಾಗಿ ಜಬಿವುಲ್ಲಾ ಅಸದ್ ಅವರನ್ನು ಸಾಹಿತ್ಯೋತ್ಸಾಹಿ ವಿಮರ್ಶಕ ಎನ್ನಲು ಎಲ್ಲ ಆಧಾರಗಳೂ ಕಾರಣಗಳೂ ಇಲ್ಲಿ ಸಾಕಷ್ಟಿವೆ .

ಅಶ್ಪಾಕ್ ಪೀರ್ ಜಾದೆ ಅವರ ಕವನ ಸಂಕಲನದ ಬಗ್ಗೆ ಬರೆಯುತ್ತಾ "ಹೊಸ ಕಾವ್ಯಕ್ಕೆ ಓದುಗ ವರ್ಗವೇ ಇಲ್ಲದೆ ಹಿರಿಯ ಮತ್ತು ಪ್ರತಿಷ್ಠಿತ ಸಾಹಿತ್ಯ ಕೃತಿಗಳಿಗೆ ಓದುಗರು ಜೋತುಬಿದ್ದಿದ್ದಾರೆ" ಎಂದು ಎಂದು ತಮ್ಮ ಆಕ್ಷೇಪವನ್ನು ದಿಟ್ಡವಾಗಿ ದಾಖಲಿಸುತ್ತಾರೆ .

ಈ ಬಗೆಯ ಅಕ್ಷೇಪವೂ ಹಾಗೂ ಅದರ ದಿಟ್ಟ ದಾಖಲೆಗಳೆರಡೂ ಸಹ , ವಿಮರ್ಶಕನ ಮೇಲೆ ಹೊಸ ಜವಾಬ್ದಾರಿಗಳನ್ನು ಹೊರಿಸುತ್ತದೆ ಅವು ಎರಡು ತೆರನಾದ ಜವಾಬ್ದಾರಿಗಳಾಗಿರುತ್ತವೆ . ಒಂದು: ಹೊಸ ತಲೆಮಾರಿನ ಸಾಹಿತ್ಯ ಕೃತಿಗಳೆಲ್ಲವನ್ನೂ ಓದಿ ಗಮನಿಸಬೇಕಾದ ತಹತಹದ ಜವಾಬ್ದಾರಿ ಮತ್ತು ಆ ಸಾಹಿತ್ಯ ಕೃತಿಗಳ ಸಾಹಿತ್ಯ ಮೌಲ್ಯವನ್ನು ಕಂಡುಕೊಳ್ಳುವುದು ಈ ಎರಡನ್ನೂ ಈ ಹೇಳಿಕೆ ಮಾಡುವ ವಿಮರ್ಶಕ ಮನಸ್ಸು ಪ್ರಜ್ಞಾಪೂರ್ವಕವಾಗಿ ನಿರ್ವಹಿಸಬೇಕಾಗಿ ಬರುತ್ತದೆ . ಆದರೆ ಸಾಹಿತ್ಯೋತ್ಸಾಹಿಯಾದ ಮನಸ್ಸಿಗೆ ಈ ಜವಾಬ್ದಾರಿ , ಹೊರಬೇಕಾದ ಜಡ ಹೊರೆಯಾಗಿ‌ ಕಾಣದೆ , ಲೀಲೆಯಂತಹ ಸಂಭ್ರಮವಾಗಿಬಿಡುತ್ತದೆ . ಅಂತಹ 'ಓದು' ಗಳ ಪ್ರಯತ್ನದ ದಾಖಲೆಯಾಗಿಯೂ ಈ ವಿಮರ್ಶಾ ಕೃತಿಯನ್ನು ನಾವು ನೋಡಬಹುದಾಗಿದೆ .

ಇಲ್ಲಿ , ಕವಿ ಬಿದಲೋಟಿ ರಂಗನಾಥ್ ಅವರ "ಉರಿಯುವ ಕರುಳ ದೀಪ " ಕವನ ಸಂಕಲನದ ಬಗ್ಗೆ ಬರೆದ ಬರಹ ಗಮನಾರ್ಹವಾದ ಕಾರಣ ಅದನ್ನೇ ಮೊದಲಿಗೆ ಗಮನಿಸಬಹುದು . ಈ ಸಂಕಲನದ ಬಗ್ಗೆ ಬರೆಯ ಹೊರಡುವ ಇವರ ಉತ್ಸಾಹದಲ್ಲಿಯೇ ಈ ಕವಿತೆಗಳು ಮಾಡಿರುವ ಪ್ರಭಾವದ ಗಾಢತೆ ಗೊತ್ತಾಗುತ್ತದೆ . ಈ ಅನುರಕ್ತಿಯ ಕಾರಣದಿಂದಾಗಿಯೇ ಈ ಬರಹಕ್ಕೆ ಒಂದು ಅನನ್ಯತೆ ಪ್ರಾಪ್ತವಾಗಿದೆ ..

ಈ ಬರಹ ನನ್ನಲ್ಲಿ ಉಂಟು ಮಾಡಿದ ಮುಖ್ಯವಾದೊಂದು ಅನಿಸಿಕೆಯನ್ನು ಈ ಹಂತದಲ್ಲಿ ದಾಖಲಿಸುವ ಮನಸ್ಸಾಗುತ್ತಿದೆ .. ಈ ಲೇಖಕನಲ್ಲಿ , ಸಮಕಾಲೀನ ಕಾವ್ಯ ಕರ್ಮದ ನಕಲಿತನಗಳ ಬಗೆಗೆ ಅಸದ್ ಅವರಿಗಿರುವ ಅಸಹನೆ ಒಮ್ಮೆಲೇ ಮುಂಚೂಣಿಗೆ ಬರುತ್ತದೆ ಅದು ಈ ಬಿದಲೋಟಿ ಯವರ ಕವನಗಳ ಓದಿನ ಸಂದರ್ಭದಲ್ಲಿ ವಿಕೋಪಕ್ಕೆ ಹೋದಂತೆ ಕಾಣುತ್ತದೆ .. ಹಲವು ಆಕ್ಷೇಪ ಗಳ , ಆಗ್ರಹಗಳ ಸ್ವತಂತ್ರ ಆಲೋಚನೆಗಳ ಪೂರ್ವಗ್ರಹಗಳ ಅನಿಸಿಕೆಗಳ ಹುಟ್ಟನ್ನು ನಾವಿಲ್ಲಿ ನೋಡುತ್ತೇವೆ . ಅಸದ್ ತಮ್ಮ ಸದಭಿರುಚಿಯನ್ನು , ಓದುಗ ವರ್ಗವು ಕಾಣಬಯಸ ಬೇಕಾದ ಸಾಂಸ್ಕೃತಿಕ ತುರ್ತುಗಳಾಗಿಯೂ ಇಲ್ಲಿ ಇಡಬಯಸುತ್ತಾರೆ . ಅಂತಹ ಕೆಲವು ಅಂಶಗಳನ್ನು ಇಲ್ಲಿ ಹೀಗೆ ಸಂಗ್ರಹಿಸಬಹುದು

ಒಂದು : "ಜಿದ್ದಿಗೆ ಬಿದ್ದವರಂತೆ ದಿನಕ್ಕೊಂದು ಅರ್ಥವಿಲ್ಲದ ಸಾಲುಗಳನ್ನು ಗೀಚಿ ಅದನ್ನೇ ಕವಿತೆ ಎನ್ನುತ್ತಾ ವರ್ಷಕ್ಕೊಂದು , ವ್ಯವಧಾನವಿಲ್ಲದೆ ಜೀವವಿಲ್ಲದ ಕೃತಿಗಳನ್ನು ಪ್ರಕಟಿಸುವ ಹಲವರ ನಡುವೆ"
ಎರಡು : ಅಂತರಂಗದಲ್ಲಿ ಜನ್ಮ ತಳೆದ ಕವಿತೆಗಳಿಗೆ ಮಾತ್ರ ಜೀವ ಕರುಣಿಸುವ ಅರ್ಥ ತುಂಬಿ ಲೋಕದ ಅರಿವಿಗೆ ನೀರೆರೆಯುವ
ಮೂರು: ಗಜಲ್, ಷಟ್ಪದಿಯಂತಹ ಕೆಲವು ಕಾವ್ಯ ಪ್ರಕಾರಗಳನ್ನು ಹೊರತುಪಡಿಸಿ ಕವಿತೆಯ ರಚನೆಗೆ ಯಾವ ಮಾನದಂಡಗಳಿಲ್ಲ ಯಾವ ನಿಯಮ ನಿರ್ಬಂಧಗಳೂ ಇಲ್ಲ
ನಾಲ್ಕು : ಕವಿ ಗಿಂತ ಓದುಗ ಆಪ್ತವಾದ ಅನುಭೂತಿಯನ್ನು ಪಡೆಯಬಹುದಾಗಿದೆ . ಕವಿಗೆ ಕಾಣದ್ದನ್ನು ಓದುಗ ವಿಮರ್ಶಕನಾಗಿ ಪಡೆಯಬಹುದಾಗಿದೆ
ಐದು: ನಾವು ಎಷ್ಟು ವಾಚಾಳಿಗಳಾಗಿದ್ದೇವೆ ಎಂದರೆ ಬರೆದದ್ದೆಲ್ಲ ಸಾಹಿತ್ಯ ಎನ್ನಿಸಲು ಶುರುವಾಗಿದೆ . ಇವು ಅವರ ಕೆಲವು ಹೇಳಿಕೆಗಳು. ಈ ಹೇಳಿಕೆಗಳ ಬಹುಪಾಲು ಬಿದಲೋಟಿ ರಂಗನಾಥ್ ಅವರ ಕವಿತೆಗಳ ಓದು ಅವರಲ್ಲಿ ಉಂಟುಮಾಡಿದ ಸ್ಪಂದನದ ಭಾವಾವೇಶದಲ್ಲಿ ಹುಟ್ಟಿದವಾಗಿವೆ .

' ಮೌನ ಇಂಚರದ ಮಾತನಾಡಿಸುತ್ತಾ ' ಎಂಬ ಶೀರ್ಷಿಕೆಯಲ್ಲಿ ಶ್ರೀಮತಿ ಪ್ರಭಾವತಿ ದೇಸಾಯಿ ಅವರ 'ಮೌನ ಇಂಚರ ' ಎಂಬ ಸಂಗ್ರಹದಲ್ಲಿರುವ ಗಜಲ್ ಗಳ ಬಗ್ಗೆ ಬರೆಯುವುದನ್ನು ನೋಡಿದಾಗ ನನಗೆ , ಯಾವು ಯಾವುದೋ ಸಾಧಾರಣ ಕೃತಿಗಳಿಗೆ ವಿಮರ್ಶೆ ಬರೆಯುವಾಗ ದಾಕ್ಷಿಣ್ಯಕ್ಕೆ ಕಟ್ಟು ಬಿದ್ದು ಬರೆಯುತ್ತಿರುವುದು ಗೊತ್ತಾಗಿಬಿಡುತ್ತದೆ ಆದರೆ ಅವರಿಗೆ ಇಷ್ಟವಾದ ಕವಿತೆಗಳು ಎದುರಾದಾಗ ‌ಮಾತ್ರ , ಅವರಲ್ಲಿದ್ದ ಸಂಕೋಚ , ದಾಕ್ಷಿಣ್ಯ , ಹಿಂಜರಿಕೆಯಲ್ಲಿ ಕ್ಷೀಣವಾಗಿರುವ , ಅಸ್ಪಷ್ಟವಾಗಿರುವ ದನಿ ಮ ರೆಯಾಗಿ ಆ ಕೃತಿಗಳ ಜೊತೆಗೆ ದೇಹಾತ್ಮ ಸಂಬಂಧದಂತೆ ಅನುಬಂಧ ಒಂದು ಸಾಧ್ಯವಾಗಿ ಅನುರಕ್ತ ಬರಹ ಒಂದು ಒಡಮೂಡಿಬಿಡುತ್ತದೆ

"ಕೆನ್ನೆಯಲ್ಲಿ ಕೆಂಪು ಮೂಡಿಲ್ಲ
ಆಧರ ಮಧು ಇನ್ನೂ ಹೀರಿಲ್ಲ
ಲಜ್ಜೆಯು ನಯನದಲ್ಲಿ ಇನ್ನೂ ಬಿರಿದಿಲ್ಲ ನೀ ಏಕೆ ಹೋಗುವೆ "

ಎಂಬ ಗಜಲ್ ಬಗ್ಗೆ ಬರೆಯುತ್ತಾ '' ಇಂತಹ ಗಜಲ್ ನ ಮುಡಿಗೆ ನಾಲ್ಕು ತುಂಬೊಲವಿನ ಗುಲಾಬಿಗಳನ್ನು ಮೂಡಿಸಿರುವ ಪ್ರಭಾವತಿ ದೇಸಾಯಿ ಅವರ ಗಜಲ್ ಗಳ ಭಾವತೀವ್ರತೆ ಉತ್ಕಟತೆ ಅನಂತತೆಯೆಡೆಗಿನ ನಡಿಗೆ ಒಂದು ಅವರ್ಣನೀಯ ಆನಂದದ ಮದಿರೆಯಲಿ ಹೃದಯ ಪುಷ್ಪವನ್ನು ಅದ್ದಿ ತೆಗೆದ ಅನುಭವವಾಗುತ್ತದೆ '' ಎಂದು ಪರವಶವಾಗಿ ಅಸದ್ ಅವರು ಬರೆಯುತ್ತಾರೆ

ಪ್ರಭಾವತಿ ದೇಸಾಯಿಯವರ "ನಿನ್ನ ಹೆಜ್ಜೆಗೆ ನನ್ನ ಗೆಜ್ಜೆ " ಸಂಕಲನಕ್ಕೆ ಬರೆಯುತ್ತಾ 'ತೆರಹೀ ಗಜಲ್' ನ ಕುರಿತು ಬರೆದ ಪರಿಚಯ ಮತ್ತು ವಿಮರ್ಶಾತ್ಮಕ ಜಿಜ್ಞಾಸೆ ಕುತೂಹಲಕರವಾಗಿದೆಯಾದರೂ ಅಲ್ಲಿ ಬಳಕೆಯಾಗಿರುವ ಪಾರಿಭಾಷಿಕಗಳನ್ನು ಕನ್ನಡದಲ್ಲಿ ಮರು ರಚಿಸುವ ಮತ್ತು ಅವುಗಳನ್ನು ವಿವರಿಸುವ ಅಥವಾ ಕನ್ನಡೀಕರಿಸುವ ಕಾರ್ಯ ಪೂರ್ಣಗೊಂಡಂತೆ ಕಾಣುವುದಿಲ್ಲ . ಹೀಗಾಗಿ ಗಜಲ್ ಮತ್ತು ಅಲ್ಲಿ ಬಳಕೆಯಾಗುವ ವಿವಿಧ ಪಾರಿಭಾಷಿಕ ಪದಗಳ ಕುರಿತ ಚರ್ಚೆಗಳು ಸಾಮಾನ್ಯರಿಗೆ ಗೊತ್ತಾಗದೆ ಹೋಗುತ್ತವೆ.

ಕನ್ನಡಕ್ಕೆ ಅಪರಿಚಿತವಾದ ಈ ಪ್ರಕಾರಗಳನ್ನು ಪರಿಶೀಲಿಸಲು ಬೇಕಾದ ಅಧ್ಯಯನದ ಸಿದ್ದತೆಯನ್ನು ಅಸದ್ ಅವರು ಆಯಾ ಕೃತಿಗಳೊಡನೆ ನಡೆಸುವ ಅನುಸಂಧಾನದಲ್ಲಿ ನಾವು ಗುರುತಿಸಬಹುದಾಗಿದೆ. ಶಿವಪ್ರಕಾಶ್ ಕುಂಬಾರ ಅವರ 'ಮಣ್ಣಿನ ಕಣ್ಣುಗಳು ' ಸಂಕಲನದಲ್ಲಿ 'ಖಸೀದಾ ' ಎಂಬ ಕಾವ್ಯದ ಮಾದರಿಯನ್ನು ಕನ್ನಡದಲ್ಲಿ ಪ್ರಯತ್ನಿಸಲಾಗಿರುವುದನ್ನು ಎಲ್ಲಿ ಪರಿಶೀಲಿಸಿ ನೋಡಲಾಗಿದೆ . 'ಖಸೀದಾ' ಎಂದರೆ ಉನ್ನತ ಶಕ್ತಿಯನ್ನು , ಮೌಲ್ಯವನ್ನು ಉದ್ದೇಶಿಸಿದ ನಿವೇದನೆ ಎಂದು ಇಲ್ಲಿ ಪರಿಚಯಿಸಲಾಗಿದೆ

" ಕೋಪದ ಮಾತುಗಳಾದರೂ ಸರಿ ನೋವಾಗದಂತೆ ತಿಳಿಸುವನು
ಪ್ರೀತಿಯ ಮಾತುಗಳ ಯಾರಾಡಿದರೂ ಸಹ ಅವರಿಗೆ ಒಲಿಯುವನು "
ಇದು ಶಿವಪ್ರಕಾಶ್ ಕುಂಬಾರ ಅವರ 'ಖಸಿದಾ' ದ ಒಂದು ಪದ್ಯವಾಗಿದೆ..

ಪ್ರೊ ಎಂಜಿ ರಂಗಸ್ವಾಮಿಯವರ "ಚಿತ್ರದುರ್ಗ ಜಿಲ್ಲೆಯಲ್ಲಿ ಬುಕಾನನ್ " ಕೃತಿಯ ಬಗೆಗೆ ಬರೆಯುವ ಅಸದ್ ಅವರು ಈ ಕೃತಿಯ ಅಂತಹ್ಸಾರವನ್ನು ತಮ್ಮ ಬರೆಹದಲ್ಲಿ ಹಿಡಿದಿಟ್ಟಿದ್ದಾರೆ. ಅನುವಾದದ ಬಾಷೆಯ '' ಕಣ್ಣಿಗೆ ಕಟ್ಟುವ ಚಿತ್ರಣದ ನಿರೂಪಣೆಯನ್ನೂ '' ಬುಕಾನನ್ ನ ಸೂಕ್ಷ್ಮಾವಲೋಕನವನ್ನೂ ಇವರು ತಮ್ಮ ಬರೆಹದಲ್ಲಿ ಗುರುತಿಸುತ್ತಾರೆ.
ಅಸದ್ ಅವರು ಈ ಕೃತಿಯಲ್ಲಿ ಕಾವ್ಯ ಮೀಮಾಂಸಕನಂತೆ, ಕಾವ್ಯ ಪಕ್ಷ ಪಾತಿಯಂತೆ , ಕಾವ್ಯ ಶಿಕ್ಷಕನಂತೆ ಕಾವ್ಯದ ಕಾವಲುಗಾರನಂತೆ , ಕಾವ್ಯ ವಿವರಕಾರನಂತೆ ಪ್ರಕಟವಾಗಿದ್ದಾರೆ ಅನಿಸುತ್ತದೆ ..

ಕೆಲವೆಡೆ ಆತುರದ ನಿರೂಪಣೆ ಇಲ್ಲಿನ ದೋಷವಾಗಿ ನನಗೆ ಕಾಣುತ್ತದೆ. ಅದರಲ್ಲೂ‌ ಕಾವ್ಯ ವೊಂದು ಉಂಟು‌ಮಾಡುವ ಪರಿಣಾಮವು ಹೊಸತೂ , ಅಮೂರ್ತವೂ , ವ್ಯಕ್ತಿಗತವೂ ಆಗಿರುವುದರಿಂದ. ಅದನ್ನು ತಕ್ಕ ಬಾಷೆಯಲ್ಲಿ ಹಿಡಿಯುವುದು‌ ಸುಲಭವಲ್ಲ‌.. ಅತುರದಿಂದಲಂತೂ ಅದನ್ನು ಹಿಡಿಯಲಾಗುವುದಿಲ್ಲ.. ಈಗಾಗಲೆ ಬಳಸಿಬಿಟ್ಟ ಪದಗಳಲ್ಲಿ ಪ್ರಯತ್ನಿಸಿದರೆ ನಮ್ಮ ವೈಯಕ್ತಿಕಾನುಭವವನ್ನು ಸೂಕ್ತವಾಗಿ ಹೇಳಲಾಗದೆಹೋಗುತ್ತೇವೆ. ಇಂತಹ ಸವಾಲನ್ನು ಅಸದ್ ಅವರ ಬಾಷೆ ಸೂಕ್ತವಾಗಿ ಎದುರಿಸಬೇಕಾಗಿದೆ‌. ಉತ್ತಮ ಕಾವ್ಯವನ್ನು ಕಾಣಬಲ್ಲ ಮತ್ತು ಅದರ ಹೃದಯವನ್ನು ಮುಟ್ಟಬಲ್ಲ ಶಕ್ತಿ ಅವರಿಗಿರುವ ಕಾರಣ ಇದೇನೂ ಅವರಿಗೆ ಅಸಾದ್ಯವಾದ ಕೆಲಸವಲ್ಲ. ಭಾಷೆಯ ಮಟ್ಟದಲ್ಲಷ್ಟೇ ಎಲ್ಲರಂತೆ ಅವರೂ ತೊಡಕನ್ನೆದುರಿಸುತ್ತಿದ್ದಾರೆ ‌‌."