ಪ್ರೇಮಿಗಳ ದಿನದ ಆಚರಣೆ ಹೇಗೆ ಜಾರಿಗೆ ಬಂತು?
ವ್ಯಾಲೆಂಟೈನ್ ಡೇ (ಪ್ರೇಮಿಗಳ ದಿನ) ಫೆಬ್ರವರಿ ೧೪ ಎಂದೊಡನೆ ಎಲ್ಲೆಡೆಯಿಂದ ಕೇಳಿ ಬರುವ ಮಾತು ಪ್ರೇಮಿಗಳ ದಿನ, ಅದರ ಆಚರಣೆ. ಇದರ ಹಿಂದಿನ ಮಾಹಿತಿಯನ್ನೋದಿದಾಗ ರೋಮ್ ಸಾಮ್ರಾಜ್ಯದ ೨ನೇ ಕ್ಲಾಡಿಯಸ್ ರಾಜ ಸರ್ವಾಧಿಕಾರಿ ಧೋರಣೆಯಿಂದ ಎಲ್ಲರಿಗೂ ಹಿಂಸೆ ನೀಡುತ್ತಿದ್ದನಂತೆ. ತನ್ನ ರಾಷ್ಟ್ರದ ಸೈನಿಕರು ಯಾರನ್ನೂ ಪ್ರೀತಿಸಬಾರದು, ವಿವಾಹವಾಗಬಾರದು ಎಂದು ಆಜ್ಞೆ ಮಾಡಿದ್ದನಂತೆ. ಅದೇ ಸಮಯದಲ್ಲಿ ಅಲ್ಲಿ ಕಾಣಿಸಿಕೊಂಡ ‘ವ್ಯಾಲೆಂಟೈನ್’ ಹೆಸರಿನ ಸಂತನೋರ್ವ ಇದನ್ನೆಲ್ಲ ಗಮನಿಸಿ ವಿರೋಧಿಸಿ, ಅರಸನಿಗೆ ತಿಳಿಯದಂತೆ ಪ್ರೇಮಿಗಳನ್ನು ಒಗ್ಗೂಡಿಸುವ, ಬಯಸಿದರೆ ಮದುವೆ ಮಾಡಿಸುವ ಕೆಲಸ ಮಾಡುತ್ತಿದ್ದ. ರಾಜನಿಗೆ ಹೇಗೋ ತಿಳಿದು ರಾಜಧರ್ಮ ಉಲ್ಲಂಘಿಸಿದ ಸಂತನನ್ನು ಸೆರೆಮನೆಗೆ ಹಾಕಿಸಿದ. ಅಲ್ಲಿಯ ಜೈಲರ್ ಮಗಳು ಸಂತನ ಗುಣನಡತೆ,ಧೋರಣೆ ಮೆಚ್ಚಿ ಪ್ರೇಮಿಸುತ್ತಿದ್ದಳಂತೆ. ಆದರೆ ಬೆರೆತು ಮಾತುಕತೆ ಮಾಡಲು ಅವಕಾಶವಿರಲಿಲ್ಲ. ‘ವ್ಯಾಲೆಂಟೈನ್’ ಪತ್ರ ಬರೆದಿಟ್ಟು ಇಹಲೋಕ ತ್ಯಜಿಸಿದ. ಆತನ ಸವಿ ನೆನಪಿಗಾಗಿ ಪ್ರೇಮಿಗಳ ದಿನದ ಆಚರಣೆ ಪ್ರಾರಂಭವಾಯಿತು ಎಂದು ಪ್ರತೀತಿ.
ನಮ್ಮ ಭಾರತ ದೇಶ ಸಂಸ್ಕೃತಿ, ಸಂಸ್ಕಾರ, ಸಂಪ್ರದಾಯಗಳ ಆಡೊಂಬಲ. ನೈತಿಕ ಮೌಲ್ಯಗಳು, ಸಂಬಂಧಗಳ ಕಟ್ಟುಪಾಡುಗಳು, ಬದುಕಿನ ಹಾದಿಯಲಿ ಹಾಸುಹೊಕ್ಕಾಗಿ ಬಂದಂತಹ ಆಚರಣೆಗಳಾಗಿವೆ. ಪೀಳಿಗೆಯಿಂದ ಪೀಳಿಗೆಗೆ ಇದು ಹರಿದು ಬಂದಿದೆ. ಪ್ರೀತಿ,ಪ್ರೇಮ ಎಂದಾಕ್ಷಣ ಹದಿಹರೆಯದ ಹುಡುಗ ಹುಡುಗಿಯತ್ತ ನಮ್ಮ ಮನಸ್ಸು ಹೋಗುವುದು ಸಹಜ. ಆದರೆ ಅಮ್ಮ ಮಕ್ಕಳನ್ನು, ಅಪ್ಪ ಅಮ್ಮನನ್ನು, ಅಮ್ಮ ಅಪ್ಪನನ್ನು, ಮಕ್ಕಳು ಹೆತ್ತವರನ್ನು, ಬಂಧುಗಳನ್ನು, ಸಾಕುವ ಪ್ರಾಣಿಗಳನ್ನು, ಅಕ್ಕ ತಂಗಿಯರನ್ನು, ಒಡಹುಟ್ಟಿದವರನ್ನು ಪ್ರೀತಿ, ಪ್ರೇಮ, ವಾತ್ಸಲ್ಯದಿಂದ ನೋಡಬಹುದಲ್ಲ. ಪ್ರೇಮಿಗಳೇ ಆಗಬೇಕೆಂದಿಲ್ಲ.
‘ಪ್ರೇಮಿಗಳ ದಿನ’ದ ಸ್ವೇಚ್ಛಾಚಾರದಿಂದ ಆಗುವ ಅನಾಹುತಗಳನ್ನು ನಾವು ಅರಿತವರೇ. ಪಾರ್ಟಿ ನೆವದಲ್ಲಿ ಕುಣಿದು ಕುಪ್ಪಳಿಸುವುದು, ಹೆಣ್ಣು ಗಂಡೆಂಬ ಅರಿವಿಲ್ಲದೆ, ಹೊತ್ತು ಗೊತ್ತಿಲ್ಲದೆ ಮನೆ ಸೇರುವುದು ಇದೆಲ್ಲ ಆಚರಣೆಯ ಪ್ರಭಾವದಲ್ಲಿ ಕಂಡು ಬರುತ್ತಿದೆ. ಹೆತ್ತವರು, ಮನೆಯ ಹಿರಿಯರು ಹೇಳಿದರೆ ಕೇಳುವ ಕಿವಿಗಳಿಲ್ಲ. ಹೇಳಿ ಹೇಳಿ ಸೋತಾಗ ಹೇಳುವುದನ್ನೇ ಬಿಟ್ಟು ಬಿಡುತ್ತಾರೆ.
ಇಂದಿನ ಪ್ರಸಕ್ತ ಕಾಲಕ್ಕೆ ಆಚರಣೆ ಬೇಕೆಂಬ ವಾದವಿದೆ, ಆದರೆ ಅದು ಕೇವಲ ವ್ಯವಹಾರದ ದೃಷ್ಟಿಯಲ್ಲೂ ಇರಬಹುದು. ಕೊಳ್ಳುಬಾಕ ಸಂಸ್ಕೃತಿಯೂ ಆಗಿರಬಹುದು. ಒಂದಷ್ಟು ಪ್ರೇಮಿಗಳ ಪ್ರೇಮದ ಸಂಕೇತ ಕೆಂಪು ಗುಲಾಬಿ, ಉಡುಗೊರೆಗಳ ವಿನಿಮಯಕ್ಕಾಗಿ ಖರ್ಚು, ಹಣ ಮಾಡುವ ದಾರಿಯಾಗಿರಬಹುದು. ಯಾವುದೋ ಪಾಶ್ಚಿಮಾತ್ಯ ಆಚರಣೆಗಳು ನಮ್ಮ ಯುವಜನಾಂಗದ ಮೇಲೆ ಪ್ರಭಾವ ಬೀರಿರಬಹುದು. ಪರಸ್ಪರ ಶುಭಾಶಯಗಳ ವಿನಿಮಯ ಸಹ ಇಂದು ಮಾಡಬಹುದಲ್ವಾ?
ನಮ್ಮ ಮಕ್ಕಳಿಗೆ, ಮುಂದಿನ ಪೀಳಿಗೆಗೆ ಉತ್ತಮ ಸಂಸ್ಕಾರಗಳನ್ನು ಕಲಿಸಿ, ಸತ್ಪ್ರಜೆಗಳನ್ನಾಗಿ ರೂಪಿಸುವುದನ್ನು ಮೊದಲು ಕಲಿಯೋಣ. ಅನೈತಿಕತೆ, ತೆರೆದ ಸ್ವೇಚ್ಛಾಚಾರವೇ ಅನಾಹುತಗಳಿಗೆ ರಹದಾರಿಯಾಗದಂತೆ ಜೋಪಾನ ಮಾಡಬೇಕಾದವರು ನಾವೇ ಅಲ್ಲವೇ? ಕಷ್ಟ ಪಡದೆ ಹಣ ಬರಬೇಕೆಂಬ ವಾಂಛೆ ಮಾಡಬಾರದ ಕೆಲಸವನ್ನು ಮಾಡಿಸುತ್ತಿದೆಯೇ?
ಪ್ರೀತಿ-ಪ್ರೇಮ-ಪ್ರಣಯ ಸಹಜ.ಪ್ರೀತಿಯಲೂ ಆರೋಗ್ಯವಿರುವಂತೆ ನೋಡಿಕೊಳ್ಳಬೇಕು. ಪ್ರೀತಿ ಎದೆಯಾಳದಿಂದ ಹುಟ್ಟಬೇಕು. ಅನುಭವಗಳ ಶರಧಿ ಪ್ರೀತಿಯ.ಪ್ರೀತಿಯ ಹೊಳೆ, ಪ್ರೀತಿಯ ಮಳೆ ಎನ್ನುತ್ತಾರೆ. ಅಪರಿಮಿತ, ಅಸಂಖ್ಯಾತ ನವಿರಾದ ಭಾವನೆಗಳ ಆಗರ-ಸಾಗರ ಪ್ರೀತಿ. ಪ್ರೀತಿಯಲಿ ಕಾಳಜಿಯೂ ಬೇಕು, ಆಗ ಆಚರಣೆಗೊಂದು ನಿಜವಾದ ಅರ್ಥ ಸಿಗಬಹುದು.
-ರತ್ನಾ ಕೆ.ಭಟ್, ತಲಂಜೇರಿ, ಪುತ್ತೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ