ಪ್ರೇಮ ತೃಷೆ

ಪ್ರೇಮ ತೃಷೆ

ಬರಹ

ರಾತ್ರಿಯೆಲ್ಲಾ ಅಳುವ ನನ್ನ ನೀರವತೆಗೆ
ಮಾರ್ದನಿಸುವ ಓ ಕಾರಿರುಳೇ
ಸಂತೈಸಬಲ್ಲೆಯಾ ಈ ಪ್ರೇಮ ರಾಹಿತ್ಯವನ್ನು.

ಕಂಬನಿಯ ಹನಿಹನಿಗೆ
ಜೀರುಂಡೆಯ ದನಿದನಿಗೆ
ಜಿನುಗುವ ಎಳೆಮಳೆಗೆ
ಕಲಿಸುವೆಯಾ ಕತ್ತಲೆಯೇ
ಪ್ರೇಮಿಸುವುದನ್ನು.

ಎದೆಯ ಹಿಂಡುವ ಬಯಕೆ ತುಂಬುವ
ಕನಸುಗಳಗೆ ನೀ
ನೀಡುವೆಯಾ ಪ್ರೇಮದುಸಿರನ್ನು.

ಘೋರಾಂಧಕಾರಕೆ ನೀಡುನೀ
ಹಸಿ ಹಸಿ ಮನಸು.
ಅದಾದರೂ ತುಂಬಲಿ
ನನ್ನೀ ಹಸಿರುಗನಸು.

ಕಾಣದ ತಂಗಾಳಿಗೆ ನೀಡು ನೀ
ನಲ್ಮೆಯ ರಸವನ್ನು
ಅದಾದರೂ ಆರಿಸಲಿ
ನನ್ನೀ ಪ್ರೇಮ ತೃಷೆಯನ್ನು.

ಹೇಗೆ ಹೇಳಲಿ ಕತ್ತಲೆ
ಅರ್ಥವಾಗುವುದ್ಹೇಗೆನಿನಗೆ?
ಕಣ್ಣದ್ದೂ ಕಾಣದ ಕಪ್ಪು ಕುರುಡು ನೀನು
ಮನಸ್ಸಿದ್ದರೇನು ಬೆಳಕಿಲ್ಲದ ನಾನು!

ನಿನ್ನಲ್ಲಿದೆ ಸಾಗರಗಳು!
ವರ್ಷ ಸುರಿಸದ ಬಿಳಿಮೋಡದಿಂದ
ಭೂಮಿ ಹಸಿರಾಗುವುದೇ
ಬರಡು ಕೊನರುವುದೇ?

ಪ್ರೀತಿ ಕಪ್ಪು ಮೋಡದಂತೆ
ಬೋರ್ಗರೆದು ಸುರಿದರೇ
ಅಂದ ಭೂಮಿಗೆ
ಕತ್ತಲೆಯಾದರೇನು
ಬೆಳಕಾದರೇನು?
ಇಳಿದು ಬಾ ನೀ ಧರೆಗೆ
ಕಾಯುವೆನು ನಾ ಬಿಸಿಯಾಗಿ ಬಾಯ್ದೆರೆದು..

ಬಹಳ ತಡವಾದರೆ
ಬತ್ತಿ ಹೋದೇನು
ನೀ ಬಂದರೂ ಚಿಗುರದ
ಬತ್ತಿದ ಮರವಾದೇನು.

ರಾತ್ರಿಯೆಲ್ಲಾ ಅಳುವ ನನ್ನ ನೀರವತೆಗೆ
ಮಾರ್ದನಿಸುವ ಓ ಕಾರಿರುಳೇ
ಸಂತೈಸ ಬಲ್ಲೆಯಾ ಈ ಪ್ರೇಮ ರಾಹಿತ್ಯವನ್ನು.