ಪ್ರೇಮ ಧ್ಯಾನದ ಪಥದಲ್ಲಿ

ಪ್ರೇಮ ಧ್ಯಾನದ ಪಥದಲ್ಲಿ

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ : ಓಶೋ, ಕನ್ನಡಕ್ಕೆ : ಬೋಧಿ ನಿಸರ್ಗ
ಪ್ರಕಾಶಕರು
ಅನುಭವ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೭೦.೦೦, ಮುದ್ರಣ: ೨೦೦೪

ಓಶೋ ಅವರ ಚಿಂತನೆಗಳು ಬಹಳ ಪ್ರಭಾವಶಾಲಿ. ಇವರ ಪ್ರವಚನಗಳ ಕುರಿತಾದ ಪುಸ್ತಕಗಳು ಹಾಟ್ ಸೇಲ್ ಆಗುತ್ತವೆ. ಓಶೋ ಅವರೇ ಹೇಳುವಂತೆ “ಪ್ರತಿಯೊಬ್ಬರೂ ಪ್ರೇಮದ ಬಾಗಿಲ ಬಳಿಯೇ ಹೋಗುತ್ತಿರುವರು. ವೇಶ್ಯೆಯ ಬಳಿ ಹೋಗುತ್ತಿರಲಿ, ದೇವಸ್ಥಾನಕ್ಕೆ ಹೋಗುತ್ತಿರಲಿ, ಹೋಗುತ್ತಿರುವುದು ಮಾತ್ರ ಪ್ರೇಮದ ದ್ವಾರದ ಬಳಿಗೇ. ಆಯ್ಕೆ ತಪ್ಪಾಗಿರಬಹುದಾದರೂ, ಆಕಾಂಕ್ಷೆ ಪ್ರೇಮದ್ದೇ. ಪ್ರೇಮದ ಅಮೃತವರ್ಷ ಸುರಿಯಲೆಂದು ನೀವು ಬಯಸುವಿರಾದರೆ ನಿಮ್ಮ ಪಾತ್ರೆ ಅಮೃತವನ್ನು ಸಂಬಾಳಿಸಲು ಯೋಗ್ಯವಾಗಿರುವುದಿಲ್ಲ. ಆದ್ದರಿಂದಲೇ ನಿಮ್ಮ ಜೀವನ ಪ್ರೇಮವಿಲ್ಲದೆ ಬಡವಾಗಿ ಕಳೆದುಹೋಗುವುದು.

ಧ್ಯಾನದ ಅತಿರಿಕ್ತವಾಗಿ ಬೇರಾವ ಮಾರ್ಗವೂ ಇಲ್ಲ. ಮಾರ್ಗ ಯಾವುದೇ ಇರಲಿ. ಅವೆಲ್ಲವೂ ಧ್ಯಾನದ್ದೇ ರೂಪಗಳು. ಪ್ರಾರ್ಥನೆ, ಪೂಜೆ, ವಿಪಾಸನ, ಯೋಗ, ಸಾಂಖ್ಯಾ, ಭಕ್ತಿ, ಸನ್ಯಾಸ ಎಲ್ಲವೂ ಧ್ಯಾನವೇ. ಧ್ಯಾನದ ಅರ್ಥ : ಚಿತ್ರದ ಮೌನ, ನಿರ್ವಿಚಾರ, ಶುದ್ಧಾವಸ್ಥೆ.”

ಪುಸ್ತಕದ ಅನುಕ್ರಮದಲ್ಲಿ ಸುಮಾರು ೨೫ಕ್ಕೂ ಅಧಿಕ ಅಧ್ಯಾಯಗಳಿವೆ. ಈ ಎಲ್ಲಾ ಅಧ್ಯಾಯಗಳಲ್ಲಿ ಸಮಾನ್ಯವಾದ ವಿಷಯವೆಂದರೆ ಪ್ರೇಮ. ಅದರ ಜೊತೆ ಧ್ಯಾನದ ವಿಧಾನ, ಹಿಸ್ಟೀರಿಯಾ, ಧ್ಯಾನದ ಸ್ಥಾನ, ಗುರು ಪೂರ್ಣಿಮೆಯ ಚಂದ್ರ, ಝೆನ್ ಪ್ರಸಂಗ, ಮನುಷ್ಯರಾಗಿ ಇರುವುದರ ಕುರಿತು ಹೀಗೆ ವಿವಿಧ ವಿಷಯಗಳು ಉದಾಹರಣೆಯ ಸಹಿತ ಪ್ರಕಟಿಸಲಾಗಿದೆ. 

ಓಶೋ ಅವರು ತಮ್ಮ ಪೂನಾದ ಆಶ್ರಮದಲ್ಲಿ ಪ್ರವಚನ ನೀಡುತ್ತಿರುವಾಗ ಅವರನ್ನು ‘ಜಗತ್ತಿಗೆ ನಿಮ್ಮ ಸಂದೇಶವೇನು? ನೀವು ಯಾವ ಸಂದೇಶವನ್ನು ಕೊಡಲು ಬಯಸುವಿರಿ?’ ಎಂದು ಕೇಳಲಾಯಿತಂತೆ. ಅದಕ್ಕೆ ಉತ್ತರವಾಗಿ ಓಶೋ ಹೇಳಿದರು “ ನನ್ನ ಸಂದೇಶ ಸಂಕ್ಷಿಪ್ತವಾದುದು. ಶಾಸ್ತ್ರಗಳೆಲ್ಲವೂ ಅದರಲ್ಲಿ ಕೂಡಿರುತ್ತದೆ. ಯಾವುದೇ ಒಂದು ಪರಂಪರೆಯ ಶಾಸ್ತ್ರವಷ್ಟೇ. ಅಲ್ಲ, ಎಲ್ಲಾ ಪರಂಪರೆಗಳ ಶಾಸ್ತ್ರವೂ ಸೇರಿರುತ್ತದೆ. ಆಧ್ಯಾತ್ಮವಾದಿಗಳ ಶಾಸ್ತ್ರಗಳಷ್ಟೇ ಅಲ್ಲ, ಭೌತಿಕವಾದಿಗಳ ಶಾಸ್ತ್ರವೂ ಸೇರಿರುತ್ತದೆ.

ಆಸ್ತಿಕರಿಗೆ ಮತ್ತು ನಾಸ್ತಿಕರಿಗೆ ಇಬ್ಬರಿಗೂ ಸಮಾನ ರೂಪದೊಂದಿಗೆ ಸಿಗುವಂತಹ ಧರ್ಮವನ್ನು ನಾನು ಕೊಡಲು ಇಚ್ಚಿಸುತ್ತೇನೆ. ಶ್ರದ್ಧೆ ಮತ್ತು ಸಂದೇಶ ಎರಡನ್ನೂ ಸಮಾನ ರೂಪದೊಂದಿಗೆ ಸಿಗುವಂತಹ ಧರ್ಮವನ್ನು ಕೊಡಲು ನಾನು ಇಚ್ಚಿಸುತ್ತೇನೆ.”

ಪುಸ್ತಕದಲ್ಲಿ ಹಲವಾರು ಸಣ್ಣ ಪುಟ್ಟ ಕಥೆಗಳನ್ನು ಕೊಟ್ಟಿರುವುದರಿಂದ ಓದಲು ಮತ್ತು ಅರ್ಥೈಸಲು ಅನುಕೂಲವಾಗಿದೆ. ಓಶೋ ಅವರ ಬಗ್ಗೆ ಇನ್ನಷ್ಟು ತಿಳಿಯಲು ಈ ಪುಸ್ತಕ ಸಹಕಾರಿ. ಸುಮಾರು ೨೧೬ ಪುಟಗಳನ್ನು ಹೊಂದಿರುವ ಈ ಪುಸ್ತಕವು ೨೦೦೪ರಲ್ಲಿ ಪ್ರಕಟವಾಗಿದೆ.