ಪ್ರೇಮ ವಿರಹಗಳ ಭಾವಸಂಗಮ

ಪ್ರೇಮದ ಯಾಚನೆ ಮನುಷ್ಯನನ್ನು ಅಸಹಾಯಕನನ್ನಾಗಿಸುತ್ತದೆ. ಸಿಗುತ್ತದೆ ಎನ್ನುವ ವಿಶ್ವಾಸವಿದ್ದರೂ, ದೇವರಲ್ಲಿ ನೀನಾವ ಪ್ರಾರ್ಥನೆ ಮಾಡಬೇಡ. ಕೇಳೀದವರೂ ಪ್ರಾರ್ಥನಾ ರಹಿತ ಹೃದಯ ಕೇಳು ಎಂದು ಹೇಳುವ ಗಾಲಿಬ್, ತಣ್ಣಗಾಗಿ ದೇವರಲ್ಲಿ ಮೊರೆ ಹೋಗುತ್ತಾನೆ.
ಓ ದೇವರೇ, ಅವಳೆನ್ನ ಮಾತು ತಿಳಿಯಲಿಲ್ಲ ಎಂದೂ ತಿಳಿದ ಹಾಗೂ ಇಲ್ಲ. ನನ್ನ ಮಾತು ತಿಳಿವ ಹೃದಯವನ್ನಾದರೂ ಅವಳಿಗೆ ನೀಡು. ಇಲ್ಲವೇ ತಿಳಿದಂತೆ ಹೇಳುವ ಬೇರೆ ನಾಲಗೆಯನ್ನಾದರೂ ನನಗೆ ದಯಪಾಲಿಸು. ಹೀಗೆ ಹೇಳುವ ಗಾಲಿಬ್ ದೇವರಿಗಾಗಿ ಹಂಬಲಿಸುವುದು ನಿರರ್ಥಕವೆನಿಸುತ್ತದೆ. ಸಿಗದ ದೇವರಿಗಾಗಿ ಗುಡಿಕಟ್ಟಿ ಹಾಡತೊಡಗಿದವರಿಗೆ ಹೇಳುತ್ತಾನೆ; ನಿನ್ನನ್ನು ಹುಡುಕುತ ಪ್ರತಿ ಹೆಜ್ಜೆಗೆ ದುಃಖಿತರು ನಿಂತರು. ತಂಗಿದರು. ನೀನು ಅಲ್ಲೆಲ್ಲಿಯೂ ಕಾಣದೆ ನಿನಗಾಗಿ ಗುಡಿ ಕಟ್ಟಿದರು, ಪ್ರಾರ್ಥಿಸಿದರು.
'ವಧಾ ಸ್ಥಾನಕ್ಕೆ ತಂದಿರುವ ಆಸೆ ಹೊತ್ತವರ ಸಂತಸ ಕೇಳದಿರು, ಕೊಲೆ ಮಾಡಲೆಂದು ಒರೆಯಿಂದ ಕತ್ತಿ ಹರಿದ ದೃಶ್ಯವೂ ಅವರಿಗೆ ಹಬ್ಬದುತ್ಸವ...' ಎಂಧು ಪ್ರೇಮಿಸುವವರ, ಹತಾಶರಾದವರ ಹೃದಯದ ನೋವಿನೆಳೆಯನು ಹಿಂಜಿ ಹೇಳುವ ಗಾಲಿಬ್, ಸಾವಿನ ಕುರಿತಾಗಿಯೂ ಮಮತೆಯಿಂದಲೇ ಬರೆವ ಬದುಕಿನ ನಿಷ್ಠ ಗುಣವುಳ್ಳವನು!
ಅವಳಿಗಂಟಿಕೊಂಡಿದ್ದರೂ ಅವಳ ಭಿನ್ನ ನಡತೆಯಿಂದ ಮುಕ್ತಿ ಬಯಸಿದೆ. ಆದರೇನು. ಅವಳ ಕ್ರೌರ್ಯ ಅಡ್ಡ ಬಂತು ನನ್ನ ಸಾವಿನಾಸೆಗೆ. ಜೀವನದ ದುಃಖಕ್ಕೆ ಸಾವೊಂದೇ ಮದ್ದು ನಿಜ. ಹಲವು ಬಣ್ಣದಲಿ ಉರಿಯುತ್ತದೆ ದೀಪ, ಬೆಳಗಾಗುವ ತನಕ...
ಪ್ರೀತಿಯ ಘನತೆಯನು ಯಾತನೆಯಿಂದಲೂ ಹೇಳಿದ ಗಾಲಿಬ್, ಅದರ ಮುಂದೆ ಬದುಕೇ ನಿರರ್ಥಕ ಎನ್ನುವಂತೆ ಬರೆದ, ಬದುಕಿದ. ಪ್ರಿಯತಮೆಯ ಎದುರು ರಾಜ ಗುಲಾಮನಾಗುವ ಪರಿ, ಕುಬೇರನೂ ಬೇಡುವ ಸ್ಥಿತಿ, ಗರ್ವಿಷ್ಠನ ಯಾಚನೆಯ ನೋಟ, ಎಲ್ಲ ವಿಚಿತ್ರ. ಅಂತೆಯೇ ಆತ ಹೇಳುತ್ತಾನೆ: ನಿನ್ನ ನೋಡುವುದಕ್ಕಾಗಿಯೇ ಕಣ್ಣೀರು ನನ್ನ ಪ್ರತಿಷ್ಠೆಯನು ತೊಳೆದು ಹಾಕಿದೆ.
ಈಗ ನನ್ನ ಕಣ್ಣಲ್ಲಿರುವುದು ಇಬ್ಬನಿಯಂಥ ಪವಿತ್ರ ನೋಟವೊಂದೇ… ಬಹುಶಃ ಪ್ರೇಮ ಬೇಡುವ ಮೊದಲ ಅರ್ಹತೆಯೇ ಇದಾಗಿರಬಹುದು!
ಬರೀ ಪ್ರೇಮದ ಗಾಯಗಳಿಗೆ ಗಾಲಿಬ್ ನಾಲಿಗೆಯನ್ನು ನೀಡಲಿಲ್ಲ. ರೈತನ ನೋವಿನ ಕುರಿತಾಗಿ ಬರೆದ ಈ ಸಾಲುಗಳು ಇಂದಿನ ರೈತನ ದುರಂತ ಸ್ಥಿತಿಯನ್ನು ಹೇಳುತ್ತವೆ,
'ಬದುಕಿನ ತಳಹದಿಯಲ್ಲಿಯೇ ಅವಿತಿವೆ ನಾಶದ ಬೀಜಗಳು,
ರೈತನ ಬೆವರೇ ಸಿಡಿಲಾಗುತ ಬೆಳೆ ಸುಡುವುದು ಸುಗ್ಗಿಯೊಳು'
ಬದುಕಿನ ಕ್ರೂರ ಚೆಲುವನ್ನು, ತಣ್ಣಗಿನ ಪ್ರೀತಿಯನ್ನು ಸುಡುವ ನೆನಪನ್ನು, ಕಾಲದ ಮೌನವನ್ನು ಬಣ್ಣವಿಲ್ಲದೇ ಬಣ್ಣಿಸಿದ ಹದಗಾರ ಬಾಲಿಬ್, ಕನಸು, ವಾಸ್ತವಗಳ ಕಪ್ಪು - ಬಿಳುಪಿನಲ್ಲಿಯೇ ಬದುಕನ್ನು ಹಾಡಾಗಿಸಿದ.
ಜಗತ್ತಿನಿಂದ ಹುಚ್ಚ ಎಂದು ಕರೆಸಿಕೊಂಡ ಆತ, 'ಹುಚ್ಚು' ಪ್ರತಿಭೆಯ ಅಂಶ ಎಂಬುನ್ನು ಸಾಬೀತುಪಡಿಸಿದ.
ಹತಾಶೆ ಅನುಭವಿಸಲು ಮನಸು ಕೊನೆಗೊಮ್ಮೆ ಸಮಾಧಾನಗೊಳ್ಳಲು.
ಚೆಲುವಾದ ಮುಖಗಳು ಮಣ್ಣಿನಲಿ ಮಣ್ಣಾಗಿಲ್ಲ
ಕೆಲವಾದರೂ ಸರಿ, ಹೂಗಳಲಿ ಪ್ರಕಟಗೊಂಡಿವೆ....
ಎಂದು ಹೇಳಿದ.
ಎದೆಯ ನೋವಾಗಿ, ಕಣ್ಣಿನ ಹೂವಾಗಿ ಕಾಡುವ ಗಾಲಿಬ್, ಪ್ರೀತಿಸುವ ಹೃದಯಗಳಿಗೊಂದು ಪಾಠ,
ಬದುಕನ್ನು ಪ್ರೀತಿಯಿಂದಲೇ ನೋಡಬೇಕೆನ್ನುವ ಒಂದು ನೋಟ...
ಈಗಲೂ ಗಾಲಿಬ್ ಮತ್ತು ಆತನ ಕವಿತೆಗಳು, ಇರುಳಿನೆದೆಯಲಿ ಕಣ್ಣ ಇಬ್ಬನಿಯಾಗುವ ನೋವು... ಹಾಗೆಯೇ ಸುಪ್ರಭಾತದಲಿ ಅರಳುವ ವಿಷಾದದ ಹೂವು...
ನಮ್ಮ ಸುಖದ ಘಳಿಗೆಗಳನ್ನು ಹಾಡುವವರು ಸಾಕಷ್ಟು ಮಂದಿ ಸಿಗುತ್ತಾರೆ. ಆದರೆ, ವಿಷಾದಕ್ಕೆ ದನಿಯಾಗುವವರು? ಗಾಲಿಬ್ ಅಂಥವನು. ಆತ ನಮ್ಮೆದುರ ವಿರಹಕ್ಕೆ, ನೋವಿಗೆ ಮೆಲಂಕಲಿಗಳನ್ನು ಹಾಡಿದವನು. ಈ ಫೆಬ್ರವರಿ ಹದಿನೈದು ಅವನನನ್ನು ಕಳಕೊಂಡ ೧೩೫ನೇ ವಿರಹ ವರುಷ.
ಇಸ್ಲಾಂ ಧರ್ಮದಲ್ಲಿ ಮದ್ಯಪಾನ ವರ್ಜ್ಯ. ಆದರೆ ಮಧುಬಟ್ಟಲಿನಿಂದಲೇ ಮಾತುಗಳನ್ನಾರಂಭಿಸುತ್ತಿದ್ದ ಆತನನ್ನು ಬಾಂಧವರು 'ಕಾಫಿರ್' ಎಂದು ಕರೆದರು.
'ಪಾಪದ ಹೊಳೆ ತನ್ನ ಅಲ್ಪತೆಯಿಂದಾಗಿಯೇ ಒಣಗಿತು; ನನ್ನ ಬಟ್ಟೆಯ ಚುಂಗು ಕೂಡಾ ಇನ್ನೂ ಒದ್ದೆಯಾಗಿರಲಿಲ್ಲ.' ಎಂದು ಬೆಚ್ಚಿ ಬೀಳುವಂತೆ ಹೇಳುವ ಗಾಲಿಬ್ ತನ್ನ ಪಾಪ ತೊಳೆಯುವ ಮದ್ದು ಯಾವ ಧರ್ಮಗಳಲ್ಲಿಯೂ ಇಲ್ಲವೆಂದ. ಹೀಗಾಗಿ ಆತ 'ಪ್ರೀತಿ' ಮತ್ತು 'ನೋವು'ಗಳಲ್ಲಿ ಧರ್ಮವನ್ನು ಮೀರಿದವನು!
ಮಂದಿರ ಯಾವುದು? ಮಸೀದಿ ಯಾವುದು? ಅವು ಮಿಥ್ಯ ಕಟ್ಟಿ ಬೆಳೆಸುವ ಕೇಂದ್ರಗಳೆಂದು ದೂರುವ ಆತನ ಮಾತುಗಳು ಈ ಘಳಿಗೆಗಳಿಂದಲೂ ಹೊರತಾಗಿ ಉಳಿಯುವುದಿಲ್ಲ.
ಉರ್ದು ಕಾವ್ಯದಲ್ಲಿ ಗಝಲ್, ಕಸೀದಾ ಹಾಗೂ ಮುತ್ನವಿ ಮಹತ್ವದ ಪ್ರಕಾರಗಳೆನಿಸಿವೆ. ಗಝಲ್‌ನಲ್ಲಿ ಪ್ರೇಮ, ಸುರೆ ಹಾಗೂ ಆಧ್ಯಾತ್ಮ ರಹಸ್ಯೆಗಳ ಪ್ರಧಾನ ವಿಷಯಗಳು. ಆರಂಭದಲ್ಲಿ ಪರ್ಶಿಯನ್ ಭಾಷೆಯಲ್ಲಿ ಬರೆದ ಗಾಲಿಬ್, ನಂತರ ಉರ್ದುವಿನಲ್ಲಿ ಸಾಂಪ್ರದಾಯಿಕ ಚೌಕಟ್ಟುಗಳನ್ನು ಮುರಿದು ನಡೆದದ್ದೇ ಹಾದಿ ಎನ್ನುವಂತೆ ಬರೆದ.
ಪ್ರೇಮ ಹೃದಯದಲ್ಲಿ ಸತತವಾಗಿ ಜ್ವಲಿಸುವ ಬೆಂಕಿ ಹಾಗೂ ಬೆಳಕೂ ಹೌದು. ಅದು ಗಾಲಿಬ್‌ನ ಕವಿತೆಗಳಲ್ಲಿನ ಸ್ಥಾಯಿ ಭಾವ.
ಪ್ರೇಮ ಮತ್ತು ಕಾವ್ಯ ಎರಡೂ ಅದ್ಭುತ ವಿಷಯಗಳು; ಅವುಗಳೀಗೆ `ಇದು ಹೀಗೆ' ಎಂಧು ಗೆರೆ ಗೀಚಿ ಚೌಕಟ್ಟು ಹಾಕಲು ಸಾಧ್ಯವಿಲ್ಲ. ಘಳಿಗೆ ಘಳಿಗೆಗೂ ಹಾಕಿದ ಗೆರೆಗಳನ್ನು, ಹೇಳಿದ ಸಿದ್ಧಾಂತಗಳನ್ನು, ನಿಷೇಧಗಳನ್ನು ದಾಟಿ ಹೊಸ ವ್ಯಾಖ್ಯಾನಗಳಾಗಿ ಹುಟ್ಟುತ್ತವೆ.
ಅಂಥ ಪ್ರೇಮಕ್ಕಾಗಿ ಹಂಬಲಿಸಿದ ಗಾಲಿಬ್.
'ಪ್ರೇಮದಿಂದ ಅರಿತುಕೊಂಡೆ ನಿಜ ಜೀವನದರ್ಥವನ್ನು. ಯಾವುದೆಲ್ಲಾ ಬೇನೆಗೆ ಮದ್ದೋ, ಅದುವೇ ಮದ್ದಿಲ್ಲದ ಬೇನೆ ಎಂಬುದನು' ಎಂದು ಹೇಳುತ್ತಾನೆ.
ಕಾಲ ಸ್ಥಳದಿಂದ ಬಂಧಿಸಲ್ಪಟ್ಟ ಕಾರಣ ಮನಸಾರೆ ಕಣ್ಣೀರು ಸುರಿಸುವುದು ಅಸಾಧ್ಯವಾಗಿದೆ. ನಾನು ಕಡಲನ್ನು ಆಮಂತ್ರಿಸುವೆ, ನೀನು ಮರುಭೂಮಿಯನ್ನು ನೀಡು.
ಹೀಗೆ ಹೆಪ್ಪುಗಟ್ಟಿದ ದುಃಖವನ್ನೆಲ್ಲಾ ಕಣ್ಣೀರಾಗಿಸಲೂ ಆಗದ ಅಸಹಾಯಕತೆಯಿಂದ ಅಕ್ಷರಕ್ಕಿಳಿಸಿದ ಮಿರ್ಜಾ ಗಾಲಿಬ್ ಗತಿಸಿ, ನೂರಾ ಮೂವತ್ತೈದು ವರ್ಷವಾದರೂ (೧೮೬೯ ಫೆಬ್ರವರಿ ೧೫) ಈಗಲೂ ವಿಷಾದ ಉಣ್ಣುವ ಪ್ರತಿ ಎದೆಗಳ ಆಲಾಪವಾಗುತ್ತಾನೆ.
ಹದಿನೆಂಟನೇ ಶತಮಾನದ ಅಂತ್ಯದಲ್ಲಿ, ೧೭೯೭ ಡಿಸೆಂಬರ್ ೨೭ರಂದು ಆಗ್ರಾದಲ್ಲಿ ಹುಟ್ಟಿದ ಮಿರ್ಜಾ ಅಸದುಲ್ಲಾಖಾನ್ ಗಾಲಿಬ್, ಸಾಂಪ್ರದಾಯಿಕ ಉರ್ದು ಸಾಹಿತ್ಯದ ಪಹರೆಗಳನ್ನು ದಾಟಿ, ಘನೀಕೃತವಾದ ಅಭಿವ್ಯಕ್ತಿಯೊಂದನ್ನು ಪರ್ಶಿಯನ್ ಹಾಗೂ ಉರ್ದು ಭಾಷೆಗಳೆರಡರಲ್ಲೂ ತೆರೆದಿಟ್ಟ ಕನಸುಗಾರ!
ಲಕಸಾ, ಹೈದರಾಬಾದ್ ನಂತರ ಅಲ್ವಾರದ ರಾಜಾ ಭಕ್ತಾವರ್ ಸಿಂಗ್‌ನಲ್ಲಿ ಸೈನ್ಯಾಧಿಕಾರಿಯಾಗಿ ಸೇವೆಯಲ್ಲಿದ್ದ ತಂದೆ ಮಿರ್ಜಾ ಅಬ್ದುಲ್ಲಾ ಬೇಗ್ ಖಾನ್, ಸೈನಿಕ ಗಲಭೆಯೊಂದರಲ್ಲಿ ಹತ್ಯೆಗೀಡಾದ ನಂತರ ಐದು ವರ್ಷದ ಗಾಲಿಬ್ ಚಿಕ್ಕಪ್ಪ ನಸ್ರುಲ್ಲಾಖಾನ್‌ರ ಹೊಣೆಯಲ್ಲಿಯೇ ಬೆಳೆಯಬೇಕಾಯಿತು. ಬ್ರಿಟಿಷರಿಂದ ಚಿಕ್ಕಪ್ಪನಿಗೆ ಕೊಡುಗೆಯಾಗಿ ಪ್ರತಿ ತಿಂಗಳು ಸಂದಾಯವಾಗುತ್ತಿದ್ದ ೧೭೦೦ ರೂಪಾಯಿಗಳು "ಆತನ ಮಕ್ಕಳು ಹಾಗೂ ಗಾಲಿಬ್‌ಗೆ ವರ್ಷಾಸನವಾಗಿ ಹಂಚಲಾಗುತ್ತಿತ್ತು.
ಗಾಲಿಬ್, ಪ್ರೇಮದಂತೆ ಆಯುಷ್ಯವಿಡೀ ತನಗೆ ಸಿಗಬೇಕಿದ್ದ ಈ ವರ್ಷಾಸನಕ್ಕಾಗಿ ಬ್ರಿಟಿಷ್ ಅಧಿಕಾರಿಗಳ ಭೇಟಿಗೆ ಕೊಲ್ಕತ್ತ, ದೆಹಲಿ ಮೊದಲಾದ ಕಡೆ ಅಲೆದು ಪರದಾಡಿದ, ವಿಚಿತ್ರವೆಂಧರೆ, ಅವರೆದುರು ನ್ಯಾಯಯುತ ಹಕ್ಕು ಮಂಡಿಸುತ್ತಿದ್ದನೇ ಹೊರತು ತನ್ನ ಗತ್ತು, ಗೌರವವನ್ನೆಂದೂ ಬಿಟ್ಟು ಕೊಡಲಿಲ್ಲ. ಈ ಕಾರಣಕ್ಕಾಗಿಯೇ ತಾನಿರುವ ಜಾಗಕ್ಕೆ ಬ್ರಿಟಿಷ್ ಅಧಿಕಾರಿ ಸ್ವಾಗತಿಸಲಿಲ್ಲ ಎನ್ನುವ ಕಾರಣಕ್ಕೆ ಸಿಗುವ ಹುದ್ದೆಯನ್ನು ಕಳೆದುಕೊಂಡ! ಅದಕ್ಕೆ ವ್ಯಥೆಪಡದೆ ರಾಜದರಬಾರದ ಮನ್ನಣೆಯಲ್ಲಿಯೇ ಬದುಕಲು ಹಂಬಲಿಸಿದವನು, ಬದುಕಿದವನು. ಆದರೂ ಅದೃಷ್ಟ ಅವನ ಪಾಲಿಗೆ ಇರಲಿಲ್ಲ.
೧೩ನೇ ವಯಸ್ಸಿನಲ್ಲಿ ಉಮ್‌ರಾವ್ ಬೇಗಮ್‌ಳೊಂದಿಗೆ ವಿವಾಹವಾದರೂ ಬದುಕಿನಿದ್ದಕ್ಕೂ ಗಾಲಿಬ್ ಅರಿಸಿದ್ದು 'ಪ್ರೇಮ' ಮತ್ತು 'ಮಧುಬಟ್ಟಲ'ನ್ನು.
ನಿನ್ನ ಹೃದಯ ಸ್ಪರ್ಶ ಪಡೆಯಲು ಒಂದು ಜೀವಮಾನವೇ ಬೇಕು.
ಹೀಗಿರಲು, ನಿನ್ನ ಹರಡಿರುವ ಮುಂಗುರುಳ ಸಿಂಗರಿಸುವ ತನಕ ಬದುಕಿರಲು ಸಾಧ್ಯವೇ?
ಎಂದು ಪ್ರಶ್ನಿಸುವ ಗಾಲಿಬ್, ಪ್ರೇಮದ ಅಗಾಧತೆಯನ್ನು, ಅಸಹಾಯಕತೆಯನ್ನು ಒಟ್ಟೊಟ್ಟಿಗೆ ಅಭಿವ್ಯಕ್ತಗೊಳಿಸಿದ.
ಆಗಿನ ಬ್ರಿಟೀಷ್ ಆಡಳಿತದ ಬಗೆಗಿನ ಗಾಲಿಬ್‌ನ ಮೌಜ ಪ್ರಶ್ನಾರ್ಹವೆಂದೆನಿಸದರೂ 'ಧರ್ಮ' ಮತ್ತು 'ದೇಶಭಕ್ತಿ' ತೋರಿಕೆಯದಾಗಿರಬಾರದೆಂಬುದು ಆತನ ನಂಬಿಕೆಯಾಗಿತ್ತು.
-ತುರುವೀಹಾಳ ಚಂದ್ರು
ಚಿತ್ರ ಕೃಪೆ:ಇಂಟರ್ನೆಟ್ ತಾಣ