ಪ್ರೊಡಕ್ಷನ್ ನಂ -೧ ಭಾಗ-೬

ಪ್ರೊಡಕ್ಷನ್ ನಂ -೧ ಭಾಗ-೬

 ’ಹ್ಮ್.. ಇನ್ನೂ ಮುಗಿದಿಲ್ಲ....ನೀವು ಪ್ರೆಷಪ್ ಆಗಿ ಬನ್ನಿ ಜೊತೆಲಿ ನೋಡೋಣ” ಸುಮತಿ.

’ಸರಿ ನನಗೂ ಇದನ್ನು ಪೂರ್ತಿ ನೋಡೋದಿಕ್ಕಾಗಿರ್ಲಿಲ್ಲ.. ಎಲ್ರೂ ಬರೋದ್ರೊಳಗೆ ಕಂಪ್ಲೀಟಾಗಿ ನೋಡ್ಬೇಕು” ಎಂದು ಹೇಳಿ ಮತ್ತೆ ಹೊರಗೆ ಹೋಗ್ತಾನೆ ಅರವಿಂದ್.

’ನಾನು ಹೋಗಿ ಕಿಚನ್ ನಲ್ಲಿ ಇರೋ ಕೆಲ್ಸಗಳನ್ನೆಲ್ಲ ಮುಗಿಸಿ ಬರ್ತೀನಿ. ಮತ್ತೆ ಎಲ್ರೂ ಬಂದ್ಬಿಟ್ರೆ ಮುಗಿಸೋದಿಕ್ಕಾಗಲ್ಲ” ಎಂತಂದು ಸುಮತಿ ಎದ್ದು ಹೊರಗೆ ಹೋಗ್ತಾಳೆ.

ರಶ್ಮಿ ಕೌಶಿಕ್ ಕಡೆಗೆ ತಿರುಗಿ ’ ಈ ಮದುವೆ ಅನ್ನೋ ಬಂದನದಲ್ಲಿ ಒಮ್ಮೆ ಸಿಕ್ಕಿಕೊಂಡರೆ, ಎಷ್ಟೇ ಮುಂದುವರಿದ ಹೆಣ್ಣಾದ್ರು ತನ್ನ ಜವಾಬ್ದಾರಿಗಳಿಂದ ಮುಕ್ತಿ ಸಿಗೋದೆ ಇಲ್ವಲ್ಲ.. ಥ್ಯಾಂಕ್ ಗಾಡ್ ನನ್ ವಿಷಯದಲ್ಲಿ ಸೇಫ್ ಆದೆ. ಅಲ್ವಾ ಕೌಶಿಕ್’

’ಯಾಕೆ ಮುಂದೆ ನಿನಗೆ ಮದುವೆ ಆಗೋ ಪ್ಲಾನೆ ಇಲ್ವಾ?’

’ಇದೇನಿದು ಹೊಸದಾಗಿ ಕೇಳ್ತಿದೀಯಾ.. ನಾವಿಬ್ಬರೂ ಮೊದಲೆ ಮಾತಾಡಿಕೊಂಡು ತಾನೆ ಜೊತೆಗಿರಲು ಒಪ್ಪಿದ್ದು.. ನಾವ್ಯಾವತ್ತಿಗೂ ಮದುವೆ ಅನ್ನೋ ಬಂಧನದಲ್ಲಿ ಬೀಳೋದಿಲ್ಲ. ಇದ್ದಷ್ಟು ದಿನ ಜೊತೆಯಲ್ಲಿರೋಣ. ಆಮೆಲೆ ನಂದಾರಿ ನಂದು.. ನಿನ್ ದಾರಿ ನಿಂದು ಅನ್ನೋ ಒಪ್ಪಂದದ ಮೇಲೆ..?’

’ಹೌದು ಈಗ ನಾನೆಲ್ಲಿ ನನ್ನ ಮದುವೆ ಮಾಡ್ಕೊಳ್ತೀಯಾ ಅಂತ ಕೇಳ್ತಾ ಇದೀನಿ. ಮುಂದೆ ನಾವಿಬ್ರೂ ಬೇರೆ ಆದಾಗ ನಿನಗೆ ಮದುವೆ ಆಗ್ಬೇಕು ಅಂತ ಅನ್ನಿಸ್ತಾ ಇಲ್ವಾ? ಅಥವಾ ಮುಂದೆ ಹೀಗೇನೆ ಲೀವಿಂಗ್ ಟುಗೆದರ್ ರಿಲೇಷನ್ ಷಿಪ್ಪನ್ನೇ ಕಂಟಿನ್ಯೂ ಮಾಡ್ತೀಯಾ?’

’ಸಧ್ಯಕ್ಕೆ ಆ ಆಲೋಚನೆಗಳನ್ನು ಮಾಡಿಲ್ಲ. ಆದ್ರೆ  ಈಗಿನ ಕೆಲಸದಲ್ಲಿ ಪ್ರಮೋಷನ್ ಸಿಕ್ಕಿ ಬೇರೆಲ್ಲಾದ್ರು ಹೋಗೋ ಪರಿಸ್ಥಿತಿ ಬಂದಾಗ ಯೋಚ್ನೆ ಮಾಡ್ತೀನಿ. ನೀನೇನೂ ನನ್ನ ಬಿಟ್ಟು ಹೋಗೋ ಪ್ಲಾನಲ್ಲಿ ಇಲ್ಲ ತಾನೇ?’

’ಹ್ಮ್ ಸದ್ಯಕ್ಕೆ ಇಲ್ಲ ಬಟ್ ಮದುವೆಯ ಬಗ್ಗೆ ಇತ್ತೀಚೆಗೆ ಯೋಚನೆ ಮಾಡ್ಬೇಕು ಅಂತ ಅನ್ನಿಸ್ತಿದೆ. ಯಾಕೆ ಅಂತ ಗೊತ್ತಿಲ್ಲ. ಆದ್ರೆ ಕೆಲವು ಸಂಭಂದಗಳು ನನ್ನದು ಅನ್ನೋ ಭಾವನೆ ಬರೋ ಹಾಗಿದ್ರೆ ಚೆನ್ನಾಗಿರುತ್ತೆ ಅಂತ ಅನಿಸೋದಿಕ್ಕೆ ಶುರು ಅಗಿದೆ.  ಈ ನಮ್ಮಿಬ್ಬರ ರಿಲೇಷನ್ ರೀತಿ ಖುಶಿಕೊಡುತ್ತೆ ಆದ್ರೆ ಯಾವತ್ತಿಗೂ  ಇದು ನನ್ನದು ಅನ್ನೋ ಬಾವನೇನೆ ಬರೋದಿಲ್ಲ.ಜೊತೆಗಿದ್ದರೂ ಒಂಟಿ ಅನಿಸೋದಿಕ್ಕೆ ಶುರುವಾಗುತ್ತೆ.’

’ಹೋ (ವ್ಯಂಗ್ಯವಾಗಿ) ಗಂಡಸಿನ ಯಜಮಾನಿಕೆಯ ಲಕ್ಷಣಗಳು ಕಾಣ್ಸೋದಿಕ್ಕೆ ಸ್ಟಾರ್ಟ್ ಆಗಿರೋ ಹಾಗೆ ಕಾಣಿಸುತ್ತೆ’

’ಹಾಗೇನಿಲ್ಲ.’

’ಮತ್ತೇನು ಅದರ ಅರ್ಥ? ನಿನಗೆ ನಿನ್ನದು ಅನ್ನೋ ಒಂದು ಹೆಣ್ಣಿನ ದೇಹ ಬೇಕು ಅದರ ಮೇಲೆ ನಿನ್ನ ಯಜಮಾನಿಕೆ ತೋರಿಸ್ಬೇಕು. ನೀನು ಕೂತಲ್ಲಿ ನಿನಗೆ ಎಲ್ಲಾ ತಂದುಕೊಡಬೇಕು, ನಿನ್ನ ಸೇವೆ ಮಾಡ್ಬೇಕು, ನೀನು ಕರೆದಾಗ- ನಿನಗೆ    ಬೇಕೆನಿಸಿದಾಗ ಸುಖ ಕೊಡೋ ಭೋಗದ ವಸ್ತುವಾಗಿರ್ಬೇಕು ಅಲ್ವಾ?, ನಿಮ್ಮ ಗಂಡಸರದೆಲ್ಲಾ ಇದೇ ಚೀಪ್ ಮೆಂಟಾಲಿಟಿ.’

’ನಾನು ಹೇಳಿದ್ದು ಆ ಅರ್ಥದಲಲ್ಲ, ನಿನಗ್ಯಾಕೆ ಯಾವಾಗ್ಲು ಅದೇ ಆಂಗ್ಯಲ್ ನಲ್ಲೇ ಯೋಚ್ನೆ ಬರುತ್ತೆ? ನನ್ನ ಮಾತಿನ ಉದ್ದೇಶ ಇಷ್ಟೇ ನನಗೆ ನಾನು ಮುಕ್ತವಾಗಿ ನನ್ನೆಲ್ಲಾ ಭಾವನೆ ಸುಖ ದುಖಃ ಎಲ್ಲವನ್ನು ಮುಕ್ತವಾಗಿ ಹಂಚಿಕೊಳ್ಲಬಹುದಾದ, ನನ್ನ ನಾನು ಮರೆಯಬಹುದಾದ ನನ್ನದೇ ಆದ ಸಂಗಾತಿ ಇದು ಅಂತ ಅನಿಸೊ ಒಬ್ಬ ಸಂಗಾತಿಯನ್ನು ಹುಡುಕಿಕೊಳ್ಳಬೇಕು, ಅಂತನ್ನಿಸೋ ಭಾವನೆ ಗಂಡಸರ ಯಜಮಾನಿಕೆ ಹೇಗಾಗುತ್ತೆ? ಇದೆ ಭಾವನೆ, ಆಸೆ ಆಕಾಂಕ್ಷೆ, ಹುಡುಗಿಯರಲ್ಲು ನ್ಯಾಚುರಲ್ಲಾಗಿ ಇದ್ದೇ ಇರುತ್ತಲ್ಲ. ಅವರು ತಮ್ಮನ್ನು ತಾವು ಎಷ್ಟೇ ಮಾಡ್ರನ್ ಅಂತ ಅನ್ಕೊಂಡ್ರು ಕೂಡ...?’

’ಹುಡುಗಿಯರ ಬಗ್ಗೆ ಏನು ಗೊತ್ತು ಅಂತ ಜನ್ರಲೈಸ್ ಮಾಡ್ತೀಯಾ? ಈಗ ಉದಾಹರಣೆಗೆ ನನ್ನನ್ನೇ ತಗೋ.. ನಾನ್ಯಾವತ್ತು ಆರೀತಿ ಯೋಚನೆ ಮಾಡೇ ಇಲ್ಲ. ನನಗೆ ನನ್ನದೇ ಆದ ಒಬ್ಬ ಸಂಗಾತಿ ಬೇಕು ಅನ್ನೋ ಸೆಲ್ಫ್ ಸೆಂಟರ್ಡ್ ಯೋಚನೆಗಳು ಬಂದೇ ಇಲ್ವಲ್ಲ. ನಾವು ಇಷ್ಟು ದಿನಗಳಿಂದ ಜೊತೇಲಿದ್ದೀವಿ. ನಮಗೆ ಪರಸ್ಪರ ಒಪ್ಪಿಗೆ ಆದಾಗ ನಮಗೇನು ಬೇಕು ಅದನ್ನ ಶೇರ್ ಮಾಡ್ಕೊಂಡಿದೀವಿ. ಅದು ದೈಹಿಕ ಸುಖ ಆಗ್ಬಹುದು ಅಥವ ನಾವು ಮಲಗೋ ಬೆಡ್ ಆಗ್ಬಹೌದು, ಯೂಸ್ ಮಾಡೋ ಕಂಪ್ಯೂಟರ್ ಲ್ಯಾಪ್ಟಾಪ್ ಆಗ್ಬಹುದು.ಯಾವುದೇ ಆಗಲಿ. ನಿನ್ನದು ನಿನಗೆ ನನ್ನದು ನನಗೆ. ಒಪ್ಪಿಗೆ ಆದಾಗ ಶೇರ್ ಮಾಡ್ಕೊಳ್ಲೋದು ಅಷ್ಟೇ. ಇಬ್ರೂ ಖುಷಿಯಾಗೇ ಇದ್ದೀವಲ್ಲ. ನಮ್ಮಿಬ್ಬರ ಮಧ್ಯ ಯಾವತ್ತು ಕ್ಲಾಷ್ಗಳು ಬಂದಿಲ್ಲ. ಈ ಅಧಿಕಾರರಹಿತವಾದ ಇಂಡಿಪೆಂಡ್ ಜೀವನ ತಾನೇ ನಮಗೆ ನಮ್ಮ ಸ್ವಂತಿಕೆ ಅನ್ನೋ ಭಾವವನ್ನು ಸದಾ ಖುಷಿ ಪಡಿಸುತ್ತ ಸ್ವತಂತ್ರವಾಗಿ ಬಾಳೋದಿಕ್ಕೆ ಪ್ರೇರಣೆ ನೀಡ್ತಿರೋದು?’

’ಹೌದು ಆದ್ರೆ ಎಷ್ಟು ದಿನ?’

’ಎಷ್ಟು ದಿನ ಆಗುತ್ತೋ ಅಷ್ಟು ದಿನ, ನಮ್ಮಿಬ್ಬರಲ್ಲಿ ಮತ್ತೊಬ್ಬರು ಬೇಡ ಅನಿಸೋವರ್ಗೂ. ಆಮೆಲೆ ನಮ್ ನಮ್ ದಾರಿ ನಮ್ದು. ನಮಗೆ ಮತ್ತೆ ಇನ್ಯಾರು ಆ ರೀತಿ ಕಂಫರ್ಟ್ ಕೊಡ್ತಾರೋ ಅವ್ರ ಜೊತೆ ಹೋಗೋದು ಅಷ್ಟೇ. ಮದುವೆ ಅನ್ನೋ ಜಡ ಬಂದನಕ್ಕೆ ಅಂಟಿಕೊಂಡು ಪರಸ್ಪರರ ಮೆಲೆ ಪ್ರಿತಿ ಅನ್ನೋದು ಇಲ್ದೆ ಇದ್ರೂ ಇನ್ಯಾವುದೋ ಸ್ವಾರ್ಥ ಕಾರಣಗಳನ್ನು ಮುಂದಿಟ್ಟುಕೊಂಡು ಮನದಲ್ಲಿ ಮತ್ತ್ಯಾರ ಬಗ್ಗೆನೋ ಕನಸಿನ ಗೋಪುರಗಳನ್ನು ಕಟ್ಟಿಕೊಂಡು ಅದನ್ನು ಪಡೆಯಲಾಗದೆ, ವಾಸ್ತವದ ಸೌದದಲ್ಲಿ ಬಾಳಲಾಗದೆ, ಅಕಸ್ಮಾತ್ ಕನಸಿನ ಸೌದ ಪ್ರವೇಶಿಸಬೇಕೆಂದರು ಭಯದ ವಾತಾವರಣದಲ್ಲೆ ಕನಸಿನ ಸೌದವನ್ನು ಪ್ರವೇಶಿಸಿ, ಅದನ್ನೂ ಅನುಭವಿಸದೆ ವಾಸ್ತವಕ್ಕೂ ಬರಲಾಗದೆ ಅರೆಮಂಪರಿನ ಜೀವನ ನಡೆಸೋದಕ್ಕಿಂತ, ಇಂತ ಮುಕ್ತವಾದ ಸಂಬಂದಗಳಲ್ಲಿ ಜೀವಿಸುತ್ತಾ. ನಮಗೆ ಏನು ಬೇಕು, ಎಲ್ಲಿ ಬೇಕೋ ಅದನ್ನು ಪಡೆಯುತ್ತಾ ಸಾಗುವುದೇ ನಿಜವಾದ ಸ್ವಾತಂತ್ರ್ಯ ಅಂತ ಅನಿಸೋದಿಲ್ವಾ ನಿನಗೆ?’

 

ಓ ಮತ್ತೆ ಇಬ್ರೂ ಜಗಳ ಶುರು ಮಾಡ್ಕೊಂಡ್ರಾ  ಅಂತ ಹೇಳ್ಕೊಂಡು ಸುಮತಿ ಒಳಗೆ ಬರ್ತಾಳೆ.. ಹಿಂದೇನೆ ಅರವಿಂದ್ ಒಳಗೆ ಬರ್ತಾನೆ.

’ಅದು ಜಗಳ ಅಲ್ಲ ಆಂಟಿ..  ಅಂತ ಶುರು ಮಾಡಲು ಹೋದ ರಶ್ಮಿಯನ್ನು ಅಷ್ಟರಲ್ಲೆ ತಡೆದ ಅರವಿಂದ್.. ’ನಿಮ್ಮಿಬ್ಬರ ವಾಗ್ವಾದ ಈಗ ಬೇಡ ಬ್ಯಾಲೆನ್ಸ್ ಇರೋದನ್ನ ನೋಡಿಬಿಡೋಣ. ಇಲ್ಲಾಂದ್ರೆ ಎಲ್ರೂ ಮನೆಗೆ ಬಂದ್ರೆ ನೋಡೋದಿಕ್ಕಾಗಲ್ಲ. ಇನ್ನೂ ಕೆಲ್ಸಗಳು ಜಾಸ್ತಿ ಇವೆ’ ಅಂತಂದು ಸುಮತಿಯೆಡೆಗೆ ನೋಡುತ್ತಾ ನೀನು ಪ್ಲೇ ಮಾಡು ಅಂತಾನೆ. ನಗುತ್ತಾ ರಶ್ಮಿಯೆಡೆಗೆ ನೋಡಿ ಕಣ್ಣಲ್ಲೇ ಸಮಾಧಾನ ಮಾಡುತ್ತ ವಿಡಿಯೋ ಪ್ಲೇ ಮಾಡ್ತಾಳೆ ಸುಮತಿ.

ಕೌಶಿಕ್ ಕಿಟಕಿಯೆಡೆಗೆ ತಿರುಗಿರ್ತಾನೆ ಅವನನ್ನು ಸಮೀಪಿಸಿದ ಸುಮತಿ ಅವನನ್ನು ಹಿಂದಿನಿಂದ ಬಳಸುತ್ತ.. ಎಡಗೈಯನ್ನು ಭುಜದ ಮೇಲಿಟ್ಟು ಬಲಭುಜಕ್ಕೆ ತಲೆತಾಗಿಸಿಕೊಂಡು, ಅವಳು ಕಿಟಕಿಯೊಳಗಿಂದ ಕಾಣುತ್ತಿದ್ದ ಹೊರಗಿನ ದೃಶ್ಯವನ್ನು ನೋಡುತ್ತಾ ನಿಂತ್ಕೋತಾಳೆ....

 

(ಮುಂದುವರೆಯುವುದು)