ಪ್ಲಾಸ್ಟಿಕ್ ಕಸ ತಂದರೆ ಶಾಲಾ ಶುಲ್ಕ ಮನ್ನಾ!

ಪ್ಲಾಸ್ಟಿಕ್ ಕಸ ತಂದರೆ ಶಾಲಾ ಶುಲ್ಕ ಮನ್ನಾ!

ಪ್ಲಾಸ್ಟಿಕ್ ಸರ್ವವ್ಯಾಪಿಯಾಗಿರುವ ಭೂತ. ಇದರ ಬಳಕೆಯನ್ನು ಸಂಪೂರ್ಣವಾಗಿ ನಾವು ತ್ಯಜಿಸಲಂತೂ ಸಾಧ್ಯವಿಲ್ಲ. ಆದರೆ ಬಹುತೇಕ ಕಡೆ ಇದರ ಬಳಕೆಯನ್ನು ಕಮ್ಮಿ ಮಾಡಬಹುದು. ಒಮ್ಮೆ ಬಳಸಿ ಬಿಸಾಕುವ ಪ್ಲಾಸ್ಟಿಕ್ ತೊಟ್ಟೆಗಳು (Carry Bags), ನೀರಿನ ಬಾಟಲಿಗಳು, ಆಹಾರದ ಪೊಟ್ಟಣಗಳು ಇವೇ ದೊಡ್ಡ ಸಮಸ್ಯೆಗಳು. ಹೀಗೆ ಬಿಸಾಕುವ ಪ್ಲಾಸ್ಟಿಕ್ ಎಲ್ಲೆಡೆ ಹರಡುತ್ತದೆ. ನಗರದ ಸೌಂದರ್ಯ ಹಾಳು ಮಾಡುತ್ತದೆ. ಮಣ್ಣಿನಲ್ಲಿ ಕರಗದೇ ಇರುವ ಕಾರಣ ನೂರಾರು ವರ್ಷ ಹಾಗೇ ಇರುತ್ತದೆ. ಇದರಿಂದ ವಾತಾವರಣವೂ ಹಾಳಾಗುತ್ತದೆ. ಒಮ್ಮೆ ಬಳಸಿ ಬಿಸಾಕುವ ಪ್ಲಾಸ್ಟಿಕ್ ಬಳಕೆಯನ್ನು ಈಗಾಗಲೇ ನಿಷೇಧ ಮಾಡಲಾಗಿದೆ. ಆದರೂ ಅದು ಮಾರುಕಟ್ಟೆಯಲ್ಲಿ ಲಭ್ಯವಿದೆ. ನಮ್ಮಲ್ಲಿ ಇದೇ ದೊಡ್ದ ಸಮಸ್ಯೆ. ಆದರೆ ಈ ಬಳಸಿ ಬಿಸಾಕಿದ ಪ್ಲಾಸ್ಟಿಕ್ ನಿಂದ ಉಪಯುಕ್ತವಾದದ್ದು ಏನಾದರೂ ಮಾಡಬಹುದೇ ಎಂದು ಯೋಚಿಸಿದಾಗ ಈ ದಂಪತಿಗಳಿಗೆ ಹೊಳೆದದ್ದು ಈ ಉಪಾಯ…

ಒಮ್ಮೆ ಬಳಸಿ ಬಿಸಾಕುವ ಪ್ಲಾಸ್ಟಿಕ್ ಚೀಲ, ನೀರಿನ ಬಾಟಲಿಯನ್ನು ಎಲ್ಲೆಲ್ಲಿ ಬಿಸಾಕದೇ ಈ ಶಾಲೆಗೆ ತಂದು ಕೊಟ್ಟರೆ ನಿಮ್ಮ ಶಾಲಾ ಶುಲ್ಕ ಮನ್ನಾ, ನೀವು ಉಚಿತ ಶಿಕ್ಷಣವನ್ನು ಪಡೆಯಬಹುದು. ಇಲ್ಲಿ ಶಿಕ್ಷಣ ಶುಲ್ಕವೆಂದರೆ ಉಪಯೋಗಿಸಿ ಬಿಸಾಡಿದ ಪ್ಲಾಸ್ಟಿಕ್ ಮಾತ್ರ. ನೀವು ಮನೆಯಿಂದ ಬರುವಾಗ ಟಿಫಿನ್ ಮರೆತರೂ ತೊಂದರೆಯಿಲ್ಲ, ಪ್ಲಾಸ್ಟಿಕ್ ಕಸವನ್ನು ಮರೆಯುವಂತಿಲ್ಲ. ಯಾವುದಪ್ಪಾ ಈ ಶಾಲೆ ಎನ್ನುತ್ತೀರಾ? ಇದು ಅಸ್ಸಾಂ ರಾಜ್ಯದ ಪಾಮೋಹಿ ಎಂಬಲ್ಲಿ ಇರುವ ಅಕ್ಷರ್ ಶಾಲೆ. ಮಜಿನ್ ಮುಖ್ತಾರ್ ಎಂಬವರೇ ಇದರ ಸಂಸ್ಥಾಪಕರು ಮತ್ತು ಈ ಯೋಜನೆಯ ರೂವಾರಿ. ಇವರಿಗೆ ಬೆಂಬಲ ಕೊಟ್ಟದ್ದು ಇವರ ಪತ್ನಿ ಪರ್ಮಿತಾ ಶರ್ಮ. ಮುಖ್ತಾರ್ ಪ್ರಕಾರ “ಇಲ್ಲಿ ಮಕ್ಕಳೇ ಶಾಲೆಯನ್ನು ನಡೆಸುತ್ತಾರೆ. ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ಕಲಿಸುತ್ತಾರೆ. ಇಲ್ಲಿ ನಾವು ತೆಗೆದುಕೊಳ್ಳುವ ಏಕೈಕ ಶುಲ್ಕವೆಂದರೆ ಪ್ಲಾಸ್ಟಿಕ್ ತ್ಯಾಜ್ಯಗಳು ಮಾತ್ರ.”

ಇಲ್ಲಿಯ ವಿದ್ಯಾರ್ಥಿಗಳಿಗೂ ಪ್ಲಾಸ್ಟಿಕ್ ಪರಿಸರಕ್ಕೆ ಎಷ್ಟೊಂದು ಹಾನಿಕಾರಕ ಎಂಬ ಅರಿವು ಇದೆ. ಇಲ್ಲಿಯ ವಿದ್ಯಾರ್ಥಿನಿ ಪ್ರಿಯಾಂಕಾ ದಾಸ್ ಇವಳ ಅಭಿಪ್ರಾಯವೆಂದರೆ “ಈ ಪ್ಲಾಸ್ಟಿಕ್ ಎಷ್ಟೊಂದು ಹಾನಿಕರ ಎಂಬುವುದು ನಮ್ಮ ಗಮನಕ್ಕೆ ಬಂದಿದೆ. ಇದು ನಮ್ಮ ಪರಿಸರವನ್ನು, ಜೊತೆಗೆ ನಮ್ಮ ಆರೋಗ್ಯವನ್ನೂ ಹಾಳು ಮಾಡುತ್ತದೆ. ಅದಕ್ಕಾಗಿ ನಾವು ನೀರಿನ ಪ್ಲಾಸ್ಟಿಕ್ ಬಾಟಲಿಗಳನ್ನು ಸಂಗ್ರ್ತಹಿಸಿ ಅದರ ಒಳಗೆ ಪ್ಲಾಸ್ಟಿಕ್ ತೊಟ್ಟೆಗಳನ್ನು ಬಿಗಿಯಾಗಿ ತುಂಬಿಸಿ, ಅದನ್ನು ಗೋಡೆ ಕಟ್ಟಲು ಅಥವಾ ಶೌಚಾಲಯದ ನಿರ್ಮಾಣ ಕಾರ್ಯಕ್ಕೆ ಬಳಸುತ್ತೇವೆ.”

ಇಲ್ಲಿಯ ವಿದ್ಯಾರ್ಥಿಗಳು ಮನೆಯಿಂದ ಪ್ಲಾಸ್ಟಿಕ್ ಅನ್ನು ಶುಚಿಗೊಳಿಸಿಯೇ ತರುತ್ತಾರೆ. ತಂದ ಪ್ಲಾಸ್ಟಿಕ್ ಬಾಟಲಿ ಹಾಗೂ ತೊಟ್ಟೆಗಳನ್ನು ವಿಂಗಡಿಸುತ್ತಾರೆ. ಪ್ಲಾಸ್ಟಿಕ್ ಬಾಟಲಿಯೊಳಗೆ ಈ ತೊಟ್ಟೆಗಳನ್ನು ಬಿಗಿಯಾಗಿ ಮುದ್ದೆ ಮಾಡಿ ತುಂಬಿಸುತ್ತಾ ಹೋಗುತ್ತಾರೆ. ಆಗ ಆ ಬಾಟಲಿ ತುಂಬಾನೇ ಗಟ್ಟಿಯಾಗಿ ಅದಕ್ಕೆ ಭಾರವನ್ನು ಹಿಡಿದುಕೊಳ್ಳುವ ಶಕ್ತಿ ಬರುತ್ತದೆ. ನಂತರ ಅದನ್ನು ಮುಚ್ಚಳ ಹಾಕಿ ಮುಚ್ಚುತ್ತಾರೆ. ಈ ಬಾಟಲಿಗಳು ಶಾಲಾ ಉದ್ಯಾನವನ, ಗೋಡೆಗಳು, ಶೌಚಾಲಯಗಳಲ್ಲಿ ಬಳಕೆಯಾಗುತ್ತವೆ. ಈ ರೀತಿಯ ಗೋಡೆಗಳನ್ನು ನೋಡುವಾಗ ಸುಂದರವಾದ ವಿನ್ಯಾಸ ಮಾಡಿದಂತೆ ತೋರುತ್ತದೆ.

ಮುಖ್ತಾರ್ ಹೇಳುವಂತೆ “ಈ ಊರಿನಲ್ಲಿ ಮಕ್ಕಳನ್ನು ಶಾಲೆಗೆ ಕಳಿಸಲು ಪೋಷಕರಿಗೆ ಮನಸ್ಸಿಲ್ಲ. ಮಕ್ಕಳೂ ೧೩-೧೪ನೇ ವಯಸ್ಸಿನಲ್ಲೇ ಶಾಲೆ ಬಿಟ್ಟು ಉದ್ಯೋಗವನ್ನರಸಿಕೊಂಡು ಹೋಗುತ್ತಾರೆ. ಹೀಗೆ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಲಾಗದೇ ಶಾಲೆ ಬಿಡುವವರಿಗಾಗಿ ನಾವು ಕೆಲವು ಯೋಜನೆಗಳನ್ನು ಮಾಡಿದ್ದೇವೆ. ಈ ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ಕಲಿಸುವಾಗ ಅವರಿಗೆ ಸ್ವಲ್ಪ ಹಣ ಕೊಡುತ್ತೇವೆ. ಇದರಿಂದ ಕಲಿಕೆಯೊಡನೆ ಗಳಿಕೆಯೂ ಆಗಿ ಇವರು ಶಾಲೆಯನ್ನು ಅರ್ಧಕ್ಕೇ ಬಿಡುತ್ತಿಲ್ಲ". ಈ ಯೋಜನೆಯಿಂದ  ಶಾಲೆಯ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಳವಾಗಿದೆಯಂತೆ.

ನ್ಯೂಯಾರ್ಕ್ ನಲ್ಲಿ ಉದ್ಯೋಗದಲ್ಲಿದ್ದ ಮುಖ್ತಾರ್ ೨೦೧೩ರಲ್ಲಿ ಭಾರತಕ್ಕೆ ವಾಪಾಸಾಗುತ್ತಾರೆ. ಹೀಗೆ ಬಂದ ಮುಖ್ತಾರ್ ಅವರ ಪರಿಚಯ ಪರ್ಮಿತಾ ಶರ್ಮಾ ಜೊತೆ ಆಗುತ್ತದೆ. ಮೊದಲಿಂದಲೂ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಏನಾದರೂ ಮಾಡಬೇಕೆಂಬ ತುಡಿತವನ್ನು ಹೊಂದಿದ್ದ ಮುಖ್ತಾರ್, ಪರ್ಮಿತಾ ಶರ್ಮಾ ಅವರ ಆಲೋಚನೆಗಳಿಂದ ಪ್ರಭಾವಿತರಾಗುತ್ತಾರೆ. ಪರ್ಮಿತಾ ಆಗಲೇ ಒಂದು ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರೂ ೨೦೧೮ರಲ್ಲಿ ಮದುವೆಯಾಗಿ ಅಕ್ಷರ ಎಂಬ ಹೆಸರಿನ ಶಾಲೆಯನ್ನು ಬೆಳೆಸಲು ಪ್ರಾರಂಭಿಸುತ್ತಾರೆ.

ಮುಖ್ತಾರ್ ಅವರ ಪತ್ನಿ ಪರ್ಮಿತಾ ಶರ್ಮಾ ಅವರ ಪ್ರಕಾರ “ ಮುಖ್ತಾರ್ ಅವರು ತಮ್ಮ ಕನಸಾದ ಬಡ ಮಕ್ಕಳಿಗಾಗಿ ಶಾಲೆ ಶುರು ಮಾಡುವುದು, ಅವರಿಗೆ ವಿದ್ಯಾರ್ಜನೆ ಮಾಡುವುದು ಇವೆಲ್ಲಾ ನನ್ನನ್ನು ತುಂಬಾನೇ ಪ್ರಭಾವಿತಳನ್ನಾಗಿ ಮಾಡಿತು. ನಾವಿಬ್ಬರೂ ಜೊತೆ ಜೊತೆಯಲ್ಲೇ ಕೆಲಸ ಮಾಡಬೇಕೆಂಬ ತುಡಿತ ಉಂಟಾಯಿತು. ಆ ಕಾರಣದಿಂದಲೇ ಈ ಶಾಲೆಯನ್ನು ಹುಟ್ಟುಹಾಕಿದೆವು.”

ಪ್ರಾರಂಭದಲ್ಲಿ ಮಕ್ಕಳ ಪೋಷಕರಿಗೆ ತಮ್ಮ ಮನೆಯ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಶಾಲೆಗೆ ಮಕ್ಕಳ ಕೈಯಲ್ಲಿ ಕಳುಹಿಸಿಕೊಡಿ ಎಂದಾಗ ಅವರು ಸಹಕಾರ ನೀಡಲಿಲ್ಲ. ನಂತರ ೨೦೧೬ರಲ್ಲಿ ಪ್ಲಾಸ್ಟಿಕ್ ಕಸ ತಂದರೆ ಶಾಲಾ ಶುಲ್ಕದಲ್ಲಿ ರಿಯಾಯತಿ ನೀಡುತ್ತೇವೆ ಎಂದು ಹೇಳಿದಾಗ ನಿಧಾನವಾಗಿ ಪೋಷಕರು ಬದಲಾದರು. ಈಗ ವಾರಕ್ಕೆ ೨-೩ ದಿನವಾದರೂ ಮಕ್ಕಳು ಪ್ಲಾಸ್ಟಿಕ್ ಕಸವನ್ನು ಮನೆಯಿಂದ ತರುತ್ತಾರೆ. ಕೆಲವೊಮ್ಮೆ ಊರಿನ ಇತರೆ ಮನೆಗಳ ಬಾಗಿಲಿಗೆ ಹೋಗಿ ಅಲ್ಲಿಂದಲೂ ಪ್ಲಾಸ್ಟಿಕ್ ಕಸವನ್ನು ಸಂಗ್ರಹಿಸುತ್ತಾರೆ. ಈಗ ತಿಂಗಳಿಗೆ ಸುಮಾರು ಹತ್ತು ಸಾವಿರ ಪ್ಲಾಸ್ಟಿಕ್ ಬ್ಯಾಗ್ ಗಳು ಶಾಲೆಯ ಆವರಣಕ್ಕೆ ಬಂದು ಬೀಳುತ್ತವೆ. ಈ ಕಸದಿಂದ ಮಕ್ಕಳ ಕೈಯಲ್ಲಿ ಅವರ ಪ್ರಾಜೆಕ್ಟ್ ಕೆಲಸಗಳನ್ನು ಮಾಡಿಸಲಾಗುತ್ತದೆ. ಇದರಿಂದ ಮಕ್ಕಳಿಗೆ ಪ್ರಾಯೋಗಿಕ ಅನುಭವವೂ ದೊರೆಯುತ್ತಿದೆ. 

ಒಂದು ಸಮಯದಲ್ಲಿ ಅಸ್ಸಾಂನ ಕಲ್ಲಿನ ಕೋರೆಗಳಲ್ಲಿ ಬಾಲ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಮಕ್ಕಳು ಶಾಲೆಗೆ ಬರಲು ಮನಸ್ಸು ಮಾಡಿದ್ದಾರೆ. ಪ್ಲಾಸ್ಟಿಕ್ ಕೊಟ್ಟರೆ ವಿದ್ಯಾಭ್ಯಾಸ ಉಚಿತ ಎಂದು ಇರುವಾಗ ಯಾರು ತಾನೇ ಈ ಅವಕಾಶವನ್ನು ಕಳೆದುಕೊಳ್ಳಲು ಬಯಸುತ್ತಾರೆ? ಶಿಕ್ಷಣ, ಪರಿಸರ ಕಾಳಜಿ ಹಾಗೂ ಉದ್ಯೋಗ ಎಲ್ಲವೂ ಒಂದೆಡೆ ಸಿಗುವ ಅಕ್ಷರ ಶಾಲೆ ಮಕ್ಕಳ ವಿಕಾಸದತ್ತ ಸದಾ ಗಮನ ಹರಿಸುತ್ತಿದೆ. ಇದೇ ರೀತಿಯ ನೂರು ಶಾಲೆಗಳನ್ನು ದೇಶದಾದ್ಯಂತ ಪ್ರಾರಂಭಿಸಬೇಕೆಂಬುದು ಮಜಿನ್ ಹಾಗೂ ಪರ್ಮಿತ ಅವರ ಕನಸು. ಈ ರೀತಿಯ ಪರಿಸರ ಕಾಳಜಿಯನ್ನು ದೇಶದ ಇತರೆ ಶಾಲೆಗಳೂ ಪ್ರಾರಂಭಿಸಿದರೆ ಎಲ್ಲೆಡೆ ಕಾಣುವ ಪ್ಲಾಸ್ಟಿಕ್ ಕಸಕ್ಕೆ ಸ್ವಲ್ಪವಾದರೂ ಕಡಿವಾಣ ಬೀಳಬಹುದೇನೋ? ಪರಿಸರವೂ ಸ್ವಚ್ಚವಾಗಿ ನಾವೂ ಆರೋಗ್ಯವಂತರಾಗಬಹುದು. ನಮ್ಮ ಮುಂದಿನ ಪೀಳಿಗೆಯವರಿಗೆ ಸುಂದರ, ಸ್ವಚ್ಚ ಭೂಮಿಯನ್ನು ಬಿಟ್ಟು ಹೋಗಬಹುದು. ಅಲ್ಲವೇ?

ಚಿತ್ರದಲ್ಲಿ ೧. ಶಾಲೆಗೆ ಬರುವಾಗ ಮಕ್ಕಳು ಪ್ಲಾಸ್ಟಿಕ್ ಕಸ ತರುವುದು

೨. ಮಜಿನ್ ಮುಖ್ತಾರ್ ಹಾಗೂ ಪರ್ಮಿತ ಶರ್ಮಾ ದಂಪತಿ

೩. ಮಕ್ಕಳ ಸಂಗ್ರಹಿತ ಪ್ಲಾಸ್ಟಿಕ್ ಕಸ.

೪. ಪ್ಲಾಸ್ಟಿಕ್ ಬಾಟಲಿ ಬಳಸಿ ಕಟ್ಟಿದ ತೆಂಗಿನ ಕಟ್ಟೆ

ಚಿತ್ರಗಳು: ಅಂತರ್ಜಾಲ ತಾಣಗಳಿಂದ ಸಂಗ್ರಹಿತ

 

Comments

Submitted by karababu Wed, 03/03/2021 - 11:46

ಈ ಅಪೂರ್ವ ದಂಪತಿಗಳನ್ನು ಮತ್ತು ಅವರು ಕೈಗೊಂಡಿರುವ ಪ್ಲಾಸ್ಟಿಕ್ ತ್ಯಾಜ್ಯದ ನಿರ್ವಹಣೆಯ ಯೋಜನೆಯನ್ನು ಬಹಳ ಪ್ರಭಾವಶಾಲಿಯಾಗಿ ಪರಿಚಯಿಸಿದ್ದೀರಿ. ಭಾರತದ ಎಲ್ಲಾ ವಿದ್ಯಾ ಸಂಸ್ಥೆಗಳಲ್ಲಿ ಮಾತ್ರವಲ್ಲದೆ, ಬಹು ಉದ್ಯೋಗಿ ಸಂಸ್ಥೆಗಳಲ್ಲಿಯೂ ಇಂತಹ ಯೋಜನೆಗಳು ಜಾರಿಗೆ ಬಂದಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ನಿರ್ವಹಣೆ ಬಹುಮಟ್ಟಿಗೆ ಯಶಸ್ವಿಯಾಗುತ್ತದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ರಸ್ತೆಗಳ ನಿರ್ಮಾಣದಲ್ಲಿ ಬಳಸುತ್ತಿರುವುದು ಕೂಡಾ ಒಂದು ಒಳ್ಳೆಯ ಯೋಜನೆಯಾಗಿದೆ. ಪ್ಲಾಸ್ಟಿಕ್ ತ್ಯಾಜ್ಯದ ಸಂಗ್ರಹಣೆ ಮತ್ತು ಅವುಗಳ ಮರುಬಳಕೆಯಲ್ಲಿ ಹೊಸಹೊಸ ಬಗೆಯ ಉಪಾಯಗಳ ಅವಿಷ್ಕಾರದ ಅಗತ್ಯವಿದೆ.  - ಕ. ರಮೇಶ  ಬಾಬು. 

Submitted by Ashwin Rao K P Wed, 03/03/2021 - 13:20

ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ಬಗ್ಗೆ...

ಶ್ರೀಯುತ ರಮೇಶ ಬಾಬು ಅವರಿಗೆ ಪ್ರತಿಕ್ರಿಯೆಗಾಗಿ ಧನ್ಯವಾದಗಳು. ನೀವಂದಂತೆ ಪ್ಲಾಸ್ಟಿಕ್ ಕಸವನ್ನು ರಸ್ತೆ ನಿರ್ಮಾಣದಂತಹ ಕಾರ್ಯದಲ್ಲಿ ಮರುಬಳಕೆ ಮಾಡಿಕೊಂಡರೆ ಸ್ವಲ್ಪ ಮಟ್ಟಿಗಾದರೂ ಈ ಹೊರೆ ತಗ್ಗಬಹುದು.