ಫಡ್ನವೀಸ್ ಮುಖ್ಯಮಂತ್ರಿ

ಫಡ್ನವೀಸ್ ಮುಖ್ಯಮಂತ್ರಿ

ಮಹಾರಾಷ್ಟ್ರದಲ್ಲಿ ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ವೇದಿಕೆ ಸಿದ್ಧಗೊಂಡಿದೆ. ಚುನಾವಣಾ ಫಲಿತಾಂಶ ಘೋಷಣೆಯಾದ ಸುಮಾರು ೧೨ ದಿನಗಳ ಬಳಿಕ ಫಡ್ನವೀಸ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈಗಾಗಲೇ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಬೇಕಿತ್ತಾದರೂ ಮಿತ್ರಪಕ್ಷ ಶಿವಸೇನೆಯು ಏಕನಾಥ ಶಿಂಧೆಯವರು ಮುಖ್ಯಮಂತ್ರಿಯಾಗಬೇಕೆಂದು ಬಯಸಿದ್ದರಿಂದಾಗಿ ಮುಖ್ಯಮಂತ್ರಿ ಆಯ್ಕೆ ವಿಚಾರ ವಿಳಂಬಗೊಂಡಿತ್ತು. ಇದೀಗ ಅನಿಶ್ಚಿತತೆ ಮುಗಿದು ಸರಕಾರವು ರೂಪುಕೊಳ್ಳಲು ಕಾಲ ಕೂಡಿಬಂದಿರುವುದು ಸ್ವಾಗತಾರ್ಹ.

ಹಿಂದಿನ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಏಕನಾಥ ಶಿಂಧೆಯವರು ತಾವೇ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕೆಂದು ಬಯಸಿದ್ದು ಸಹಜವಾದರೂ, ನಿಜವಾಗಿ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನ ಪಡೆದ ಬಿಜೆಪಿ ಮುಖ್ಯಮಂತ್ರಿ ಸ್ಥಾನ ಪಡೆಯುವುದು ನ್ಯಾಯೋಚಿತವಾಗಿತ್ತು. ಮಹಾಯುತಿ ಮೈತ್ರಿಕೂಟದಲ್ಲಿ ಬಿಜೆಪಿಯೊಂದೇ ೧೩೨ ಸ್ಥಾನಗಳನ್ನು ಗೆದ್ದಿತ್ತು. ಶಿವಸೇನೆ ಗೆದ್ದಿರುವುದು ೫೭ ಸ್ಥಾನಗಳನ್ನು ಹಾಗೂ ಅಜಿತ್ ಪವಾರ್ ಅವರ ಎನ್ ಸಿ ಪಿ ಗೆದ್ದಿರುವುದು ೪೧ ಸ್ಥಾನಗಳನ್ನು. ೨೦೨೨ರಲ್ಲಿ ಏಕನಾಥ ಶಿಂಧೆಯವರ ಶಿವಸೇನೆ ಮತ್ತು ಬಿಜೆಪಿ ಜತೆಗೂಡಿ ಸರಕಾರ ರಚಿಸಿದಾಗ ಫಡ್ನವೀಸ್ ಅವರು ಉಪಮುಖ್ಯಮಂತ್ರಿ ಸ್ಥಾನಕ್ಕೆ ಒಪ್ಪಿಕೊಂಡು ಶಿಂಧೆಯವರು ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಿದ್ದರು. ಹಾಗಿರುವಾಗ ಈ ಬಾರಿ ಶಿಂಧೆಯವರು ಫಡ್ನವೀಸ್ ಅವರಿಗೆ ಅದೇ ಬಗೆಯ ಉದಾರತೆ ತೋರುವುದು ನ್ಯಾಯೋಚಿತವಾಗಿತ್ತು. 

ಫಡ್ನವೀಸ್ ಅವರು ಮೂರನೇ ಬಾರಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಲಿದ್ದಾರೆ. ಮೊದಲ ಬಾರಿ ೨೦೧೪ರಲ್ಲಿ ಮುಖ್ಯಮಂತ್ರಿಯಾದ ಅವರು ಜನಪರ ಸರಕಾರ ನೀಡಿದ್ದರು. ೨೦೧೯ರಲ್ಲಿ ಕೂಡಾ ಬಿಜೆಪಿ ಮೈತ್ರಿಕೂಟ ಬಹುಮತ ಪಡೆದಿತ್ತಾದರೂ ಉದ್ಭವ್ ಠಾಕ್ರೆ ವಿಶ್ವಾಸ ದ್ರೋಹ ಮಾಡಿದ್ದರಿಂದಾಗಿ ಅಜಿತ್ ಪವಾರ್ ಬೆಂಬಲದೊಂದಿಗೆ ಮುಖ್ಯಮಂತ್ರಿಯಾಗಿದ್ದರು. ಆದರೆ ಆ ಸರಕಾರ ಕೇವಲ ೮೦ ಗಂಟೆ ಮಾತ್ರ ಉಳಿದಿತ್ತು. ಇದೀಗ ಮತ್ತೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಲಿರುವ ಫಡ್ನವೀಸ್ ಮೇಲೆ ಹಾಗೂ ಅಧಿಕಾರಕ್ಕೆ ಬಂದಿರುವ ಬಿಜೆಪಿ ಮೇಲೆ ರಾಜ್ಯದ ಜನತೆ ಬಹಳಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಈ ನಿರೀಕ್ಷೆಗಳನ್ನು ಸಾಕಾರ ಮಾಡುವ ಕಟಿಬದ್ಧತೆಯನ್ನು ಮುಖ್ಯಮಂತ್ರಿ ಹಾಗೂ ಪಕ್ಷವು ತೋರಬೇಕಾಗಿದೆ.

ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೦೫-೧೧-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ