ಫರೀದ್ ಬದರ್ ಹೇಳಿದ ಟಾಟಾ ಕಥೆ (ಭಾಗ ೧)

ನಮಗೆ ಟಾಟಾ ಗೊತ್ತು ಫರೀದ್ ಬದರ್ ಗೊತ್ತೇ ಇಲ್ಲವಲ್ಲ ಎಂದು ಹೇಳುವಿರಾ? ಈ ಫರೀದ್ ಬದರ್ ಬಹ್ರೈನ್ ದೇಶದ ದೊಡ್ಡ ಉದ್ಯಮಿ. ಟಾಟಾ ಕುಟುಂಬದ ಬಗ್ಗೆ ನಮಗೆ ಗೊತ್ತಿಲ್ಲದ ಒಂದು ಅಪರೂಪದ ವಿಷಯವನ್ನು ಅವರು ಬಲ್ಲರು. ಈ ಬರಹವನ್ನು ಬರೆದದ್ದು ಆತ್ಮೀಯರಾದ ಶ್ರೀ ಕಿರಣ್ ಉಪಾಧ್ಯಾಯ. ಇವರು ಬಹ್ರೈನ್ ವಾಸಿ. ಬಹಳಷ್ಟು ವರ್ಷಗಳಿಂದ ಅರಬ್ ದೇಶದಲ್ಲಿ ವಾಸಿಸುತ್ತಾ ಅಲ್ಲಿಯ ಬಗ್ಗೆ ಬಹಳಷ್ಟು ವಿಷಯಗಳನ್ನು ತಮ್ಮ ಪತ್ರಿಕಾ ಅಂಕಣದ ಮೂಲಕ ಓದುಗರಿಗೆ ತಿಳಿಸುತ್ತಾ ಬಂದಿದ್ದಾರೆ.
ಕಳೆದ ವರ್ಷ ಅಕ್ಟೋಬರ್ ನಲ್ಲಿ ಟಾಟಾ ಸಂಸ್ಥೆಯ ಮುಖ್ಯಸ್ಥರಾದ ರತನ್ ಟಾಟಾ ನಿಧನರಾದಾಗ ಎಲ್ಲಾ ಪತ್ರಿಕೆಗಳಲ್ಲಿ ಅವರ ಬಗ್ಗೆ ಮಾಹಿತಿಗಳ ಮಹಾಪೂರವೇ ಹರಿದು ಬಂದಿತ್ತು. ಟಾಟಾ ಅವರ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿರದ ಒಂದು ಅಪರೂಪದ ವಿಷಯವನ್ನು ಬರೆಯ ಬೇಕೆಂದು ಕಿರಣ್ ಉಪಾಧ್ಯಾಯರ ಮಹದಾಸೆ ಆಗಿತ್ತು. ಇದನ್ನೇ ಮನಸ್ಸಿನಲ್ಲಿಟ್ಟುಕೊಂಡು ಅವರು ಬಹ್ರೈನ್ ಉದ್ಯಮಿ ಫರೀದ್ ಬದರ್ ಅವರ ಕಚೇರಿಗೆ ಹೋಗಿದ್ದರಂತೆ. ಅವರೇ ಟಾಟಾ ಹೆಸರನ್ನು ಪ್ರಸ್ತಾಪ ಮಾಡಿದಾಗ ಕಿರಣ್ ಅವರಿಗೆ ಅಚ್ಚರಿಯಾಯಿತು. ಫರೀದ್ ಬದರ್ ಹೇಳಿದ ಟಾಟಾ ಸಂಸ್ಥೆಯ ಸಂಸ್ಥಾಪಕರಾದ ಜೆ ಆರ್ ಡಿ ಟಾಟಾ ಅವರ ಕಥೆಯನ್ನು ಕಿರಣ್ ಅವರ ಮಾತುಗಳಲ್ಲೇ ಓದಿ…
ಬಹ್ಮನ್ ಉದ್ಯಮಿ ಫರೀದ್ ಬದರ್ ಅವರ ಕಚೇರಿಗೆ ನಿನ್ನೆ ಹೋಗಿದ್ದೆ. ಈ ಮೊದಲೂ ಅವರ ಕುರಿತಾಗಿ ಒಂದು ಅಂಕಣದಲ್ಲಿ ಬರೆದಿದ್ದೆ. ಅವರ ಬಳಿ ಹೋದರೆ ಬುದ್ದಿಗೆ ಏನಾದರೂ ಆಹಾರ ಸಿಗುತ್ತದೆ. ನಿನ್ನೆ ಮಾತು ಆರಂಭಿಸುತ್ತಿದ್ದಂತೆಯೇ ಅವರು ಟಾಟಾ ಹೆಸರನ್ನು ಪ್ರಸ್ತಾಪ ಮಾಡಿದ್ದರು. 'ನಿಮ್ಮ ದೇಶದ ಹೆಸರಾಂತ ಉದ್ಯಮಿ ರತನ್ ಟಾಟಾ ತೀರಿಹೋದರಂತೆ, ನಿಮ್ಮ ದೇಶ ಒಬ್ಬ ಒಳ್ಳೆಯ ವ್ಯಕ್ತಿಯನ್ನು ಕಳೆದುಕೊಂಡಿತು' ಎಂದರು. 'ನಿಮಗೆ ಅವರ ಹೆಸರಿನ ಅರ್ಥ ಗೊತ್ತೇ?' ಎಂದು ಕೇಳಿದೆ. 'ಅಮೂಲ್ಯವಾದ ರತ್ನ ಅಂತ ತಿಳಿಯಿತು, ಆ ಹೆಸರು ಅವರಿಗೆ ಸರಿಯಾಗಿ ಹೊಂದುತ್ತದೆ' ಎಂದರು. ಹಾಗೆಯೇ ಅವರ ಮತ್ತು ಜೆಆರ್‌ಡಿ ಟಾಟಾ ಕುರಿತಾದ ಒಂದಿಷ್ಟು ಕಥೆ, ಘಟನೆಗಳನ್ನು ಹೇಳಲಾರಂಭಿಸಿದರು. ಎರಡನೆಯ ವಿಶ್ವ ಮಹಾಯುದ್ಧದ ಸಂದರ್ಭದಲ್ಲಿ ನಡೆದ ಒಂದು ಘಟನೆಯನ್ನು ಸಂಕ್ಷಿಪ್ತವಾಗಿ ಹೇಳುತ್ತ, 'ಇದರ ವಿವರವನ್ನು ನಿಮಗೆ ವಾಟ್ಸ್ ಆ್ಯಪ್‌ನಲ್ಲಿ ಕಳಿಸುತ್ತೇನೆ' ಎಂದು ಸಂದೇಶವನ್ನು ರವಾನಿಸಿದರು. ಅವರ ಮಾತು ಕೇಳುತ್ತಿ ದ್ದಾಗ, 'ಪರವಾಗಿಲ್ಲ, ಕೆಲವು ಭಾರತೀಯರಿಗೂ ತಿಳಿಯದ ವಿಷಯಗಳನ್ನು ಇವರು ತಿಳಿದು ಕೊಂಡಿದ್ದಾರೆ' ಅನ್ನಿಸಿತು.
ಇದು ಎರಡನೆಯ ವಿಶ್ವ ಮಹಾಯುದ್ಧದ ಸಂದ ರ್ಭದಲ್ಲಿ ನಡೆದ ಘಟನೆ. ಆ ಮಹಾಯುದ್ಧದಲ್ಲಿ ಜರ್ಮನಿ ಸಾಕಷ್ಟು ಹಾನಿಗೊಳಗಾಗಿತ್ತು. ವಿರೋಧಿಗಳ ಸೇನೆ ಜರ್ಮನಿಯ ಎಲ್ಲ ನಗರಗಳ ಮೇಲೂ ಬಾಂಬ್ ದಾಳಿ ನಡೆಸಿತ್ತು. ಜರ್ಮನಿಯ ಬಹುತೇಕ ನಗರಗಳೆಲ್ಲ ಧ್ವಂಸಗೊಂಡಿದ್ದವು. ಅದಕ್ಕೆ ಮ್ಯೂನಿಕ್ ನಗರವೂ ಹೊರತಾಗಿರಲಿಲ್ಲ. ಜರ್ಮನಿಯ ಬವೇರಿಯನ್ ಪ್ರಾಂತ್ಯದ ಮ್ಯೂನಿಕ್ ನಗರದ ಮೇಲೆ ಬರೋಬ್ಬರಿ ೭೪ ವೈಮಾನಿಕ ದಾಳಿ ನಡೆದಿತ್ತು. ಮ್ಯೂನಿಕ್ ನಗರದ ಅರ್ಧಕ್ಕಿಂತಲೂ ಹೆಚ್ಚು ಭಾಗ ಈ ದಾಳಿಗೆ ಛಿದ್ರವಾಗಿತ್ತು. ಆ ಕಾಲದಲ್ಲಿ ಮ್ಯೂನಿಕ್ ನಗರ ಡೀಸೆಲ್ ಎಂಜಿನ್‌ಗಳ ತಯಾರಿಕೆಗೆ ಹೆಸರು ವಾಸಿಯಾಗಿತ್ತು. ಯುದ್ಧದ ಪರಿಣಾಮದಿಂದ ಅಲ್ಲಿಯ ಜನರಿಗೆ ರಾತ್ರಿ ಮಾತ್ರವಲ್ಲ, ಪ್ರತಿ ದಿನವೂ, ಮುಂಜಾನೆಯೂ ಕರಾಳವಾಗಿತ್ತು. ಆ ಕಾಲದಲ್ಲಿ ಮ್ಯೂನಿಕ್ ನಗರದಲ್ಲಿ 'ಕ್ರಾಸ್ ಮಾಫಿ' ಹೆಸರಿನ ಸಂಸ್ಥೆಯೊಂದು ಲೋಕೊಮೋಟಿವ್ ಎಂಜಿನ್ ತಯಾರಿಸುತ್ತಿತ್ತು. ಮ್ಯೂನಿಕ್ ನಗರ ಯಂತ್ರಗಳ ತಯಾರಿಕೆಗೆ ಹೆಸರಾಗುವುದರಲ್ಲಿ ಈ ಸಂಸ್ಥೆಯ ಕೊಡುಗೆಯೂ ಪ್ರಮುಖವಾಗಿತ್ತು ಎಂದರೆ ತಪ್ಪಾಗಲಿಕ್ಕಿಲ್ಲ, ಕ್ರಾಸ್ ಮಾಫಿ, ೧೮೩೮ರಲ್ಲಿ ಆರಂಭಗೊಂಡು, ನೂರಕ್ಕೂ ಹೆಚ್ಚು ವರ್ಷ ಪೂರೈಸಿತ್ತು. ಆದರೆ ವಿಶ್ವಯುದ್ಧದ ಸಂದರ್ಭದಲ್ಲಿ ಅತೀವ ಹಾನಿಗೆ ಒಳಗಾಗಿತ್ತು. ಕ್ರಾಸ್ ಮಾಫಿ ಕಾರ್ಖಾನೆಯಲ್ಲಿ ಕಚೇರಿಯಲ್ಲಿ ಕೆಲಸಮಾಡುತ್ತಿದ್ದ ಅನೇಕ ಎಂಜಿನಿಯರ್ ಗಳು, ಇತರ ನೌಕರರು ಯುದ್ಧದ ಪ್ರಭಾವಕ್ಕೆ ಒಳಗಾಗಿದ್ದರು. ಉದ್ಯೋಗ ಕಳೆದುಕೊಂಡಿದ್ದ ಜನರಿಗೆ ಸಂಸಾರ ನಡೆಸುವುದೇ ಕಷ್ಟವಾಗಿತ್ತು.
ಒಂದು ಮುಂಜಾನೆ ಕ್ರಾಸ್ ಮಾಫಿ ಸಂಸ್ಥೆಯ ನಿರ್ದೇಶಕರು ಮ್ಯೂನಿಕ್ ರೈಲು ನಿಲ್ದಾಣದಲ್ಲಿ ಭಾರತದಿಂದ ಬರಲಿರುವ ತಮ್ಮ ಅತಿಥಿಗಾಗಿ ಕಾಯುತ್ತಿದ್ದರು. ರೈಲು ಬಂದು ನಿಂತಾಗ ಅದರಿಂದ ೪೨ ವರ್ಷದ, ಸುಂದರ, ನೀಳಕಾಯದ ಜೆಆರ್‌ಡಿ ಟಾಟಾ ಕೆಳಗೆ ಇಳಿದರು. ಜೆಆರ್‌ಡಿ ಆಗ ಟಾಟಾ ಗ್ರೂಪ್‌ನ ಅಧ್ಯಕ್ಷರಾಗಿದ್ದರು. ಅವರ ಜತೆಗೆ ಟಾಟಾದ ಅಂಗಸಂಸ್ಥೆ ಟೆಲ್ಕೋದ ಸುಮಂತ್ ಮೂಲಗಾಂವ್ಕರ್ ಇದ್ದರು. ಭಾರತದಲ್ಲಿ ಲೋಕೊ ಮೋಟಿವ್ ಯಂತ್ರ ತಯಾರಿಸಲು ಕ್ರಾಸ್ ಮಾಫಿ ಸಂಸ್ಥೆಯ ಸಹಾಯ ಕೇಳಲು ಅವರು ಬಂದಿದ್ದರು. ಆದರೆ ಅವರಿಗೆ ಯುದ್ಧದ ಪಳೆಯುಳಿಕೆಗಳನ್ನು ಬಿಟ್ಟರೆ ಬೇರೇನೂ ಕಾಣಲಿಲ್ಲ.
ಅಂದು ಸಹಾಯ ಕೇಳಲು ಬಂದಿದ್ದ ಟಾಟಾ ಅವರನ್ನು ಕ್ರಾಸ್ ಮಾಫಿ ಸಂಸ್ಥೆಯ ನಿರ್ದೇಶಕರೇ ತಮಗೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದರು. 'ನಮ್ಮ ಸಂಸ್ಥೆಯಲ್ಲಿ ಕೆಲಸ ಕಳೆದುಕೊಂಡ ಎಂಜಿನಿಯರ್‌ಗಳನ್ನು ಸಂಸಾರ ಸಮೇತ ನಿಮ್ಮಲ್ಲಿ ಕರೆದು ಕೊಂಡು ಹೋಗಿ. ಅವರಿಗೆ ಉದ್ಯೋಗ, ತಲೆಯ ಮೇಲೊಂದು ಸೂರು, ಮಕ್ಕಳಿಗೆ ಶಿಕ್ಷಣದ ವ್ಯವಸ್ಥೆ ಮಾಡಿಕೊಡಿ, ಅವರು ಒಳ್ಳೆಯ ಕೆಲಸಗಾರರು, ನೀವು ಹೇಳಿದ ಕೆಲಸವನ್ನು ಮಾಡುವುದಷ್ಟೇ ಅಲ್ಲ, ತಮ್ಮ ವಿದ್ಯೆಯನ್ನು ನಿಮ್ಮ ಜನರಿಗೆ ಹೇಳಿಕೊಡುತ್ತಾರೆ. ಆದರೆ ಈ ಒಪ್ಪಂದ ಯಾವುದೇ ಕರಾರುಪತ್ರ ಇಲ್ಲದೆಯೇ ಆಗಬೇಕು' ಎಂದಿದ್ದರು.
ಅದಕ್ಕೆ ಬಲವಾದ ಕಾರಣವಿತ್ತು. ಆಗ ಭಾರತದಲ್ಲಿ ಇನ್ನೂ ಬ್ರಿಟಿಷರ ಆಳ್ವಿಕೆ ಇತ್ತು. ವಿಶ್ವಯುದ್ಧದ ಸಂದರ್ಭವಾದದ್ದರಿಂದ ಜರ್ಮನಿಯೊಂದಿಗೆ ಯಾವುದೇ ರೀತಿಯ ಒಪ್ಪಂದ ಮಾಡಿಕೊಳ್ಳದಂತೆ ನಿರ್ಬಂಧ ಹೇರಲಾಗಿತ್ತು. ಹಾಗಾಗಿ ಇದನ್ನು ಕರಾರುಪತ್ರವಿಲ್ಲದೆ, ಗುಪ್ತವಾಗಿ, ಕೇವಲ ಭರವಸೆಯ ಮೇಲೆ ಮಾಡಬೇಕಿತ್ತು. ಟಾಟಾ ಸಂಸ್ಥೆಯ ಅಧ್ಯಕ್ಷರಾಗಿದ್ದ ಜೆಆರ್‌ಡಿ ಮತ್ತು ನಿರ್ದೇಶಕರಾಗಿದ್ದ ಮೂಲಗಾಂವ್ಕರ್ ಇದಕ್ಕೆ ಒಪ್ಪಿದ್ದರು. ಆ ಕಾಲದಲ್ಲಿ ಅವರು ತೆಗೆದುಕೊಂಡ ದೊಡ್ಡ ರಿಸ್ಕ್ ಅದಾಗಿತ್ತು. ರಿಸ್ಕ್ ತೆಗೆದುಕೊಂಡದ್ದಷ್ಟೇ ಅಲ್ಲ, ಜರ್ಮನ್ ಎಂಜಿನಿಯರ್‌ಗಳಿಗೆ ಒಳ್ಳೆಯ ಉದ್ಯೋಗ ನೀಡಿದ ಟಾಟಾ ಗ್ರೂಪ್ ಒಳ್ಳೆಯ ಸಂಬಳ, ಉತ್ತಮವಾದ ವಸತಿಯ ಸೌಲಭ್ಯವನ್ನು ನೀಡಿ ಚೆನ್ನಾಗಿ ನೋಡಿಕೊಂಡಿತು. ಅದು ಫಲ ನೀಡಿತು.
(ಉಳಿದ ಕಥೆ ಮುಂದಿನ ವಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ