ಫರೀದ್ ಬದರ್ ಹೇಳಿದ ಟಾಟಾ ಕಥೆ (ಭಾಗ ೨)

ಫರೀದ್ ಬದರ್ ಹೇಳಿದ ಟಾಟಾ ಕಥೆ (ಭಾಗ ೨)

೧೯೪೫ರಲ್ಲಿ ಟಾಟಾ ಮೋಟರ್ಸ್ ಇಂಡಿಯನ್ ರೇಲ್ವೇಸ್‌ಗೆ ಉಗಿಬಂಡಿ ತಯಾರಿಸಿ ಕೊಡುವ ಒಪ್ಪಂದಕ್ಕೆ ಸಹಿ ಹಾಕಿತು. ರೇಲ್ವೆ ಯಂತ್ರದ ತಯಾರಿಕೆಗೆ ಟಾಟಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂಜಿನಿಯರ್‌ಗಳು ಸಹಾಯ ಮಾಡಿದರು. ಅದರಿಂದ ಭಾರತದ ಮೊದಲ ಲೋಕೊಮೋಟಿವ್ ಎಂಜಿನ್ ತಯಾರಿಸಿದ ಸಂಸ್ಥೆ ಎಂಬ ಹೆಗ್ಗಳಿಕೆಗೆ ಟಾಟಾ ಸಂಸ್ಥೆ ಪಾತ್ರವಾಯಿತು. ಅದಾಗಿ ೨ ವರ್ಷದಲ್ಲಿ ಭಾರತಕ್ಕೆ ಸ್ವಾತಂತ್ರ್ಯ, ಸಿಕ್ಕಿತು. ೧೯೫೦ರ ವೇಳೆಗೆ ಜರ್ಮನಿಯ ಡೈಮ್ಲರ್ ಬೆಂಜ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು ಟಾಟಾ ಸಂಸ್ಥೆ ಭಾರತದಲ್ಲಿ ಟ್ರಕ್ ನಿರ್ಮಾಣಕ್ಕೆ ಮುಂದಾಯಿತು. ಯುದ್ಧವೂ ಸಮಾಪ್ತಿಯಾಗಿದ್ದರಿಂದ ಜರ್ಮನಿ ವೇಗವಾಗಿ ಚೇತರಿಸಿಕೊಂಡಿತು. ಆದರೆ ಕಥೆ ಅಲ್ಲಿಗೇ ನಿಲ್ಲಲಿಲ್ಲ.

ಒಂದು ದಿನ ಕ್ರಾಸ್ ಮಾಫಿ ಸಂಸ್ಥೆಯ.ನಿರ್ದೇಶಕ ಮಂಡಳಿಗೆ ಒಂದು ಪತ್ರ ಬಂತು. ತೆರೆದು ನೋಡಿದರೆ ಅದು ಟಾಟಾ ನಿರ್ದೇಶಕರಾಗಿದ್ದ ಜೆಆರ್‌ಡಿ ಬರೆದ ಪತ್ರವಾಗಿತ್ತು. ಪತ್ರದಲ್ಲಿ, ಲೋಕೊಮೋಟಿವ್ ಯಂತ್ರ ತಯಾರಿಕೆಗೆ ಕ್ರಾಸ್ ಮಾಫಿ ಎಂಜಿನಿಯರ್‌ಗಳು ನೀಡಿದ ತಂತ್ರಜ್ಞಾನ ಮತ್ತು ಕೌಶಲಕ್ಕೆ ಧನ್ಯವಾದ ಸಲ್ಲಿಸಲಾಗಿತ್ತು. ಅಷ್ಟೇ ಅಲ್ಲ, ಅದಕ್ಕೆ ಗೌರವಧನ ನೀಡುವುದಾಗಿ ಪ್ರಸ್ತಾಪಿಸಲಾಗಿತ್ತು. ಇದನ್ನು ಕಂಡ ಕ್ರಾಸ್ ಮಾಫಿ ಸಂಸ್ಥೆಯವರು ಅತೀವ ಆಶ್ಚರ್ಯಕ್ಕೊಳಗಾಗಿದ್ದರು. ಕಾರಣ, ಎರಡು ಸಂಸ್ಥೆಯ ನಡುವೆ ಈ ರೀತಿಯ ಯಾವುದೇ ಒಪ್ಪಂದವಾಗಿರಲಿಲ್ಲ. ಯಾವುದೇ ಕರಾರುಪತ್ರ ಇರಲಿಲ್ಲ, ತಂತ್ರಜ್ಞಾನ ನೀಡಿದ್ದಕ್ಕೆ ಹಣ ಸಂದಾಯ ಮಾಡುವ ಯಾವ ಬದ್ಧತೆಯೂ ಟಾಟಾ ಸಂಸ್ಥೆಗೆ ಇರಲಿಲ್ಲ. ನಿಜ ಹೇಳಬೇಕು ಎಂದರೆ, ಆ ಸಂಕಷ್ಟದ ಕಾಲದಲ್ಲಿ ಯಾವುದೇ ಕರಾರು ಇಲ್ಲದೆಯೇ, ನಿರುದ್ಯೋಗಿಗಳಾಗಿದ್ದ ಜರ್ಮನ್ ಎಂಜಿನಿಯರ್‌ಗಳಿಗೆ ಟಾಟಾ ಸಂಸ್ಥೆ ಉದ್ಯೋಗ ನೀಡಿತ್ತು. ಅವರನ್ನು ಚೆನ್ನಾಗಿ ನೋಡಿಕೊಂಡು ಜರ್ಮನಿಗೆ, ಸಂಸ್ಥೆಗೆ ಸಂಸ್ಥೆಗೆ ಉಪಕಾರ ಮಾಡಿತ್ತು. ಮೇಲಾಗಿ ಇಂಥದ್ದೊಂದು ಪತ್ರ ಬಂದಿದೆ ಎಂದರೆ ಅವರಲ್ಲಿ ಮಾತೇ ಇರಲಿಲ್ಲ. ಬಹಳ ವರ್ಷಗಳವರೆಗೆ ಗೌಪ್ಯವಾಗಿದ್ದ ಈ ವಿಷಯವನ್ನು ಸುಮಾರು ೨೦ ವರ್ಷದ ನಂತರ ಕ್ರಾಸ್ ಮಾಫಿ ಸಂಸ್ಥೆಯ ನಿರ್ದೇಶಕರೊಬ್ಬರು ಮಲೇಷಿಯಾದಲ್ಲಿ ಬಹಿರಂಗ ಪಡಿಸಿದ್ದರು. 'ಅಂದು ಟಾಟಾ ಸಂಸ್ಥೆ ಗೌರವಧನ ನೀಡಿ, ಕರಾರು-ಕಾನೂನಿನ ಕಟ್ಟುಪಾಡು ಇಲ್ಲದೆಯೂ ಒಳ್ಳೆಯ ವ್ಯವಹಾರ ಮಾಡಬಹುದು. ಎಂದು ತೋರಿಸಿಕೊಟ್ಟಿತು' ಎಂದಿದ್ದರು.

ಇನ್ನೊಂದು ವಿಷಯ ಗೊತ್ತೇ? ೭೦ರ ದಶಕದಲ್ಲಿ ಜರ್ಮನಿಯ ಸಂಸ್ಥೆಗಳೊಂದಿಗೆ ವ್ಯಾಪಾರ ಮಾಡಲು ಬ್ಯಾಂಕ್ ಗ್ಯಾರಂಟಿ (ಕಾನೂನುಬದ್ದ ಹಣಕಾಸಿನ ಖಾತರಿ) ನೀಡುವಂತೆ ಕೇಳಲಾಗಿತ್ತು. ಆ ಸಮಯದಲ್ಲಿ ಭಾರತ ಸರಕಾರದ ನಿಯಮಗಳಿಂದಾಗಿ ಇದು ಕಷ್ಟದ ಕೆಲಸವಾಗಿತ್ತು. ಇದು ಜರ್ಮನಿಯ ಬ್ಯಾಂಕ್ ಅಧಿಕಾರಿಗಳಿಗೆ ತಿಳಿದಾಗ, 'ಟಾಟಾ ಸಂಸ್ಥೆಯ ಲೆಟರ್‌ಹೆಡ್‌ನಲ್ಲಿ ಅಧ್ಯಕ್ಷರು ಸಹಿ ಮಾಡಿದ ಗ್ಯಾರಂಟಿ ಪತ್ರ ಯಾವುದೇ ಬ್ಯಾಂಕ್ ಗ್ಯಾರಂಟಿಗಿಂತಲೂ ಹೆಚ್ಚಿನ ಮೌಲ್ಯ ಹೊಂದಿದೆ' ಎಂದು ಹೇಳಿದ್ದರು. ವ್ಯಾಪಾರದಲ್ಲಿ ಉಳಿಸಿಕೊಳ್ಳ ಬೇಕಾದದ್ದು ಇದೇ ಅಲ್ಲವೇ? ಆ ಕಾಲದಲ್ಲಿಯೇ ಟಾಟಾ ಸಂಸ್ಥೆ ಆ ಭರವಸೆಯನ್ನು ಬೆಳೆಸಿಕೊಂಡಿತ್ತು. ಉಳಿಸಿಕೊಂಡಿತು.

ಫರೀದ್ ಹೇಳುತ್ತಿದ್ದ ಕಥೆ ಕೇಳುತ್ತಿದ್ದಂತೆ ಟಾಟಾ ಸಂಸ್ಥೆ, ಜೆಆರ್‌ಡಿಯವರ ಕುರಿತು ಇದ್ದ ಗೌರವ ಇನ್ನಷ್ಟು ಹೆಚ್ಚಿತು. ಈ ಕಥೆಯನ್ನು ನಾನ್ನು ಈ ಮೊದಲು ಕೇಳಿರಲಿಲ್ಲ. ನಮ್ಮ ದೇಶದ ಯಶಸ್ವಿ ಉದ್ಯಮಿಯ ಕಥೆಯೊಂದು ಬಹ್ರೈನ್ ದೇಶದಲ್ಲಿ ಹುಟ್ಟಿ ಬೆಳೆದವರಿಂದ ತಿಳಿಯಿತು. ಬೇಸರ ಪಡಬೇಕೋ, ಸಂತೋಷಪಟ್ಟುಕೊಳ್ಳಬೇಕೋ ಗೊತ್ತಾಗಲಿಲ್ಲ. ಈ ಕಥೆಯ ಸತ್ಯಾಸತ್ಯತೆ ತಿಳಿದುಕೊಳ್ಳಬೇಕಿತ್ತು. ಗೊತ್ತಲ್ಲ, ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಬರುವ ಯಾವ ವಿಷಯವನ್ನೂ ಸಲೀಸಾಗಿ ನಂಬುವಂತಿಲ್ಲ, ಫರೀದ್ ಬದರ್ ನನಗೆ ಕಳುಹಿಸಿದ ಒಮ್ಮೆ ಲೇಖನ ಸತ್ಯವೋ, ಸುಳ್ಳೋ ಎಂದು ಒಮ್ಮೆ ನೋಡಬೇಕು ಎಂದು ಹುಡುಕಿದೆ. ಅವರು ನನಗೆ ಕಳುಹಿಸಿದ್ದು, ಮುಂಬೈ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪಡೆದ ಶಿಕ್ಷಣ ತಜ್ಞೆ, ಲೇಖಕಿ, ಪ್ರಮಿಳಾ ಕುಡ್ವ ಇಂದಿಗೆ ಮೂರು ವರ್ಷದ ಹಿಂದೆ ಬರೆದು ಪ್ರಕಟಿಸಿದ ಲೇಖನ ಎಂಬ ಮಾಹಿತಿ ದೊರಕಿತು.

ಒಂದಂತೂ ನಿಜ, ಜೆಆರ್‌ಡಿ ಟಾಟಾ ಅಂದು ದೇಶಕ್ಕೆ ಲೋಕೊಮೋಟಿವ್ ಯಂತ್ರವನ್ನು ಮಾತ್ರ ಕೊಟ್ಟಿರಲಿಲ್ಲ, ಅದಕ್ಕಿಂತಲೂ ದೊಡ್ಡದಾದ ಮೋಟಿ ವೇಷನ್ ಮಂತ್ರವನ್ನೂ ಕೊಟ್ಟಿದ್ದರು. ಇಂದಿಗೂ ಟಾಟಾ ಸಂಸ್ಥೆ ಆ ಭರವಸೆಯನ್ನು ಕಾಪಿಟ್ಟು ಕೊಂಡಿದೆ. ಟಾಟಾ ಸಂಸ್ಥೆ ದಗಾ ಹಾಕಿದ ಕಥೆಯ ನಾಗಲಿ, ಅನ್ಯಾಯದ ಮಾರ್ಗದಲ್ಲಿ ಹಣ ಗಳಿಸಿದ ಆಪಾದನೆಯಾಗಲಿ ನಾನಂತೂ ಕೇಳಲಿಲ್ಲ.

ಇಂದು ನಾವು ರತನ್ ಟಾಟಾ ಅವರನ್ನು ಭಾರತದ ‘ವಾರೆನ್ ಬಫೆಟ್’ ಎಂದು ಹೇಳುತ್ತೇವೆ. ತಮ್ಮ ಆದಾಯದ ಶೇ.೬೬ರಷ್ಟನ್ನು ಅವರು ದಾನ ಮಾಡುತ್ತಾರೆ ಎಂಬ ಕಥೆ ಕೇಳುತ್ತೇವೆ. ವರದಿ ಓದುತ್ತೇವೆ. ಯಾಕಾಗಬಾರದು? ಅವರು ನಡೆದದ್ದು ಹಿರಿಯರಾದ ಜೆಆರ್‌ಡಿ ಹಾಕಿಕೊಟ್ಟ ಸ್ಫೂರ್ತಿಯ ಹಾದಿಯಲ್ಲಿ ತಾನೆ? ರತನ್ ಟಾಟಾ ಕೂಡ ತಾವೊಬ್ಬರೇ ನಡೆಯಲಿಲ್ಲ. ತಾವು ನಡೆಯುವುದರೊಂದಿಗೆ ಪಕ್ಕದಲ್ಲಿಯೇ ಇನ್ನೊಂದು ಸ್ಪೂರ್ತಿಯ ಹಾದಿಗೂ ಕಲ್ಲು ಹಾಸಿ ಹೋಗಿದ್ದಾರೆ. ಆ ಹಾದಿಯಲ್ಲಿ ಮುಂದಿನ ತಲೆಮಾರಿನವರು ಹೂವು ಬೆಳೆಯಲು ಮಾದರಿಯಾಗಿ ಹೋಗಿದ್ದಾರೆ. ಬದುಕಿರಲಿ, ಇಲ್ಲದಿರಲಿ, ಆನೆ ಆನೆಯೇ!

ಈ ಲೇಖನವನ್ನು ಓದಿ ಟಾಟಾ ಸಂಸ್ಥೆ ಇಂದು ಇಷ್ಟು ಉನ್ನತಿ ಏಕೆ ಕಂಡಿದೆ ಎನ್ನುವುದು ನನಗೂ ಅರ್ಥವಾಯಿತು. ಲೇಖನ ಬರೆದ ಕಿರಣ್ ಉಪಾಧ್ಯಾಯರಿಗೆ ಕೃತಜ್ಞತೆಗಳು.

ಚಿತ್ರ ಕೃಪೆ: ಅಂತರ್ಜಾಲ ತಾಣ