ಫಲಗಳನ್ನು ಹಣ್ಣು ಮಾಡುವ ಸುರಕ್ಷಿತ ವಿಧಾನ ಯಾವುದು?

ಫಲಗಳನ್ನು ಹಣ್ಣು ಮಾಡುವ ಸುರಕ್ಷಿತ ವಿಧಾನ ಯಾವುದು?

ಹಣ್ಣು ಹಂಪಲುಗಳನ್ನು ತಿನ್ನುವವರು ಇದಕ್ಕೆ ಹಣ್ಣು ಮಾಡಲು ವಿಷದ ಹುಡಿ ಹಾಕಿದ್ದಾರೆ ಎಂದು ಮಾತಾಡುತ್ತಾರೆ. ಅಂಗಡಿಯವನಲ್ಲಿ ವಿಷ ಹಾಕದ ಹಣ್ಣು ಕೊಡಿ ಎಂದು ಕೇಳುತ್ತಾರೆ. ಅವರು ಬಟ್ಟೆಯಲ್ಲಿ ಒರೆಸಿ ಇದು ವಿಷ ರಹಿತ ಎಂದು ಕೊಡುತ್ತಾರೆ. ನಂಬಿಕೆಯಲ್ಲಿ ಒಯ್ದು ಅದನ್ನು ತಿನ್ನುತ್ತೇವೆ. ಆದರೆ ಈಗಲೂ ನಮ್ಮಲ್ಲಿ ೯೫% ಕ್ಕೂ ಹೆಚ್ಚಿನ ಹಣ್ಣು ಹಂಪಲುಗಳನ್ನು ಕ್ಯಾಲ್ಸಿಯಂ ಕಾರ್ಬೇಟ್ ಎಂಬ ವಿಷ ರಾಸಾಯನಿಕ ಬಳಸಿಯೇ ಹಣ್ಣು ಮಾಡಲಾಗುತ್ತದೆ. ಜನರಿಗೆ ಇದಕ್ಕಿಂತ ಉತ್ತಮ ಬೇರೆ ತಂತ್ರಜ್ಞಾನ ಇದೆ ಎಂದು ಗೊತ್ತಿಲ್ಲವೋ ಏನೋ, ಕ್ಯಾಲಿಯಂ ಕಾರ್ಬೇಟ್ ಬಳಸದೇ ಹಣ್ಣು ಮಾಡದೆ  ಇರುವಂತದ್ದು ಅಪರೂಪ.

ಕೋಲಾರದ ಶ್ರೀನಿವಾಸಪುರದಿಂದ ಹೊರಡುವ ಮಾವು ತುಂಬಿದ ಲಾರಿಗಳಲ್ಲಿ ಒಂದು ಅಂತಸ್ತು ಸುಮಾರು ೨ ಅಡಿ ಎತ್ತರಕ್ಕೆ ಮಾವು ಹಾಕುತ್ತಾರೆ. ಅದರ ಮೇಲೆ ಒಂದಷ್ಟು ಕ್ಯಾಲ್ಸಿಯಂ ಕಾರ್ಬೇಟ್ ಸುರಿಯುತ್ತಾರೆ. ನಂತರ ಮತ್ತೆ ಪುನಃ ಮಾವು ಹೇರುತ್ತಾರೆ. ಮತ್ತೊಂದು ಲೇಯರ್ ಕ್ಯಾ. ಕಾರ್ಬೇಟ್ ಹಾಕುತ್ತಾರೆ. ಪೂರ್ತಿ ತುಂಬಿ ಟರ್ಪಾಲು ಎಳೆದು ಮುಚ್ಚಿ ತಲುಪಿಸಬೇಕಾದ ಕಡೆಗೆ ಒಂದು ದಿನದ ಒಳಗೆ ತಲುಪಿಸುತ್ತಾರೆ. ಅಲ್ಲಿಗೆ ತಲುಪುವಾಗ ಮಾವಿನ ಹಣ್ಣು ಹದ ಬಾಡಿರುತ್ತದೆ. ಅಂಗಡಿಯವನ ಕೌಂಟರ್ ಗೆ ಬರುವಾಗ ಚೆನ್ನಾದ ಬಣ್ಣ ಬಂದು ಹಣ್ಣಾಗಿರುತ್ತದೆ. ಬೆಳ್ಳಂಬೆಳಗ್ಗೆ ಲಾರಿಯಿಂದ ಹಣ್ನೂ ಖಾಲಿಯಾಗಿರುತ್ತದೆ. ಅನ್ ಲೋಡ್ ಆದ ಲಾರಿಯಲ್ಲಿ ಬಿಳಿ ಹುಡಿಯ ರಾಶಿಯೇ ಇರುತ್ತದೆ. ಅಂಗಡಿಯವನು ದಿನಾ ಬಟ್ಟೆಯಲ್ಲಿ ಉಜ್ಜುತ್ತಾ ಒಳ್ಳೆಯ ಹಣ್ಣು ಎಂದು ಮಾರಾಟ ಮಾಡುತ್ತಾನೆ. ಕೇವಲ ಎರಡು ದಿನದಲ್ಲಿ ಎಂತಹ ಕಾಯಿಯಾದರೂ ಅದನ್ನು ಹಣ್ಣು ಮಾಡಲು ಈಗಲೂ ಬಳಕೆ ಮಾಡುವುದು ಕ್ಯಾಲ್ಸಿಯಂ ಕಾರ್ಬೇಟ್.  

ಮಾವು, ಬಾಳೆ, ಪಪ್ಪಾಯಿ ಹಾಗೂ ಸಪೋಟ ಬೆಳೆಗಳಲ್ಲಿ ಹಣ್ಣುಗಳನ್ನು ಸಾಮಾನ್ಯವಾಗಿ ಚೆನ್ನಾಗಿ ಬಲಿತ ನಂತರ ಗಿಡದಲ್ಲೇ ಮಾಗಿ ಹಣ್ಣಾಗುವ ಮೊದಲೇ ಕೊಯ್ಲು ಮಾಡಲಾಗುತ್ತದೆ. ಕೊಯ್ಲು ಮಾಡಿದ ಹಣ್ಣುಗಳಲ್ಲಿ ಉತ್ಪತ್ತಿಯಾಗುವ ಇಥೆಲೀನ್ ಅನಿಲ ನೈಸರ್ಗಿಕವಾಗಿ ಹಣ್ಣುಗಳನ್ನು ಸಂಪೂರ್ಣವಾಗಿ ಮಾಗಿಸುವಲ್ಲಿ ಸಹಾಯಮಾಡುತ್ತದೆ. ಆದರೆ ಕೆಲವು ಹಣ್ಣುಗಳು ಸ್ವಾಭಾವಿಕವಾಗಿ ಹಣ್ಣಾಗಲು ಬಹಳಷ್ಟು ಕಾಲ ತೆಗದುಕೊಳ್ಳುತ್ತದೆ. ಅಲ್ಲದೆ ಸ್ವಾಭಾವಿಕವಾಗಿ ಮಾಗಿದ ಹಣ್ಣು ತನ್ನ ತೂಕವನ್ನು ಹೆಚ್ಚಿನ ಪ್ರಮಾಣದಲ್ಲಿ ಕಳೆದುಕೊಳ್ಳುತ್ತದೆ. ಮಾರಾಟಕ್ಕೆ ಒಂದೇ ಸಮನಾಗಿ ಕೃತಕ ವಿಧಾನಗಳಿಂದ ಕಾಯಿಗಳನ್ನು ಹಣ್ಣಾಗಿಸುವುದು ಅತೀ ಅಗತ್ಯವಾಗಿದೆ. ಹೀಗಾಗಿ ರೈತರು ಹಾಗೂ ಸಣ್ಣ ವ್ಯಾಪಾರಸ್ಥರು ಕಾಯಿಯನ್ನು ಮಾಗಿಸಿ ಹಣ್ಣಾಗಿಸಲು ಹೊಗೆಯಾಡಿಸುವಿಕೆ ಮತ್ತು ಕ್ಯಾಲ್ಸಿಯಂ ಕಾರ್ಬೈಡ್‌ನ ಬಳಕೆ ಮಾಡುತ್ತಾರೆ. ಹೊಗೆ ಹಾಕುವಿಕೆಯಲ್ಲಿ ಹಾನಿ ಕಡಿಮೆಯಾದರೂ ಕ್ಯಾಲ್ಸಿಯಂ ಕಾರ್ಬೇಟ್ ನಲ್ಲಿ ತಿನ್ನುವವನಿಗೆ ಹಾನಿ ಜಾಸ್ತಿ.

ಕ್ಯಾಲ್ಸಿಯಂ ಕಾರ್ಬೈಡ್ ಬಳಕೆಯ ದುಷ್ಪರಿಣಾಮಗಳು : ಮಾರಾಟಗಾರರು ಕಾಯಿಯನ್ನು ಮಾಗಿಸಿ ಹಣ್ಣಾಗಿಸಲು ಇನ್ನು ಸಹ ನಿಷೇಧಿಸಲ್ಪಟ್ಟ ರಾಸಾಯನಿಕವಾದ ಕ್ಯಾಲ್ಸಿಯಂ ಕಾರ್ಬೈಡ್‌ಗಳನ್ನು ಉಪಯೋಗಿಸುತ್ತಾರೆ. ಕೆಲವೇ ಕೆಲವರು ಅದನ್ನು ಗಾಳಿಯಾಡದ ಸ್ಥಳದಲ್ಲಿಟ್ಟು ಹಣ್ಣಿನ ಮೇಲೆ ನೀರನ್ನು ಚಿಮುಕಿಸುತ್ತಾರೆ. ಇನ್ನು ಕೆಲವೆಡೆ ಹಣ್ಣಿನ ಪೆಟ್ಟಿಗೆಯಲ್ಲಿ ಚಿಕ್ಕ ಚಿಕ್ಕ ಪೊಟ್ಟಣಗಳಲ್ಲಿ ಕ್ಯಾಲ್ಸಿಯಂ ಕಾರ್ಬೈಡನ್ನು ಇಡಲಾಗುತ್ತದೆ. ಇದು ಹಾನಿಕಾರಕ ರಾಸಾಯನಿಕ ಆರ್ಸೆನಿಕ್ ಹೈಡ್ರೇಟ್ ಮತ್ತು ಫಾಸ್ಫರಸ್ ಹೈಡ್ರೇಟ್ ಗಳನ್ನು ಹೊಂದಿರುತ್ತದೆ. ಇದನ್ನು ತೀಕ್ಷ್ಣ ಕ್ಯಾನ್ಸರ್ ಕಾರಕ ವಸ್ತು ಎಂದು ಪರಿಗಣಿಸಲಾಗಿದೆ. ಹೀಗಾಗಿ  ಹಣ್ಣು ಮಾಡುವಾಗ ಕ್ಯಾಲ್ಸಿಯಂ ಕಾರ್ಬೈಡ್‌ನ ಬಳಕೆ ರಾಸಾಯನಿಕ ಉಳಿಕೆಯನ್ನು ಉಂಟು ಮಾಡುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ.

ಕ್ಯಾಲ್ಸಿಯಂ ಕಾರ್ಬೈಡ್ ಉಪಯೋಗಿಸಿ ಮಾಗಿಸಿ ಹಣ್ಣುಗಳು ಹೆಚ್ಚು ರುಚಿಕರವಾಗಿರುವುದಿಲ್ಲ. ಸ್ವಾದರಹಿತ ಈ ಹಣ್ಣುಗಳು ಬಹುಬೇಗ ಹಾಳಾಗುತ್ತವೆ. ಭಾರತ ಸರಕಾರ ಕ್ಯಾಲ್ಸಿಯಂ ಕಾರ್ಬೈಡನ್ನು ಹಣ್ಣು ಮಾಡುವಾಗ ಬಳಸುವುದನ್ನು ಆಹಾರ ಮತ್ತು ಸಂರಕ್ಷಣಾ ಕಾಯ್ದೆ ಕಲಂ ೮-೪೪೦೦, ೧೯೫೪ ಪ್ರಕಾರ ಕಾನೂನು ರೀತ್ಯಾ ನಿಷೇಧಿಸಲಾಗಿದೆ.

ಇಥ್ರೇಲ್ ದ್ರಾವಣದಿಂದ ಇಥಿಲೀನ್ ಉತ್ಪಾದಿಸಿ ಬಳಸುವ ಸುರಕ್ಷಿತ ವಿಧಾನ : ಇಥ್ರೇಲ್ ಅಥವಾ ಇಥೋಫೋನ್ ದ್ರಾವಣದಿಂದ ಇಥಿಲೀನ್ ಅನಿಲವನ್ನು ಉತ್ಪಾದಿಸಿ ಇದರ ಮುಲಕ ಹಣ್ಣುಗಳನ್ನು ಶೀಘ್ರವಾಗಿ ಮಾಗಿಸುವುದು ಒಂದು ಸುಲಭವಾದ ಪರ್ಯಾಯ ವಿಧಾನವಾಗಿದೆ. ಇದನ್ನು ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಹೇಸರಘಟ್ಟ, ಬೆಂಗಳೂರಿನಲ್ಲಿ ಕಂಡುಹಿಡಿಯಲಾಗಿದೆ. ಹಾನಿಕಾರಕ ರಾಸಾಯನಿಕಗಳ ಬದಲಾಗಿ ಹಣ್ಣುಗಳನ್ನು ಈ ವಿಧಾನದಲ್ಲಿ ಉತ್ತಮವಾಗಿ ಹಣ್ಣೂ ಮಾಡಬಹುದು.  ಗಾಳಿಯಾಡದ ಪ್ಲಾಸ್ಟಿಕ್ ಟೆಂಟ್‌ಗಳಲ್ಲಿ ಹಣ್ಣುಗಳನ್ನಿಟ್ಟು ಇಥೆಲೀನ್ ಅನಿಲವನ್ನು ಮೇಲೆ ತಿಳಿಸಿದಂತೆ ಉತ್ಪಾದಿಸಿ ಹಣ್ಣುಗಳಿಗೆ ಲಭ್ಯವಾಗುವಂತೆ ಮಾಡಿ ಹಣ್ಣು - ಬಣ್ಣ ಬರಿಸುವುದು ಸುರಕ್ಷಿತ ವಿಧಾನ. ಪ್ಲಾಸ್ಟಿಕ್ ಟೆಂಟ್‌ನ ಬದಲು ಉದ್ದಿಮೆದಾರರು ಸಾಮಾನ್ಯವಾಗಿ ಉಪಯೋಗಿಸುವ ಗಾಳಿಯಾಡದ ಕೊಠಡಿಯನ್ನೇ ಇಥೆಲೀನ್ ಅನಿಲ ಉತ್ಪಾದನೆಗೆ ಉಪಯೋಗಿಸಬಹುದು. ಕರುನಾಡ ಮಾವು ಎಂಬ ಹೆಸರಿನಲ್ಲಿ ಮಾರಲ್ಪಡುವ ಮಾವು ಈ ರೀತಿ ಹಣ್ಣು ಮಾಡಲ್ಪಟ್ಟುದಾಗಿದೆ.

ಈ ಸರಳ ವಿಧಾನದಲ್ಲಿ ಕಾಯಿಗಳನ್ನು ಗಾಳಿಯಾಡುವ ಪ್ಲಾಸ್ಟಿಕ್ ಕ್ರೇಟ್‌ಗಳಲ್ಲಿ ನಂತರ ಈ ಕ್ರೇಟ್‌ಗಳನ್ನು ಪ್ಲಾಸ್ಟಿಕ್ ಟೆಂಟ್‌ನಲ್ಲಿ ಇಡಬೇಕು. ನಿರ್ದಿಷ್ಟ ಪ್ರಮಾಣದ ಇಥ್ರೇಲ್ ಅನ್ನು ಕೊಠಡಿಯಲ್ಲಿ ಪರತಿ ಚದರ ಮೀಟರ್ ಅಳತೆಗೆ ೨ ಮಿ.ಲೀ. ಲೀಟರ್ ಒಂದು ಸಣ್ಣ ಪ್ಲಾಸ್ಟಿಕ್ ಬಕೆಟ್‌ನಲ್ಲಿ ಹಾಕಿ ಪ್ಲಾಸ್ಟಿಕ್ ಟೆಂಟ್‌ನ ಒಳಗೆ ಇಡಬೇಕು. ಜೊತೆಗೆ ನಿರ್ದಿಷ್ಟ ಪ್ರಮಾಣದ ಪ್ರತಿ ೧ ಮಿ.ಲೀ. ಇಥ್ರೇಲ್ ಗೆ ೦.೨೫ ಗ್ರಾಂ. ಕ್ಷಾರ (ಸೋಡಿಯಂ ಹೈಡ್ರಾಯ್ಡ್ ಅಡಿಗೆ ಸೋಡಾ) ಸೇರಿಸಬೇಕು. ಆಗ ಅದು ಉಕ್ಕಿ ಬಂದು ಅನಿಲವನ್ನು ಹೊರ ಬಿಡುತ್ತದೆ. ಇದು ಇಥ್ರೇಲ್ ಮಿಶ್ರಣದಿಂದ ಇಥೆಲೀನ್ ಗ್ಯಾಸನ್ನು ಪಡೆಯಲು ಸಹಕಾರಿಯಾಗಿದೆ. ಗ್ಯಾಸ್ ಹೊರ ಬಂದ ತಕ್ಷಣ ಟೆಂಟನ್ನು ಗಾಳಿ ಹೋಗದಂತೆ ಗಟ್ಟಿಯಾಗಿ ಮುಚ್ಚಿಡಬೇಕು. ಬಿಡುಗಡೆಯಾದ ಇಥೆಲೀನ್ ಟೆಂಟ್ ಒಳಗಡೆ ಏಕಪ್ರಕಾರವಾಗಿ ಸಮನಾಗಿ ಹಣ್ಣುಗಳಿಗೆ ಹರಡಲು ಚಿಕ್ಕ ಬ್ಯಾಟರಿ ಚಾಲಿತ ಫ್ಯಾನನ್ನು ಒಳಗಿಟ್ಟರೆ ಇನ್ನೂ ಒಳ್ಳೆಯದು. ಸುಮಾರು ೧೮ ರಿಂದ ೨೪ ಗಂಟೆಗಳ ಕಾಲ ಟೆಂಟ್‌ನಲ್ಲಿಟ್ಟ ನಂತರ ಹಣ್ಣನ್ನು ಹೊರ ತೆಗೆಯಬಹುದು. ನಂತರ ಕೊಠಡಿಯ ಸಾಮಾನ್ಯ ಉಷ್ಣತೆಯಲ್ಲಿ ಹಣ್ಣುಗಳು ಮಾಗುತ್ತವೆ. ಅಥವಾ ೧೮-೨೪ ಡಿಗ್ರಿ ಉಷ್ಣಾಂಶದಲ್ಲಿಡಬೇಕಾಗುತ್ತದೆ. ವಿಶೇಷವಾಗಿ ಪಚ್ಚ ಬಾಳೆಯಲ್ಲಿ ಈ ವಿಧಾನವನ್ನು ಅನುಸರಿಸಬೇಕಾಗುತ್ತದೆ. ಡೆಸಟ್ ಕೂಲರನ್ನು ಸಾಮಾನ್ಯ ಉಷ್ಣಾಂಶದಲ್ಲಿ ಹಣ್ಣುಗಳನ್ನು ಮಾಗಿಸುವಾಗ ಉಪಯೋಗಿಸಿದರೆ ಅದರಿಂದ ವಾತಾವರಣದಲ್ಲಿ ಹೆಚ್ಚಿನ ಉಷ್ಣಾಂಶವನ್ನು ಕಡಿಮೆಗೊಳಿಸಬಹುದು. ಇದರಿಂದ ಹಣ್ಣುಗಳು ಮಾಗುವಾಗ ತೂಕ ಕಡಿಮೆಯಾಗುವ ಸಮಸ್ಯೆಯನ್ನು ತಪ್ಪಿಸಬಹುದು.

ಇಥೆಲೀನ್ ಅನಿಲದ ಸಂಪರ್ಕಕ್ಕೆ ೨೪ ಗಂಟೆ ತೆರೆದಿಟ್ಟ ಮಾವಿನ ಹಣ್ಣುಗಳು ೫ ದಿನಗಳೊಳಗಾಗಿ ಹಣ್ಣಾಗುತ್ತವೆ. ಅದೇ ಇಥೆಲೀನ್‌ನಿಂದ ಸಂಸ್ಕರಿಸದೇ ಇರುವ ಮಾವಿನ ಹಣ್ಣುಗಳ ಮಾಗುವಿಕೆಗೆ ೧೦ ದಿನಗಳನ್ನು ತೆಗೆದುಕೊಳ್ಳುವುದಲ್ಲದೆ ಹಣ್ಣಿನ ಗುಣಮಟ್ಟವು ಕುಂಠಿತಗೊಳ್ಳುತ್ತದೆ. ಹೀಗಾಗಿ ಮಾವಿನ ಕಾಯಿಗಳನ್ನು ಹಣ್ಣು ಮಾಡುವಾಗ ಯಾವುದೇ ಆಮಿಷಗಳಿಗೆ ಒಳಗಾಗದೆ, ಕ್ಯಾಲ್ಸಿಯಂ ಕಾರ್ಬೈಡ್‌ನಂತಹ ವಿಷಕಾರಿ ರಾಸಾಯನಿಕವನ್ನು ಬಳಸಲೇಬಾರದು. ಇದು ನಿಷಿದ್ಧ.ಇದಕ್ಕೆ ಬದಲಾಗಿ ಇಥೆಲಿನ್ ಒಂದು ಸುರಕ್ಷಿತ ಹಾಗು ಪರಿಣಾಮಕಾರಿ ವಸ್ತುವಾಗಿದೆ. ಹಣ್ಣಿನ ಬೆಳೆಗಾರರು ಈ ವಿಧಾನವನ್ನು ವ್ಯಾಪಾರಸ್ಥರಿಗೆ ತಿಳಿ ಹೇಳುವ ಮೂಲಕ ಸಾಮಾಜಿಕ ಆರೋಗ್ಯದ ಕಾಪಾಡುವಲ್ಲಿ ನೆರವಾಗಬಹುದು.

ಮಾಹಿತಿ : ರಾಧಾಕೃಷ್ಣ ಹೊಳ್ಳ

ಚಿತ್ರ ಕೃಪೆ: ಅಂತರ್ಜಾಲ ತಾಣ