ಫಲವತ್ತಾದ ಮಣ್ಣು ಕೃಷಿಯ ಜೀವಾಳ (ಭಾಗ ೨)

ಫಲವತ್ತಾದ ಮಣ್ಣು ಕೃಷಿಯ ಜೀವಾಳ (ಭಾಗ ೨)

ಸ್ಪರ್ಶದಿಂದ ಸ್ವರೂಪ ತಿಳಿಯುವಿಕೆ : ಮಣ್ಣಿನ ಫಲವತ್ತತೆಯು ಅದರ ಸ್ವರೂಪವನ್ನು ಅವಲಂಭಿಸಿರುವುದರಿಂದ ವ್ಯವಸಾಯ ಮಾಡುವವರು ಯಾವುದಾದರೊಂದು ಮಣ್ಣು ಯಾವ ಸ್ವರೂಪದ್ದೆಂದು ಹೇಳಲು ಶಕ್ತರಾಗಬೇಕು. ಪ್ರಯೋಗಶಾಲೆಯಲ್ಲಿ ಅದನ್ನು ಪರೀಕ್ಷಿಸಲು ತಡವಾಗುವುದರಿಂದ ಕೇವಲ ನೋಡಿ ಹಾಗೂ ಸ್ಪರ್ಶಮಾತ್ರದಿಂದ ಮಣ್ಣಿನ ಗುಣವನ್ನು ಕಂಡುಕೊಳ್ಳಬೇಕು. ಕೃಷಿ ಮಾಡುವಾಗ ರೈತರಲ್ಲಿ ಇಂತಹ ಕುಶಲತೆಯನ್ನು ಇರಬೆಕಾಗುತ್ತದೆ. ಮೊದಲು ಮಣ್ಣಿಗೆ ಸ್ವಲ್ಪ ನೀರು ಸೇರಿಸಿ ಎಡ ಹೆಬ್ಬೆರಳು ಹಾಗೂ ತೋರು ಬೆರಳುಗಳ ಮಧ್ಯದಲ್ಲಿ ತಿಕ್ಕಬೇಕು. ಒರಟು ಎನಿಸಿದರೆ ಮರಳು ಹೆಚ್ಚು ಇರುವ ಮಣ್ಣೆಂದೂ, ಮೃದು ಎನಿಸಿದರೆ ರೇವೆ ಕಣಗಳು ಹೆಚ್ಚು ಇರುವ ಮಣ್ಣು ಎಂತಲೂ, ಜಿಗುಟು ಎನಿಸಿದರೆ ಎರೆ (ಜೇಡಿ) ಕಣಗಳು ಹೆಚ್ಚು ಇರುವ ಮಣ್ಣು ಎಂತಲೂ ಸರ್ವಸಾಮಾನ್ಯವಾಗಿ ತಿಳಿಯಬಹುದು. ಅನುಭವದಿಂದ ಈ ತೆರನಾಗಿ ಮಣ್ಣಿನ ಸ್ವರೂಪ ವರ್ಗಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತದೆ.

ಮಣ್ಣಿನ ರಚನೆ : ಮಣ್ಣಿನ ಕಣಗಳು ಗುಂಪುಗೂಡುವುದಕ್ಕೆ ಅಥವಾ ಉಂಡೆ ಕಟ್ಟುವುದಕ್ಕೆ ಮಣ್ಣಿನ ರಚನೆ ಎನ್ನುವರು.  ಮರಳು, ರೇವೆ ಹಾಗೂ ಎರೆ ಕಣಗಳು ಗುಂಪುಗುಂಪಾಗಿ ಒಟ್ಟುಗೂಡಿರುತ್ತವೆ. ಈ ಗುಂಪುಗಳು ಕೆಲವು ನಿಶ್ಚಿತವಾದ ರಚನೆಯಲ್ಲಿ ಇರುತ್ತವೆ. ನೈಸರ್ಗಿಕವಾದ ಇಂತಹ ರಚನೆಗಳಿಗೆ ಪೆಣಕೆಗಳೆನ್ನುವರು. ಮರಳು ಮಣ್ಣಿನಲ್ಲಿ ಯಾವ ಬಗೆಯ ರಚನೆಯೂ ಹೆಣೆಯಲ್ಪಟ್ಟಿರುವುದಿಲ್ಲ. ಆದ್ದರಿಂದ ಮರಳು ಕಣಗಳು ವಿರಳವಾಗಿ ಹರಡಿಕೊಂಡಿರುತ್ತವೆ. ಮರಳು ಮಣ್ಣಿಗೆ ರಚನೆರಹಿತ ಮಣ್ಣು ಎನ್ನುವರು.

ರಚನೆಯ ನಮೂನೆಗಳು : ಮಣ್ಣಿನಲ್ಲಿ ಕಂಡುಬರುವ ವಿವಿಧ ನಮೂನೆಯ ಕೆಲವು ರಚನೆಗಳು ಕೆಳಗಿನಂತೆ ಇದೆ.

*  ತಟ್ಟೆಯಂತೆ  - ಹಪ್ಪಳಿಕೆ ಎಲೆಯಂತೆ

*  ಪ್ರಸಮ್ಮಿನಂತೆ - ಪ್ರಿಸಂ ಕಾಕೃತಿ , ಕಂಬದಾಕಾರ

*  ದಿಮ್ಮೆಯಂತೆ _ ಏಣುಳ್ಳದ್ದು, ಮೊಂಡು ಏಣುಳ್ಳದ್ದು

*  ಗೋಳದಂತೆ - ಗುಳಿಗೆಯಂತೆ, ಮುರುಕಾಕೃತಿ (ಉದುರು)

ಇವುಗಳಲ್ಲದೆ ಇನ್ನೂ ಬೇರೆ ಬೇರೆ ರಚನೆ ನಮೂನೆಗಳನ್ನು ಮಣ್ಣಿನಲ್ಲಿ ಕಾಣಬಹುದು. ಜಂಬಿಟ್ಟಿಗೆ ಮಣ್ಣಿನಲ್ಲಿ ಜೇನುಗೂಡಿನಾಕಾರದ ಎಂದರೆ, ಹೊರುಳೆಗಳುಳ್ಳ ರಚನೆ ಕಂಡುಬರುತ್ತದೆ. ಸಸ್ಯಗಳ ಬೇರುಗಳು, ಸುಣ್ಣ, ಕಬ್ಬಿಣ ಹಾಗೂ ಅಲ್ಯುಮಿನಿಯಂ ಆಕ್ಸೈಡ್ ಗಳು ಮತ್ತು ಸಾವಯವ ಪದಾರ್ಥಗಳ ಕಲಿಲಗಳು ಮಣ್ಣಿನ ಕಣಗಳನ್ನು ಜೋಡಿಸುತ್ತವೆ. ಸೂಕ್ಷ್ಮಜೀವಾಣುಗಳಿಂದ ಉತ್ಪಾದಿಸಲ್ಪಟ್ಟ ಪಾಲಿಸೆಕರೈಡುಗಳು ಹಾಗೂ ಪಾಲಿಯುರನೈಡುಗಳು ಮಣ್ಣಿನ ಕಣಗಳನ್ನು ಪರಿಣಾಮಕಾರಿಯಾಗಿ ಬಿಗಿಯುತ್ತವೆ.

ಮಣ್ಣಿನಲ್ಲಿರುವ ನೀರು, ಹವೆ ಹಾಗೂ ಉಷ್ಣತೆಗಳು ಮಣ್ಣಿನ ಸ್ವರೂದಂತೆ ಅದರ ರಚನೆಯ ಮೇಲೂ ಅವಲಂಬಿತವಾಗಿದೆ. ಒಳ್ಳೆಯ ತೆರನಾದ ರಚನೆಯು ಮಣ್ಣಿನಲ್ಲಿ ಛಿದ್ರಾವಕಾಶವನ್ನು ಕಲ್ಪಿಸುತ್ತದೆ. ಆದ್ದರಿಂದ ಅಂತಹ ಮಣ್ಣಿನಲ್ಲಿ ನೀರು  ಹಾಗೂ ಹವೆಗಳ ಚಲನವಲನಗಳಿಗೆ ಅವಕಾಶವಾಗುತ್ತದೆ. ಮಳೆಯ ನೀರು ಮಣ್ಣಿನ ಕಣಗಳ ಗುಂಪುಗಳ ಮಧ್ಯದಲ್ಲಿರುವ ಛಿದ್ರಗಳ ಮುಖಾಂತರ ಒಳಸೇರುತ್ತದೆ. ಅದೇ ವೇಳೆ ಕಣಗಳು ಗುಂಪುಗಳು ಕೇಶಾಕರ್ಷಕ ಶಕ್ತಿಯಿಂದ ನೀರನ್ನು ಹೀರಿಕೊಳ್ಳುತ್ತವೆ. ಈ ರೀತಿಯಾಗಿ ತೇವಾಂಶ ಹಾಗೂ ಹವೆಯ ಸ್ಥಿತಿಗಳು ಆದರ ಭೌತಿಕ ಗುಣಗಳಾಗಿ ಉಳಿಯುತ್ತವೆ. ಅನೇಕ ವೇಳೆ ಬೆಳೆಗಳ ಕಡಿಮೆ ಇಳುವರಿಗೆ ಕ್ಷುದ್ರ ರಚನೆಯಿಂದ ಉಂಟಾಗಿರುವ ಹವೆಯಾಡುವಿಕೆಯ ಅಭಾವವೇ ಕಾರಣವಾಗಿರುತ್ತದೆ. ಸಾಮಾನ್ಯವಾಗಿ ತಟ್ಟೆಯಾಕಾರದ ರಚನೆಯು ಸಹಜವಾಗಿ ನೀರು ಬಸಿಯುವುದನ್ನು ಹಿಮ್ಮೆಟ್ಟಿಸುತ್ತದೆ. ಕೆರೆಯ ಅಂಗಳದ ಮಣ್ಣು ಒಣಗಿದಾಗ ತಟ್ಟೆಯಾಕಾರದ ರಚನೆಯನ್ನು ಪಡೆಯುತ್ತದೆ. ಅತ್ಯುತ್ತಮ ಭೌತಿಕ ಗುಣಗಳು ಮಣ್ಣಿಗೆ ಬರಬೇಕಾದರೆ ಗುಳಿಗೆಯಾಕಾರದ, ಕಾಳಾಕಾರದ ಅಥವಾ ಮುರುಕಾಕೃತಿಯ ರಚನೆಗಳು ಇರುವುದು ಅವಶ್ಯಕ. ಫಲವತ್ತಾದ ಹತ್ತಿಯ ಜಮೀನುಗಳ ಮೇಲ್ಮಣ್ಣಿನಲ್ಲಿ ಈ ಬಗೆಯ ಮೂರು ರಚನೆ ಇರುತ್ತದೆ.

ಉಳುಮೆ, ನೀರು ಬಸಿಯುವಿಕೆ, ಸುಣ್ಣ ಹಾಕುವಿಕೆ, ಗೊಬ್ಬರ ಹಾಕುವಿಕೆ ಮುಂತಾದ ಸಾಗುವಳಿ ಕ್ರಮಗಳಿಂದ ಮಣ್ಣಿನ ರಚನೆಯು ಬದಲಾಗುವ ಸಂಭವವುಂಟು. ಸಾವಯವ ಗೊಬ್ಬರ ಹಾಕುವುದರಿಂದ ಮಣ್ಣಿನಲ್ಲಿ ಒಳ್ಳೆಯ ರಚನೆಗೆ ಅವಕಾಶವೇರ್ಪಡುವುದು. ಭತ್ತದ ಗದ್ದೆಗಳಲ್ಲಿ ಕೆಸರು ಉಳುಮೆ ಮಾಡುವುದರಿಂದ  ಮಣ್ಣಿನ ರಚನೆ ಕೆಡುತ್ತದೆ. ಇದರಿಂದಾಗಿ ಹಿಂದಿನ ಬೆಳೆಗೆ ಭೂಮಿ ಸಿದ್ಧಪಡಿಸುವಾಗ ಬಹಳ ಪರಿಶ್ರಮವಾಗುತ್ತದೆ. ಎರೆ ಭೂಮಿಯ ಆಳದಲ್ಲಿಯ ಕೆಳಮಣ್ಣು ದಿಮ್ಮೆಯಾಕಾರದ ರಚನೆಯನ್ನು ಪಡೆದಿರುತ್ತದೆ. ಈ ರಚನೆಯಿಂದ ನೀರು ಇಂಗುವುದಕ್ಕೆ ಹಾಗೂ ಹವೆಯಾಡುವುದಕ್ಕೆ ವ್ಯತ್ಯಯವಾಗುತ್ತದೆ.

ರಚನೆಯ ವರ್ಗಗಳು : ಪ್ರತಿಯೊಂದು ನಮೂನೆಯ ರಚನೆಯನ್ನು ಪೆಣಕೆಗಳ ಗಾತ್ರದ ಮೇಲಿಂದ ಅತಿ ಜಿನುಗು ಅಥವಾ ಅತಿ ತೆಳುವು, ಜಿನುಗು ಅಥವಾ ತೆಳುವು ಸಾಧಾರಣ  ಅಥವಾ ಮಧ್ಯಂತರ ಉರುಟು ಅಥವಾ ದಪ್ಪ ಹಾಗೂ ಅತಿ ಉರುಟು ಅಥವಾ ಅತಿ ದಪ್ಪ ಎಂದು ಐದು ವರ್ಗಗಳಾಗಿ ವಿಂಗಡಿಸಲಾಗಿದೆ. ತೆಳು ಹಾಗು ದಪ್ಪ ಶಬ್ದಗಳನ್ನು ತಟ್ಟೆಯಾಕಾರದ ರಚನೆಯನ್ನು ವರ್ಣಿಸಲು ಬಳಸಬಹುದು. ಜಿನುಗು ಹಾಗೂ ಉರುಟು ಶಬ್ದಗಳನ್ನು ಇತರ ರಚನೆಯ ನಮೂನೆಗಳನ್ನು ವಣ ðಸಲು ಉಪಯೋಗಿಸಬಹುದು. ಕಾಳಿನಾಕಾರದ ರಚನೆಯನ್ನು ವರ್ಣನೆ ಮಾಡಲು ಜಿನುಗು ಹಾಗೂ ದಪ್ಪ ಶಬ್ದಗಳನ್ನು ಉಪಯೋಗಿಸಬಹುದು.

ಮಣ್ಣಿನ ರಚನೆಗಳು ಅಥವಾ ಗುಂಪುಗಳು ಎಷ್ಟು ದೃಢವಾಗಿ ಮಾಡಲ್ಪಟ್ಟಿವೆ ಎಂಬುದೂ ಮಹತ್ವದ ಸಂಗತಿಯಾಗಿದೆ. ಕೆಲವು ರಚನೆಗಳು ಮಳೆಯ ಹನಿಯ ಪೆಟ್ಟು ತಾಗಿದಾಗ ಹಾಗೂ ಸಾಗುವಳಿ ಮಾಡುವಾಗ ಒಡೆಯುತ್ತವೆ. ಒಣ ಮಣ್ಣು ಹಸಿಯಾದೊಡನೆ ರಚನೆಯ ತಾಳಿಕೆ ಬದಲಾಗುತ್ತದೆ. ಸಾಮಾನ್ಯವಾಗಿ ರಚನೆಯ ತಾಳಿಕೆಯನ್ನು ನಮೂದಿಸುವಾಗ ಆ ಮಣ್ಣು ಒಣಗಿರುತ್ತದೆ ಎಂದು ತಿಳಿದುಕೊಂಡಿರಬೇಕು. ಸಾವಯವ ಸಂಯಕ್ತಗಳು ರಚನೆಯನ್ನು ದೃಢಗೊಳಿಸುತ್ತವೆ. ರಚನೆಯ ಗುಂಪುಗಳು ದೊಡ್ಡದಿದ್ದಂತೆಯೇ ಅವುಗಳ ದೃಢತೆಯು ಕಡಿಮೆಯಾಗುತ್ತದೆ. ರಚನೆಗಳು ಒಣಗಿದಂತೆ ಗಟ್ಟಿಯಾಗಿ ದೃಢಗೊಳ್ಳುತ್ತವೆ. ರಚನೆಗಳನ್ನು ಬೆರಳುಗಳಿಂದ ಒತ್ತಿ ಅವುಗಳ ದೃಢತೆಯನ್ನು ವ್ಯಾವಹಾರಿಕವಾಗಿ ತಿಳಿದುಕೊಳ್ಳಬಹುದು. ರಚನೆಯನ್ನು ರಚನಾ ರಹಿತ, ದುರ್ಬಲ ಸಾಧಾರಣ ಹಾಗೂ ಸಬಲ ಎಂದು ನಾಲ್ಕು ರೀತಿಯಲ್ಲಿ ವರ್ಣಿಸುವರು.

ಮೇಲ್ಮಣ್ಣಿನಲ್ಲಿ ಜವುಳು : ಮೇಲ್ಮಣ್ಣಿನಲ್ಲಿ ಮಣ್ಣಿನ ರಚನೆ ಕೆಟ್ಟು ನೀರು ಇಂಗದೆ ನಿಲ್ಲುತ್ತದೆ. ಭೂಮಿಯಾಳದಲ್ಲಿರುವ ನಿಜವಾದ ನೀರಿನ ಮಟ್ಟಕ್ಕೂ ಮತ್ತು ಹೀಗೆ ನಿಂತ ನೀರಿಗೂ ಯಾವ ಸಂಬಂಧವೂ ಇರುವುದಿಲ್ಲ. ಕೆಳಮಣ್ಣಿನಲ್ಲಿ ಎರೆಯ ಕಠಿಣ ಪದರ ನಿರ್ಮಾಣವಾದಾಗಲೂ ಸಹ ನೀರು ಇಂಗದೆ ನಿಲ್ಲುತ್ತದೆ. ಇದಕ್ಕೆ ಮಣ್ಣಿನ ರಚನೆಯನ್ನು ಸುಧಾರಿಸುವುದೇ ಪರಿಹಾರವಾಗಿದೆ. `ಸಿ’ ವಲಯದಲ್ಲಿ ಗರಸು ಇದ್ದರೆ ಕಾಲುವೆಗಳನ್ನು ತೋಡಿ ನೀರು ಸಾಗುವಂತೆ ಮಾಡಬಹುದು. ಎರೆಮಣ್ಣಿನಲ್ಲಿ ಸೋಡಿಯಂ ಇದ್ದರೆ ಅದು ಚದುರಿದ ಸ್ಥಿತಿಯನ್ನುಂಟು ಮಾಡುತ್ತದೆ ಹಾಗೂ ರಚನೆಯನ್ನು ಕೆಡಿಸುತ್ತದೆ.  ಇಂತಹ ಮಣ್ಣುಗಳಿಗೆ ಅಲ್ಪ ಮಳೆಯಾಗುವ ಪ್ರದೇಶದಲ್ಲಿ ಜಿಪ್ಸಮ್ ಹಾಕಬೇಕು. ಹೆಚ್ಚು ಮಳೆಯಾಗುವ ಪ್ರದೇಶದಲ್ಲಿ ಜಿಪ್ಸಮ್ ಹಾಗೂ ಸುಣ್ಣದ ಪುಡಿಯನ್ನು ಮಿಶ್ರ ಮಾಡಿ ಹಾಕಬೇಕು. ಹೀಗೆ ಮಾಡುವುದರಿಂದ ರಚನೆ ಸುಧಾರಿಸುತ್ತದೆ.  ಆಳವಾಗಿ ನೇಗಿಲಿನಿಂದ ಉಳುಮೆ ಮಾಡುವುದರಿಂದಲೂ ನೀರು ಇಂಗುವುದಕ್ಕೆ ಅನುಕೂಲವಾಗುತ್ತದೆ. ಎರೆಯು ಕಠಿಣ ಪದರಗಳಲ್ಲದೆ ಕಬ್ಬಿಣದ ಕಠಿಣ ಪದರ, ಸುಸ್ಥಿರ ಕಠಿಣ ಪದರಗಳೂ ಕೆಳಮಣ್ಣಿನಲ್ಲಿ ನಿರ್ಮಾಣವಾಗಬಹುದು. ಈ ಪದರಗಳು ಸುಮಾರು ೪-೨೦ ಅಂಗುಲ ದಪ್ಪವಾಗಿರಬಹುದು.

ಮಣ್ಣಿನ ಸಾಂದ್ರತೆ : ಒಂದು ವಸ್ತುವಿನ ನಿರ್ದಿಷ್ಟ ಗಾತ್ರದ ದ್ರವ್ಯರಾಶಿಯು ಸಾಂದ್ರತೆಯನ್ನು ತೋರಿಸುತ್ತದೆ.

ಸಾಂದ್ರತೆ  = ದ್ರವ್ಯರಾಶಿ  ಗಾತ್ರ.

ಮಣ್ಣಿನ ಸಾಂದ್ರತೆಯನ್ನು ಕಣಗಳ ಸಾಂದ್ರತೆ ಹಾಗೂ ಸ್ಥೂಲ ಸಾಂದ್ರತೆ ಎಂಬೆರಡು ಕಲ್ಪನೆಗಳಿಗನುಸಾರವಾಗಿ ವ್ಯಕ್ತಪಡಿಸಲಾಗುತ್ತದೆ.

ಮಣ್ಣಿನಲ್ಲಿರುವ ಘನ ವಸ್ತುವಿನ (ಛಿದ್ರಾವಕಾಶವನ್ನು ಹೊರತುಪಡಿಸಿ) ನಿರ್ದಿಷ್ಟ ಗಾತ್ರದ ತೂಕಕ್ಕೆ ಕಣಗಳ ಸಾಂದ್ರತೆ ಎಂದು ಹೆಸರು. ಕಣಗಳ ಸಾಂದ್ರತೆಗೆ ನಿಜವಾದ ಸಾಂದ್ರತೆ ಎಂದು ಕರೆಯುತ್ತಾರೆ. ಸರ್ವಸಾಮಾನ್ಯವಾಗಿ ಮಣ್ಣಿನ ಕಣಗಳ ಸಾಂದ್ರತೆಯು ೨.೬೫ ಇರುತ್ತದೆ. ಮೆಗ್ನೆಟಿಕ್, ಹೆಮೆಟೈಟ್, ಲಿಮೊನೈಟ್ ಮುಂತಾದ ಜಡ ಖನಿಜಗಳು ಮಣ್ಣಿನಲ್ಲಿದ್ದರೆ ಕಣಗಳ ಸಾಂದ್ರತೆಯೂ ಹೆಚ್ಚಾಗಿರುತ್ತದೆ. ಸಾವಯವ ಪದಾರ್ಥದ ಪ್ರಮಾಣವು ಹೆಚ್ಚಿದಂತೆ ಕಣಗಳ ಸಾಂದ್ರತೆಯು ಕಡಿಮೆಯಾಗುವುದು.

ಛಿದ್ರಾವಕಾಶವನ್ನು ಒಳಗೊಂಡಿರುವ ಒಂದು ನಿರ್ದಿಷ್ಟ ಗಾತ್ರದ ಒಲೆಯ ಮೇಲೆ ಒಣಗಿದ ಮಣ್ಣಿನ ತೂಕವು ಅದರ ಸ್ಥೂಲ ಸಾಂದ್ರತೆಯನ್ನು ಸೂಚಿಸುತ್ತದೆ. ಮಣ್ಣಿನ ಸ್ಥೂಲ ಸಾಂದ್ರತೆ ಅದರ ಕಣಗಳ ಸಾಂದ್ರತೆಗಿಂತಲೂ ಕಡಿಮೆ ಇರುತ್ತದೆ. ಸಾಂದ್ರತೆಯು ಒಂದು ಘನ ಸೆಂಟಿಮೀಟರಿಗೆ ಗ್ರಾಮಿನಂತೆ ಅಥವಾ ಒಂದು ಘನ ಅಡಿಗೆ ಪೌಂಡುಗಳಂತೆ ಸೂಚಿತವಾಗುತ್ತದೆ.

ಮಣ್ಣಿನ ಸ್ವರೂಪವು ಜಿನುಗಾದಂತೆ ಅದರ ಒಟ್ಟು ಛಿದ್ರಾವಕಾಶ ಪ್ರಮಾಣವು ಹೆಚ್ಚುವುದು; ಅಂದರೆ ಜಿನುಗು ಸ್ವರೂಪದ ಮಣ್ಣುಗಳ ಸ್ಥೂಲ ಸಾಂದ್ರತೆಯು ಉರುಟು ಸ್ವರೂಪದ ಮಣ್ಣುಗಳ ಸ್ಥೂಲ ಸಾಂದ್ರತೆಗಿಂತ ಕಡಿಮೆಯಗಿರುತ್ತದೆ. ಎರೆ, ಮಣ್ಣಿನ ಸ್ಥೂಲ ಸಾಂದ್ರತೆಯು ೧.೦-೧.೩ ಇರಬಹುದು. ಆದರೆ ಮರಳು ಹಾಗೂ ಮರಳು ಗೋಡು ಮಣ್ಣಿಗೆ ೧.೨-೧.೬ ಹಾಗೂ ರೇವೆ ಗೋಡು ಮಣ್ಣಿಗೆ ೧.೩೨ ಸಾಂದ್ರತೆಯು ಇರಬಹುದಾಗಿದೆ. ಮಣ್ಣು ಗಟ್ಟಿಯಾದಂತೆ ಅದರ ಛಿದ್ರಾವಕಾಶವು ಕಡಿಮೆಯಾಗುವುದರಿಂದ ಒಂದು ನಿರ್ದಿಷ್ಟ ಗಾತ್ರದ ಮಣ್ಣಿನ ತೂಕವು ಹೆಚ್ಚುತ್ತದೆ. ಹಾಗೆಯೇ ಮಣ್ಣಿನ ಸಾವಯವ ಪದಾರ್ಥ ನಾಶವಾದಂತೆ ಮಣ್ಣಿನ ತೂಕವು ಹೆಚ್ಚುತ್ತದೆ ಹಾಗೂ ಆ ಮಣ್ಣಿನ ಒಟ್ಟು ಛಿದ್ರಾವಕಾಶವು ಕಡಿಮೆಯಾಗುತ್ತದೆ.

(ಇನ್ನೂ ಇದೆ)

ಚಿತ್ರಗಳ ವಿವರ: ೧. ಬಯಲು ನಾಡಿನ ಅತಿಯಾದ ಮರಳು ಮಿಶ್ರ ಮಣ್ಣು

ಚಿತ್ರ ೨. ಸಾವಯವ ಸಮೃದ್ಧ ಕಪ್ಪು ಮಣ್ಣು 

ಚಿತ್ರ ೩.  ಮೇಲು ಭಾಗದ ಮಣ್ಣಿನ ಗುಣಮಟ್ಟವನ್ನು ತೋರಿಸುವ ಇರುವೆ ಎಳೆದ ಮಣ್ಣು

ಚಿತ್ರಗಳು ಮತ್ತು ಮಾಹಿತಿ : ರಾಧಾಕೃಷ್ಣ ಹೊಳ್ಳ