ಫಲವತ್ತಾದ ಮಣ್ಣು ಕೃಷಿಯ ಜೀವಾಳ (ಭಾಗ ೩)

ಫಲವತ್ತಾದ ಮಣ್ಣು ಕೃಷಿಯ ಜೀವಾಳ (ಭಾಗ ೩)

ಸಚ್ಛಿದ್ರತೆ : ಸಚ್ಛಿದ್ರತೆಯು ಮಣ್ಣಿನ ಸ್ವರೂಪ, ಕಣಗಳ ಗಾತ್ರ, ರಚನೆ, ಸಾವಯವ ಪದಾರ್ಥಗಳ ಮಟ್ಟ ಇವುಗಳ ಮೇಲೆ ಅವಲಂಬಿತವಾಗಿರುತ್ತದೆ. ಮಣ್ಣಿನಲ್ಲಿ ದೊಡ್ಡ ಹಾಗೂ ಸೂಕ್ಷ್ಮ ಛಿದ್ರಗಳಿರುತ್ತವೆ. ದೊಡ್ಡ ಛಿದ್ರಗಳ ಮುಖಾಂತರ ಮಳೆಯ ನೀರು ಗುರುತ್ವಾಕರ್ಷಣಾ ಶಕ್ತಿಯಿಂದ ಇಂಗುತ್ತದೆ. ಸೂಕ್ಷ್ಮ ಛಿದ್ರಗಳ ಮುಖಾಂತರ ನೀರು ಕೇಶಾಕರ್ಷಕ ಶಕ್ತಿಯಿಂದ ಹೀರಿಕೊಳ್ಳಲ್ಪಡುತ್ತದೆ. ಇದಲ್ಲದೆ ದ್ರಾವಣಗಳು, ವಾಯುಗಳು ಹಾಗೂ ಆವಿಯು ಛಿದ್ರಾವಕಾಶದಲ್ಲಿ ಆವರಿಸಿರುತ್ತವೆ. ಇವು ಬೆಳೆಗಳ ಪೋಷಣೆಗೆ ಅವಶ್ಯಕವಾಗಿವೆ. ಮಣ್ಣಿನಲ್ಲಿಯ ಛಿದ್ರಾವಕಾಶವು ಮಣ್ಣಿನಷ್ಟೇ ಮಹತ್ವದ್ದು. ಛಿದ್ರಾವಕಾಶದಲ್ಲಿಯೇ ಸಸ್ಯದ ಬೇರುಗಳು ಇಳಿಯವುದು. 

ಕೆಲವು ಮಣ್ಣುಗಳ ಸಚ್ಛಿದ್ರತೆ ಈ ಕೆಳಗಿನಂತೆ ಇರುತ್ತದೆ

೧. ಮಳಲು ಮಣ್ಣು                  ೩೦%

೨. ಗೋಡು                        ೩೫-೪೫%

೩. ಎರೆಗೋಡು                     ೪೭-೫೦%

೪. ಎರೆ                            ೫%

೫. ಜಡ ಎರೆ ಅಥವಾ ಸಣ್ಣ ಎರೆ     ೬೬%

ಮಣ್ಣಿನಲ್ಲಿ ಹವೆ : ಛಿದ್ರಾವಕಾಶದಲ್ಲಿ ನೀರು ಆಕ್ರಮಿಸಿದ ಸ್ಥಳವನ್ನು ಬಿಟ್ಟು ಉಳಿದ ಸ್ಥಳವನ್ನು ಹವೆಯು ಆಕ್ರಮಿಸಿಸುರತ್ತದೆ. ಸಾಮಾನ್ಯವಾಗಿ ಮಣ್ಣಿನಲ್ಲಿಯ ಹವೆಯು ಹೆಚ್ಚು ಕಡಿಮೆ ವಾತಾವರಣದ ಹವೆಯಂತೆಯೇ ಇರುತ್ತದೆ. ಇವೆರಡರ ಹೋಲಿಕೆಯನ್ನು ಗಾತ್ರ, ಪ್ರಮಾಣದಲ್ಲಿ ಕೋಷ್ಟಕದಲ್ಲಿ ಕೊಡಲಾಗಿದೆ.

ಹವೆ               ಆಮ್ಲಜನಕ         ಸಾರಜನಕ     ಇಂಗಾಲ ಡೈ ಆಕ್ಷೈಡ್ 

                     %               %                 %       

ವಾತಾವರಣ         ೨೦.೯೭            ೭೮.೦೦            ೦. ೦೩

ಎರೆ ಮಣ್ಣು         ೧೯.೬೧             ೭ ೯.೩೫            ೦.೬೬

ಅರಣ್ಯದ ಮಣ್ಣು     ೧೯.೬೧             ೭೯.೫೨            ೦ . ೮೭

ಮಣ್ಣಿನ ಹವೆಯಲ್ಲಿ ಆವಿ ಹಾಗೂ ಇಂಗಾಲದ ಡೈ ಆಕ್ಸೈಡ್ ಪ್ರಮಾಣವು ವಾತಾವರಣಕ್ಕಿಂತ ಸ್ವಲ್ಪ ಹೆಚ್ಚಾಗಿರುವುದು. ಆಮ್ಲಜನಕದ ಪ್ರಮಾಣವು ಸ್ವಲ್ಪ ಕಡಿಮೆಯಾಗಿರುತ್ತದೆ. ಸಾಮಾನ್ಯವಾಗಿ ಮಣ್ಣಿನ ಹವೆಯು ಹೆಚ್ಚು ಬದಲಾಗುತ್ತಾ ಇರುತ್ತದೆ. ಅದರಲ್ಲಿಯ ಇಂಗಾಲದ ಡೈ ಆಕ್ಸೈಡ್ ಪ್ರಮಾಣವು ಸೂಕ್ಷ್ಮ ಜೀವಿಗಳ ಕ್ರಿಯೆ, ಬೇರುಗಳ ಉಸಿರಾಟ ಹಾಗೂ ಸಾವಯವ ಪದಾರ್ಥಗಳ ಕೊಳೆಯುವಿಕೆಯಿಂದ ಹೆಚ್ಚುತ್ತದೆ. ಮಣ್ಣಿನ ಆಳ ಹೆಚ್ಚಿದಂತೆ ಇಂಗಾಲದ ಡೈ ಆಕ್ಷೈ ಪ್ರಮಾಣವು ಹೆಚ್ಚುತ್ತಾ ಹೋಗುತ್ತದೆ. ಇಂಗಾಲದ ಡೈ ಆಕ್ಸೈಡ್ ಪ್ರಮಾಣವು ಹೆಚ್ಚಿ ಆಮ್ಲಜನಕವು ಕಡಿಮೆಯಾದರೆ ಬೇರುಗಳ ಬೆಳವಣಿಗೆ ಕುಂಠಿತವಾಗುತ್ತದೆ. ಆಮ್ಲಜನಕವು ೫% ಮಟ್ಟಕ್ಕೆ ಇಳಿದರೆ, ಬೇರುಗಳು (ಭತ್ತ ಹೊರತುಪಡಿಸಿ) ಬೆಳೆಯಲಾರವು. ಆಮ್ಲಜನಕ ಕಡಿಮೆಯಾದಂತೆ ನೀರು ಹಾಗೂ ಪೋಷಕಗಳನ್ನು ಹೀರಿಕೊಳ್ಳಬಲ್ಲ ಸಸ್ಯಗಳ ಶಕ್ತಿಯೂ ಕುಂದುತ್ತದೆ. ಬೇರುಗಳು ಸರಿಯಾಗಿ ಉಸಿರಾಡಬೇಕಾದರೆ ಆಮ್ಲಜನಕದ ಪೂರೈಕೆ ಅಗತ್ಯ. ಹೆಚ್ಚು ನೀರನ್ನು ಉಣಿಸಿದಾಗ ಮಣ್ಣಿನಲ್ಲಿಯ ಹವೆಯ ಪ್ರಮಾಣ ಕಡಿಮೆಯಾಗುತ್ತದೆ. ಪರಿಣಾಮವಾಗಿ ಸಾಕಷ್ಟು ಗೊಬ್ಬರ ಹಾಕಿದರೂ ಬೆಳೆಗಳು ಪೋಷಕಾಂಶಗಳ ಕೊರತೆಯಿಂದ ಬಳಲುತ್ತವೆ.

ಒಟ್ಟು ಛಿದ್ರಾವಕಾಶದ ಮೇಲಿಂದ ಮಣ್ಣಿನ ಹವೆಯಾಡುವಿಕೆಯು ಸರಿಯಾಗಿದೆಯೋ ಎಂಬುದು ನಿಶ್ಚಿತವಾಗಿ ತಿಳಿಯಲಾರದು. ಒಂದು ಮಣ್ಣಿನಲ್ಲಿ ಛಿದ್ರಾವಕಾಶವು ಅಲ್ಪವಾಗಿರಬಹುದು. ಸರ್ವಸಾಮಾನ್ಯವಾಗಿ ಜಿನುಗು ಸ್ವರೂಪದ ಮಣ್ಣಿನಲ್ಲಿ ಒಟ್ಟು ಛಿದ್ರಾವಕಾಶದ ಪ್ರತಿಶತ ಪ್ರಮಾಣವು ಹೆಚ್ಚಿದರೂ, ಅವುಗಳ ಹವೆಯಾಡು ವಿಕೆಯನ್ನು ಸರಿಯಾದ ಮಟ್ಟದಲ್ಲಿ ಕಾಪಾಡಿಕೊಂಡು ಬರಲಿಕ್ಕೆ ಹೆಚ್ಚು ಜಾಗರೂಕತೆ ವಹಿಸಬೇಕಾಗುತ್ತದೆ. ಕೆಲವು ಎರೆಯ ಕೆಳಮಣ್ಣಿನಲ್ಲಿ ಸಚ್ಛಿದ್ರತೆ  ೬೦% ಇದ್ದಾಗ್ಯೂ ಬೇರು  ಇಳಿಯಲಿಕ್ಕೆ ವ್ಯತ್ಯಯವಾಗುತ್ತದೆ. ಮಳಲು ಮಣ್ಣಿನಲ್ಲಿ ಸಚ್ಛಿದ್ರತೆ  ಎರೆ ಮಣ್ಣಿಗಿಂತಲೂ ಕಡಿಮೆ ಇರುತ್ತದೆ. ಆದರೆ ಅವು ಬಹುತೇಕವಾಗಿ ಚೆನ್ನಾಗಿ ಹವೆಯಾಡುವಿಕೆಯನ್ನು ಹೊಂದಿರುತ್ತದೆ. ಮರಳು ಮಣ್ಣಿನಲ್ಲಿ ನೀರು ಬೇಗನೆ ಇಂಗಿ ಹೋಗುವುದರಿಂದ ಹವೆಯಾಡುವಿಕೆ ಚೆನ್ನಾಗಿ ಉಳಿಯಬಲ್ಲದು. ಎರೆ ಹಾಗೂ ಎರೆ ಗೋಡು ಮಣ್ಣಿಗೆ ಹೆಚ್ಚು ನೀರುಧಾರಣ ಸಾಮರ್ಥ್ಯವಿರುವುದರಿಂದ ಹವೆಯಾಡುವಿಕೆಗೆ ವ್ಯತ್ಯಯ ಬರುವುದು ಸ್ವಾಭಾವಿಕ. ಅಲ್ಲದೆ ಅಧಿಕಾಂಶ ಛಿದ್ರಗಳು  ಸೂಕ್ಷ್ಮ ಹಾಗೂ ಸಣ್ಣದಾಗಿರುತ್ತವೆ. ಹಾಗೂ ಬೃಹತ್ ಛಿದ್ರಗಳು ಸರಾಗವಾಗಿರದೆ ಅಲ್ಲಲ್ಲಿ ಅಡೆತಡೆಗಳು ಒಳಗಾಗಿರುತ್ತವೆ. ಹೀಗಾಗಿ ನೀರು ಬಹಳ ಕಾಲದವರೆಗೆ ಉಳಿಯುವುದರಿಂದ ಹವೆಯಾಡುವಿಕೆಯು ಸರಿಯಾಗಿರಲಾರದು. ಆದ್ದರಿಂದ ಸಚ್ಛಿದ್ರತೆಯು ಮೇಲಿಂದ ಮಣ್ಣಿನ ಹವೆಯಾಡುವಿಕೆ ಸರಿಯಾಗಿರುವದೆಂದು ಹೇಳುವುದು ಕಷ್ಟದಾಯಕ. ಸಾವಯವ ಪದಾರ್ಥ ಕಡಿಮೆಯಾಗುವುದರಿಂದ ಕೃಷಿ ಯಂತ್ರಳ ತುಳಿತದಿಂದ, ರಭಸದ ಮಳೆ ಬೀಳುವುದರಿಂದ ಮಣ್ಣು ಗಟ್ಟಿಯಾಗಿ ಅದರ ರಚನೆ ಕೆಡುತ್ತದೆಯಲ್ಲದೆ ಆ ಮಣ್ಣಿನ ಹವೆಯಾಡುವಿಕೆ ಕ್ಷುದ್ರವಾಗುತ್ತದೆ. ಅಂತಹ ಸಂದರ್ಭದಲ್ಲಿ ಆಮ್ಲಜನಕದ ಪೂರೈಕೆಯು ಕಡಿಮೆಯಾಗುತ್ತದೆ. ಆದರೆ ಮಣ್ಣಿನಲ್ಲಿ ನೀರು ಇಂಗಿಹೋಗುವಂತೆ ಮಾಡುವುದರಿಂದ, ಆಗಾಗ್ಗೆ ಸಾಗುವಳಿ ಮಾಡುವುದರಿಂದ, ಸೇಂದ್ರೀಯ ಗೊಬ್ಬರವನ್ನು ಹಾಕುವುದರಿಂದ ಇಲ್ಲವೇ ಹೆಚ್ಚು ನೀರನ್ನು ಉಣಿಸದಂತೆ ಜಾಗ್ರತೆ ವಹಿಸುವುದರಿಂದ ಸಾಕಷ್ಟು ಹವೆಯನ್ನು ಉಳಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಬೆಳೆಗಳಿಗೆ ಎಡೆ ಹೊಡೆದ ೩-೪ ದಿನಗಳ ತರುವಾಯ ಅವು ಸುಧಾರಿಸುತ್ತವೆ. ಇದಕ್ಕೆ ಮಣ್ಣಿನ ಹವೆಯಾಡುವಿಕೆಯೇ ಕಾರಣ.

ವಾತಪರ ಜೀವಿಗಳು ಆಮ್ಲಜನಕವಿಲ್ಲದ ಸ್ಥಿತಿಯಲ್ಲಿ ಕೆಲಸ ಮಾಡಲಾರವು. ನಿರ್ವಾತಪರ ಜೀವಿಗಳು ಮಾತ್ರ ವಿರಳ ಹವೆಯಲ್ಲಿ ಕೆಲಸ ಮಾಡಬಲ್ಲವು. ನಿರ್ವಾತಪರ ಜೀವಿಗಳು ಅಪಕರ್ಷಿತ ಕಬ್ಬಿಣ ಹಾಗೂ ಅಲ್ಯುಮಿನಿಯಂ ಮೂಲವಸ್ತುಗಳನ್ನು ಬಿಡುಗಡೆ ಮಾಡುವುದರಿಂದ ಸಸ್ಯಗಳಿಗೆ ವಿಷಕಾರಕ ಸ್ಥಿತಿ ಒದಗುತ್ತದೆ.

ಮಣ್ಣಿನ ಸುಸ್ಥಿರಾವಸ್ಥೆ :  ಮಣ್ಣನ್ನು ಸಾಗುವಳಿಗೆ ಒಳಪಡಿಸುವುದಾದರೆ ಅದರ ಸ್ಥಿರಾವಸ್ಥೆ ಗುಣದ ಬಗ್ಗೆ ತಿಳಿಯಬೇಕಾಗುತ್ತದೆ. ಸ್ಥಿರಾವಸ್ಥೆ ಗುಣವು ವಿವಿಧ ತೇವದ ಮಟ್ಟದಲ್ಲಿ ಯಾಂತ್ರಿಕ ಒತ್ತಡಕ್ಕೆ ಪ್ರದರ್ಶಿಸಲ್ಪಡುವ ಮಣ್ಣಿನ ಭೌತಿಕ ಗುಣವಾಗಿದೆ. ಎಂದರೆ, ಸಂಸಕ್ತಿ ಹಾಗು ಅನುಸಕ್ತಿ ಗುಣಗಳ ಬಗ್ಗೆ ತಿಳಿಯಪಡಿಸುವ ಗುಣವಾಗಿದೆ. ಸ್ಥಿರಾವಸ್ಥೆ ಗುಣವು ಮಣ್ಣಿನ ಸ್ವರೂಪ, ರಚನೆ, ತೇವದ ಮಟ್ಟ ಹಾಗೂ ಸಾವಯವ ಹಾಗೂ ನಿರವಯ ಪದಾರ್ಥಗಳ ಪ್ರಮಾಣದ ಮೇಲೆ ಅವಲಂಬಿಸಿರುತ್ತದೆ. ಹಸಿಯು ಕಡಿಮೆಯಾದಂತೆ ಮಣ್ಣು ತನ್ನ  ಜಿಗುಟುತನ ಹಾಗು ಮೆದುತ್ವ ಗುಣಗಳನ್ನು ಕಳೆದುಕೊಳ್ಳುತ್ತದೆ. ಈ ಸ್ಥಿರಾವಸ್ಥೆ ಗುಣವು ಒಣ ಹಾಗೂ ತೇವ ಪರಿಸ್ಥಿತಿಗಳಿಗೆ ಸಂಬಂಧಪಟ್ಟ ಗುಣವಾಗಿದೆ. ಮಣ್ಣಿನ ಅವಸ್ಥೆಯು ಅದರಲ್ಲಿರುವ ತೇವಾಂಶಕ್ಕನುಗುಣವಾಗಿ ಹೆಚ್ಚು ಕಡಿಮೆಯಾಗುತ್ತದೆ. ತೇವವು ಹೆಚ್ಚು ಕಡಿಮೆಯಾದಂತೆ ಮಣ್ಣಿನ ಗುಣಧರ್ಮಗಳೂ ಹೆಚ್ಚುಕಡಿಮೆಯಾಗುತ್ತದೆ. ಒಗಿದ ಎರೆಮಣ್ಣು, ಗಟ್ಟಿಯಾಗಿದ್ದರೂ ಸ್ಪರ್ಶಕ್ಕೆ ಬಿರುಸಾಗಿದ್ದರೂ ಆಗಿರುತ್ತದೆ.  ಸ್ವಲ್ಪ ತೇವವಾದೊಡನೆ ಅದು ಜಿಗುಟು ಹಾಗೂ ಮೆದುತ್ವವುಳ್ಳದ್ದಾಗುತ್ತದೆ. ಆದರೆ ತೇವವಾದೊಡನೆ ಅದು ತನ್ನ ಮೊದಲ ಸ್ಥಿತಿಗೆ ಪುನಃ ಮರಳುತ್ತದೆ.

ಜಂಬಿಟ್ಟಿಗೆ ಮಣ್ಣಿನಲ್ಲಿ ಜಡಿ ಮಳೆಯಾದ ಒಂದು ದಿನದ ನಂತರ ನೇಗಿಲು ಹೊಡೆಯಬಹುದು. ಕೆಂಗೋಡು ಮಣ್ಣಿನಲ್ಲಿ ೨-೩ ದಿನಗಳ ತರುವಾಯ ನೇಗಿಲು ಹೊಡೆಯಬಹುದು. ಆದರೆ ಕಪ್ಪು ಮಣ್ಣು  ಅನೇಕ ದಿನಗಳ ತರುವಾಯ ನೇಗಿಲು ಹೊಡೆಯುವುದಕ್ಕೆ ಯೋಗ್ಯವಾಗುತ್ತದೆ. ಮಣ್ಣು ಒದ್ದೆಯಾದಾಗ ಅದಕ್ಕೆ ಮೆದುತ್ವ ಗುಣ ಬರುವ ಪ್ರಯುಕ್ತ ಕೆಲವು ಮಣ್ಣುಗಳನ್ನು ಬಳ್ಳಿಯಂತೆ ಹೊಸೆಯಬಹುದು. ಆದರೆ ಮರಳು ಮಣ್ಣು ಮಾತ್ರ ಈ ಗುಣವನ್ನು ವ್ಯಕ್ತಪಡಿಸುವುದಿಲ್ಲ.   ಯಾವ ಮಣ್ಣಿಗೆ ಹೆಚ್ಚು ಮೆದುತ್ವ ಗುಣವಿರುವುದೋ ಅದನ್ನು ಉದ್ದ ಬಳ್ಳಿಯನ್ನಾಗಿ ಹೊಸೆಯಲು ಸಾಧ್ಯ. ಕೆಲವು ಮಣ್ಣುಗಳು ತಕ್ಕಮಟ್ಟದ ತೇವದಿಂದೊಡಗೂಡಿದಾಗ ಉದುರಾಗಿ ಇರುತ್ತದೆ. ಆಗ ಮಣ್ಣಿನ ಪದಾರ್ಥವನ್ನು ಒಟ್ಟುಗೂಡಿಸಿ ಹಿಚುಕಿದರೆ ಉಂಡೆಯಾಗುತ್ತದೆ ಹಾಗೂ ಆ ಉಂಡೆಯನ್ನು ಅಲ್ಪ ಒತ್ತಡದಿಂದ ಒಡೆಯಬಹುದು. ಈ ಸ್ಥಿತಿಗೆ ಹದ ಅಥವಾ ವಾಪ್ಸಾ ಎನ್ನುವರು. ಮಣ್ಣು ವಾಪ್ಸಾ ಸ್ಥಿತಿಯಲ್ಲಿರುವಾಗ ಬಿತ್ತನೆಗೆ ಯೋಗ್ಯವಾಗಿರುತ್ತದೆ.

ಮಣ್ಣಿನ ಸ್ಥಿತಿಕಾರಕಗಳು :  ಮಣ್ಣಿನ ಗೊಂಡಳಿಗಳನ್ನು ದೃಢವಾಗಿ ಉಳಿಯುವಂತೆ ಮಾಡಲು ಮಣ್ಣು ಸ್ಥಿತಿಕಾರಕಗಳನ್ನು ಉಪಯೋಗಿಸುತ್ತಾರೆ. ದ್ರವೀಕೃತ ಪಾಲಿ ಕ್ರೆಂಲೊನೈಟ್ರಿಕ್ ಮತ್ತು ನೈನಿಲ್ ಆಸಿಟೇಟ್ ಮ್ಯಾಲಿಕ್ ಆಮ್ಲ ಸಂಯುಕ್ತ ವಸ್ತು ಮುಂತಾದ ಸಂಶ್ಲೇಷಿತ ಪದಾರ್ಥಗಳನ್ನು ಉಪಯೋಗಿಸಿ ಮಣ್ಣಿನ ರಚನೆಯನ್ನು ಕಾಪಾಡಬಹುದು. ಆದರೆ ಈ ಪದಾರ್ಥಗಳ ಬಳಕೆ ಸೀಮಿತವಾಗಿದೆ. ಎಂದರೆ, ಇವುಗಳನ್ನು ಎಲ್ಲಾ ಮಣ್ಣುಗಳಲ್ಲಿ ಉಪಯೋಗಿಸುವುದು ಸಾಧ್ಯವಿಲ್ಲ. ಇವುಗಳನ್ನು ಸರಿಯಾಗಿ ಉಪಯೋಗ ಮಾಡದಿದ್ದರೆ ಮಣ್ಣಿನ ಕೆಟ್ಟ ಸ್ಥಿತಿಯು ಕೆಟ್ಟದಾಗಿಯೇ ಉಳಿಯಬಹುದು. ವ್ಯಾವಹಾರಿಕವಾಗಿ ಮಣ್ಣಿನ ರಚನೆ ದೃಢವಾಗಿ ಬಹಳ ದಿನಗಳ ವರೆಗೆ ಉಳಿಯಲು ಕಳಿತ ಸಾವಯವ ಪದಾರ್ಥಗಳನ್ನು ಹಾಕುವುದು, ಹುಲ್ಲು ಬೆಳೆಸುವುದು, ದ್ವಿದಳ ಧಾನ್ಯದ ಬೆಳೆಗಳನ್ನು ಬೆಳೆಯುವುದು ಇವೇ ಮುಂತಾದ ಕ್ರಮಗಳು ಉಪಯುಕ್ತವೆನಿಸಿವೆ.

(ಇನ್ನೂ ಇದೆ)

ಚಿತ್ರ ೧ ಮೇಲು ಭಾಗದ ಮಣ್ಣಿನ ಗುಣಮಟ್ಟವನ್ನು ತೋರಿಸುವ ಇರುವೆ ಎಳೆದ ಮಣ್ಣು.

ಚಿತ್ರ ೨ ಫಲವತ್ತತೆ ಕಡಿಮೆಯಾದರೂ ಕೆಲವು ಪೋಷಕಾಂಶಗಳುಳ್ಳ ಜಂಬಿಟ್ಟಿಗೆ ಮಣ್ಣು

ಚಿತ್ರ ೩ ಹಿಗ್ಗುವಿಕೆ ಮತ್ತು ಕುಗ್ಗುವಿಕೆ ಆಗುವ ಮಲೆನಾಡಿನ ಮಣ್ಣು.

ಚಿತ್ರಗಳು ಮತ್ತು ಮಾಹಿತಿ : ರಾಧಾಕೃಷ್ಣ ಹೊಳ್ಳ