ಫಲವತ್ತಾದ ಮಣ್ಣು ಕೃಷಿಯ ಜೀವಾಳ (ಭಾಗ ೪)

ಫಲವತ್ತಾದ ಮಣ್ಣು ಕೃಷಿಯ ಜೀವಾಳ (ಭಾಗ ೪)

ಉಬ್ಬುವುದು ಹಾಗೂ ಕುಗ್ಗುವುದು : ತೇವವಾದೊಡನೆ ಎರೆಮಣ್ಣುಗಳು ಪ್ರಸರಣ ಹೊಂದುತ್ತವೆ. ಒಣಗಿದ ಮೇಲೆ ಅಕುಂಚನಗೊಳ್ಳುತ್ತವೆ. ಅಕುಂಚನಗೊಂಡಂತೆ ಬಿರುಕು ಬಿಡುತ್ತವೆ. ಆಳವಾದ ಎರೆಮಣ್ಣಿನಲ್ಲಿ ೪-೫ ಅಡಿಗಳವರೆಗೆ, ಎರೆ ಭೂಮಿಯಲ್ಲಿ ಬಿರುಕುಗಳು ಉಂಟಾಗುತ್ತವೆ. ಮೌಂಟ್ ಮೊರಿಲ್ಲೊನೈಟ್ ಎರೆಯಲ್ಲಿ ಈ ಗುಣವು ಹೆಚ್ಚು ಸ್ಪಷ್ಟವಾಗಿರುತ್ತದೆ.

ನುಣುಪು ಪಾರ್ಶ್ವಗಳು ಆಳವಾದ ಎರೆಮಣ್ಣಿನಲ್ಲಿ ಗೋಚರಿಸುತ್ತವೆ. ಅವು ಸರದಿಯ ಪ್ರಕಾರ ಒದ್ದೆಯಾಗುವ ಹಾಗೂ ಒಣಗುವ ಪ್ರದೇಶದ ಎರೆಮಣ್ಣಿನಲ್ಲಿ ರೂಪು ತಾಳುತ್ತವೆ. ನಮ್ಮ ನಾಡಿನ ಹತ್ತಿಯ ಮಣ್ಣುಗಳ ಪ್ರೊಫೈಲ್‌ನ ಕೆಳಗಿನ ವಲಯಗಳಲ್ಲಿ ನುಣುಪು ಪಾರ್ಶ್ವಗಳನ್ನು ಕಾಣಬಹುದು. ಈ ಮಣ್ಣುಗಳು ಒಣಗಿದಾಗ ಬಿರಕು ಬಿಡುತ್ತವೆ. ಹಾಗೂ ಮಳೆಯಾದೊಡನೆ ಮೇಲ್ಮಣ್ಣು ಬಿರುಕಿನೊಳಗೆ ಸೇರುತ್ತದೆ. ಒಳಸೇರಿದ ಮಣ್ಣು ಪುನಃ ನುಣುಪು ಪಾರ್ಶ್ವವಾಗಿ ಮೇಲೆ ಬರುತ್ತದೆ. ಹೀಗಾಗಿ ಆಳವಾದ ಎರೆಮಣ್ಣುಗಳು ತಮ್ಮಷ್ಟಕ್ಕೆ ತಾವೇ ನೇಗಿಲು ಹೊಡೆದುಕೊಳ್ಳುತ್ತವೆ. ನುಣುಪು ಪಾಶ್ವ ಗಳನ್ನು ರೂಪಿಸುವ ಎರೆಮಣ್ಣು ಹುಲ್ಲುಗಾವಲುಗಳಲ್ಲಿ `ಗಿಲ್‌ಗಾಯ್’ ರೀತಿಯ (ಎಮ್ಮೆ ಕೆಸರಿನಲ್ಲಿ ಹೊರಳಾಡಿದಾಗ ಕಾಣುವ ಆವರಣದಂತೆ) ಸ್ಥಳಾವರಣವನ್ನು ಕಾಣಬಹುದು. ಸಾಗುವಳಿಯಿಂದ ಈ ಬಗೆಯ ಸ್ಥಳಾವರಣವು ಅಳಿಸಿಹೋಗುತ್ತದೆ.

ಮಣ್ಣಿನ ಬಣ್ಣ :  ಮಣ್ಣಿನ ಬಣ್ಣವು ಮಣ್ಣಿನ ಫಲವತ್ತತೆ, ಪುರಾತನತೆ ಹಾಗೂ ಅದರಲ್ಲಿರುವ ಸಾವಯವ ಪದಾರ್ಥದ ಮಟ್ಟದ ಬಗ್ಗೆ ಕಲ್ಪನೆ ಮಾಡಿಕೊಡುತ್ತದೆ. ಕಬ್ಬಿಣ, ಮ್ಯಾಂಗನೀಸ್‌ಗಳ ಭಸ್ಮೀಕರಣದಿಂದ ಮಣ್ಣಿಗೆ ಕೆಂಪು, ಹಳದಿ ಇಲ್ಲವೇ ಕಂದು ಬಣ್ಣ ಬರುತ್ತದೆ. ಮಣ್ಣಿನಲ್ಲಿ ಆಮ್ಲಜನಕ ಕಡಿಮೆ ಇದ್ದರೆ ನೆರೆ ಇಲ್ಲವೆ ನೀಲಿ ಬಣ್ಣಗಳು ಗೋಚರವಾಗುತ್ತವೆ. ಸುಣ್ಣ ಹಾಗೂ ಸಾವಯವ ಪದಾರ್ಥಗಳ ಮಟ್ಟ ಹೆಚ್ಚಿದ್ದರೆ ಆ ಮಣ್ಣಿಗೆ ಕಪ್ಪು ಬಣ್ಣ ಮೈಗೂಡುವುದು. ಮಳೆಯಾದಾಗ ಈ ಬಣ್ಣಗಳು ನಿಚ್ಚಳವಾಗಿ ಕಾಣುತ್ತವೆ.

ಮಣ್ಣಿನ ಉಷ್ಣತೆ : ಉಷ್ಣತೆಯು ಶಕ್ತಿಯ ಒಂದು ರೂಪ. ಹವಾಮಾನದ ಉಷ್ಣತೆಯಾಗಲೀ, ಮಣ್ಣಿನ ಉಷ್ಣತೆಯಾಗಲೀ ಬೆಳೆಗಳ ಮೇಲೆ ಪರಿಣಾಮ ಬೀರುತ್ತವೆ. ಸಾಮಾನ್ಯವಾಗಿ ಮಣ್ಣಿನ ಉಷ್ಣತೆಯಲ್ಲಿ ಏರುಪೇರುಗಳಾಗುತ್ತವೆ. ರಾತ್ರಿ ಸಮಯದಲ್ಲಿ ಭೂಮಿ ತಂಪಾಗಿಯೂ ಹಗಲಿನಲ್ಲಿ ಶಾಖವುಳ್ಳದ್ದಾಗಿಯೂ ಇರುತ್ತದೆ. ಬೇಸಿಗೆಯ ದಿನದಲ್ಲಿ ಹೆಚ್ಚು ಶಾಖ ತಗಲಿದರೆ ಚಳಿಗಾಲದಲ್ಲಿ ಕಡಿಮೆ ಶಾಖ ತಟ್ಟುತ್ತದೆ.

ಬೆಳೆಗಳ ಬೆಳವಣ ಗೆಗೆ ಹಾಗೂ ಅಭಿವೃದ್ಧಿಯ ದಿಸೆಯಲ್ಲಿ ವಾತಾವರಣದ ಉಷ್ಣತೆಗಿಂತ ಮಣ್ಣಿನ ಉಷ್ಣತೆಯ ಪಾತ್ರವೇನೂ ಕಡಿಮೆಯಿಲ್ಲ. ಮಣ್ಣಿನಲ್ಲಿಯ ರಾಸಾಯನಿಕ ಪ್ರತಿಕ್ರಿಯೆಗಳು, ಭೌತಿಕ ಬದಲಾವಣೆಗಳು ಹಾಗೂ ಜೀವಿಗಳ  ಕ್ರಿಯೆಗಳು ಮಣ್ಣಿನ ಉಷ್ಣತೆಗೆ ಸಂಬಂಧಪಟ್ಟವುಗಳಾಗಿವೆ. ಉಷ್ಣತಾಮಾನ ಕಡಿಮೆಯಾದರೆ ಬೇರುಗಳು ಉದ್ದ ಬೆಳೆಯಲಾಗದೆ ಬೆಳವಣಿಗೆ ಕುಂಠಿತವಾಗುತ್ತದೆ. ಆದ್ದರಿಂದ ಜೀವಿಗಳ ಕ್ರಿಯೆಗೆ ಹಿತಕರವಾದ ಉಷ್ಣತೆ ಅಗತ್ಯ. ಆದರೆ ಅವಶ್ಯಕತೆಗಿಂತ ಹೆಚ್ಚು ಅಥವಾ ಕಡಿಮೆ ಉಷ್ಣತಾಮಾನವಿದ್ದರೂ ಜೀವಿಗಳ ಕ್ರಿಯೆಗೆ ವ್ಯತ್ಯಯವಾಗುತ್ತದೆ. ಮಣ್ಣಿನ ಫಲವತ್ತತೆಯು ಸೂಕ್ಷ್ಮಜೀವಿಗಳ ಅಭಿವೃದ್ಧಿಯೊಂದಿಗೆ ಬೆಸೆದುಕೊಂಡಿರುತ್ತದೆ. ಸೂಕ್ಷ್ಮಜೀವಿಗಳು ಉಷ್ಣತೆಯ ಬದಲಾವಣೆಗೆ ಹೆಚ್ಚು ಸೂಕ್ಷ್ಮವಾಗಿರುತ್ತವೆ. ೫ ಡಿಗ್ರಿ `ಸಿ’ಗಿಂತ ಕಡಿಮೆ ಉಷ್ಣತಾಮಾನವಿದ್ದರೆ ಸಾರಜನಕೀಕರಣ ಸ್ಥಗಿತಗೊಳ್ಳುತ್ತದೆ. ಆದರೆ ೨೫ ಡಿಗ್ರಿ ಸಿ. ೩೫ ಡಿಗ್ರಿ ಸಿ ಉಷ್ಣತಾಮಾನದಲ್ಲಿ ಅದು ತಾನೇ ಚೆನ್ನಾಗಿ ಜರಗುತ್ತದೆ.

ಮೊಳಕೆಯೊಡೆಯಲು ತಕ್ಕ ಉಷ್ಣತಾಮಾನವಿಲ್ಲದಿದ್ದರೆ ಬೀಜಗಳು ತಡವಾಗಿ ಮೊಳಕೆಯೊಡೆಯುತ್ತವೆ. ಹಾಗೆಯೇ ಚಳಿಗಾಲದ ಬೆಳೆಗಳಾದ ಗೋಧಿ, ಬಟಾಣಿ, ಬಾರ್ಲಿ ಮುಂತಾದವುಗಳು, ಗೋವಿನಜೋಳ, ಹತ್ತಿ ಮತ್ತು ಕಡಲೆಕಾಯಿ (ಸೇಂಗಾ) ಬೆಳೆಗಳು ಬೇಕಾದಕ್ಕಿಂತ ಕಡಿಮೆ ಉಷ್ಣತಾಮಾನದಲ್ಲಿ ಬೆಳೆಯಬಲ್ಲವು.

ಮಣ್ಣಿನ ಉಷ್ಣತೆಯು ಮುಖ್ಯವಾಗಿ ಸೂರ್ಯನಿಂದ ದೊರೆಯುತ್ತದೆ. ಅಲ್ಲದೆ ಭೂಮಿಯ ಆಳದಿಂದ, ಮಳೆಯಿಂದ, ಅಣುಜೀವಿಗಳಿಂದ ಮತ್ತು ರಾಸಾಯನಿಕ ಕ್ರಿಯೆಗಳಿಂದಲೂ ಮಣ್ಣಿಗೆ ಉಷ್ಣತೆ ದೊರೆಯುತ್ತದೆ. ಮಣ್ಣು ಉಷ್ಣತೆಯನ್ನು ಹವಾಮಾನ, ಮಣ್ಣಿನ ಬಣ್ಣ, ಭೂಮಿಯ ಇಳಿಜಾರು ಸಸ್ಯಗಳ ಆವರಣ ಈ ಮೊದಲಾದ ಅಂಶಗಳಿಗೆ ಅನುಗುಣವಾಗಿ ಹೀರಿಕೊಳ್ಳುತ್ತದೆ. ಕಪ್ಪು ಬಣ್ಣ ಹೆಚ್ಚು ಶಾಖವನ್ನು ಹೀರಿಕೊಳ್ಳುತ್ತದೆ. ಸೂರ್ಯಕಿರಣಗಳು ನೇರವಾಗಿದ್ದರೆ ಮಣ್ಣು ಬೇಗನೆ ಕಾಯುತ್ತದೆ. ಗಾಳಿಯು ವೇಗವಾಗಿದ್ದರೆ ಕಾಯುವುದಕ್ಕೆ ವಿಳಂಬವಾಗುತ್ತದೆ. ಭೂಮಿಯ ಮೇಲೆ ಸಸ್ಯಾವರಣವಿದ್ದರೆ ಮಣ್ಣು ಬೇಗ ಶಾಖವನ್ನು ಪಡೆಯಲಾರದು. ಹಾಗೆಯೇ ಕೆಳಮಣ್ಣು ಮೇಲ್ಮಣ್ಣಿಗಿಂತ ಕಡಿಮೆ ಉಷ್ಣತೆಯನ್ನು ಹೊಂದಿರುತ್ತದೆ. ಮೇಲ್ಮಣ್ಣಿನಲ್ಲಿ ಉಷ್ಣತೆಯ ಏರುಪೇರುಗಳು ಕೆಳಮಟ್ಟಕ್ಕಿಂತಲೂ ತೀವ್ರವಾಗಿರುತ್ತದೆ. ಮರಳು ಮಣ್ಣು, ಎರೆ ಮಣ್ಣಿಗಿಂತಲೂ ಹಗಲಿನಲ್ಲಿ ಬೇಗ ಕಾಯ್ದು ರಾತ್ರಿಯಲ್ಲಿ ಬೇಗ ತಣ್ಣಗಾಗುತ್ತದೆ. ಎಕೆಂದರೆ ಎರೆಮಣ್ಣಿನಲ್ಲಿ ನೀರು ಸೇರಿರುತ್ತದೆ.

ವಿಶಿಷ್ಟ ಉಷ್ಣತೆ : ಒಂದು ವಿಶಿಷ್ಟ ತೂಕದ ಮಣ್ಣಿನ ಉಷ್ಣತಾಮಾನವನ್ನು ೧ ಡಿಗ್ರಿ ಸಿ.ಯಷ್ಟು ಹೆಚ್ಚಿಸಲಿಕ್ಕೆ ಬೇಕಾಗುವ ಉಷ್ಣತೆಗೂ ಅಷ್ಟೇ ತೂಕದ ನೀರಿನ ಉಷ್ಣತಾಮಾನವನ್ನು ಅಷ್ಟೇ ಅಂಶ ಹೆಚ್ಚಿಸಲು ಬೇಕಾಗುವ ಉಷ್ಣತೆಗೂ ಇರುವ ಪ್ರಮಾಣಕ್ಕೆ ವಿಶಿಷ್ಟ ಉಷ್ಣತೆ ಎನ್ನುತ್ತಾರೆ. ಹೆಚ್ಚು ವಿಶಿಷ್ಟ ಉಷ್ಣತೆ ಪಡೆದ ಮಣ್ಣು ಕಡಿಮೆ ವಿಶಿಷ್ಠ ಉಷ್ಣತೆ ಪಡೆದ ಮಣ್ಣಿಗಿಂತಲೂ ತೀಕ್ಷ್ಣ ಉಷ್ಣತಾಮಾನದ ಬದಲಾವಣೆಗಳನ್ನು ಅಷ್ಟೇನೂ ಅಧಿಕ ಪ್ರಮಾಣದಲ್ಲಿ ವ್ಯಕ್ತಪಡಿಸುವುದಿಲ್ಲ.  ಎಂದರೆ, ಉಷ್ಣತೆಯ ಏರುಪೇರುಗಳು ಹೆಚ್ಚು ವಿಶಿಷ್ಟ ಉಷ್ಣತೆ ಪಡದ ಮಣ್ಣಿನಲ್ಲಿ ತೀವ್ರವಾಗಿರುವುದಿಲ್ಲ. ನಿಜವಾಗಿ ಜಮೀನಿನ ಪರಿಸ್ಥಿತಿಗಳಲ್ಲಿ ಇತರ ಸಂಗತಿಗಳಿಗಿಂತಲೂ ತೇವಾಂಶವು ಒಂದು ಮಣ್ಣಿನ ಉಷ್ಣತಾಮಾನವನ್ನು ಹೆಚ್ಚಿಸಲು ಬೇಕಾಗುವ ಉಷ್ಣತೆಯ ಶಕ್ತಿಯನ್ನು ಚೆನ್ನಾಗಿ ನಿಶ್ಚಯಿಸುತ್ತದೆ. ಸಾಮಾನ್ಯವಾಗಿ ಒಂದು ಮಣ್ಣಿನ ಉಷ್ಣತೆಯ ಸಾಮರ್ಥ್ಯ ಅಥವಾ ವಿಶಿಷ್ಟ ಉಷ್ಣತೆಯು ನೀರಿನ ಉಷ್ಣತಾ ಸಾಮರ್ಥ್ಯದ ೧.೫ರಷ್ಟು ಇರುತ್ತದೆ. ಆದ್ದರಿಂದ ಹೆಚ್ಚು ನೀರು ಅಳವಡಿಸಿಕೊಂಡ ಮಣ್ಣಿಗೆ ಮಹತ್ತಾದ ವಿಶಿಷ್ಟ ಉಷ್ಣತೆ ಇರುತ್ತದೆ ಎಂಬುದು ಸ್ಪಷ್ಟವಾಗುತ್ತದೆ. ನಯವಾದ ಸ್ವರೂಪದ ಮಣ್ಣು ಹೆಚ್ಚು ಉಷ್ಣತೆಯನ್ನು ಹೀರಿಕೊಳ್ಳುತ್ತದೆ. ಏಕೆಂದರೆ ನಯವಾದ ಸ್ವರೂಪದ ಮಣ್ಣು ಉರುಟು ಸ್ವರೂಪದ ಮಣ್ಣಿಗಿಂತಲೂ ಹೆಚ್ಚು ನೀರನ್ನು ಹೊಂದಿರುತ್ತದೆ.

ಈ ಸಂಗತಿಯ ಪ್ರತ್ಯಕ್ಷ ಉಪಯೋಗವೆಂದರೆ ಶೀತ ಪ್ರದೇಶಗಳಲ್ಲಿ ಹಿಮದಿಂದ ಆಗುವ ನಷ್ಟ ತಪ್ಪಿಸಲು ಬೆಳೆಗಳಿಗೆ ನೀರಾವರಿ ಮಾಡುವಿಕೆ. ಮಣ್ಣಿಗೆ ನೀರು ಕೊಟ್ಟರೆ ಮಣ್ಣಿನ ಉಷ್ಣತಾ ಸಾಮರ್ಥ್ಯವು ಹೆಚ್ಚುತ್ತದೆ. ಹವೆಯ ಉಷ್ಣತೆಯು ನೀರು ಹೆಪ್ಪುಗಟ್ಟುವ ಮಟ್ಟಕ್ಕೆ ಇಳಿದರೂ ಮಣ್ಣಿನ ಉಷ್ಣತೆಯು ಕೆಳಗೆ ಇಳಿಯುವುದಿಲ್ಲ. ಇದರಿಂದಾಗಿ ಆಗುವ ಹಾನಿ ತಪ್ಪುವುದು. ಆಲಿಕಲ್ಲು ಮಳೆಯಾದೊಡನೆ ರೈತರು ಬಾವಿ ನೀರಿನಿಂದ ನೀರಾವರಿ ಮಾಡುವುದೂ ಇದೇ ಕಾರಣದಿಂದ.

ಮಣ್ಣಿನ ಉಷ್ಣತಾ ಸಾಮರ್ಥ್ಯವು ಅದರಲ್ಲಿರುವ ಸಾವಯವ ಪದಾರ್ಥಕ್ಕೆ ಅನುಗುಣವಾಗಿಯೂ ಪ್ರಭಾವಿತವಾಗಿರುತ್ತದೆ. ಹ್ಯೂಮಸ್ಸಿನ ವಿಶಿಷ್ಟ ಉಷ್ಣತೆಯು ೦.೫ ಇರುತ್ತದೆ. ಎಂದರೆ ಮಣ್ಣಿನ ವಿಶಿಷ್ಟ ಉಷ್ಣತೆಯು ೨.೫ ಪಟ್ಟಿರುತ್ತದೆ. ಅಲ್ಲದೆ ಸಾವಯವ ಪದಾರ್ಥವು ಮಣ್ಣಿಗೆ ನೀರನ್ನು ಹಿಡಿದಿಟ್ಟುಕೊಳ್ಳುವ ಹೆಚ್ಚಿಸುವ ಸಾಮರ್ಥ್ಯವನ್ನು ಕೊಡುತ್ತದೆ. ಹೀಗೆ ಸಾವಯವ ಪದಾರ್ಥವು ಮಣ್ಣಿನ ಉಷ್ಣತಾ ಸಾಮರ್ಥ್ಯವನ್ನು ನೇರವಾಗಿಯೂ ಪರೋಕ್ಷವಾಗಿಯೂ ಹೆಚ್ಚಿಸುತ್ತದೆ.

ಒಂದೇ ತೆರನಾದ ಉಷ್ಣತಾಮಾನವನ್ನು ಉಳಿಸಿಕೊಂಡು ಬರಬೇಕಾದರೆ ಮಣ್ಣಿನಲ್ಲಿ ಆಚ್ಛಾದನೆ ಅಥವಾ ಮುಚ್ಚಿಗೆ ಕಲ್ಪಿಸಬೇಕಾಗುತ್ತದೆ. ಆಚ್ಛಾದಿತ ಜಮೀನುಗಳಲ್ಲಿ ಉಷ್ಣತಾಮಾನದ ಏರುಪೇರು ಅಲ್ಪವಾಗಿರುತ್ತದೆ. ಬೆಳೆಗಳಿದ್ದ ಜಮೀನುಗಳಲ್ಲಿ ಕೈಯಾಡಿಸುವುದು, ಎರೆ ಹೊಡೆಯುವುದು ಮುಂತಾದ ಮಧ್ಯಂತರ ಕಾರ್ಯಗಳು ಮಣ್ಣಿನ ಉಷ್ಣತೆಯನ್ನು ಕಾಪಾಡಿಕೊಂಡು ಬರಲು ಸಾಧ್ಯ ಮಾಡಿಕೊಡುತ್ತವೆ. ಸಸ್ಯ ಹೊದಿಕೆ ಇದ್ದ ಮಣ್ಣುಗಳಿಗಿಂತ ಹೊದಿಕೆ ಇಲ್ಲದ ಮಣ್ಣುಗಳ ಚಳಿಗಾಲದ ಹಿಮಪಾತದಿಂದ ಬೇಗನೆ ತಮ್ಮ ಉಷ್ಣತೆಯನ್ನು ಕಳೆದುಕೊಳ್ಳುತ್ತದೆ.

(ಇನ್ನೂ ಇದೆ)

ಚಿತ್ರ ೧ ಫಲವತ್ತಾದ ಸಂತೃಪ್ತ ಮಣ್ಣು

ಚಿತ್ರ ೨ ಇದು ಕೃಷಿಮಾಡಲು ಯೋಗ್ಯ ಮಣ್ಣೇ ಎಂಬುದನ್ನು ಸೂಚಿಸುವಂತದ್ದು.

ಚಿತ್ರ ಮತ್ತು ಮಾಹಿತಿ : ರಾಧಾಕೃಷ್ಣ ಹೊಳ್ಳ