ಫಲವತ್ತಾದ ಮಣ್ಣು ಕೃಷಿಯ ಜೀವಾಳ (ಭಾಗ ೫)

ಫಲವತ್ತಾದ ಮಣ್ಣು ಕೃಷಿಯ ಜೀವಾಳ (ಭಾಗ ೫)

ನೀರಿನ ಬಾಷ್ಪೀಭವನ : ಬಾಷ್ಫೀಭವನದಿಂದ ಮಣ್ಣಿನ ಮೇಲೆ ಶೀತವುಂಟಾಗುತ್ತದೆ. ಏಕೆಂದರೆ ನೀರು ಆವಿಯಾಗಲು ಮಣ್ಣಿನ ಉಷ್ಣತೆಯು ವ್ಯಯವಾಗುತ್ತದೆ. ಜವುಗು ಮಣ್ಣುಗಳಲ್ಲಿ ತಂಪಾಗಯೇ ಇರುವುದಕ್ಕೆ ಕಾರಣವೆಂದರೆ ಮೊದಲನೆಯದಾಗಿ ನೀರು ಕಾಯಲು ತಡವಾಗುತ್ತದೆ. ಹಾಗೂ ಎರಡನೆಯದಾಗಿ ಕಾಯ್ದ ನೀರು ಆವಿಯಾಗುವುದರಿಂದ ಕೆಳನೀರಿನಲ್ಲಿ ಶೀತ ಆವರಿಸುತ್ತದೆ. ಒಂದೇ ಸ್ಥಳದಲ್ಲಿ ಒಂದೇ ವೇಳೆಯಲ್ಲಿ ಬೇರೆ ಬೇರೆ ಮಣ್ಣುಗಳಿಗೆ ಬೇರೆ ಬೇರೆ ಉಷ್ಣತಾಮಾನವ ಇರುತ್ತದೆಂದು ತಿಳಿದು ಬರುತ್ತದೆ. ಉದಾಹರಣೆಗೆ ಉತ್ತಮ ಇಂಗುವಿಕೆಯುಳ್ಳ ಗೋಡು ಮಣ್ಣಿನಲ್ಲಿ ೬೬% ಹಾಗೂ ಇಂಗುವಿಕೆ ಗುಣವಿಲ್ಲದ ಕಪ್ಪು ಮಣ್ಣಿನಲ್ಲಿ ೫೪ ಉಷ್ಣತಾಮಾನ ಇರುವುದನ್ನು ದಾಖಲು ಮಾಡಲಾಗಿದೆ.

ಮಣ್ಣಿನ ಉಳುಮೆ : ಬೀಜ ಬಿತ್ತುವ ಮುಂಚೆ ಮತ್ತು ಅನಂತರ ಭೂಮಿಯನ್ನು ಉಳುಮೆ ಮಾಡಬೇಕಾಗುತ್ತದೆ. ಅಗಲೇ ಬೆಳೆಗಳು ವೈಖರಿಯಿಂದ ಬೆಳೆಯುವುವು. ಬಿತ್ತುವ ಮುಂಚಿನ ಸಾಗುವಳಿ ಕ್ರಮಕ್ಕೆ ಮುಂಗೈತವೆಂದೂ (ಪೂರ್ವಾರಂಭ) ಬಿತ್ತುವ ನಂತರ ಕೈಗೊಳ್ಳುವ ಸಾಗುವಳಿ ಕ್ರಮಕ್ಕೆ ಹಿಂಗೈತ (ಉತ್ತರಾರಂಭ) ಎಂದೂ ಕರೆಯುತ್ತಾರೆ. ನೇಗಿಲು ಹೊಡೆದ ತರುವಾಯದ ಕಾರ್ಯಗಳಿಗೆ ಸಾಗುವಳಿ ಎನ್ನುತ್ತಾರೆ. ನೇಗಿಲು ಹೊಡೆಯುವುದು, ಹರಗುವುದು, ಎಡೆ ಹೊಡೆಯುವ ಉದು ಮುಂತಾದ ಕೆಲಸಗಳು ಮಣ್ಣಿನ ರಚನೆಯನ್ನು ಬೆಳೆಯ ಬೆಳವಣಿಗೆಗಾಗಿ ಸುಸ್ಥಿತಿಯಲ್ಲಿಡುವ ವ್ಯವಸ್ಥೆಗಳಾಗಿವೆ. ಮಣ್ಣಿನ ಭೌತಿಕ ಗುಣ ಹಾಗೂ ಸಸ್ಯ ಬೆಳವಣಿಗೆಯ ಸಂಬಂಧವು ಮಣ್ಣಿನ ಸಾಗುವಳಿಯ ಮಟ್ಟವನ್ನು ತಿಳಿಸುತ್ತದೆ. ಆದ್ದರಿಂದ ಮಣ್ಣಿನ ಸಾಗುವಳಿ ಮಟ್ಟ ಹೇಳಬೇಕಾದರೆ ಬೆಳೆ ಬೆಳೆಯಲು ಯೋಗ್ಯವಾದ ಮಣ್ಣಿನ ಎಲ್ಲಾ ಭೌತಿಕ ಗುಣಧರ್ಮಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಕೇವಲ ಮಣ್ಣಿನ ಕಾಳಾಕಾರದ ರಚನೆಯನ್ನಲ್ಲದೆ ಇತರ ಭೌತಿಕ ಗುಣಧರ್ಮಗಳಾದ ತೇವ ಧಾರಣೆ, ಹವೆಯಾಡುವಿಕೆ, ನೀರು ಇಂಗುವಿಕೆ, ಬಸಿಯುವಿಕೆ ಕೇಶಾಕರ್ಷಕ ನೀರನ್ನು ಧರಿಸುವ ಸಾಮರ್ಥ್ಯ ಮುಂತಾದವುಗಳನ್ನು ಲೆಕ್ಕಿಸಿ ಮಣ್ಣಿನ ಸಾಗುವಳಿಯನ್ನು ನಿರ್ಧರಿಸಬೇಕಾಗುತ್ತದೆ.

ಚಿಕ್ಕ ನೇಗಿಲು, ಮರದ ನೇಗಿಲು, ಕುಂಟೆ, ಕೂರಿಗೆ, ಎಡೆ ಕುಂಟೆ ಮುಂತಾದ ಬೇಸಾಯ ಉಪಕರಣಗಳನ್ನು ಉಳುಮೆ ಮಾಡಲು ಉಪಯೋಗಿಸಲಾಗುತ್ತದೆ. ನೇಗಿಲು ಹೊಡೆಯುವುದರಿಂದ ಮಣ್ಣು ಹರಿದು ಮೇಲಕ್ಕೆ ಓಲುತ್ತಾ ಬಂದು ತಿರುವಿ ಬೀಳುತ್ತದೆ. ಹಾಗೂ ಮೇಲಿರುವ ಸಸ್ಯಶೇಷಗಳನು ಮಣ್ಣಿನ ಕೆಳಗೆ ಮುಚ್ಚುತ್ತದೆ. ಮರದ ನೇಗಿಲು ಕೇವಲ ನೆಲವನ್ನು ಹರಿದು ಸಡಿಲು ಮಾಡಿ ಮಣ್ಣನ್ನು ಕದಲಿಸುತ್ತದೆ. ಆದರೆ ಅದು ಮಣ್ಣನ್ನು ತಿರುವಿ ಹಾಕುವುದಿಲ್ಲ. ಕೆಂಪು ಮಣ್ಣು ಹಾಗೂ ನೀರಾವರಿ ಭೂಮಿಯಲ್ಲಿ ರೆಕ್ಕೆ ನೇಗಿಲನ್ನು ಬಳಸಬಹುದು. ಆದರೆ ಮಳೆಯ ಆಶ್ರಯದ ಕಪ್ಪು ಹತ್ತಿ ಮಣ್ಣಿನಲ್ಲಿ ರೆಕ್ಕೆ ನೇಗಿಲು ಉಪಯೋಗಿಸುವ ಅವಶ್ಯಕತೆ ಇರುವುದಿಲ್ಲ. ಕುಂಟೆಯನ್ನು ಬಳಸುವ ಅವಶ್ಯಕತೆಯೂ ಬೀಳುವುದಿಲ್ಲ. ಕಪ್ಪು ಹತ್ತಿ ಮಣ್ಣುಗಳು ಬಿರುಕು ಬಿಡುವುದರಿಂದ ಸ್ವತಃ ನೇಗಿಲು ಹೊಡೆದ ಪರಿಣಾಮ ಉಂಟಾಗುತ್ತದೆ. ಅಂತಹ ಭೂಮಿಯನ್ನು ಕೇವಲ ಹರಗಿದರೆ ಸಾಕಾಗುತ್ತದೆ. ರೆಕ್ಕೆ ನೇಗಿನಲನ್ನು ಆಯಾ ಬೆಳೆಗೆ ಹೊಂದುವಂತೆ ೮-೧೦ ಅಂಗುಲ ಆಳವಾಗಿ ಹೊಡೆಯಬೇಕು. ಹೆಚ್ಚು ಆಳವಾಗಿ ಹೊಡೆದರೆ ಅದು ಶ್ರಮದ ಕೆಲಸವಾಗುವುದಲ್ಲದೆ ಬೆಳೆಗಳ ಮೇಲೆ ಒಳ್ಳೆಯ ಪರಿಣಾಮವೂ ಆಗುವುದಿಲ್ಲ. ಮಣ್ಣಿನ ಅಡಿಯಲ್ಲಿ ಎರೆಯ ಕಠಿಣ ಪದರು ಇದ್ದರೆ ಮಾತ್ರ ಆಳವಾಗಿ ನೇಗಿಲು ಹೊಡೆಯಬಹುದು. ಹೀಗೆ ರೆಕ್ಕೆ ನೇಗಿಲು ಹಾಗೂ ರಂಟೆ ಇವೆರಡೂ ಭೂಮಿಯನ್ನು ಸಾಗುವಳಿಗೆ ತಯಾರು ಮಾಡಲು ಉಪಯುಕ್ತವೆನಿಸಿವೆ.

ಭೂಮಿಯಲ್ಲಿ ಉತ್ತಮ ಸಾಗುವಳಿ ಮಟ್ಟ ಏರ್ಪಡಬೇಕಾದರೆ ಉಳುಮೆಯನ್ನು ಅತಿಯಾಗದಂತೆ ಮಿತವಾಗಿ ನಡೆಸಬೇಕು. ನಿಜವಾಗಿ ನೋಡಿದರೆ ನೇಗಿಲು ಅಥವಾ ರಂಟೆ ಹೊಡೆಯುವುದಕ್ಕಿಂತ ಮುಂದಿನ ಸಾಗುವಳಿ ಮಾಡುವ ಕಾರ್ಯಗಳು ಬಹಳ ಮಹತ್ತದ್ದಾಗಿವೆ. ಏಕೆಂದರೆ ಸಾಗುವಳಿ ಮಾಡುವ ಉಪಕರಣಗಳು ಮೇಲಿನ ೨-೩ ಅಂಗುಲ ಮಣ್ಣು ಇದ್ದಲ್ಲಿ ಮಾತ್ರ ಕಾರ್ಯ ಮಾಡುತ್ತವೆ. ಮೇಲ್ಮಣ್ಣಿನ ಕಾಳಾಕಾರದ ರಚನೆಗೆ ಧಕ್ಕೆಯಾದರೆ ಬೆಳೆ ಹುಲುಸಾಗಿ ಬರಲಾರದು. ಜೊತೆಗೆ ಬೆಳೆ ಇದ್ದಾಗ ಕೈಗೊಳ್ಳುವ ಮಧ್ಯಂತರ ಬೇಸಾಯಗಳು ಮಣ್ಣಿನ ಮೇಲೆ ಮಳೆಯ ಹೊಡೆತದಿಂದ ಉಂಟಾದ ಹೆಪ್ಪುಗಟ್ಟುವಿಕೆಯನ್ನು ಮುರಿದುಹಾಕುತ್ತವೆ. ಸಾಕಷ್ಟು ಹವೆಯಾಡುವಂತೆ ಮಾಡುತ್ತದೆ. ಹಾಗೂ ಕಸ ಕಳೆಯನ್ನು ನಾಶಪಡಿಸುತ್ತವೆ. ಆದರೆ ಎಡೆ ಹೊಡೆಯುವಂತಹ ಮಧ್ಯಂತರ ಬೇಸಾಯವನ್ನು ಅತಿಯಾಗಿ ಮಾಡಬಾರದು. ಅದರಿಂದ ಮಣ್ಣಿನ ರಚನೆ ಕೆಟ್ಟು ತೇವಾಂಶ ನಾಶವಾಗುತ್ತದೆ. ಬೇರುಗಳು ವಿಪರೀತವಾಗಿ ಹರಿದು ಬಿಡುವುದರಿಂದ ಬೆಳೆ ಮಾಡಬಹುದು. ಅಲ್ಲದೆ ಕಳೆನಾಶಕ ಔಷಧಗಳನ್ನು ಉಪಯೋಗ ಮಾಡುವುದಾದರೆ ಅಂತರ್ ಬೇಸಾಯಕ್ಕೆ ಅಷ್ಟು ಮಹತ್ವ ಉಳಿಯುವುದಿಲ್ಲ.

ನಯವಾದ ಸ್ವರೂಪದ ಮಣ್ಣುಗಳಲ್ಲಿ ಸಾಗುವಳಿಯನ್ನು ಎಚ್ಚರಿಕೆಯಿಂದ ಮಾಡುವುದು ಅವಶ್ಯವಿದೆ. ನಯಸ್ವರೂಪದ ಮಣ್ಣುಗಳಲ್ಲಿ ಕಲಿಲಾತ್ಮಕ ಎರೆಯು ಅಧಿಕವಾಗಿರುವುದರಿಂದ ಅದು ಹೆಚ್ಚು ಮೆದುವಾಗಿರುತ್ತದೆ. ಮಣ್ಣು ಹೆಚ್ಚು ಮೆದುವಿದ್ದಾಗ ಉಳುಮೆ ಮಾಡಿದರೆ ಕೆಸರಾಗುತ್ತದೆ ಹಾಗೂ ಮಣ್ಣಿನ ರಚನೆಗಳು ಒಡೆದು ಹಾಳಾಗುವುದಲ್ಲದೆ ಒಣಗಿದ ಮೇಲೆ ಮಣ್ಣು ಅತಿ ಗಟ್ಟಿಯಾಗುತ್ತದೆ. ಅದೇ ಭೂಮಿಯನ್ನು ಒಣಗಿದ ತರುವಾಯ ಉಳುಮೆ ಮಾಡುವುದೂ ಸಹ ಅಹಿತಕಾರಿಯಾಗಬಹುದು. ಆಗ ನೇಗಿಲು ಹೊಡೆದರೆ ದೊಡ್ಡ  ದೊಡ್ಡ ಹೆಂಟೆಗಳು ಏಳುತ್ತವೆ, ದೊಡ್ಡ ಹೆಂಟೆಗಳಿದ್ದರೆ ಜಮೀನನ್ನು ಬೇಗ ಹದಗೊಳಿಸಲಿಕ್ಕಾಗುವುದಿಲ್ಲ. ಆದ್ದರಿಂದ ಜಡ ಮಣ್ಣಿನಲ್ಲಿ ಉಳುಮೆ ಕಾರ್ಯವನ್ನು ಸಾಧ್ಯವಾದಷ್ಟು  ಹೆಚ್ಚು ಕಾಳಾಕಾರದ ರಚನೆ ಉಂಟಾಗುವ ಸರಿಯಾದ ವೇಳೆಗೆ ಕೈಗೊಳ್ಳಬೇಕು.

ಯಾವುದೇ ಮಣ್ಣಿನಲ್ಲಿ ಕಾಳಾಕಾರದ ರಚನೆ ಏರ್ಪಡಬೇಕಾದರೆ  ಮಿತವ್ಯಯವಾಗಿ ಸಾಗುವಳಿ ಮಾಡುವುದಲ್ಲದೆ ಮಣ್ಣಿನ ಸಾವಯವ ಸೌಷ್ಟವನ್ನು ಹೆಚ್ಚಿಸುವುದೂ ಅಗತ್ಯವೆನಿಸಿದೆ. ಕಾಂಪೋಸ್ಟ್ ಗೊಬ್ಬರ, ಹಸುರು ಗೊಬ್ಬರ, ಹುಲ್ಲು ಬೆಳೆಸುವುದು, ದ್ವಿದಳ ಧಾನ್ಯ ಬೆಳೆಯುವುದು, ಸರಿಯಾದ ಬೆಳೆ ಸರದಿ ಅನುಸರಿಸುವುದು, ಇವೆಲ್ಲವೂ ಕಾಳಾಕಾರದ ರಚನೆ ಏರ್ಪಡುವುದಕ್ಕೆ ಸಹಾಯ ಮಾಡುತ್ತವೆ. ಆಗ ಮಣ್ಣಿನ ಉಳುಮೆಯ ಮಟ್ಟ ತಕ್ಕಸ್ಥಿತಿಗೆ ಬರುತ್ತದೆ.

ಯಾಂತ್ರಿಕ ಸಾಗುವಳಿಯಿಂದ ಬೇಗಬೇಗನೆ ಭೂಮಿಯನ್ನು ಹದಗೊಳಿಸಬಹುದು. ಒಂದು ನಿರ್ದಿಷ್ಟ ಅವಧಿಯಲ್ಲಿ ಅನೇಕ ಬೆಳೆಗಳನ್ನು ತೆಗೆದುಕೊಳ್ಳಬೇಕಾದರೆ ಯಾಂತ್ರಿಕ ಉಳುಮೆಗೆ ಶರಣು ಹೋಗಬೇಕಾಗುತ್ತದೆ. ಟ್ರಾಕ್ಟರಿನಿಂದ ನೇಗಿಲು, ತವೆ ಕುಂಟೆ, ಮೊನಚು ಹಲ್ಲುಗಳ ಕುಂಟೆ, ಸಲಿಕೆ, ಹಲ್ಲುಕುಂಟೆ, ಹೆಸರು ಗದ್ದೆ ಉಪಕರಣಗಳನ್ನು ಎಳೆಸಿ ಭೂಮಿಯನ್ನು ಉಳುವಾಗ ಮಣ್ಣಿನ ಭೌತಿಕ ಗುಣಧರ್ಮಗಳು ಬೆಳೆಗೆ ತಕ್ಕಂತೆ ವೃದ್ಧಿಯಾಗುವಂತೆ ಹದಗೊಳಿಸಬೇಕು. ಉಳುಮೆ ಪರಿಪೂರ್ಣಾವಸ್ಥೆಗೆ ಬರುವುದಕ್ಕೆ ಸ್ವಲ್ಪ ಮುಂಚೆ ಬೇಸಾಯನ್ನು ನಿಲ್ಲಿಸಬೇಕು. ಇದರಿಂದ ಉಳುಮೆ ಅತಿಯಲ್ಲದೆ ಸಾಕಷ್ಟಾಗಿರುವುದೆಂಬ ಭರವಸೆ ತಾಳಬಹುದು. ಬರೇ ಇಷ್ಟೇ ಅಲ್ಲ. ಮಣ್ಣಿನ ಗುಣ ಧರ್ಮಗಳಾದ ಸಹನೆ, ನೀರು ಹಿಡಿದಿಟ್ಟುಕೊಳ್ಳುವ ಗುಣ ಎಲ್ಲವೂ ಬೇಸಾಯ ಮಾಡುವವರು ತಿಳಿದಿರಲೇ ಬೇಕು.

(ಮುಗಿಯಿತು)

ಚಿತ್ರ ಮತ್ತು ಮಾಹಿತಿ : ರಾಧಾಕೃಷ್ಣ ಹೊಳ್ಳ

ಚಿತ್ರಗಳ ವಿವರ:  ಮೇಲು ಮಣ್ಣಿನಲ್ಲಿ ಸಾವಯವ ಅಂಶಗಳು ಇದ್ದು, ಅದು ಮಣ್ಣಾಗಿ ಪರಿವರ್ತಿತಗೊಂಡ ಫಲವತ್ತಾದ ಎರೆ ಮಣ್ಣು.