ಫಲಿತಾಂಶಗಳು ಮತ್ತು ಹೆಚ್ಚುತ್ತಿರುವ ಒತ್ತಡಗಳು.
ಮಾರ್ಚ್ ಮುಗಿಯುತ್ತಿದ್ದಂತೆ ನಮಗೆಲ್ಲ ಖುಷಿ. ಬಿಡುಗಡೆಯಾದಂಥ ಭಾವ. ಪರೀಕ್ಷೆಯ ಮಾರನೇ ದಿನವೇ ಅಜ್ಜನ ಮನೆಗೆ ಪಯಣ.
ಇನ್ನು ಬೆಂಗಳೂರಿಗೆ ಬರುತ್ತಿದ್ದಿದ್ದು ಮೇ ೩೦ಕ್ಕೆ. ಜೂನ್ ೧ ರಿಂದ ಶಾಲೆ ಗೆ ಹೋಗಬೇಕಿತ್ತಲ್ಲ........
ಆದರೆ ಎಲ್ಲ ಬೇಸಿಗೆ ರಜಗಳೂ ಹೀಗೆ ಇರಲಿಲ್ಲ. SSLC ಗೆ ಬರುತ್ತಿದ್ದಂತೆ ಒತ್ತಡಗಳು ಶುರುವಾದವು. PUC ಗೆ ಬಂದ ಮೇಲೆ ಕೇಳುವುದೇ ಬೇಡ.
ಆದರೆ ಯಾಕೆ ಹೀಗೆ ಎಂಬ ಪ್ರಶ್ನೆ ಗೆ ಇನ್ನೂ ಉತ್ತರ ಸಿಕ್ಕಿಲ್ಲ.
ನಾನೂ ಒಬ್ಬ ವಿದ್ಯಾರ್ಥಿಯಾಗಿ ಈ ಎಲ್ಲ ಹಂತಗಳನ್ನು ದಾಟಿ ಈಗ ಕೆಲಸಕ್ಕೆ ಸೇರಿದ್ದೇನೆ. ನನ್ನ ಅನಿಸಿಕೆಯಲ್ಲಿ ಈ ಒತ್ತಡಗಳಿಗೆ ಕಾರಣಗಳು ಬಹಳಷ್ಟು.
ಮೊದಲನೆಯದಾಗಿ, ಮಕ್ಕಳನ್ನು ಬೇರೆ ಮಕ್ಕಳೊಂದಿಗೆ ಹೋಲಿಸಿ ನೋಡುವುದು. ಇದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ನಡೆಯುವಂಥದ್ದು. ಅವಳಿಗೆಷ್ಟು, ಇವನಿಗೆಷ್ಟು ಅನ್ನುವ ಬದಲು, ನಿನಗೆ ಈ ವಿಷಯದಲ್ಲಿ ಕಳೆದ ಸಲ ಎಷ್ಟು ಅಂಕಗಳು ಬಂದಿದ್ದವು? ಈಗ ಎಷ್ಟು ಬಂದಿವೆ? ಕಡಿಮೆಯಾಗಿದ್ದರೆ ಯಾಕೆ ಹೀಗಾಯ್ತು ಎಂಬ ಪ್ರಶ್ನೆಗಳು ವಿದ್ಯಾರ್ಥಿಗಳನ್ನು ಆತ್ಮಾವಲೋಕನ ಮಾಡಿಕೊಳ್ಳುವಂತೆ ಪ್ರೇರೆಪಿಸುವುದಲ್ಲದೆ ಅವರ ಆತ್ಮವಿಶ್ವಾಸ ಕಳೆಗುಂದುವುದನ್ನು ತಡೆಗಟ್ಟುತ್ತವೆ.
ಪ್ರಾರಂಭದಿಂದಲೇ ಮಕ್ಕಳಿಗೆ ಪರೀಕ್ಷೆಗಳ ಬಗ್ಗೆ ಭಯ ಹುಟ್ಟಿಸುವ ಬದಲು ಕಲಿಯುವ ವಿಷಯಗಳ ಬಗ್ಗೆ ಆಸಕ್ತಿ ಹುಟ್ಟಿಸುವುದು ಮುಖ್ಯ. ಅದಕ್ಕೂ ಮೊದಲು ಮಕ್ಕಳ ಆಸಕ್ತಿ ವಿಷಯಗಳನ್ನೇ ಅವರಿಗೆ ಆರಿಸಲು ಬಿಡುವುದು ಒಳ್ಳೆಯದು. ಆದರೆ ಇಂದಿನ ಸ್ಫರ್ಧಾ ಯುಗದಲ್ಲಿ ಇದು practically ಸ್ವಲ್ಪ ಕಷ್ಟ.
ಇಷ್ಟಲ್ಲದೆ ಫಲಿತಾಂಶಗಳು ಬಂದಾಗ ಪೋಷಕರು ಸಮಾಧಾನ ಚಿತ್ತರಾಗಿರುವುದು ಬಹಳ ಮುಖ್ಯವಾಗುತ್ತದೆ. ಮಕ್ಕಳ ಸಾಮರ್ಥ್ಯವನ್ನು ಅರಿತು ಅದಕ್ಕೆ ತಕ್ಕಂಥ ನಿರೀಕ್ಷೆ ಇಟ್ಟುಕೊಳ್ಳುವುದು ಉತ್ತಮ.
ಇಂದು SSLC ಫಲಿತಾಂಶ. ಒಟ್ಟಾರೆ ರಾಜ್ಯದ ಫಲಿತಾಂಶದಲ್ಲಿ ಹೆಚ್ಚಳ ಕಂಡು ಬಂದಿದೆ. ಯಾವ ಕಹಿ ಘಟನೆಗಳು ನಡೆಯದಿರಲಿ ಎಂಬುದೇ ನನ್ನ ಆಶಯ.
ಎಲ್ಲ SSLC ವಿದ್ಯಾರ್ಥಿಗಳಿಗೂ ಶುಭ ಕೋರುತ್ತ....
-- ಮಾಳವಿಕ.