ಫಲ ನಿರೀಕ್ಷೆ

ಫಲ ನಿರೀಕ್ಷೆ

‘ಫಲ’ ಎಂದರೆ ಹಣ್ಣು ಎಂದೂ ‘ಪಲ’ ಎಂದರೆ ಮಲವೆಂದೂ ಅರ್ಥವಿದೆ. ಪ್ರತಿಯಾಗಿ ಸಿಗುವ ಲಾಭ ಅಥವಾ ಪ್ರಯೋಜನವನ್ನೂ ಫಲ ಅಥವಾ ಪ್ರತಿಫಲವೆನ್ನುವುದಿದೆ. ಮತದಾನ ಮಾಡಿದರೇನು ಫಲ? ಬೆಣ್ಣೆ ತಿಂದರೇನು ಫಲ? ಕಾಸರಕನಗಿಡಕ್ಕೆ ಬೆಲ್ಲದ ಕಟ್ಟೆ ಕಟ್ಟಿದರೇನು ಫಲ? “ಲಾಭವೇನು?” ಎಂಬ ಸಂಕೇತ ಈ ಪ್ರಶ್ನೆಗಳಲ್ಲಿವೆ. ಕಳೆದ ವರ್ಷ ನಮ್ಮ ತೋಟದಲ್ಲಿ ಒಳ್ಳೆಯ ಫಲ ಸಿಕ್ಕಿತು ಎಂದಾಗ ಫಸಲು ಚೆನ್ನಾಗಿತ್ತೆಂದೇ ತಿಳಿಯುತ್ತೇವೆ. ಮದ್ದಿನ ಫಲದಿಂದ ಕಾಯಿಲೆ ಕಡಿಮೆಯಾಯಿತು ಎಂಬಲ್ಲಿ ಫಲವು ಗುಣ, ಪರಿಣಾಮ ಮುಂತಾಗಿ ವಿವರಣೆ ಕೊಡುತ್ತದೆ.

“ಕರ್ಮಣ್ಯೇ ವಾಧಿಕಾರಸ್ತೇ, ಮಾ ಫಲೇಷು ಕದಾಚನ” ಇದು ಭಗವದ್ಗೀತೆಯ ಸಂದೇಶ. ಕರ್ಮಾಧಿಕಾರ ಎಲ್ಲರಿಗೂ ಇದೆ, ಫಲಾಧಿಕಾರ ಯಾರಿಗೂ ಇಲ್ಲ ಅಥವಾ ಕೆಲಸ ಮಾಡು, ಫಲವನ್ನು ಎಂದೂ ಬಯಸಬೇಡ ಎಂಬ ಇಂಗಿತ ಗೀತೆಯ ಸಾಲಿನಲ್ಲಿ ಎದ್ದು ಕಾಣುತ್ತದೆ. ಫಲ ಒದಗಿಸುವುದು ಭಗವಂತನ ಕಾರ್ಯ. ಯಾವುದೇ ಕೆಲಸವನ್ನೂ ಫಲ ನಿರೀಕ್ಷೆಯಿಂದಲೇ ಮಾಡುವ ನಾವು ಭಗವದ್ಗೀತೆಯ ಸಂದೇಶಕ್ಕೆ ವಿರುದ್ಧ ಸಾಗಿದಂತೆ ಅಲ್ಲವೇ? ಉತ್ತಮ ಕೆಲಸಗಳಿಗೆ ಉತ್ತಮ ಫಲ, ನೀಚ ಕೆಲಸಗಳಿಗೆ ನಿಕೃಷ್ಟ ಫಲವನ್ನೇ ಭಗವಂತ ನೀಡುತ್ತಾನೆ ಎಂಬ ತಿಳುವಳಿಕೆಯೂ ಮುಖ್ಯ.

ಕೆಲವು ಉತ್ತಮ ಕೆಲಸಗಳನ್ನು ಮಾಡಿದ್ದಾನೆ, ಇನ್ನು ಕೆಲವು ನೀಚ ಕೆಲಸಗಳನ್ನೂ ಮಾಡಿದ್ದಾನೆ ಎಂದಾದರೆ ಅವನಿಗೆ ನಿಕೃಷ್ಟ ಫಲವೇ ಶತಃ ಸಿದ್ಧ. ಕರ್ತವ್ಯ ಲೋಪಿ ಕಾಶಿಗೆ ಹೋದರೂ ಫಲವಿಲ್ಲ. “ಅನ್ಯಕ್ಷೇತ್ರೇ ಕೃತ ಪಾಪಂ ಪುಣ್ಯಕ್ಷೇತ್ರೇ ವಿನಶ್ಯತಿ. ಸ್ವಕ್ಷೇತ್ರೇ ಕೃತ ಪಾಪಂ ವಜ್ರ ಲೇಪಾ ಭವಿಷ್ಯತಿ.” ಎಂಬ ಮಾತಿದೆ. ಮನುಷ್ಯನಿಗೊಂದು ಕರ್ಮ ಕ್ಷೇತ್ರ ಇದ್ದೇ ಇರುತ್ತದೆ. ಆ ಕರ್ಮ ಕ್ಷೇತ್ರದಲ್ಲಿ ಹಕ್ಕು ಮತ್ತು ಕರ್ತವ್ಯಗಳು ಸಹಜ. ಕರ್ತವ್ಯಗಳು ಪರಿಪೂರ್ಣವಾದಾಗ ಹಕ್ಕುಗಳು ತಾನಾಗಿ ಒಲಿಯುತ್ತವೆ ಅಥವಾ ಹಕ್ಕುಗಳಿಗೆ ಅರ್ಹನಾಗುತ್ತಾನೆ. ಅನ್ಯ ಕ್ಷೇತ್ರ ಎಂದರೆ ತನ್ನ ಕಾರ್ಯ ಕ್ಷೇತ್ರಕ್ಕೆ ಸಂಬಂಧಿಸದ ಕ್ಷೇತ್ರ. ಉದಾಹರಣೆಗೆ ಶಿಕ್ಷಕನಾದವನಿಗೆ ಬೋಧನಾ ಕ್ಷೇತ್ರ ಸ್ವ ಕ್ಷೇತ್ರ. ಜನಗಣತಿಯು ಆತನಿಗೆ ಅನ್ಯ ಕ್ಷೇತ್ರ. ಅನ್ಯ ಕ್ಷೇತ್ರದಲ್ಲಿ ಅರಿವಿನ ಕೊರತೆಯಿಂದ ತಪ್ಪುಗಳು ಸಂಭವಿಸುತ್ತವೆ. ಅಂತಹ ತಪ್ಪುಗಳಿಗೆ ಕ್ಷಮೆಯಿದೆ. ಆ ತಪ್ಪಿನ ದೋಷ ಸ್ವಕ್ಷೇತ್ರದಲ್ಲಿ ಮಾಡುವ ಪ್ರಾಮಾಣಿಕ ಕರ್ತವ್ಯದಿಂದ ಪರಿಹಾರ ಪಡೆಯುತ್ತದೆ. ಆದರೆ ಆತ ಬೋಧನಾ ಕ್ಷೇತ್ರದಲ್ಲಿ ಎಡವಟ್ಟುಗಳನ್ನು ಮಾಡಿದರೆ ಅವನಿಗೆ ಪಾಪವು ವಜ್ರಲೇಪನದಂತೆ ಫಲಿಸುತ್ತದೆ. ಗುಣಾತ್ಮಕ ಫಲ ನಿರೀಕ್ಷೆ ಮಾಡುವವರು ಸ್ವ ಕಾರ್ಯಕ್ಷೇತ್ರದಲ್ಲಿ ಗುಣಾತ್ಮಕತೆಯನ್ನು ಕಾಯ್ದುಕೊಳ್ಳಲೇ ಬೇಕು.

ಉದ್ಯೋಗವೊಂದರ ಸಂದರ್ಶನಾರ್ಥಿಯು ಉದ್ಯೋಗದಾತರ ಪರಿಶೀಲನೆಗೊಳಗಾಗುತ್ತಾನೆ. ಉದ್ಯೋಗಕ್ಕೆ ಪೂರಕವಾಗಿ ಕೇಳಲಾಗುವ ಎಲ್ಲ ಪ್ರಶ್ನೆಗಳಿಗೆ ಯೋಗ್ಯ ಉತ್ತರ ನೀಡುವ, ಎಲ್ಲ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಒದಗಿಸುವ ಮತ್ತು ಕೌಶಲ್ಯಗಳ ಸಮರ್ಥ ಪ್ರದರ್ಶನ ಮಾಡುವ ಕಾರ್ಯ ಆತ ಮಾಡಲೇ ಬೇಕು. ಉದ್ಯೋಗದಾತರನ್ನು ತೃಪ್ತಿಗೊಳಿಸಲು ಆ ಕ್ಷೇತ್ರದಲ್ಲಿ ಪರಿಪೂರ್ಣ ಜ್ಞಾನವನ್ನು ಹೊಂದಿರಬೇಕು. ಇಲ್ಲದೇ ಇದ್ದರೆ ಉದ್ಯೋಗಕ್ಕೆ ಆಯ್ಕೆ ಆಗದು; ಸಂದರ್ಶನದ ಫಲ ನಿರೀಕ್ಷೆಗೆ ವಿರುದ್ಧವೇ ಆಗುವುದು. ಆದುದರಿಂದ ಫಲವನ್ನು, “ಸಫಲ’ ಮತ್ತು ‘ವಿಫಲ” ಎಂದು ವರ್ಗೀಕರಿಸ ಬೇಕಾಗುತ್ತದೆ. ಸಫಲತೆಗೆ ವ್ಯಕ್ತಿಯ ಜೊತೆಗೆ ವ್ಯಕ್ತಿತ್ವವೇ ನೆರಳಿನಂತಿರಬೇಕು.

ಪೂರ್ವಕರ್ಮದ ಫಲ ಎಂಬ ನಂಬುಗೆ ಭಾರತೀಯರಲ್ಲಿದೆ. ಈ ನಂಬುಗೆಗೆ ಆಧಾರವಿರದಿರಬಹುದು. ಆಧ್ಯಾತ್ಮಿಕ ಚಿಂತನೆಯು ಸಮರ್ಥನೀಯವಾದರೆ ಪೂರ್ವಜನ್ಮದ ಸುಕೃತದ ಫಲ, ಕುಕರ್ಮಗಳ ಫಲ ಎಂಬುದನ್ನು ಒಪ್ಪಿಕೊಳ್ಳಲೇ ಬೇಕು. ಪೂರ್ವ ಜನ್ಮದ ಕರ್ಮಫಲದ ಮೇಲೇ ವಿಶ್ವಾಸವಿದ್ದವರು ಈ ಜನ್ಮದಲ್ಲಿ ತಮ್ಮಿಂದ ತಪ್ಪುಗಳಾಗದಂತೆ ಬಹಳ ಎಚ್ಚರಿಕೆಯಿಂದಿರುತ್ತಾರೆ. ಜೀವನಕ್ಕೆ ಶಿಸ್ತು, ಸಂಯಮ ಮತ್ತು ನೀತಿಯ ಚೌಕಟ್ಟನ್ನು ಹಾಕಿಕೊಳ್ಳುತ್ತಾರೆ. ಯಾಕೆಂದರೆ ಇಂದಿನ ಕುಕರ್ಮಗಳ ಫಲ ಮುಂದಿನ ಜನ್ಮಕ್ಕೆ ಶಿಕ್ಷೆಯಾಗಬಹುದೆಂಬ ಭಯ. ನಮ್ಮ ಕೆಲಸಕ್ಕೆ ತಕ್ಕುದಾದ ಫಲವೇ ಭಗವಂತನಿಂದ ನಿರ್ದಿಷ್ಟವಾಗಿ ನೀಡಲ್ಪಡುತ್ತದೆ. ಹೆಚ್ಚು ಹೆಚ್ಚು ಪುಣ್ಯಕರ ಕೆಲಸದಿಂದ ಪುಣ್ಯದ ಫಲವೇ ಒದಗುತ್ತದೆ. ಪುಣ್ಯದ ಫಲ ನಿರೀಕ್ಷೆಯು ಬದುಕಿಗೆ ಅಂದ ಚಂದ ಒಪ್ಪ ಓರಣಗಳನ್ನು ಕಲ್ಪಿಸಲು ಸಹಕಾರಿಯಾಗುತ್ತದೆ. ಉತ್ತಮ ಫಲ ನಿರೀಕ್ಷೆಯೊಂದಿಗೆ ಸಫಲ, ಸುಫಲ ಕಾರ್ಯವನ್ನೇ ಮಾಡೋಣ.

-ರಮೇಶ ಎಂ. ಬಾಯಾರು, ಬಂಟ್ವಾಳ 

ಚಿತ್ರ ಕೃಪೆ: ಇಂಟರ್ನೆಟ್ ತಾಣ