ಫಾರೆಸ್ಟರ್ ಪೊನ್ನಪ್ಪ

ಫಾರೆಸ್ಟರ್ ಪೊನ್ನಪ್ಪ

ಪುಸ್ತಕದ ಲೇಖಕ/ಕವಿಯ ಹೆಸರು
ನೌಶಾದ್ ಜನ್ನತ್ತ್
ಪ್ರಕಾಶಕರು
ವೀರಲೋಕ ಬುಕ್ಸ್ ಪ್ರೈ.ಲಿ., ಚಾಮರಾಜಪೇಟೆ, ಬೆಂಗಳೂರು -೫೬೦೦೧೮, ಮೊ: ೭೦೨೨೧೨೨೧೨೧
ಪುಸ್ತಕದ ಬೆಲೆ
ರೂ. ೩೦೦.೦೦, ಮುದ್ರಣ: ೨೦೨೨

‘ಫಾರೆಸ್ಟರ್ ಪೊನ್ನಪ್ಪʼ ಮಲೆನಾಡಿನಲ್ಲಿ ಬದಲಾದ ಮತ್ತು ಸಾಮಾಜಿಕ ವ್ಯವಸ್ಥೆಯ ಸುತ್ತಲೂ ಹೆಣೆದಿರುವ ಆರ್ಥಿಕ ಕಾದಂಬರಿ. ಇಲ್ಲೊಂದು ಜೀವನವಿದೆ, ಬದಲಾವಣೆ ಇದೆ ಮತ್ತು ಆ ಬದಲಾವಣೆಯನ್ನು ಜೀರ್ಣಿಸಿಕೊಳ್ಳಲು ಆಗದ ಆರ್ದ್ರತೆ ಇದೆ” ಎನ್ನುತ್ತಾರೆ ಲೇಖಕ ವಿನಯ್‌ ಮಾಧವ್.‌ ಲೇಖಕ ನೌಶಾದ್‌ ಜನ್ನತ್ತ್‌ ರವರ ʻಫಾರೆಸ್ಟರ್ ಪೊನ್ನಪ್ಪʼ ಪುಸ್ತಕಕ್ಕೆ ಅವರು ಬರೆದ ಮುನ್ನುಡಿಯ ಸಾಲುಗಳು ಇಲ್ಲಿವೆ...

“ಮಲೆನಾಡಿನ ಜನರ ಬದುಕಿನಲ್ಲಿ ಮಹತ್ತರ ತಿರುವು ಬಂದಿದ್ದು ತೊಂಬತ್ತನೇ ದಶಕದ ಆದಿಯಲ್ಲಿ. ಕಾಫಿ ಬೋರ್ಡ್ ಎಂಬ ಕೇಂದ್ರ ಸರ್ಕಾರದ ಸಾಮ್ಯದ ಸಂಸ್ಥೆಯ ಆಡಿಯಲ್ಲಿ ದಶಕಗಳಿಂದ ನಲುಗಿದ್ದ ಕಾಫಿ ಬೆಳೆಗಾರರಿಗೆ ಮುಕ್ತ ಮಾರುಕಟ್ಟೆ ಎಂಬ ಹೊಸ ವ್ಯವಸ್ಥೆ ಬದುಕನ್ನೇ ಬದಲಿಸಿತ್ತು.

ದಿನವಿಡೀ ನೀರವತೆಯನ್ನೇ ಹೊದ್ದು, ಮಳೆಗಾಲದಲ್ಲಿ ಇನ್ನಿಲ್ಲದಂತೆ ತೋಯಿಸಿ, ಚಳಿಗಾಲದಲ್ಲಿ ನಡುಗಿಸಿ, ಬೇಸಿಗೆಯ ಧೂಳಿನಲ್ಲಿ ರೇಜಿಗೆಯನ್ನು ಹುಟ್ಟಿಸುತ್ತಿದ್ದ ಮಲೆನಾಡಿನ ಜನಗಳು ಮೈಕೊಡವಿ ಓಡಾಡಲು ಆರಂಭಿಸಿದರು. ರಾತ್ರಿ ಬೆಳಗಾಗುವುದರೊಳಗೆ, ಸೋಮಾರಿಕಟ್ಟೆಯಲ್ಲಿ ಕುಳಿತು ಸಂಜೆ ಗುಂಡು ಹಾಕಲು ದುಡ್ಡು ಹೊಂದಿಸುವುದರ ಬಗ್ಗೆ ಯೋಚಿಸುತ್ತಿದ್ದ ಹುಡುಗರು, ಈ ಕಾಫಿ ಮಾರುಕಟ್ಟೆಯಲ್ಲಿ ಧುಮುಕಿ ಲಕ್ಷ ಲಕ್ಷ ಎಣಿಸಲು ಆರಂಭಿಸಿದರು. ಮೊದಲೆಲ್ಲ ಅನುಕೂಲಸ್ಥರ ಮನೆಯಲ್ಲಿ ಕಾಣುತ್ತಿದ್ದ ಕಾರುಗಳು, ಈಗ ಎಲ್ಲಾ ಹುಡುಗರ ಕೈಯಲ್ಲಿ ಬಂದಿತ್ತು.

ಕಾಲ ಹಾಗೆಯೇ ನಿಂತಿರಲಿಲ್ಲ. ಮುಂದಿನ ವರ್ಷ ಬರುವ ಹೊತ್ತಿಗೆ ಈ ಎಲ್ಲಾ ಹುಡುಗರು ಕೈಯಲ್ಲಿ ದುಡ್ಡು ಹಿಡಿದುಕೊಂಡು ವ್ಯಾಪಾರಕ್ಕೆ ಇಳಿದಿದ್ದರು. ಹೋದ ವರ್ಷದಂತೆ ಲಕ್ಷ, ಕೋಟಿಗಳ ಬಗ್ಗೆ ಮಾತನಾಡುತ್ತಿರುವಾಗಲೇ, ಮಾರುಕಟ್ಟೆ ಕುಸಿಯಿತು. ಎಷ್ಟೋ ಜನರು, ತಾವು ಹಿಂದಿನ ವರ್ಷ ಗಳಿಸಿದ್ದನ್ನು ಕಳೆದು, ಸಾಲದ ಸುಳಿಯಲ್ಲಿ ಬಿದ್ದರು. ಈಗ ಸಾಲದ ಸುಳಿಯಿಂದ ಹೊರಬರಬೇಕಾದ ಆವಶ್ಯಕತೆ ಬಂತು.

ಈ ಮುಕ್ತ ಮಾರುಕಟ್ಟೆಯ ಹಾವು-ಏಣಿ ಆಟವು ಅರ್ಥವಾಗುವ ಹೊತ್ತಿಗೆ, ಕೆಲವರು ಕೋಟ್ಯಾಧೀಶರಾಗಿದ್ದರು ಮತ್ತೆ ಕೆಲವರು ಎಲ್ಲವನ್ನೂ ಕಳೆದುಕೊಂಡಿದ್ದರು. ಇದರಿಂದ ಮುಂದೆ ಬಂದಿದ್ದೇ ರಿಯಲ್ ಎಸ್ಟೇಟ್ ಮತ್ತು ಶುಂಠಿ ಬೆಳೆ ಎನ್ನುವ ಮಹಾ ಮಾರಿ, ಆಮೇಲೆ ಬಂದಿದ್ದು ಹೋಂ ಸ್ಟೇ, ರೆಸಾರ್ಟ್‌ಗಳು. ಒಮ್ಮೆ ದುಡ್ಡಿನ ರುಚಿ ಕಂಡಿದ್ದ ಸಮಾಜ ಹಿಂದಡಿಯಿಡಲು ಒಪ್ಪಲೇ ಇಲ್ಲ. ಹಾವು-ಏಣಿ ಆಟ ಮುಂದುವರೆಯಿತು. ಈ ಮುಕ್ತ ಮಾರುಕಟ್ಟೆ ಅರ್ಥ ವ್ಯವಸ್ಥೆ ಎನ್ನುವುದೇ ಹೀಗೆ. ಒಮ್ಮೆ ಅದರಲ್ಲಿ ನುಗ್ಗಿದ ಮೇಲೆ ಹೊರ ಬರುವ ಪ್ರಶ್ನೆಯೇ ಇಲ್ಲ.

ಈ ಮುಕ್ತ ಮಾರುಕಟ್ಟೆ ವ್ಯವಸ್ಥೆ ಬರೀ ಆರ್ಥಿಕ ಸ್ಥಿತಿಯನ್ನಷ್ಟೇ ಬದಲಿಸಲಿಲ್ಲ. ಆರ್ಥಿಕ ವ್ಯವಸ್ಥೆಗಿಂತ ಹೆಚ್ಚಾಗಿ, ಪರಿಸರ ಮತ್ತು ಸಾಮಾಜಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡಿತು ಎಂದರೆ ತಪ್ಪಾಗಲಾರದು. ಮೊದಲೆಲ್ಲ ಮಲೆನಾಡಿನಲ್ಲಿ ಕುಟುಂಬಗಳ ಬಾಂಧವ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ಇತ್ತು. ಕಾಫಿ ಪ್ಲಾಂಟರ್‌ಗಳು, ಅವರ ತೋಟದ ಕೆಲಸಕ್ಕೆ ಬರುವವರು, ಸಣ್ಣ-ಪುಟ್ಟ ವ್ಯಾಪಾರದ ಬ್ಯಾರಿಗಳು, ದೊಡ್ಡ ವ್ಯಾಪಾರ ಮತ್ತು ಬಡ್ಡಿ ವ್ಯವಹಾರದ ಶೆಟ್ಟರು ಮತ್ತು ಮಾರ್ವಾಡಿಗಳು, ಇವಿಷ್ಟೆ ಮಲೆನಾಡಿನ ಜೀವನ. ಕುಟುಂಬದ ಮಕ್ಕಳು ವಯಸ್ಸಿಗೆ ಬಂದ ನಂತರ, ಒಂದೋ ಬೆಂಗಳೂರು, ಮೈಸೂರಿನತ್ತ ಮುಖ ಮಾಡಿ ಯಾವುದಾದರೂ ಕೆಲಸಕ್ಕೆ ಸೇರುತ್ತಿದ್ದರು. ಇಲ್ಲದೇ ಹೋದರೆ, ತಣ್ಣಗೆ ತೋಟ ನೋಡಿಕೊಂಡು ಮನೆಯಲ್ಲಿ ಇರುತ್ತಿದ್ದರು. ಕುಟುಂಬದ ಮದುವೆ- ಸಾವು ಮುಂತಾದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು.

ಮುಕ್ತ ಮಾರುಕಟ್ಟೆ ವ್ಯವಸ್ಥೆ ಬಂದ ಮೇಲೆ ಕೌಟುಂಬಿಕ ಬಾಂಧವ್ಯದ ಅಡಿಪಾಯ ಕುಸಿದು ಬಿತ್ತು. ಪ್ರತಿಯೊಬ್ಬರಿಗೂ ಪ್ರತ್ಯೇಕ ಅಸ್ತಿತ್ವದ ಅವಶ್ಯಕತೆ ಕಾಣಲಾರಂಭಿಸಿತು. ಅದನ್ನು ಸಾಬೀತು ಪಡಿಸಲು ಬೇಕಾಗಿದ್ದು ಹಣ. ಅದನ್ನು ಯಾವ ರೀತಿಯಲ್ಲಿ ಬೇಕಾದರೂ ಸಂಪಾದಿಸಬಹುದು. ಓದಿದವರು ಬೆಂಗಳೂರು, ಅಮೆರಿಕಾ ಕಡೆ ಮುಖ ಮಾಡಿದರೆ, ಅಲ್ಲಿಯೇ ಉಳಿದುಕೊಂಡವರು 'ಬ್ಯುಸಿನೆಸ್' ಮಾಡಲು ಆರಂಭಿಸಿದರು. ಇವೆಲ್ಲದರ ನಡುವೆ ಮೊಬೈಲ್ ಫೋನ್ ಎಂಬ ಪುಟ್ಟ ವಸ್ತು ಎಲ್ಲರ ಜೀವನದ ಅವಿಭಾಜ್ಯ ಅಂಗವಾಗಿ, ಬೆಂಕಿಗೆ ತುಪ್ಪ ಸುರಿದಂತಾಗಿತ್ತು.

ಈ ಬೆಳವಣಿಗೆಯ ಮೊದಲ ಬಲಿಪಶುಗಳು ಎಂದರೆ, ಮಲೆನಾಡಿನಲ್ಲಿಯೇ ಹುಟ್ಟಿ, ಅಲ್ಲಿ ಜೀವನದ ಐದಾರು ದಶಕಗಳನ್ನು ಕಳೆದವರು. ವಿದ್ಯುತ್‌, ಟೆಲಿಫೋನ್, ರಸ್ತೆಗಳು ಮತ್ತು ಸಾರಿಗೆ ವ್ಯವಸ್ಥೆ ಇಲ್ಲದೆಯೂ ಸಂತೋಷವಾಗಿ ಜೀವನ ಕಳೆದ ಈ ಪೀಳಿಗೆಯವರು, ಮೂರು ದಶಕಗಳ ಬದಲಾವಣೆ ಕಂಡು ಹೈರಾಣಾಗಿ ಹೋದರು. ಮೊದ ಮೊದಲು ದುಡ್ಡು, ಕಾರುಗಳನ್ನು ನೋಡಿ ಸಂಭ್ರಮ ಪಟ್ಟರೂ ಸಹ, ತಮ್ಮ ಬದುಕಿನ ಆತ್ಮ ಎಂದು ನಂಬಿದ್ದ ಕುಟುಂಬ ವ್ಯವಸ್ಥೆ ಕುಸಿದು ಬೀಳುತ್ತಿರುವುದನ್ನು ನೋಡಿ ಆಡಲಾಗದೆ, ಅನುಭವಿಸಲಾಗದೆ ತೊಳಲಾಡಿದರು ಮತ್ತು ತೊಳಲಾಡುತ್ತಿದ್ದಾರೆ.

ಜೀವನದಲ್ಲಿ ಯಾರನ್ನೂ ನೋಯಿಸಬಾರದು. ಸಾಧ್ಯವಾದಷ್ಟೂ ಸಹಾಯ ಮಾಡಿ, ಸಮಾಜದಲ್ಲಿ ಒಳ್ಳೆಯ ವ್ಯಕ್ತಿ ಎನ್ನಿಸಿಕೊಳ್ಳಬೇಕು ಎನ್ನುವ ಹಿನ್ನೆಲೆಯಲ್ಲಿ ಬದುಕಿದ ಇವರುಗಳು, ತಮ್ಮ ಮಕ್ಕಳು ತಪ್ಪು ದಾರಿ ಹಿಡಿದಾಗ, ಬೈಯಲೂ ಸಾಧ್ಯವಾಗದೆ ಸುಮ್ಮನಿರಬೇಕಾದ ಪರಿಸ್ಥಿತಿಗೆ ಬಂದು ತಲುಪಿದ್ದಾರೆ. ಮೊದಲನೆಯದಾಗಿ, ಈಗ ಮಕ್ಕಳು ಊರಿನಲ್ಲಿ ಇರುವುದಿಲ್ಲ. ಸಣ್ಣ, ಪುಟ್ಟ ಕೆಲಸ ಹುಡುಕಿಕೊಂಡಾದರೂ, ನಗರಗಳಿಗೆ ಹೋಗುತ್ತಾರೆ. ಊರಿನಲ್ಲಿ ಇರಬೇಕಾದರೆ, ಅವರಿಗಿಷ್ಟ ಬಂದಂತೆ ಇರಬೇಕು ಅಷ್ಟೆ. ಅವರ ತಪ್ಪುಗಳ ವಿಷಯ ಮಾತನಾಡುವಂತಿಲ್ಲ. ಅವರು ಇನ್ನೊಬ್ಬರಿಗೆ ಮೋಸ ಮಾಡಿದರೂ ಸಹ ಕೇಳುವಂತಿಲ್ಲ. ಇದು ಬರೀ ಕಾಫಿ ಪ್ಲಾಂಟರ್‌ಗಳ ಸಮಸ್ಯೆ ಅಲ್ಲ. ಅವರ ತೋಟದ ಕೆಲಸಕ್ಕೆ ಬರುವವರ ಮನೆಗಳಲ್ಲೂ ಸಹ ಇದೇ ಸಮಸ್ಯೆ. ಏಕೆಂದರೆ, ಇಲ್ಲಿ ಬರೀ ದುಡ್ಡು ಮಾತನಾಡುತ್ತದೆ ಮತ್ತು ದುಡ್ಡು ಕೈಗೆ ಕೊಡದಿದ್ದರೆ, ವಯಸ್ಸಿಗೆ ಬಂದ ಹುಡುಗರು ಮನೆಯಲ್ಲಿ ಇರಲು ಒಪ್ಪುವುದಿಲ್ಲ.

ಹಾಗಾದರೆ, ಕೊಡಗು, ಚಿಕ್ಕಮಗಳೂರು ಮತ್ತು ಸಕಲೇಶಪುರದ ಸಂಸ್ಕೃತಿ ಸಂಪೂರ್ಣವಾಗಿ ನಶಿಸಿ ಹೋಗಿದೆಯೇ? ಹಾಗೆ ಹೇಳಲು ಬರುವುದಿಲ್ಲ. ಕಳೆದ ಕೆಲವು ದಶಕಗಳ ಹಿಂದೆ, ಈ ಪ್ರಾಂತ್ಯದಲ್ಲಿ ಓದುವ ಸಂಸ್ಕೃತಿಯೇ ಇರಲಿಲ್ಲ. ಮಲೆನಾಡಿನ ಈ ಭಾಗ ಕಂಡ ಏಕೈಕ ಬರಹಗಾರರೆಂದರೆ, ಪೂರ್ಣಚಂದ್ರ ತೇಜಸ್ವಿಯವರು. ಅವರ ಪುಸ್ತಕಗಳನ್ನೇ ಎಷ್ಟೋ ಜನ ಓದಿರಲಿಲ್ಲ! ಈಗ ನೋಡಿದರೆ, ಮೂಡಿಗೆರೆಯಲ್ಲಿ ಯುವ ಬರಹಗಾರ ಒಂದು ಗುಂಪೇ ಇದೆ. ತೇಜಸ್ವಿಯವರನ್ನು ಬಹಳಷ್ಟು ಹಚ್ಚಿಕೊಂಡು, ತಮ್ಮ ಪಾಡಿಗೆ ಬರವಣಿಗೆ, ತೇಜಸ್ವಿಯವರಂತೆ ಪರಿಸರವನ್ನು ಅಭ್ಯಸಿಸುತ್ತಾ, ಯಾವುದೇ ಪ್ರಚಾರಕ್ಕೆ ತಲೆ ಕೆಡಿಸಿಕೊಳ್ಳದೆ, ತಮ್ಮ ಪಾಡಿಗೆ ಬದುಕುವ ಯುವಕರ ದೊಡ್ಡ ಗುಂಪೇ ಇದೆ. ಕೊಡಗಿನಲ್ಲೂ ಅಷ್ಟೆ. ಬಹಳಷ್ಟು ಜನ ಬರಹಗಾರರು ಬರುತ್ತಿದ್ದಾರೆ. ಇವರುಗಳಲ್ಲಿ ಹೆಚ್ಚಿನವರನ್ನು ನಾನು ನೋಡಿಲ್ಲ. ಆದರೆ, ಅವರ ಹೆಸರುಗಳು ಗೊತ್ತಿದೆ ಮತ್ತು ಅವರ ಬರವಣಿಗೆ ಮತ್ತು ಕೆಲಸಗಳ ಬಗ್ಗೆ ಅರಿವಿದೆ.

ನಾಲೈದು ವರ್ಷಗಳ ಹಿಂದೆ ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಭೂಕುಸಿತ ಉಂಟಾದಾಗ, ಇವರಲ್ಲಿ ಹೆಚ್ಚಿನವರು ಸ್ವಯಂ ಪ್ರೇರಣೆಯಿಂದ ಕಷ್ಟಕ್ಕೀಡಾದ ಜನಗಳ ಸಹಾಯಕ್ಕೆ ನುಗ್ಗಿದ್ದರು. ಇವರ ಬಳಿ ಬಹಳಷ್ಟು ಹಣ ಇದೆ ಎಂದಲ್ಲ. ಆದರೆ, ಸಹಾಯ ಮಾಡುವ ಕಳಕಳಿ ಇದೆ. ತಮ್ಮ ಕೆಲಸಗಳನ್ನೆಲ್ಲ ಬದಿಗಿಟ್ಟು, ನಿರಾಶ್ರಿತ ಕೇಂದ್ರಗಳನ್ನು ಸ್ಥಾಪಿಸಿ, ಸಂತ್ರಸ್ತರು ಎಲ್ಲೇ ಇದ್ದರೂ ಅವರ ಸಹಾಯಕ್ಕೆ ನುಗ್ಗಿದ್ದಾರೆ. ಇವರುಗಳಿಗೆ ದೊಡ್ಡ ಮಟ್ಟದಲ್ಲಿ ಪ್ರಚಾರ ಸಿಕ್ಕಿಲ್ಲ. ಇವರನ್ನು ನೋಡಿದಾಗ, ಆ ಜೀವನ ಇನ್ನೂ ಜೀವಂತವಾಗಿದೆ ಮತ್ತು ಮುಂದೆಯೂ ಇರುತ್ತದೆ ಎನ್ನುವ ನಿರಾಳತೆ ಮೂಡುತ್ತದೆ.

ಇವೆಲ್ಲ ನನಗೆ ನೆನಪಿಗೆ ಬಂದಿದ್ದು, ಕುಶಾಲನಗರದಲ್ಲಿ ನೆಲೆಸಿರುವ ನೌಶಾದ್ ಜನ್ನತ್, ತನ್ನ ಪುಸ್ತಕವಾದ 'ಫಾರೆಸ್ಟರ್ ಪೊನ್ನಪ್ಪ' ಪುಸ್ತಕಕ್ಕೆ ಮುನ್ನುಡಿ ಬರೆಯಲು ಕೇಳಿದಾಗ. ಇಲ್ಲಿಯವರೆಗೆ ನಾನು ಯಾವುದೇ ಪುಸ್ತಕಗಳಿಗೆ ಮುನ್ನುಡಿ ಬರೆದಿಲ್ಲವಾದರೂ, ನೌಶಾದ್‌ಗೆ‌ ಇಲ್ಲ ಎಂದು ಹೇಳಲಾಗಲಿಲ್ಲ. ನೌಶಾದ್ ಜನ್ನತ್ ಮೊದಲು ಪರಿಚಯವಾಗಿದ್ದು ಭಾರದ್ವಾಜ ಆನಂದತೀರ್ಥ ಅವರ ಮೂಲಕ. ಕೊಡಗಿನ ಭೂಕುಸಿತದ ಸಮಯದ ವಿವರಗಳನ್ನೊಳಗೊಂಡ ಅವರ ಪುಸ್ತಕ 'ಜಲಪ್ರಳಯ'ವನ್ನು ಆನಂದತೀರ್ಥರು ಬಿಡುಗಡೆ ಮಾಡಿದ್ದರು. ಆ ಪುಸ್ತಕವನ್ನು ಓದಿದ ಮೇಲೆ ನೌಶಾದ್ ಒಳಗಿನ ವಿಶೇಷ ವ್ಯಕ್ತಿತ್ವದ ಪರಿಚಯವಾಗಿತ್ತು.

ಫಾರೆಸ್ಟರ್ ಪೊನ್ನಪ್ಪ ಸಹ ಮಲೆನಾಡಿನಲ್ಲಿ ಬದಲಾದ ಮತ್ತು ಸಾಮಾಜಿಕ ವ್ಯವಸ್ಥೆಯ ಸುತ್ತಲೂ ಹೆಣೆದಿರುವ ಆರ್ಥಿಕ ಕಾದಂಬರಿ. ಇಲ್ಲೊಂದು ಜೀವನವಿದೆ, ಬದಲಾವಣೆ ಇದೆ ಮತ್ತು ಆ ಬದಲಾವಣೆಯನ್ನು ಜೀರ್ಣಿಸಿಕೊಳ್ಳಲು ಆಗದ ಆರ್ದ್ರತೆ ಇದೆ. ಸೈನ್ಯ ಪೋಲಿಸ್ ಮತ್ತು ಅರಣ್ಯ ಇಲಾಖೆ ಸೇರುತ್ತಿದ್ದ ಕೊಡವರಲ್ಲಿ, ಗೌರವಕ್ಕಾಗಿ ಬದುಕುವ ಪರಿಪಾಠವಿತ್ತು. ನಮ್ಮ ಪೀಳಿಗೆ, 'ಅಂಥ ಒಳ್ಳೆಯ ಮನುಷ್ಯನಿಗೆ ಎಂತಹಾ ಮಗ ಹುಟ್ಟಿದ?' ಎಂದು ಸಮಾಜ ಮಾತನಾಡುವುದು ಸಾಮಾನ್ಯವಾಗುತ್ತಿದ್ದ ಕಾಲ. ಏಕೆಂದರೆ, ಅದು ಬದಲಾವಣೆಯ ಕಾಲವೂ ಹೌದು. ಅಂತಹ ಸಂದರ್ಭಗಳಲ್ಲಿ, ಜೀವನದುದ್ದಕ್ಕೂ ಗೌರವಯುತವಾಗಿ, ಎದೆ ಎತ್ತಿ ಬದುಕಿದ ವ್ಯಕ್ತಿಗಳು, ತಮ್ಮ ಆರಡಿಯ ದೇಹವನ್ನು ಹಿಡಿಯಷ್ಟಕ್ಕೆ ಕುಗ್ಗಿಸಿ ಓಡಾಡುವುದನ್ನೂ ನೋಡಿದ್ದೇವೆ.

ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ನೌಶಾದ್ ಬಹಳ ಅಚ್ಚುಕಟ್ಟಾಗಿ ನಿರೂಪಿಸಿದ್ದಾರೆ. ಇಲ್ಲಿ ಒಬ್ಬ ದಕ್ಷ ಅರಣ್ಯಾಧಿಕಾರಿಯ ಕಥೆಯಿದೆ. ಅಪ್ಪನಷ್ಟೇ ಯೋಗ್ಯನಾಗಿ, ಸೈನ್ಯಕ್ಕೆ ಸೇರಿದ ಮಗನ ಕಥೆಯಿದೆ. ಹಾಗೆಯೇ, ಒಂದೇ ತಪ್ಪಿನಿಂದ ದಾರಿ ತಪ್ಪಿ, ಹಣದ ಹಿಂದೆ ಹೋದ ಇನ್ನೊಬ್ಬ ಮಗನಿದ್ದಾನೆ. ಬದಲಾದ ಪರಿಸ್ಥಿತಿಯಲ್ಲಿನ ಜೀವನದ ಚಿತ್ರಣವಿದೆ. ಮಲೆನಾಡಿನ ವಾಸ್ತವತೆಯನ್ನು ಮತ್ತು ಅಂತರಾತ್ಮವನ್ನು ನೌಶಾದ್ ಈ ಕಾದಂಬರಿಯಲ್ಲಿ ಸುಂದರವಾಗಿ ಚಿತ್ರಿಸಿದ್ದಾರೆ ಎಂದು ಮಾತ್ರ ಹೇಳಬಲ್ಲೆ.”

‘ಫಾರೆಸ್ಟರ್ ಪೊನ್ನಪ್ಪ” ಕೃತಿಯ ಕುರಿತಾಗಿ ಲೇಖಕ ನೌಶಾದ್‌ ಜನ್ನತ್ತ್‌ ಅವರು ಬರೆದ ಮಾತುಗಳು ಹೀಗಿವೆ -

“ಅನಿರೀಕ್ಷಿತವಾಗಿ ಕೆಲವೊಂದು ಪಾತ್ರಗಳು ನಮ್ಮ ಎದುರಿಗೆ ಧುತ್ತನೆ ಬಂದು ನಿಂತುಬಿಡುತ್ತವೆ. ಮರು ಯೋಚನೆ ಮಾಡದೇ ಆ ಕ್ಷಣಕ್ಕೆ ಅವುಗಳನ್ನು ಅಕ್ಷರಕ್ಕಿಳಿಸುವ ಪ್ರಯತ್ನವನ್ನು ಮಾಡಿಬಿಡಬೇಕು. ಇಲ್ಲವಾದರೆ ಅವುಗಳು ನಮ್ಮೊಳಗೆಯೇ ಕಮರಿ ಹೋಗುವ ಸಾಧ್ಯತೆಯೇ ಹೆಚ್ಚು. ಈ ʻಫಾರೆಸ್ಟರ್ ಪೊನ್ನಪ್ಪʼ ಕೂಡ ಹೀಗೆಯೇ ಒಂದು ತಡರಾತ್ರಿ ಹೊಳೆದದ್ದು! ಮರುಕ್ಷಣವೆ ಬರೆಯಲು ಶುರುಹಚ್ಚಿಕೊಂಡೆ. ಆದರೆ ಅದು ಕೃತಿಯಾಗಲು ತೆಗೆದುಕೊಂಡದ್ದು ಬರೋಬ್ಬರಿ ಒಂದೂವರೆ ವರ್ಷಗಳು!

ಕಾಡು ಮತ್ತು ಅದನ್ನು ಕಾಯುವವರೆಂದರೆ, ನನಗೆ ಮೊದಲಿನಿಂದಲೂ ಒಂದು ರೀತಿಯ ಕುತೂಹಲ. ಅವರಿಬ್ಬರೂ ಅಷ್ಟೇ ನಿಗೂಢ ಕೂಡ! ಯಾರನ್ನು ತೆಳುವಾಗಿ ಪರಿಗಣಿಸಲು ಸಾಧ್ಯವೇ ಇಲ್ಲ. ಕಾಡು ಮತ್ತು ಕಾಡು ಕಾಯುವವರನ್ನು ಹತ್ತಿರದಿಂದ ಒಡನಾಡಿದ್ದರಿಂದಲೊ ಏನೋ ಫಾರೆಸ್ಟರ್ ಪೊನ್ನಪ್ಪನಂತ ಒಂದು ಕಥೆ ಕಟ್ಟಲು ನನ್ನಿಂದ ಸಾಧ್ಯವಾಗಿದ್ದು. ಹಣದಾಸೆಗಾಗಿ ಅರಣ್ಯವನ್ನು ಲೂಟಿ ಮಾಡಲು ತೆರೆಮರೆಯಲ್ಲಿ ಕುಮ್ಮಕ್ಕು ನೀಡುವ ಅರಣ್ಯಾಧಿಕಾರಿಗಳನ್ನು ನಾನು ನೋಡಿದ್ದೇನೆ, ಅದೇ ರೀತಿ ಅರಣ್ಯ ಸಂಪತ್ತನ್ನು ಉಳಿಸುವ ಸಲುವಾಗಿ ತನ್ನ ಪ್ರಾಣ ತೆರಲು ಸಿದ್ಧವಾಗುವ ಸಿಬ್ಬಂದಿಗಳನ್ನು ನಾನು ಕಂಡಿದ್ದೇನೆ. ಮಿಗಿಲಾಗಿ, ಖಾಕಿಯೊಳಗಿನ ನೋವು, ಹತಾಶೆ, ಲಂಪಟತನ, ಕ್ರೌರ್ಯ, ಸಂಕಟ, ದುರಾಸೆ, ಕುಟುಂಬ ಎಲ್ಲದಕ್ಕು ನಾನು ಕಿವಿಯಾಗಿದ್ದೇನೆ. ಸಾಲದ್ದಕ್ಕೆ, ಯೌವ್ವನಾವಸ್ಥೆಯಲ್ಲಿ ಮಾಡುವ ಸಣ್ಣಪುಟ್ಟ ಎಡವಟ್ಟುಗಳಿಂದಾಗಿ ತಮ್ಮ ಬದುಕನ್ನೆ ಬಲಿಕೊಟ್ಟ ಅದೆಷ್ಟೊ ಯುವಕರನ್ನು ಸಹ ನಾನು ಬಲ್ಲೆ. ಅದನ್ನೆಲ್ಲಾ ಈ ಮೂಲಕ ಹೇಳುವ ಪ್ರಯತ್ನವನ್ನು ಮಾಡಿದ್ದೇನಷ್ಟೆ.

`ಅರಣ್ಯವನ್ನು ಉಳಿಸುತ್ತೇನೆ' ಎಂದು ಪ್ರಮಾಣವಚನ ಸ್ವೀಕರಿಸಿ, ಖಾಕಿ ಬಟ್ಟೆ ತೊಟ್ಟು ಬಂದವರೆಲ್ಲ ಈ ಮೊದಲು ನಾಗರಹೊಳೆಯಲ್ಲಿ ರೇಂಜರ್ ಆಗಿದ್ದ ಕೆ.ಎಂ. ಚಿಣ್ಣಪ್ಪನವರಂತೆ ಬದುಕಲು ಸಾಧ್ಯವಿಲ್ಲ ಎನ್ನುವುದು ನಾ ಕಂಡುಕೊಂಡ ಸತ್ಯ. ಈ ಚಿಣ್ಣಪ್ಪನವರು ನನ್ನನ್ನು ಬಹುವಾಗಿ ಕಾಡಿದ ವ್ಯಕ್ತಿ! ನಾ ಕಂಡಂತೆ (ಕೇಳಿದಂತೆ, ಓದಿದಂತೆ) ಒಬ್ಬ ಅರಣ್ಯಾಧಿಕಾರಿಯಾಗಿ ಇಷ್ಟೊಂದು ನಿಷ್ಠುರ ಮತ್ತು ಪ್ರಾಮಾಣಿಕವಾಗಿ ಬದುಕಲು ಸಾಧ್ಯ ಎನ್ನುವುದೇ ಒಂದು ಅಚ್ಚರಿ! ಆದ್ದರಿಂದಲೇ ನಾನು ಬರೆದ ʻಫಾರೆಸ್ಟರ್ ಪೊನ್ನಪ್ಪʼ ಎಂಬ ಅರಣ್ಯಾಧಿಕಾರಿ ಮತ್ತವರ ಕುಟುಂಬದ ಜೀವನಗಾಥೆಯನ್ನು ಚಿಣ್ಣಪ್ಪನವರಿಗೆ ಅರ್ಪಿಸಬೇಕೆಂದು ನಿಶ್ಚಯಿಸಿದ್ದು.”೨೫೬ ಪುಟಗಳ ಈ ಕಾದಂಬರಿಯು ಸೊಗಸಾದ ಓದಿಗೆ ಬಹಳ ಅನುಕೂಲವಾಗಿದೆ.