ಫಾಸಿಗೆ ಸಾಕ್ಷಿ

ಫಾಸಿಗೆ ಸಾಕ್ಷಿ

ಪುಸ್ತಕದ ಲೇಖಕ/ಕವಿಯ ಹೆಸರು
ಮಾಲತಿ ಮುದಕವಿ
ಪ್ರಕಾಶಕರು
ಶ್ರೀ ಚೂಡ ಪ್ರಕಾಶನ, ಉತ್ತರಾಧಿಮಠ ರಸ್ತೆ, ಮೈಸೂರು-೫೭೦೦೦೪
ಪುಸ್ತಕದ ಬೆಲೆ
ರೂ.೩೨೦.೦೦, ಮುದ್ರಣ: ೨೦೨೨

‘ಫಾಸಿಗೆ ಸಾಕ್ಷಿ' ಎಂಬ ಕಾದಂಬರಿಯನ್ನು ಬರೆದವರು ಮಾಲತಿ ಮುದಕವಿ ಇವರು. ಮಾಲತಿಯವರು ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿ ಈಗ ನಿವೃತ್ತರಾಗಿದ್ದಾರೆ. ಕನ್ನಡದ ಹಲವಾರು ಪತ್ರಿಕೆಗಳಲ್ಲಿ ಇವರ ಬರಹಗಳು ಬೆಳಕು ಕಂಡಿವೆ. ಹಲವಾರು ಬಹುಮಾನ, ಪುರಸ್ಕಾರಗಳೂ ಲಭಿಸಿವೆ. 

ಮಾಲತಿ ಮುದಕವಿ ಅವರ ಕಾದಂಬರಿ ‘ಫಾಸಿಗೆ ಸಾಕ್ಷಿ’ಯಲ್ಲಿ ಓರ್ವ ವ್ಯಕ್ತಿ ಜೀವನದಲ್ಲಿ ಒಮ್ಮೊಮ್ಮೆ ಅತ್ಯಂತ ವಿಚಿತ್ರ ಸನ್ನಿವೇಶಗಳನ್ನು ಎದುರಿಸಬೇಕಾಗುತ್ತದೆ. ಒಮ್ಮೆ ಒಬ್ಬ ಮರಣದಂಡನೆ ಕೊಡುವ ವ್ಯಕ್ತಿಯನ್ನು ಭೆಟ್ಟಿಯಾಗುವ ಯೋಗವು ನನಗೆ ಒದಗಿಬಂದಿತ್ತು. ಅನೇಕ ಕೈದಿಗಳಿಗೆ ಗಲ್ಲಿಗೇರಿಸುವ ವಧೆಕಾರನ ಒಂದು ಸತ್ಯಕಥೆಯನ್ನು ಅವನ ಬಾಯಿಯಿಂದಲೇ ಕೇಳಿದಾಗ ನಾನು ನಿಜಕ್ಕೂ ಅತ್ಯಂತ ನೊಂದೆ. ಮಾನವ ಹತ್ಯೆಯಂಥ ನಿರ್ದಯ ಕಾರ್ಯವನ್ನು ಮಾಡುವಂಥ ತಪ್ಪಿತಸ್ಥರಿಗೆ ನ್ಯಾಯಾಲಯವು ಈ ಗಲ್ಲು ಶಿಕ್ಷೆಯನ್ನು ವಿಧಿಸಿದ ನಂತರ ಆ ಶಿಕ್ಷೆಯನ್ನು ಜಾರಿಗೊಳಿಸುವವನು ಅನುಭವಿಸುವಂಥ ಮಾನಸಿಕ ಯಾತನೆಯ ಬಗ್ಗೆ ಹಾಗೂ ಮಾನವ ಹತ್ಯೆಯು ಎಲ್ಲ ಪಾಪಗಳಲ್ಲೂ ಅತ್ಯಂತ ಹೇಯವಾದದ್ದು ಎಂದು ತಿಳಿಯಲಾಗುತ್ತಿದ್ದು ಆ ಮರಣದಂಡನೆಯನ್ನು ಜಾರಿಗೊಳಿಸುವವನು ಈ ಕಾರ್ಯವನ್ನು ಮಾಡುವಾಗ ತಾನೂ ಅತ್ಯಂತ ದೊಡ್ಡ ಪಾಪವನ್ನೇ ಮಾಡುತ್ತಿರುವೆನೆಂಬ ಅಪರಾಧಿ ಮನೋಭಾವದಿಂದ ಕುದಿಯುತ್ತಿರಬಹುದಲ್ಲವೇ? ಪಾಪ ಪುಣ್ಯಗಳ ಪರಿಕಲ್ಪನೆಯನ್ನು ಪಕ್ಕಕ್ಕಿರಿಸಿದರೂ ಯಾವುದೇ ವೈಯಕ್ತಿಕ ದ್ವೇಷವೇ ಇರದಂಥ ವ್ಯಕ್ತಿಯನ್ನು ಕೊಂದುಹಾಕುವ ಕಾರ್ಯವು ಅವನಿಗೆ ಎಂಥ ಮನೋತುಮುಲವನ್ನು ಉಂಟುಮಾಡಿರಬಹುದು! ನನಗೆ ಭೆಟ್ಟಿಯಾದ ಆ ಮರಣದಂಡನೆಕಾರನು ತನ್ನ ಸೇವೆಯ ಸಮಯದಲ್ಲಿ ತನಗೆ ಉಂಟಾದ ಮನೋವೇಧಕ ಅನುಭವವನ್ನು ಹೇಳಿದ್ದನು. ಆ ಸಾಮಾನ್ಯ ಮನುಷ್ಯನ ಅಸಾಮಾನ್ಯ ಜೀವನವನ್ನು ಎಲ್ಲರಿಗೂ ಹೇಳುವ ಸಂಕಲ್ಪದಿಂದ ಈ ಮರಣದಂಡನೆ ಕೊಡುವವನ ಜೀವನದ ಬಗ್ಗೆ ಒಂದು ಕಾದಂಬರಿಯನ್ನೇ ಬರೆಯಬೇಕೆಂದು ಮನಸ್ಸು ಮಾಡಿದೆ. ಅವನು ಹೇಳಿದ ಅನುಭವಗಳಷ್ಟೇ ಸಾಲದೆನ್ನಿಸಿದಾಗ ಈ ವಿಷಯವನ್ನು ಚೆನ್ನಾಗಿ ತಿಳಿದುಕೊಳ್ಳುವುದಕ್ಕಾಗಿ ಅದಕ್ಕೆ ಸಂಬಂಧಿತವಾದ ಇತರ ವಿಷಯಗಳ ಬಗ್ಗೆಯೂ ನಾನು ವಿಚಾರ ಮಾಡಬೇಕಾಗಿದ್ದುದು ಅವಶ್ಯಕವೆನ್ನಿಸಿತು. ಮಗ, ಗಂಡ, ತಂದೆ ಹಾಗೂ ಇತರ ಸಂಬಂಧಗಳ ಜವಾಬ್ದಾರಿಯನ್ನು ನಿಭಾಯಿಸುವುದಕ್ಕಾಗಿ ಜೈಲಿನಲ್ಲಿ ಹ್ಯಾಂಗ್‌ಮನ್ನನ ಪಾತ್ರವನ್ನು ವಹಿಸುವ ಆ ಗಲ್ಲಿಗೇರಿಸುವವನು ಅನುಭವಿಸುವ ಮಾನಸಿಕ ಸಂಘರ್ಷಗಳು, ಇದು ಅವನ ಜೀವನದ ಒಂದು ಭಾಗವಾದರೆ, ಇನ್ನೊಂದೆಡೆ ಅವನ ಬಂಧುಗಳು ಅವನಿಂದ ತಮ್ಮ ಮನಸ್ಸಿನ ಇಚ್ಛೆಗಳು ಪೂರ್ಣಗೊಳ್ಳದಾಗ ಅನುಭವಿಸುವ ಹತಾಶೆಯು ಇನ್ನೊಂದು ಭಾಗ. ಅವನ ಜೀವನದ ಈ ಇನ್ನೊಂದು ಮುಖವನ್ನೂ ನಾವು ಗಮನಿಸಲೇಬೇಕಾಗುತ್ತದೆ. ಅದರೊಂದಿಗೇ ಅವನ ಜೈಲಿನ ಕರ್ತವ್ಯಗಳು, ಅನೇಕ ರೀತಿಯ ಕೈದಿಗಳನ್ನು ಎದುರಿಸುವ ಅನಿವಾರ್ಯತೆ, ಕೈದಿಗಳ ಬರಾಕುಗಳು, ಜೇಲರು, ಜೈಲಿನ ವಾತಾವರಣ, ಅಲ್ಲಿಯ ನಿಯಮಗಳು, ಫಾಶಿ ಶಿಕ್ಷೆ ವಿಧಿಸುವುದಕ್ಕೂ ಮೊದಲಿನ ಪೂರ್ವಸಿದ್ಧತೆ, ಅದಕ್ಕೆ ಸಹಕರಿಸುವ ಅಧಿಕಾರಿಗಳು, ಜೈಲಿನಲ್ಲಿ ನಡೆಯುವಂಥ ಸಂಗತಿಗಳು ಹೀಗೆ ಅನೇಕ ಘಟನೆಗಳ ಬಗ್ಗೆ ಈ ಕಾದಂಬರಿಯು ಎರಡು ಸ್ತರಗಳಲ್ಲಿ ಮುನ್ನಡೆಯುತ್ತದೆ.