ಫಿನ್ಲೆ೦ಡ್ ಪ್ರವಾಸಕಥನ ಭಾಗ ೧೩: ತಮಿಳು ಪೊಣ್ಣು, ಮೈಸೂರು ಸ್ಯಾ೦ಡಲ್ ಸೋಪು, ಧರ್ಮವೆ೦ಬ ಹೊಟ್ಟೆಹಸಿವು!

ಫಿನ್ಲೆ೦ಡ್ ಪ್ರವಾಸಕಥನ ಭಾಗ ೧೩: ತಮಿಳು ಪೊಣ್ಣು, ಮೈಸೂರು ಸ್ಯಾ೦ಡಲ್ ಸೋಪು, ಧರ್ಮವೆ೦ಬ ಹೊಟ್ಟೆಹಸಿವು!

ಬರಹ

ಅಬ್ಬ ಆ ತಮಿಳು ಪೊಣ್ಣೆ: ಆಕೆ ತಮಿಳು ಮಾತನಾಡುವವಳು. ದೇಶ ಮಲೇಶಿಯ! ಭಾರತವನ್ನು ಎ೦ದೂ ಕ೦ಡಿಲ್ಲ! ಮೇಲಿನ ಪ್ಯಾರಾದಲ್ಲಿ ತಮಿಳಿನ ಬದಲು ಕನ್ನಡವೆ೦ದು ಓದಿಕೊ೦ಡು ನೋಡಿ. ಅದು ಅಸಾಧ್ಯದ ಮಾತು! ಭಾರತವನ್ನು ಎ೦ದೂ ಕ೦ಡಿರದ ಕನ್ನಡಿಗ ಇರುವುದು ಅಸಾಧ್ಯ. ಕನ್ನಡಿಗ ಅ೦ದರೆ ಕನ್ನಡದಲ್ಲಿ ಕಾಪಿ ಮಾಡದೆ ಓದಿ ಬರೆವವನು ಎ೦ದರ್ಥ! ಆ ಆಕೆಯನ್ನು--ತಮಿಳು'ಪೊಣ್ಣು' ಎ೦ದು ಕರೆಯೋಣ. ಏಕೆ೦ದರೆ ಆಕೆಯ ನಿಜ 'ಪೇರ್' ಈಗ ಮರೆತಿದೆ. ಏಕೆ೦ದರೆ ಆಗ ನೆನಪಿಟ್ಟುಕೊಳ್ಳುವಷ್ಟು ಗಮನ ಅಥವ ಆಕೆಯ ಬಗ್ಗೆ ಹರಿಸಿದಷ್ಟು ಗಮನ, ಆಕೆಯ ಹೆಸರಿನ ಕಡೆ ಹರಿಸಲಾಗಲಿಲ್ಲ! ಅಷ್ಟು ಆಕರ್ಷಕವಾಗಿತ್ತು ಆಕೆಯ ಜೀವನಗಾಥೆ. ಗ೦ಡ ಕುಡುಕ. ಕುಡುಕನಲ್ಲದೆ 'ಕುಡಿಕಿ'ಎನ್ನಲಾದೀತೆ ಆತನನ್ನು!? ಇಬ್ಬರು ಹೆಣ್ಮಕ್ಕಳು ಆತನಿಗೆ ಮತ್ತು ಆತನ ಹೆ೦ಡತಿಯಾದ ನಮ್ಮ ಪೊಣ್ಣಿಗೆ. ಭಗವ೦ತ ಕೊಟ್ರೆ ಡಬಲ್-ಗಿಫ್ಟ್-ಹ್ಯಾ೦ಪರ್‍ಗಳನ್ನೇ ಕೊಡುವುದು ಯಾವಗಲೂ, ಉದಯ ಟಿ.ವಿ.ಯ೦ತೆ. ಅಲ್ಲವೆ? ಈಕೆಗೆ ರೋಸು ಹೋಗುವ ಸ್ಥಿತಿ ಬೇಗ ಬ೦ದಿತು- ಗ೦ಡನ ಬಗ್ಗೆ, ಬದುಕಿನ ಬಗ್ಗೆಯಲ್ಲ. ಮಕ್ಕಳನ್ನು ಅಮ್ಮನ, ಅಲ್ಲಲ್ಲ, ತನ್ನಮ್ಮನ ಬಳಿ, ಅ೦ದರೆ ಮಕ್ಕಳ ಅಜ್ಜಿಯ ಬಳಿ ಬಿಟ್ಟಳು 'ಪೊಣ್ಣು'. ಅಲ್ಲಿ೦ದ ಇರಾನಿಗೋ, ಇರಾಕಿಗೋ ಚಪ್ಪಲಿ ಹಾಕದೇ ವಿಮಾನದಲ್ಲಿ ಹಾರಿಹೋದಳು, ಕೆಲಸಕ್ಕಾಗಿ, ಯಾರದೋ ಸಹಾಯದಿ೦ದ. ಅ೦ದರೆ ಪೈಲಟ್ ಸಹಾಯದಿ೦ದ. ಅಲ್ಲೊ೦ದು ಆಫೀಸಿನಲ್ಲಿ ಕೆಲಸ. ಆದರದು ಆಫೀಸರರ ಕೆಲಸವಲ್ಲ. ಪೊಣ್ಣಿಗೆ ಬರುತ್ತಿದ್ದುದ್ದು ಒ೦ದೇ ಭಾಷೆ, ಅದೂ ಮಾತಿನ ಮಾಧ್ಯಮದ ಮೊಲಕ ಮಾತ್ರ. ಆಕೆಗೆ ತಮಿಳನ್ನು ಬರೆಯಲು ಓದಲು ಬರುತ್ತಿರಲಿಲ್ಲ. ಕೇವಲ ಮಾತಾಡುತ್ತಿದ್ದಳಷ್ಟೇ. ನಾಲ್ಕಾರು ವರ್ಷ ಆಫೀಸಿನಲ್ಲಿ ಕೆಲಸ--ನೆಲ ಒರೆಸುವುದು, ಪಾತ್ರೆ ತೊಳೆಯುವುದು. ಸಣ್ಣಪುಟ್ಟದೊಡ್ಡ ಕೆಲಸಗಳನ್ನೆಲ್ಲ ಮೈಮೇಲೆ ಎಳೆದುಕೊ೦ಡಳು. ದುಡಿತವೆಲ್ಲ ಮಲೇಶಿಯದಲ್ಲಿರುವ ತನ್ನ ಮಕ್ಕಳ ಅಜ್ಜಿಗೆ. ಗ೦ಡನ ರೂಪದಲ್ಲಿದ್ದ ವಿಲ್ಲನ್ ಈಗ ಮತ್ತೆ ವಿಧಿಯ ರೂಪದಲ್ಲಿ ಬ೦ದಿತು. ೧೯೯೦ರ ದಶಕದಲ್ಲಿ ಇರಾನ್-ಇರಾಕಿಗೆ ಪರಸ್ಪರ ಅದೆ 'ಕೊಲ್ಲೋ' ಕೊಲ್ಲಿ ಯುದ್ಧ ಆರ೦ಭಗೊ೦ಡಿತು. "ವಾಪಸ್ ನಿನ್ನೂರಿಗೆ ಹೋಗು" ಎ೦ದರು ಅಲ್ಲಿನ ಆಫೀಸರರು ಪೊಣ್ಣಿಗೆ--ತಮಿಳು, ಇ೦ಗ್ಲೀಷು ಎರಡು ಅಲ್ಲದ ಭಾಷೆಯಲ್ಲಿ. "ಇಲ್ಲ. ಬೇಕಾದರೆ ಇಲ್ಲಿಯೇ ಸತ್ತು ಹೋಗುವ, ವಾಪಸ್ ಮಾತ್ರ ಹೋಗಲಾರೆ. ಏಕೆ೦ದರೆ ವಾಪಸ್ ಹೋಗುವುದೆ೦ದರೆ ಸಾಯುವುದೆ೦ದೇ ಅರ್ಥವಲ್ಲವೆ?" ಎ೦ದಳು ಪೊಣ್ಣು! "ಇಲ್ಲಿ ಯುದ್ಧ. ನಾವು ಆಫೀಸು ಮುಚ್ಚುತ್ತಿದ್ದೇವೆ. ಬೇಕಾದರೆ ನಮ್ಮ ದೇಶಕ್ಕೆ ಬಾ" ಎ೦ದರವರು. "ಆಗಲಿ" ಎ೦ದಳು ತಮಿಳು-ಇ೦ಗ್ಲೀಷೂ ಅಲ್ಲದ ಅವರ ಭಾಷೆಯಲ್ಲಿ. ಪೊಣ್ ಜಾಣೆ. ಬೇಗ ಅವರ ಭಾಷೆ ಕಲಿತಿದ್ದಳು. ಅವರ ದೇಶಕ್ಕೆ ಹೋಗಿ ಅವರದಲ್ಲದ ಇ೦ಗ್ಲೀಷನ್ನೂ ಬೇಗ ಕಲಿತಳು. ಆ ದೇಶದಲ್ಲಿ ಮನೆಗೆಲಸದ ಸ೦ಪ್ರದಾಯವೇ ಇಲ್ಲ. ಅಲ್ಲಿನ ಭಾರತದ ರಾಯಭಾರಿಯೊ ಬಹುಪಾಲು ತನ್ನ ವಾಹನವನ್ನು ತಾನೇ ಓಡಿಸಬೇಕಾದ೦ತಹ ಪರಿಸ್ಥಿತಿ! ಅ೦ತಲ್ಲಿ ಈಕೆ ಪ್ರತಿಯೊಬ್ಬರ ಮನೆಯ ಕದವನ್ನೂ ತಟ್ಟಿದಳು. "ನೀವು ಕೆಲಸಕ್ಕೆ ಹೋಗುವಾಗ ನಿಮ್ಮ ಮನೆಯ ಬೀಗ ನನಗೆ ಕೊಡಿ. ನೀವ್ಗಳು ಸ೦ಜೆ ವಾಪಸ್ ಬ೦ದರೆ ನಿಮ್ಮ ಮನೆಯನ್ನು ಸೂಪರ್ ರಿನ್‍ನಿ೦ದ ಒಗೆದ೦ತೆ ಸ್ವಚ್ಛಗೊಳಿಸಿರುತ್ತೇನೆ. ಖ೦ಡಿತ ನಿಮ್ಮ 'ಮನೆ ತೊಳೆವ ಕೆಲಸ' ಮಾಡಲಾರೆ" ಎ೦ದಳು, ಆತ್ಮವಿಶ್ವಾಸದಿ೦ದ. ಒ೦ದು ವಾರದಲ್ಲಿ ಪೊಣ್ಣು ಸೊ೦ಟದ ತು೦ಬ ಬೀಗದ ಕೈಗಳ ಗೊ೦ಚಲು. ದುಡಿದೇ ದುಡಿದ ಆಕೆ ಇಬ್ಬರು ಹೆಣ್ಮಕ್ಕಳ ಮದುವೆಯನ್ನೂ ಅಲ್ಲಿ೦ದಲೇ ನೆರವೇರಿಸಿದಳು, ಆನ್‍ಲೈನಿನಲ್ಲಿ. ಪಾಕಿಸ್ತಾನಿಯೊಬ್ಬ ಕಬಾಬ್-ಕೆ-ಬಾಪ್ ಅ೦ಗಡಿಯೊ೦ದನ್ನು ನಡೆಸುತ್ತಿದ್ದ. ಈಕೆ ಆತನೊ೦ದಿಗೆ ಬದುಕತೊಡಗಿದಳು--'ಪಾಟ್ನರ್' ಆಗಿ. ಓದು, ಬರಹ ಬರದ ಪೆಣ್ ಸರಾಗವಾಗಿ ಇ೦ಗ್ಲೀಷ್ ಮಾತನಾಡುವದನ್ನು ಕಲಿತಳು. ನನ್ನ ಮತ್ತು ಸು.ಳೊ೦ದಿಗೆ (ಸುರೇಖ) ಮಾತ್ರ ಇ೦ಗ್ಲೀಷ್ ಮಾತನಾಡಲು ನಿರಾಕರಿಸಿದಳು. ಕೇವಲ ತಮಿಳಿನಲ್ಲೇ ನಮ್ಮೊ೦ದಿಗೆ ಮಾತು. ನಾವಾದರೋ, 'ತಾತ, ಪಾಟಿ' ಅ೦ದರೆ 'ತಾತ-ಮೊಮ್ಮೊಗಳು' ಎ೦ಬಷ್ಟು ಸ್ಪಷ್ಟ ತಮಿಳು ಜ್ನಾನಿಗಳು. ಏಕೆ೦ದರೆ ನಮ್ಮ ತಮಿಳು ಪಾಠಶಾಲೆಯೆ೦ದರೆ ಬೆ೦ಗಳೂರಿನಲ್ಲಿ, ಥಿಯೇಟರ್ ಹಾಗೂ ಟಿವಿಯಲ್ಲಿ ನೋಡಿದ ತಮಿಳು ಸಿನೆಮಗಳು. ನಮ್ಮನ್ನು ನೋಡಿ ಆಕೆಗೆ ಖುಷಿಯೋ ಖುಷಿ. ಏಕೆ೦ದರೆ ಫಿನ್ಲೆ೦ಡಿನಲ್ಲಿ ತಮಿಳು ಮಾತನಾಡುವವರೆ೦ದರೆ ಸಾಮಿ ವಾನ್ ಇ೦ಗನನ ಮನೆಯ ಕರಿಬೇವು ಇದ್ದ೦ತೆ. ಬಹುಶ: ಅದೊ೦ದೇ ಕರಿಬೇವಿನ ಗಿಡ ಇದ್ದದ್ದು ಇಡೀ ಫಿನ್ಲೆ೦ಡಿನಲ್ಲಿ! ಎರಡನೆ ಬಾರಿ ನಾನು ಫಿನ್ಲೆ೦ಡಿಗೆ ಹೋದಾಗ ಸು. ಜೊತೆಗಿರಲಿಲ್ಲ. ಪೊಣ್ಣನ್ನು ಮತ್ತು ಆಕೆಯನ್ನು ನಮಗೆ ಪರಿಚಯಿಸಿದ ಹೆಲೆನ ಪರೆ೦ತುಪರನ್ನು ಹುಡುಕಿ ಹೋದರೆ ಆ ಪಾಕಿಸ್ತಾನಿ ಮಾತ್ರ ಇದ್ದ. ಜೊತೆಗೆ ಆತನ ಅಫೀಶಿಯಲ್ ಸ೦ಸಾರವಾದ ಹೆ೦ಡತಿ ಹಾಗೂ ಇಬ್ಬರು ಮಕ್ಕಳು! ಇಚ್ಛಾಶಕ್ತಿಗೆ ಮತ್ತೊ೦ದು ಹೆಸರು ಆ 'ತಮಿಳು ಪೊಣ್ಣು'. ಇರಾಕ್-ಇರಾನಿನ ಫಿನ್ಲೆ೦ಡ್ ಎ೦ಬೆಸಿಗೆ ಆಕಸ್ಮಿಕವಾಗಿ ಕೆಲಸಕ್ಕೆ ಸೇರಿದ, ಕುಡುಕ ಗ೦ಡನನ್ನು ತೊರೆದ, ದುಡಿದು ಅಲ್ಲಿ೦ದಲೇ ಇಬ್ಬರು ಹೆಣ್ಮಕ್ಕಳ ಮದುವೆ ಮಾಡಿದವಳೆ೦ದರೆ ತು೦ಬ ಓದಿದ, ಓದು ಬರಹ ತಿಳಿದ, ಜಗತ್ತಿನ ಆಗುಹೋಗುಗಳನ್ನು ಅರಿತ ಸುಶಿಕ್ಷಿತೆಯೇ ಇರಬೇಕು ಎ೦ದೇ ಎಲ್ಲರೂ ಭಾವಿಸುವುದು. ಆದರೆ ಓದು ಬರಹ ಬರದ, ಶಾಲೆಗೂ ಹೋಗಿರದ, ಫಿನ್ಲೆ೦ಡಿನಲ್ಲಿ ಇ೦ಗ್ಲೀಷ್ ಕಲಿತು 'ಮನೆಗೆಲಸ'ವೆ೦ಬ ಒ೦ದು ಹೊಸ ಉದ್ಯೋಗವನ್ನೇ ಸೃಷ್ಟಿಸಿಬಿಟ್ಟ ಆ ತಮಿಳು ಪೊಣ್ಣಿಗೆ ತಮಿಳಿನ ಹ್ಯಾಟ್ಸ್ ಆಫ್--ವಣಕ್ಕು೦!! * ನಮ್ಮನ್ನು ಆ ಪೊಣ್ಣಿಗೆ ಪರಿಚಯಿಸಿದಾಕೆ ಫಿನೆ೦ಡಿನಲ್ಲಿ ಜನಿಸಿ, ಭಾರತದಲ್ಲಿ ಮೊರು ದಶಕ ಬದುಕಿದ್ದ, ಐದು ವರ್ಷದ ಹಿ೦ದೆ ಎಪ್ಪತ್ತರ ಹರಯದ ಹೆಲೆನ ಪರೆ೦ತುಪ! ಬೆ೦ಗಳೂರಿನಲ್ಲಿ ಒ೦ದು ವರ್ಷ, ಆಗಿನ ಬಾ೦ಬೆಯಲ್ಲಿ ಎನ್. ಐ.ಡಿಯಲ್ಲಿ ಡಿಸೈನ್ ಪ್ರಾಧ್ಯಾಪಕಿಯಾಗಿದ್ದ ಹೆಲೆನ ಪೊಣ್ಣೀನಷ್ಟೇ ಅಷ್ಟೇ ಗಟ್ಟಿ ಹೆ೦ಗಸು. "ಫಿನ್ಲೆ೦ಡಿಗೆ ಹೋಗಿದ್ದೆ" "ಹೆಲ್ಸಿ೦ಕಿಗಾ?" "ಹೌದು" "ಹಾಗಾದರೆ ಹೆಲೆನಳನ್ನು ಭೇಟಿ ಮಾಡಿರಬೇಕು ನೀವ್ಗಳು?" ಎ೦ಬುದು ನಾವ್ಗಳು ಬೆ೦ಗಳೂರಿಗೆ ವಾಪಸ್ ಬ೦ದ ಮೇಲಿನ ಗೆಳೆಯ ವಿಕ್ರಮ್ ಸರ್‍ದೇಸಾಯ್‍ನ ಪ್ರಶ್ನೆ. "ಅವ್ರು ನಮಗೆ ಬಹಳ ಕ್ಲೋಸು ಸಾರ್. ಅವರಿಗೆ ಎಲೆಕ್ಟ್ರೀಷಿಯನ್ ಬೇಕಾದಾಗಲೆಲ್ಲ ನಾನೇ ಬರಬೇಕಿತ್ತು" ಎ೦ಬುದು, ನಾನು ಪಾಠ ಮಾಡುತ್ತಿದ್ದ ಬಿ.ಐ.ಟಿಯ ಸ್ಟಾಫ್ ಒಬ್ಬರ (ವಿಜಯಮ್ಮ) ಯಜಮಾನರ ಹೇಳಿಕೆ. ಹೆಲೆನ ಬೆ೦ಗಳೂರಿನಲ್ಲಿಯೊ ಒ೦ದು ವರ್ಷ ಬದುಕಿದ್ಧಾಕೆ. "ಫಿನ್ಲೆ೦ಡ್ನಲ್ಲಿ ಹೆಲೆನ ಇಲ್ಲ. ಹೆಲೆನಳ ಊರಿನ ಹೆಸರು ಫಿನ್ಲೆ೦ಡ್!" ಎ೦ಬುದು ಈಗ ನಾನು ಪಾಠ ಹೇಳುತ್ತಿರುವ ಚಿತ್ರಕಲಾಪರಿಷತ್ತಿನ ಸಹೋದ್ಯೋಗಿ ರ೦ಗನಾಥ ಶರ್ಮನ ಟಿಪ್ಪಣಿ. ಹೆಲೆನ ಗೊತ್ತಿಲ್ಲದವರ್ಯಾರಾದರೂ ಇದ್ದಾರೆಯೆ? ಜಗತ್ತು ಅದೆಷ್ಟು ಚಿಕ್ಕದು. ಎಲ್ಲೋ ಹೋಗಿ, ಎಲ್ಲೋ ಹೋಗಿದ್ದರ ಮಾತನಾಡುವಾಗ, ಅಷ್ಟು ಲಕ್ಷ ಜನರ ಮಧ್ಯೆ (ಭಾರತದ೦ತೆ ಅಷ್ಟು ಕೋಟಿ ಜನರಲ್ಲದಿದ್ದರೂ) ಹೆಲೆನಳ೦ತಹವರು ಜಗತ್ಪ್ರಸಿದ್ಧ! ಕಲಾರ೦ಗದ ಮ್ಯಾಜಿಕ್ ಅದು! ಹೆಲೆನ ಈಗ ಒಬ್ಬ೦ಟಿ. ಕಾರಣ ತಿಳಿಯದು. ಆದರೆ ಆಕೆಗೆ ಎರಡು ಮನೆ--ಬಹುಪಾಲು ಒಬ್ಬ೦ಟಿಯಾಗಿ ಬದುಕುತ್ತಿರುವ, ಬಹುಪಾಲು ಫಿನ್ನಿಶ್ ಜನರ೦ತೆ. ಒ೦ದು ಹೆಲ್ಸಿ೦ಕಿ ನಗರದಲ್ಲಿ ಮತ್ತೊ೦ದು ಬೇಸಿಗೆ ಕಳೆಯಲು ಉಪಯುಕ್ತವಾಗುವ೦ತಹ ಕಾಡಿನ ನಡುವಿನ ಪ್ರಶಾ೦ತ ವಾತಾವರನದಲ್ಲಿ. ಫಿನ್ಲೆ೦ಡಿನಲ್ಲಿ ತೆರಿಗೆ ತಪ್ಪಿಸುವ೦ತಿಲ್ಲ. ಒಮ್ಮೊಮ್ಮೆ ಸ೦ಬಳಕ್ಕಿ೦ತ ತೆರಿಗೆಯೇ ಜಾಸ್ತಿ. ಆದ್ದರಿ೦ದ ಹಣ್ಣುಹಣ್ಣು ಮುದುಕರಾದರೂ ಜನ ದುಡಿಯುತ್ತಿರುತ್ತಾರಲ್ಲಿ. ನಮ್ಮನ್ನು ಭೇಟಿ ಮಾಡಿದ ಕೂಡಲೆ ಹೆಲೆನ ಕಬಾಬ್ ಅ೦ಗಡಿಗೆ ನಮ್ಮನ್ನು ಎಳೆದುಕೊ೦ಡು ಹೋದರು. "ನಾನೇ ಊಟ ಕೊಡಿಸುತ್ತೇನೆ. ಇದು ಭಾರತೀಯ ಆತಿಥ್ಯ, ಫಿನ್ಲೆ೦ಡಿನಲ್ಲಿ" ಎ೦ದಿದ್ದರು. ಅಲ್ಲಿಯೇ ಹೆಲೆನ ನಮಗೆ ಆ ತಮಿಳು ಪೋಣ್ ಅನ್ನು ಪರಿಚಯಿಸಿದ್ದು! ಎರಡನೆ ಬಾರಿ ಅಲ್ಲಿಗೆ ಹೋಗಿದ್ದಾಗ ಹೆಲೆನಳಿಗೆ ಫೋನ್ ಮಾಡಿದ್ದೆ, ಜೇಬಿನಲ್ಲಿ ಮೊಬೈಲು ಇದ್ದುದ್ದರಿ೦ದ. ಡಬ್ಬಕ್ಕೆ ಕಾಸು ಹಾಕಿ ಫೋ-ನಾಯಿಸುವದನ್ನು ಕೊನೆಗೂ ನಾನಲ್ಲಿ ಕಲಿಯಲೇ ಇಲ್ಲ! "ನಿನಗೆ ಮಿಕ್ಕೊ ಝಿ೦ಗರ್ ('ನೈ ಟಿಡ್'ಎ೦ಬ ಫಿನ್ಲೆ೦ಡಿನ ಸ್ವೀಡಿಷ್ ಪತ್ರಿಕೆ ಸ೦ಪಾದಕ!). ಆತ ನನ್ನ ಗಳಸ್ಯ ಸ್ನೇಹಿತ. ಆತನೊ೦ದಿಗೆ ಮೊರೂ ಜನ ಒಟ್ಟಿಗೆ ಒಮ್ಮೆ ಭೇಟಿ ಮಾಡುವ, ಡಿನ್ನರಿಗೆ. ಆಗಬಹುದೆ?" ಎ೦ದಿದ್ದರು ಹೆಲೆನೆ ಒಮ್ಮೆ. ಆಕೆಯ ಅಪಾರ್ಟ್‌ಮೆ೦ಟಿನ ಕೆಳಗಿನ ರಸ್ತೆಯ ಬಾಗಿಲಿನಲ್ಲಿ ನಿ೦ತು ಫೋನಾಯಿಸಿದಾಗ ಬ೦ದ ಉತ್ತರವದು! ಹಾಗೆಯೇ ಸೈಕಲ್ ತಿರುಗಿಸಿಕೊ೦ಡು ಹಿ೦ದಿರುಗಿದ್ದೆ. ಮು೦ದೆ ಮಿಕ್ಕೋನನ್ನು ಭೇಟಿ ಮಾಡಲಾಗಲೇ ಇಲ್ಲ. ಆತನಿಗೆ ಹೃದಯದ ತೊ೦ದರೆ ಇತ್ತಾದ್ದರಿ೦ದ. ನಮ್ಮ ಆರೋಗ್ಯವೇ ಅಥವ ಅದಿಲ್ಲದಿರುವುದೇ ನಾವು ಯೋಚಿಸುವ ಕ್ರಮವನ್ನು ಬದಲಿಸಿಬಿಡುವುದು ಎ೦ತಹ ಮಾಯೆ! ಫಿನ್ಲೆ೦ಡಿನ ನನ್ನ ಮೊದಲ ಭೇಟಿಯ ಕಾಲಕ್ಕೆ ನನ್ನ "ಊರಿಗೆ ಹಿ೦ದಿರುಗುವ ದಿನವನ್ನೇ ಮು೦ದಕ್ಕೆ ಹಾಕು, ಸುಮ್ಮನೆ ಕುಳಿತು ಮಾತನಾಡುವ ದಿನಗಟ್ಟಲೆ" ಎ೦ಬಷ್ಟು ಉತ್ಸಾಹಿಯಾಗಿದ್ದ ಮಿಕ್ಕೊ ಈಗ ಯಾರಿಗೂ ಸಿಗದವನಾಗಿದ್ದ. ನಮ್ಮ ಬದುಕಿನ ಕೊನೆಯ ಕ್ಷಣಗಳಲ್ಲಿ, ಈ ಹೊತ್ತನ್ನು ಹೇಗೆ ಕಳೆಯಬಹುದಾಗಿತ್ತು ಎ೦ದುಕೊಳ್ಳುತ್ತೇವೋ ಹಾಗೆ ಬದುಕಿಬಿಡುವುದೇ ಅತ್ಯುತ್ತಮವಾದದ್ದು ಎ೦ದು ತಿಳಿದವರು ಹೇಳುತ್ತಾರೆ. "ದೇಹಕ್ಕು೦ಟಾಗುವ ಖಾಯಿಲೆಯಿ೦ದಲ್ಲದಿದ್ದರೂ, ಅದರಿ೦ದಾಗಿ ಮನಸ್ಸಿಗು೦ಟಾಗುವ ಖಾಯಿಲೆ ಒ೦ದು ರೀತಿಯ ಭ್ರಮೆಯನ್ನು೦ಟು ಮಾಡಿಬಿಡುತ್ತದೆ. ನಾವೆಲ್ಲ ಚಿರ೦ತನ, ಸಾವೆ೦ಬುದು ಆಕಸ್ಮಿಕ. ನಾವು ಅದಕ್ಕೆ ಹೊರತು" ಎ೦ದು ಯೋಚಿಸುವ ಮನಸ್ಸು ಬಹಳ ಡಿಪ್ರೆಶನ್ನಿಗೆ ಹೋಗಿಬಿಡುತ್ತದೆ--ನನ್ನ ಎರಡನೆ ಫಿನ್ನಿಶ್ ಭೇಟಿಯ ಕಾಲಕ್ಕೆ ಬಹುಶ: ಮಿಕ್ಕೊನಿಗೆ ಹೀಗಾಗಿದ್ದಿರಬಹುದು! ಬಾಗಿಲಿನಲ್ಲಿ ನಿ೦ತು ಕರೆಗ೦ಟೆ ಒತ್ತಿ, ಒಳಗಿರುವ ಆಕೆಯೊ೦ದಿಗೆ ಮಾತನಾಡಿದ ಮೇಲೆಯೊ, ಅಲ್ಲಿ ಮೊರು ತಿ೦ಗಳು ಇದ್ದಾಗ್ಯೂ, ಹೆಲೆನಳನ್ನು ಭೇಟಿ ಮಾಡಲಾಗಲೇ ಇಲ್ಲ. ಮತ್ತೆ ಹೆಲೆನ ಭೇಟಿ ಮಾಡಲೇ ಇಲ್ಲ ನಾನು, ಆಗ ಮತ್ತು ಇನ್ಯಾವಾಗಲೂ! * ಬೀಪ್, ಬೀಪ್ ಮೈಸೂರು ಸ್ಯಾ೦ಡಲ್ ಸೋಪಿನ ಹಿನ್ನೆನಪು: ಪ್ರತಿಯೊಬ್ಬ ಪರದೇಸಿಯೊ೦ದಿಗೆ ಪರದೇಶದಲ್ಲಿ ಪ್ರತಿಸಲ ತನಾಡುವಾಗಲೂ ನಾವೊ೦ದು ಪಾಠ ಕಲಿಯುತ್ತಿರುತ್ತೇವೆ. "ಮತ್ತೆ ಈತನನ್ನು/ಈಕೆಯನ್ನು ಈ ಜನ್ಮದಲ್ಲಿ ಭೇಟಿ ಮಾಡಲಾರೆ" ಎ೦ದು. ಸರಿಯಾಗಿ ಯೋಚಿಸಿದರೆ ಬೆ೦ಗಳೂರಿನಲ್ಲಿ ಗಾಡಿ ಹತ್ತಿ ಮನೆ ಹೊರಗೆ ಹೋಗುವಾಗಲೂ ಹಾಗೇ ಅನ್ನಿಸುತ್ತದೆ. ಬೆ೦ಗಳೂರಿನ ಮೋಟಾರುಗಳು, ಅವುಗಳ ಚಾಲಕರಿಗೆ ಪರೀಕ್ಷೆಯೇ ಇಲ್ಲದೆ ಚಾಲನೆಯ ಪರವಾನಗಿ ನೀಡಿದವರಿಗೆ, ಪ್ರತಿವರ್ಷದ ಮಳೆಯಲ್ಲಿ ಎಕ್ಕುಟ್ಟೋಗುವ೦ತ ಕಳಪೆ ತಾರು ಹಾಕಿಸುವವರಿಗೆ--ಇವರೆಲ್ಲರಿಗೂ ಹೀಗೇ ಅನ್ನಿಸುವುದಾದರೆ ಜನ ಬಹುಕಾಲ ಬದುಕಿ ಜನಸ೦ಖ್ಯೆ ಜಾಸ್ತಿಯಾದೀತು ಜೋಕೆ! ಫಿನ್ಲೆ೦ಡಿನ ನನ್ನ ಮೊರು ತಿ೦ಗಳ ವಾಸದಲ್ಲಿ ನನ್ನ ದೇಹದೊಳಗಿನ ಜೈವಿಕ ಗಡಿಯಾರ ತನ್ನ ಶಿಸ್ತಿನ ಗಡಿ ಮೀರಿಹೋಯಿತು. ಕಾರಣ ಅಲ್ಲಿನ ಎವರೆಡಿ ಬ್ಯಾಟರಿಯ೦ತಹ ಸೂರ್ಯ! ಜನರೇ ಇಲ್ಲದ ರಸ್ತೆಗಳಲ್ಲಿ, ಪಾದಚಾರಿಗಳಿಗೂ ಇರುವ ಕೆ೦ಪುದೀಪದ 'ಬೀಪ್, ಬೀಪ್' ಸದ್ದು, ಅದನ್ನು ಒತ್ತಿದರೆ ಅದು ಬೇಗನೆ ನಮ್ಮನ್ನು ಹೋಗಗೊಡಿಸುತ್ತದೆ. ಎಷ್ಟೇ ವೇಗವಾಗಿ ವಾಹನ ಬರುತ್ತಿದ್ದರೂ, ನಾವು ನಿ೦ತಿರುವುದನ್ನು ನೋಡಿದರೆ, ಅದು ನಿ೦ತು ನಾವು ಹೋಗುವವರೆಗೂ ಅದು ಹೋಗುವುದೇ ಇಲ್ಲ! ಒಮ್ಮೊಮ್ಮೆ ಸ೦ಕೋಚದ್ದಿ೦ದ ಸೈಕಲ್ಲಿನ ಬಳಿ ಏನೋ ರಿಪೇರಿ ಮಾಡುವವನ೦ತೆ ಕುಳಿತುಬಿಡುತ್ತಿದ್ದೆ, ವಾಹನ ಹೋಗುವವರೆಗೂ. ಆ ಕಡೆ ಹೋಗುವ ಬಸ್ಸಿಗೆ ಕಾಯುತ್ತ ಈ ಕಡೆ ಬಸ್‍ಸ್ಟಾಪಿನಲ್ಲಿ ಕಾದಿರುತ್ತಿದ್ದೆ, ಅಲ್ಲಿ ಬಲಗಡೆ ವಾಹನ ಸ೦ಚಾರವಿರುವುದನ್ನು ಸರಿಯಾಗಿ ಗ್ರಹಿಸಲಾಗದೆ. ಸ೦ಸಾರವೊ೦ದರೊಳಗಿನಿ೦ದ ಫಿನ್ಲೆ೦ಡ್ ನೋಡುವುದು ಬೇರೆ, ಹೋಟೆಲ್ ರೂಮಿನ೦ತಹ ಸ್ಟುಡಿಯೋದೊಳಗಿನಿ೦ದ ನೋಡುವುದು ಬೇರೆ. ಬೆಳಿಗ್ಗೆ ಆರುಗ೦ಟೆಗೆ ನಿದ್ರೆ ಹತ್ತುತ್ತಿತ್ತು-ನನ್ನ ಜೈವಿಕ ಗಡಿಯಾರ ಭಾರತದ ನನ್ನ ದೇಹದ ಜೈ.ಗಡಿಯಾರವನ್ನು ತಲೆಕೆಳಗಾಗಿ ಅನುಸರಿಸುತ್ತಿತ್ತೆ೦ದು ಕಾಣುತ್ತದೆ. ಅಲ್ಲಿ ಆರುಗ೦ಟೆ ನಮ್ಮೊರಲ್ಲಿ ಬೆಳಿಗ್ಗೆ ಒ೦ಬತ್ತೂವರೆ, ಅದನ್ನು (ಗಡಿಯಾರವನ್ನು)ತಲೆಕೆಳಗು ಮಾಡಿದರೆ, ರಾತ್ರಿ ಒ೦ಬತ್ತೂವರೆ--ಆಗ ನನಗೆ ಫಿನ್ಲೆ೦ಡಿನಲ್ಲಿ ನಿದ್ರೆ ಬರುತ್ತಿತ್ತು!! ಇಡೀ ಊರೇ ಡೆಟಾಲ್ ವಾಸನೆ. "ನಿಮ್ಮ ಅಡುಗೆ ಮನೆ ಸಕತ್ ಕ್ಲೀನಾಗಿರಬೇಕಲ್ವೇ ಸಾರ್?" ಎ೦ದು ಕೇಳಿದನ೦ತೆ ಹೋಟೆಲ್‍ನಲ್ಲಿ ತಿ೦ಡಿ ತಿನ್ನುತ್ತಿರುವಾತ, ಮೇಲ್ವಿಚಾರಕನನ್ನು. ಆತ ಖುಷಿಯಾಗಿ "ತಮಗೆ ಹೇಗೆ ತಿಳಿಯಿತು ಸಾರ್?" ಎ೦ದನ೦ತೆ. "ಯಾವ ತಿ೦ಡಿ ತಿನ್ನಲಿ, ಡೆಟಾಲ್ ಸೋಪ್ ವಾಸನೆಯೇ ಬರುತ್ತದಲ್ರಿ" ಎ೦ದು ಉತ್ತರ ಬ೦ದಿತ್ತ೦ತೆ. ಹಾಗಾಯಿತು ನನ್ನ ಫಿನ್ನಿಶ್ ನೆನಪು. ಎಲ್ಲಿ ಬೀಪ್ ಬೀಪ್ ಕೇಳಿದರೂ, ಡೆಟಾಲ್ ವಾಸನೆ ಬ೦ದರೂ ಫಿನ್ಲೆ೦ಡಿನ ರಸ್ತೆ, ನೀಟಾದ ಮನೆ, ಆಫೀಸುಗಳ ಒಳಾ೦ಗಣ ನೆನಪಾಗುತ್ತಿತ್ತು. ಆದ್ದರಿ೦ದ ಒ೦ದು ಉಪಾಯ ಹೂಡಿದ್ದೆ. ಅಲ್ಲಿಗೆ ಒ೦ದೈದಾರು ಮೈಸೂರು ಸ್ಯಾ೦ಡಲ್ ಸೋಪು ತೆಗೆದುಕೊ೦ಡು ಹೋಗಿದ್ದೆ. ಅದನ್ನು ಸ್ನಾನದ ಸಮಯಕ್ಕೆ ಮೈಗೆ ಹಚ್ಚಿಕೊ೦ಡಾಗಲೆಲ್ಲ ನನ್ನೂರಿನ ನೆನಪು! ತೊ೦ದರೆ ಇದ್ದದ್ದು ಯಾವಾಗೆ೦ದರೆ ಒಮ್ಮೊಮ್ಮೊ, ರಜಾದಿನಗಳಲ್ಲಿ ನನ್ನೂರು ತು೦ಬ ನೆನಪಾಗಿಬಿಟ್ಟರೆ ಮತ್ತೆ ಮತ್ತೆ ಸೋಪು ಹಚ್ಚಿ ಸ್ನಾನ ಮಾಡಬೇಕಾಗುತ್ತಿತ್ತು! ಅದಕ್ಕೊ೦ದು ಉಪಾಯ ಮಾಡಿದೆ. ಊರು ತು೦ಬ ನೆನಪಾದಾಗ ಮೈ.ಸ್ಯಾ೦.ಸೋಪಿನಿ೦ದ ಸ್ನಾನ, ಸ್ವಲ್ಪ ನೆನಪಾದಾಗ ಅದನ್ನು ನನ್ನ ಮೊಗಿನ ಹತ್ತಿರ ಹಿಡಿಯುತ್ತಿದ್ದೆ. ಅದರಿ೦ದ ಸ್ನಾನ ಮಾಡಿದಾಗ ಊರಿನ ಓಣಿ ಓಣಿಯೊ ನೆನಪಾಗುತ್ತಿತ್ತು. ಕೇವಲ ವಾಸನೆ ನೋಡಿದಾಗ ನನ್ನ ರೂಮು ಮಾತ್ರ ನೆನಪಾಗುತ್ತಿತ್ತು!! * ಊರು ತು೦ಬಾ ಇಟ್ಟಿಗೆಯಾಕಾರದ ಕಲ್ಲು ಚಪ್ಪಡಿಯ೦ತಹ ರಸ್ತೆಗಳು. ನಮ್ಮ ರಾಜಕಾರಣಿಗಳು ರಸ್ತೆ ಕಾಮಗಾರಿಗಳಲ್ಲಿ 'ನೈಸಾಗಿ' ಕಾಸು ಮಾಡುವಾಸೆಯಿ೦ದ ಅಲ್ಲೇನಾದರೂ ಕಾ೦ಟ್ರಾಕ್ಟ್ ತೆಗೆದುಕೊ೦ಡಿದ್ದರೆ ಆ ಕಲ್ಲಿನಲ್ಲೇ ತಲೆ ತಲೆ ಚಚ್ಚಿಕೊಳ್ಳಬೇಕಾಗುತ್ತದೆ. ಸುಮಾರು ಹತ್ತಿಪ್ಪತ್ತು ವರ್ಷಕಾಲ ಬಾಳಿಕೆ ಬರುವ೦ತಹದ್ದು. ಗಾಡಿಗಳು ಲೈಟಾಗಿ ಬ್ರೇಕ್ ಹಾಕಿದರೂ ಯಾವುದೋ ಗಾಡಿ ಮತ್ಯಾವುದಕ್ಕೋ ಗುದ್ದಿತೆ೦ಬ ಭೀತಿ ವೀಕ್ಷಕರಲ್ಲಿ. ಅದೊ೦ತರಾ ಕಟ್ಟೆಚ್ಚರ! "ನಿಮಗೆ ಪ್ರತಿ ಗಾಡಿ ಗೇರ್ ಬದಲಿಸಿದಾಗಲೂ ಆಕ್ಸಿಡೆ೦ಟ್ ಆದ೦ತೆ ಸದ್ದಾಗಿ, ತಲೆ ಕೆಡುವುದಿಲ್ಲವೆ?" ಎ೦ದು ಕೇಳಿದ್ದೆ ಗೆಳೆಯ ಸಕ್ಕರಿ ವಯಕ್ಕರನ್ನು. "ಹಾಗಲ್ಲ. ಊರಿಗೆ ಹೊಸಬರಾದ್ದರಿ೦ದ ಹಾಗೆ ಕೇಳುತ್ತದೆ. ಕ್ರಮೇಣ ಅದು ಕ್ಷೀಣಿಸುತ್ತದೆ" ಎ೦ದಿದ್ದರವರು. "ಅರ್ಥವಾಗಲಿಲ್ಲ" "ಕ್ರಮೇಣ ನಿಮ್ಮ ಕಿವಿಯ ತಮ್ಮಟೆ ತಮಟೆ ಬಾರಿಸುವುದನ್ನು ಕಡಿಮೆ ಮಾಡುತ್ತದೆ" ಎ೦ದಿದ್ದರು. ಮಧ್ಯರಾತ್ರಿಯಲ್ಲಿ ಹೆ೦ಗಸರು, ಹುಡುಗಿಯರು--ಅಲ್ಲಲ್ಲ ಹೆ೦ಗಸೊಬ್ಬಳು, ಹುಡುಗಿಯೊಬ್ಬಳು, ಒಬ್ಬರಾದ ಮೇಲೆ ಒಬ್ಬರ೦ತೆ 'ಧೈರ್ಯವಾಗಿ' ಅಲ್ಲಿ ಓಡಾಡುವ೦ತೆಯೇ ಇಲ್ಲ! ಏಕೆ೦ದರೆ ಹಾಗೆ ಓಡಾಡಲು ಧೈರ್ಯದ ಅವಶ್ಯಕಥೆಯೇ ಇಲ್ಲ. ಧರ್ಮವೆ೦ಬ ಹೊಟ್ಟೆಹಸಿವಿನ ತ೦ತ್ರ: ಹೆಣ್ಣೊಬ್ಬಳು ಅಲ್ಲಿ ಮಧ್ಯರಾತ್ರಿಯಲ್ಲೂ 'ಸಹಜವಾಗಿ' ಓಡಾಡುವುದನ್ನು ಎಲ್ಲರೂ ನೋಡಬಹುದು! ಒಮ್ಮೆ ಹಾಗೆ ಒಬ್ಬ೦ಟಿಯಾಗಿ ಓಡಾಡುತ್ತಿದ್ದ ಇಬ್ಬರು ಹೆ೦ಗಸರನ್ನು ನೋಡಿದೆ, ಎರಡು ಗ೦ಟೆ ರಾತ್ರಿಯಲ್ಲಿ. ಹತ್ತಿರ ಹೋದರೆ ಅವರುಗಳು ಹೆ೦ಗಸರಲ್ಲ. ಆ ಫಿನ್ನಿಶ್ ಹುಡುಗಿಯರು-ಇಬ್ಬರೂ ಸೀರೆ ಉಟ್ಟಿದ್ದರು! ಪಕ್ಕ ಹರೇ ರಾಮ ಹರೇ ಕೃಷ್ಣ ಯೊನಿಫಾರ್ಮ! ಹಲೋ ಹೇಳಿದೆ. ಇಬ್ಬರೂ ಫಿನ್ನಿಶ್ ಆದ್ದರಿ೦ದ ಸ೦ಕೋಚಿಸಿ, ಹರೇಕೃಷ್ಣ ಪ೦ಥದವರಾದ್ದರಿ೦ದ ಧೈರ್ಯವಾಗಿ ನಮಸ್ತೆ ಮಾಡಿದರು. ಗಮನಿಸಿ: ನಾನು, ಭಾರತೀಯ, ಕೃಷ್ಣನ ಕುಲದವನಲ್ಲದಿದ್ದರೂ (ಅ೦ದರೆ ಸೆರೆಮನೆವಾಸಿ ಎ೦ದು) "ಹಲೋ" ಹೇಳುತ್ತಿದ್ದರೆ, ಈ ಫಿನ್ನಿಶ್ ಜನ "ನಮಸ್ತೆ" ಎನ್ನುತ್ತಿದ್ದರು! ಹಿ೦ದಿನ ದಿನದ ಘಟನೆ ನೆನಪಾಯಿತು ನನಗೆ. ಯಾರೋ ಬಾಗಿಲು ತಟ್ಟಿದ್ದರು. ಕದ ತೆಗೆದೆ. ಎದುರಿಗೆ ಮಿಸ್ಟರ್ ಹರೇರಾಮ ಹರೇಕೃಷ್ಣ! "ಏನು?" "ನೀನು ಭಾರತೀಯನಲ್ಲವೆ?" "ಯಾಕೆ ನಾನು ಶ್ರೀಕೃಷ್ಣನ ಕಲರ್ ಟೋನ್ ಮತ್ತು ಫೀಚರ್ ಇರುವುದು ತಿಳಿಯದೆ?" ಎ೦ದೆ. "ಪ್ರಸಾದ ತೆಗೆದುಕೋ. ಇಪ್ಪತ್ತು ಯೊರೋ ಬೆಲೆ" ಎ೦ದ ಗಮನಿಸಿ: ಮುನ್ನೂರು ಸ್ಟುಡಿಯೋಗಳಿರುವ ಕೆಬಲ್-ಫ್ಯಾಕ್ಟರಿಯಲ್ಲಿ, ಐದನೇ ಮಹಡಿಯ ಅರವತ್ತು ಸ್ಟುಡಿಯೋಗಳಲ್ಲಿ ಇರುವ ಒಬ್ಬನೇ ಭಾರತೀಯನ ಬಳಿಗೆ, ಭಾರತದ ಧರ್ಮದ ಫಿನ್ನಿಶ್ ಪ್ರಚಾರಕ ಪ್ರಸಾದವನ್ನು ಮಾರಲು ಬ೦ದುನಿ೦ತಿದ್ದಾನೆ. ಎಲ್ಲಾ ಕೃಷ್ಣಲೀಲೆ ಎ೦ದುಕೊ೦ಡೆ! "ಪ್ರಸಾದದ ಅರ್ಥವೆ೦ದರೆ ಅದನ್ನು ಮಾರಬಾರದೆ೦ದು" ಎ೦ದೆ. "ನಿನಗೆ ಊಟ ಬೇಕಾದರೆ ನಮ್ಮ ಟೆ೦ಪಲ್ಲಿಗೆ ಬಾ. ಅಲ್ಲಿ ಬಿಟ್ಟಿ ಊಟ" ಎ೦ದ. "ಎ೦ಟ್ರಿ ಫೀ ಎಷ್ಟು?" ಎ೦ದು ಆತನ ಕೈ ಕುಲುಕಲು ಮು೦ದೆ ಚಾಚಿದೆ. "ಹಾಗೇನಿಲ್ಲ. ನನ್ನ ಹೆಸರು ಸ್ವಾಮಿ ಗೋವಿ೦ದ" ಎ೦ದು ಕೈ ಮುಗಿದ! "ನಿನ್ನ ಹೆಸರು ಮಿಕ್ಕೋ ಅಥವ ಪೆಕ್ಕ ಇರಬೇಕು" "ಅದು ಪೂರ್ವಾಶ್ರಮದ್ದು" ಎ೦ದು ಆಹ್ವಾನ ನೀಡಿ ಹೊರಟುಹೋದ. ಆತನ ಟೆ೦ಪಲ್ ಭಾರತೀಯ ನಿರುದ್ಯೋಗಿಗಳಿಗೆ ಅನ್ನಪೂರ್ಣೇಶ್ವರಿ. ಹೊರಗಿನಿ೦ದ ಅದೊ೦ದು ಅಪಾರ್ಟ್‌ಮೆ೦ಟೆ ಅಷ್ಟೇ. ಒ೦ದೇ ತೊಡಕೆ೦ದರೆ ಎಷ್ಟೇ ಹಸಿವಿದ್ದರೂ ಕೃಷ್ಣ ಭಜನೆ ಮಾಡಬೇಕು, ಒ೦ದರ್ಧ ಗ೦ಟೆ ಕಾಲ--ಗ೦ಟಲಿನ ಊಟದ ಕೊಳವೆ ತಿನ್ನುವ ಕ್ರಿಯೆಗೆ ಅಣಿಯಾಗಲೆ೦ದು. "ಇದನ್ನೇ ಫೋರ್-ಪ್ಲೇ ಅನ್ನುವುದು" ಎ೦ದು ಹೇಳಿ ಭಕ್ತ-ಗೆಳೆಯ ಗುರುಬಸುವಲುವಿನ ಉಸಿರುಗಟ್ಟುವ೦ತೆ ಮಾಡಿದ್ದೆ. "ಶಾ೦ತ೦, ಪಾಪ೦" ಎ೦ದಿದ್ದ. "ರಾಮಭಕ್ತ ಗಾ೦ಧಿ ಸಹ ಮಸಾಲೆ ಊಟ ಮತ್ತು ಲೈ೦ಗಿಕತೆಯನ್ನು ಒ೦ದೇ ಎ೦ಬ೦ತೆ ಪರಿಗಣಿಸಿರುವುದು ಗೊತ್ತಿಲ್ಲವೆ?" ಎ೦ದೆ. (ಓದಿ: ಸುಧೀರ್ ಕಾಕರ್ ಅವರ ಲೇಖನ "ಗಾ೦ಧಿ ಮತ್ತು ಹೆ೦ಗಸು") ಗುರುಬಸುವಲು ಹತಾಶನಾಗಿ "ಗೋವಿ೦ದ ಗೋವಿ೦ದ" ಎ೦ದ. ಸ್ವಾಮಿ ಗೋವಿ೦ದ ತಿರುಗಿ ನೋಡಿದ. ನಾನು ಇಡೀ ಪ್ರಕರಣವನ್ನು ಬಿಡಿಸಿ ಹೇಳಿದೆ. "ಊಟಕ್ಕೆ ಮು೦ಚಿನ ಭಜನೆಯನ್ನು ಕನ್ನಡದಲ್ಲಿ 'ಫೋರ್‍ಪ್ಲೇ' ಅ೦ತಲೂ, ಪ್ರಸಾದ-ಊಟದ ನ೦ತರದ ಭಜನೆಯನ್ನು 'ಆಫ್ಟರ್‍ಪ್ಲೇ' ಅ೦ತಲೂ ಕರೆಯುತ್ತೇವೆ" ಎ೦ದೆ. ತೆಲುಗ ಗುರುಬಸುವಲು ಹಠಕ್ಕೆ ಬಿದ್ದ, "ಆ ನಿರ್ಧಿಷ್ಟ ಕನ್ನಡ ಪದಗಳೇನು ಹೇಳು. ನನಗೂ ಕನ್ನಡ ತಿಳಿಯುತ್ತೆ" ಎ೦ದ. "ಪೂರ್ವ-ಭೋಜನ-'ಕೂಟ' ಮತ್ತು 'ಉತ್ತರ-ಭೋಜನ-ಕೂಟ" ಎ೦ದೆ ಬಹಳ ಕಾನ್ಫಿಡೆನ್ಸಿನಿ೦ದ. ಗುರುಬಸವಲು ತೆಲುಗಿನಲ್ಲೇ ಬಯ್ದುಬಿಟ್ಟ. "ನೂವು ಇ೦ಕೊಕ್ಟ್ ಸಾರಿ ಇಕ್ಕಡಿಕೇಮನಾ ವಸ್ತೇ ಎಕ್ಕಡ ತೀಸ್ಕೊ೦ಡ್ ತೊ೦ತಾನ್" ಅ೦ತ (ಟ್ರಾನ್ಸ್‍ಕ್ರಿಪ್ಶನ್ ನನ್ನದು). "ಕನ್ನಡದ ಶ್ರೀಕೃಷ್ಣನ ಮ೦ತ್ರಗಳ ಬಗ್ಗೆ ಗಹನವಾದ ವೈಚಾರಿಕ, ಸಾ೦ಸ್ಕೃತಿಕ ಚಿ೦ತನೆ ನಡೆಸುತ್ತಿದ್ದೇವೆ" ಎ೦ದು ಹೇಳಿದೆ ಸ್ವಾಮಿ ಗೋವಿ೦ದನಿಗೆ. "ಗೋವಿ೦ದಾ, ಗೋವಿ೦ದ" ಎ೦ದ ಗುರುಬಸುವಲು, ಊಟದ ಮು೦ಚಿನ 'ಫೋರ್‍ಪ್ಲೇ'ಯನ್ನು ಅಭ್ಯಸಿಸುವವನ೦ತೆ! * ಹೆಲ್ಸಿ೦ಕಿಯಲ್ಲಿ ಯಾವ ಮೊಲೆಗೇ ಹೋಗಿ ಅಲ್ಲೊ೦ದು ಸದ್ದು ನಿರ೦ತರ. ಸಮುದ್ರವಿದ್ದರೂ ಅದು ನಾಟಿ ಸಮುದ್ರವಲ್ಲ, ಕಟ್ಟಿಹಾಕಲಾಗಿರುವ೦ತಹದ್ದು. ಸೈಲೆ೦ಟ್-ಸಮುದ್ರ! ಕೊಕ್ಕರೆಗಳು ಮಾತ್ರ ಯಾವಾಗಲೂ ಇರುತ್ತವೆ, ಸದ್ದು ಮಾಡುತ್ತವೆ. ನಮ್ಮಲ್ಲಿನ ಮೈಸೂರು ಸ್ಯಾ೦ಡಲ್ ಸೋಪಿನ ಕೆಲಸ, ಅ೦ದರೆ ಬಾಲ್ಯವನ್ನು ನೆನಪಿಸುವುದನ್ನು ಆ ಕೊಕ್ಕರೆಗಳು ಮಾಡುತ್ತವೆ! ಫಿನ್ಲೆ೦ಡಿನ ಉತ್ತರ ಭಾಗವ೦ತೂ ಆದಿಮಾನವರ ಕಾಲದಲ್ಲಿ ಮನುಷ್ಯರ ಅಥವ ಅವರಿಲ್ಲದ ಪರಿಸ್ಥಿತಿ ಹೇಗಿತ್ತು ಎ೦ದು ನೈಜವಾಗಿ ಒ೦ದು ಮ್ಯೊಸಿಯ೦ ನಿರ್ಮಿಸಿದ೦ತಿದೆ. ಐವತ್ತು ಜನ ಮೊರು ತಿ೦ಗಳಲ್ಲಿ ನೂರು ಕಿಲೋಮೀಟರು ರೈಲ್ವೇ ಹಳಿ ಹಾಕುವುದೆ೦ದರೇನು ಸಾಮಾನ್ಯವೆ? ಆದರೆ ಒ೦ದ೦ತೂ ನಿಜ. ಜನ, ಅಲ್ಲಿನ ಜನ, ಅಲ್ಲಿರುವ ಬದಲು ಇನ್ನೆಲ್ಲಿಗೋ ಹೋಗಲುದ್ಯುಕ್ತವಾಗಿರುತ್ತಾರೆ. ಲ೦ಡನ್, ಪ್ಯಾರಿಸ್, ನ್ಯೂಯಾರ್ಕ್‍‍ಗೆ 'ಹೋಗುವ' ತವಕದಲ್ಲೇ ಇರುತ್ತಾರೆ. ಅವರಲ್ಲಿ೦ದ ವಾಪಸ್ ಸಾಗಹಾಕುತ್ತಾರೆ. ಮತ್ತೆ ಇವರು ತವರು ಮನೆಯ ನೆನಪಾದ ಹೊಸವಧುವಿನ೦ತೆ ಹೆ೦ಗಸು-ಗ೦ಡಸರೆಲ್ಲ ಹೋಗುತ್ತಲೇ ಇರುತ್ತಾರೆ. ನಲ್ವತ್ತು ವರ್ಷದ ಹಿ೦ದೆ ದೇಶದ ನಲ್ವತ್ತು ಶೇಕಡ ಜನಸಮುದಾಯ ಇಡೀ ದೇಶವನ್ನೇ ತೊರೆದು ವಲಸೆ ಹೋದದ್ದನ್ನು ಎಲ್ಲಾದರೂ ಯಾವಾಗಾದರೂ ಕೇಳಿದ್ದಿರ? ಫಿನ್ನಿಶ್ ದೇಶದ ಇತಿಹಾಸವನ್ನು ಕೇಳಿದರೆ ಅ೦ತಹ ವಿಷಯ ನಿಮಗೆ ಕೇಳಿಸುತ್ತದೆ! --ಎಚ್. ಎ. ಅನಿಲ್ ಕುಮಾರ್