ಫುಕೋಶಿಮಾ ದುರಂತ

ಫುಕೋಶಿಮಾ ದುರಂತ

ಪ್ರಕೃತಿಯಲ್ಲಿ ಸ್ವಾಭಾವಿಕವಾಗಿ ಸಂಭವಿಸುವ ಭೂಕಂಪ, ಸುನಾಮಿ, ಚಂಡಮಾರುತ, ಲಾವಾರಸದ ಚಿಮ್ಮುವಿಕೆ ಮುಂತಾದ ದುರಂತಗಳು ಎಷ್ಟೇ ಭಯಾನಕವೆನಿಸಿದರೂ ಕಾಲಕ್ರಮೇಣ ಅದರ ಪರಿಣಾಮಗಳು ಸಹಜವಾಗಿ ಮರೆಯಾಗಿಬಿಡುತ್ತವೆ. ಆದರೆ ಮನುಷ್ಯ ನಿರ್ಮಾಣದ ಕೆಲವು ಬೃಹತ್ ಯೋಜನೆಗಳು ನೆಲ ಕಚ್ಚಿ ದುರಂತ ಸಂಭವಿಸಿದಾಗ ಅದರಿಂದ ಸಂಪೂರ್ಣ ಹೊರಬರಲು ಕೆಲವು ದಶಕಗಳೇ ಬೇಕಾಗಬಹುದು. ಅದಕ್ಕೆ ನಿದರ್ಶನ ಜಪಾನಿನಲ್ಲಿ ಸಂಭವಿಸಿದ ಪರಮಾಣು ಸ್ಥಾವರಗಳ ಭಯಾನಕ ದುರಂತ.

೨೦೧೧ ಮಾರ್ಚ್ ೧೨ರಂದು ಇಡೀ ಪ್ರಪಂಚಕ್ಕೆ ಸಿಡಿಲಿನಂತೆ ಮತ್ತೊಂದು ಘೋರ ದುರಂತ ಅಪ್ಪಳಿಸಿತು. ಸಮುದ್ರದಲ್ಲಿ ಎದ್ದ ಸುನಾಮಿ ಜಪಾನ್ ನ ಫುಕೋಶಿಮಾ ನಗರವನ್ನು ಸಿಡಿಲಿನಂತೆ ಅಪ್ಪಳಿಸಿತು. ಇದರಿಂದಾಗಿ ಈ ನಗರದ ಹೊರವಲಯದಲ್ಲಿ ಸ್ಥಾಪಿಸಲಾಗಿದ್ದ ನಾಲ್ಕು ಪರಮಾಣು ಸ್ಥಾವರಗಳು ಕ್ಷಣಮಾತ್ರದಲ್ಲಿ ಸುನಾಮಿ ಅಲೆಗಳಿಂದ ದಾಳಿಗೊಳಗಾಗಿ ನೀರಿನಲ್ಲಿ ಮುಳುಗಿದವು. ಆ ಪೈಕಿ ಮೂರು ಸ್ಥಾವರಗಳು ಸಂಪೂರ್ಣವಾಗಿ ಭಗ್ನಗೊಂಡು ಅಪಾರವಾದ ಅಣು ವಿಕಿರಣ ಮಾಲಿನ್ಯಕ್ಕೆ ನಾಂದಿ ಹಾಡಿತು.

ಈ ದುರ್ಘಟನೆಗೆ ತುತ್ತಾದ ಪ್ರಮುಖ ನಗರ ಫುಕೋಶಿಮಾ ಮತ್ತು ಅದರ ಸುತ್ತಮುತ್ತಲಿನ ೮೦ ಕಿ ಮೀ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳು ಮತ್ತು ಪಟ್ಟಣಗಳು. ಈ ದುರಂತದಿಂದ ಇದುವರೆಗೆ ಸುಮಾರು ಹದಿನೈದು ಸಾವಿರಕ್ಕೂ ಅಧಿಕ ಜನ ಪ್ರಾಣ ಕಳೆದುಕೊಂಡಿದ್ದು, ಸುಮಾರು ಮೂರು ಸಾವಿರಕ್ಕೂ ಅಧಿಕ ಮಂದಿ ಕಾಣೆಯಾಗಿದ್ದಾರೆ. ಆ ನಗರದ ಸುಮಾರು ೧.೧೦ ಲಕ್ಷ ಮನೆಗಳು ಮತ್ತು ವಾಣಿಜ್ಯ ಕೇಂದ್ರಗಳು ವಿಕಿರಣ ದಾಳಿಗೆ ಒಳಗಾಗಿವೆ. ಅಪಾರವಾದ ಆಹಾರ ಧಾನ್ಯಗಳು, ಹಣ್ಣುಗಳು, ಮಾಂಸ ಮುಂತಾದ ವಸ್ತುಗಳು ವಿಕಿರಣಗಳಿಂದ ವಿಷಪೂರಿತಗೊಂಡಿವೆ. ಸ್ಥಾವರದ ಅವಶೇಷದಲ್ಲಿ ಇನ್ನೂ ೧.೨೦ ಲಕ್ಷ ಟನ್ ಕಲುಷಿತ ನೀರು ಅಡಗಿದೆ.

ಪರಮಾಣು ಸ್ಥಾವರಗಳಲ್ಲಿ (Nuclear Reactors) ಯುರೇನಿಯಂ ಇಂಧನವನ್ನು ವಿದಳನ ಕ್ರಿಯೆಗೆ ಬಳಸಿದಾಗ ಬಿಡುಗಡೆಯಾಗುವ ಉಪೌತ್ಪನ್ನವೇ ಸೀಸಿಯಂ (Cesium). ಇದು ಭಯಾನಕ ವಿಕಿರಣಕಾರಕ. ವಿಕಿರಣ ಮಾಲಿನ್ಯ ಉಂಟಾಗುವುದು ಇದರಿಂದಲೇ. ಇದು ಹೊರಹೊಮ್ಮದಂತೆ ಸ್ಥಾವರಗಳಲ್ಲಿ ಸುರಕ್ಷತಾ ವ್ಯವಸ್ಥೆ ಮಾಡಿರುತ್ತಾರೆ. ಆದರೆ ಸ್ಥಾವರಗಳು ಸ್ಫೋಟಿಸಿದಾಗ ಇದು ಅತ್ಯಂತ ವೇಗವಾಗಿ ಪರಿಸರದಲ್ಲಿ ಹರಡಿ ವಿಕಿರಣ ಮಾಲಿನ್ಯಕ್ಕೆ ಕಾರಣವಾಗುತ್ತದೆ. ಸೀಸಿಯಂ ಐಸೋಟೋಪ್ ನ ಅರ್ಧಾಯುಷ್ಯ ಕೇವಲ ೩೦ ವರ್ಷಗಳು ( ಅಂದರೆ ಸೀಸಿಯಂ ಐಸೋಟೋಪ್ ತನ್ನ ಅರ್ಧದಷ್ಟಾಗಲು ತೆಗೆದುಕೊಳ್ಳುವ ಕಾಲ) ತಜ್ಞರ ಪ್ರಕಾರ, ಜನರು ಈ ವಿಕಿರಣಗಳಿಂದ ಹೊರಬರಲು ಕೆಲವಾರು ದಶಕಗಳೇ ಬೇಕಾಗಬಹುದು. ಈಗಾಗಲೇ ಪ್ರಾಣಿಗಳು ಮತ್ತು ಸಸ್ಯಗಳು ಈ ಸೀಸಿಯಂ ಅನ್ನು ಹೀರಿಕೊಂಡಿದೆ. ಹಾಗಾಗಿ ಈ ರೀತಿ ವಿಕಿರಣವನ್ನು ಹೀರಿಕೊಂಡ ಜೈವಿಕ ವಸ್ತುಗಳು ಉಳಿಯುವುದು ಅಸಾಧ್ಯ ಎನ್ನುತ್ತಿದ್ದಾರೆ ವಿಜ್ಞಾನಿಗಳು. 

ಪರಿಹಾರ ಕಾರ್ಯದ ನಿಟ್ಟಿನಲ್ಲಿ ಜಪಾನ್ ಸರಕಾರ ಅದ್ಭುತ ಪ್ರಗತಿಯನ್ನು ಸಾಧಿಸಿದೆ. ಸ್ಫೋಟಗೊಂಡು ಕರಗಿದ ಮೂರು ಸ್ಥಾವರಗಳಿಗೆ ನಿರಂತರವಾಗಿ ಸಮುದ್ರದ ನೀರನ್ನು ಹರಿಸಿ, ಅವನ್ನೆಲ್ಲ ಸಂಪೂರ್ಣ ತಂಪುಗೊಳಿಸಲಾಗಿದೆ. ಇದಕ್ಕಾಗಿ ಸುಮಾರು ಹತ್ತು ಸಾವಿರ ಟನ್ ನೀರನ್ನು ಆವಿಯಾಗಿಸಿ, ವಿಕಿರಣ ಮಾಲಿನ್ಯಕಾರಕವನ್ನು ಸಂಗ್ರಹಿಸಲಾಗಿದೆ. ಆದರೆ ಈ ಸ್ಥಾವರಗಳು ಸಂಪೂರ್ಣ ತಂಪುಗೊಂಡು ‘ಕೂಲ್ಡ್ ಶಟ್ ಡೌನ್' ಎನಿಸಿಕೊಳ್ಳಲು ಈ ವರ್ಷದ ಕೊನೆಯ ಹೊತ್ತಿಗೆ ಸಾಧ್ಯವಾಗಬಹುದು ಎನ್ನುತ್ತಿದ್ದಾರೆ ತಜ್ಞರು. ಕೆಲವು ಪರಿಣಿತರು ರಿಯಾಕ್ಟರ್ ನ ಗರ್ಭದಲ್ಲಿ ಉಳಿದಿರುವ ಅಪಾರ ಇಂಧನ ಮತ್ತು ಅದರ ವಿಕಿರಣಗಳ ಪ್ರಮಾಣವನ್ನು ಲೆಕ್ಕ ಹಾಕಿದರೆ ಇನ್ನೂ ಹೆಚ್ಚು ಕಾಲ ಬೇಕಾಗಬಹುದು ಎನ್ನುತ್ತಿದ್ದಾರೆ.

ಈ ದುರ್ಘಟನೆ ನಡೆದ ತಕ್ಷಣ ಜಪಾನಿನ ಅಧಿಕಾರಿಗಳು ಹಲವಾರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರು. ಈ ಘಟನೆಯ ನಂತರ ತಕ್ಷಣವೇ ಸುತ್ತಮುತ್ತಲಿನ ಜನರಿಗೆ ಅಯೋಡಿನ್ ಮಾತ್ರೆಗಳನ್ನು ನೀಡಿದ್ದು, ಇದು ವಿಕಿರಣಗಳಿಂದ ಉಂಟಾಗಿರುವ ಥೈರಾಯ್ಡ್ ಕ್ಯಾನ್ಸರನ್ನು ತಡೆಗಟ್ಟುತ್ತದೆ. ೧೯೮೬ರಲ್ಲಿ ರಷ್ಯಾದ ಚೆರ್ನೋಬಿಲ್ ನಲ್ಲಿ ನಡೆದ ಅಣುಸ್ಥಾವರ ಸ್ಫೋಟದಲ್ಲಿ ಈ ಮುನ್ನೆಚ್ಚರಿಕೆ ತೆಗೆದುಕೊಳ್ಳದೇ ಇದ್ದುದರಿಂದ ಅಪಾರ ಜನರು ಥೈರಾಯ್ಡ್ ಕ್ಯಾನ್ಸರ್ ಗೆ ತುತ್ತಾದರು. ಸ್ಥಾವರದ ಸುತ್ತಲಿನ ಪ್ರದೇಶವನ್ನು ಸೀಸಿಯಂ ನಿಂದ ಮುಕ್ತಗೊಳಿಸಲು ಬುಲ್ಡೋಜರ್ ಮತ್ತು ಇತರೆ ಯಂತ್ರಗಳ ಸಹಾಯದಿಂದ ಮಣ್ಣಿನ ಮೇಲಿನ ಪದರವನ್ನು ಹೆರೆದು, ತೆಗೆಯಲಾಗುತ್ತಿದೆ. ಅಲ್ಲದೆ ಈ ಪ್ರದೇಶಗಳಲ್ಲಿ ಪೈಪುಗಳ ಮೂಲಕ ಅತ್ಯಂತ ರಭಸದಿಂದ ನೀರನ್ನು ಹಾಯಿಸಲಾಗುತ್ತಿದೆ. ಮನೆಗಳು ಹಾಗೂ ಕಟ್ಟಡಗಳ ಮೇಲೂ ಈ ರೀತಿ ನೀರನ್ನು ಹಾಯಿಸಿ ಶುದ್ಧಗೊಳಿಸಲಾಗುತ್ತಿದೆ. ಈ ಕೆಲಸ ತುಂಬಾ ದಿನ ತೆಗೆದುಕೊಳ್ಳುತ್ತದೆ ಜತೆಗೆ ದುಬಾರಿ. ಇಷ್ಟಾದರೂ ಸ್ಥಾವರದ ಸುತ್ತಮುತ್ತಲಿನ ಭಾಗ ಸಂಪೂರ್ಣ ತೆರವಾಗಿಲ್ಲ. ಅತ್ಯಂತ ಹೆಚ್ಚು ಹಾನಿಗೊಳಗಾದ ಪಟ್ಟಣ ಮತ್ತು ಗ್ರಾಮಗಳ ಜನರನ್ನು ಅಧಿಕಾರಿಗಳು ತಕ್ಷಣ ಸ್ಥಳಾಂತರಿಸಿದ್ದಾರೆ. ಸ್ಫೋಟದ ಶೇ.೨೦ರಷ್ಟು ಅವಶೇಷಗಳು ಭೂಮಿಯ ಮೇಲೆ ಹಾರಿದ್ದು, ಅದನ್ನು ಸಂಪೂರ್ಣ ತೆಗೆದುಹಾಕಲಾಗಿದೆ. ಇಡೀ ಜಪಾನ್ ಈ ದುರ್ಘಟನೆಯಿಂದ ಹೊರಬರಲು ಹಲವಾರು ದಶಕಗಳೇ ಬೇಕಾಗಬಹುದು. ಇಂತಹ ಅಣುಸ್ಥಾವರಗಳು ನಮಗೂ ಬೇಕೇ? ಇದು ಭಾರತೀಯರೆಲ್ಲ ಯೋಚಿಸಬೇಕಾದ ಪ್ರಶ್ನೆ.

ಪರಮಾಣು ಸ್ಥಾವರಗಳು (ನ್ಯೂಕ್ಲಿಯರ್ ರಿಯಾಕ್ಟರ್) ಎಂದರೆ ಪರಮಾಣು ಶಕ್ತಿಯಿಂದ ವಿದ್ಯುತ್/ಯಾಂತ್ರಿಕ ಶಕ್ರಿಯನ್ನು ಉತ್ಪಾದಿಸುವ ಸ್ಥಳ. ಇಲ್ಲಿ ಪರಮಾಣುಗಳನ್ನು ವಿಭಜಿಸಿ ವಸ್ತುವನ್ನು ಶಕ್ತಿಯನ್ನಾಗಿ ಪರಿವರ್ತಿಸಲಾಗುತ್ತದೆ. ಈ ಪರಮಾಣು ವಿದಳನದಲ್ಲಿ ಸ್ವಲ್ಪ ಪ್ರಮಾಣದ ವಸ್ತು ಶಕ್ತಿಯಾಗಿ ಮಾರ್ಪಡುತ್ತದೆ. ಈ ವಿದಳನ ಕ್ರಿಯೆಗೆ ಯುರೇನಿಯಂ, ಥೋರಿಯಂ, ಪೊಲೊನಿಯಂನಂತಹ ವಿಕಿರಣಶೀಲ ಮೂಲವಸ್ತುಗಳನ್ನು ಬಳಸಲಾಗುತ್ತದೆ. ಅಣು ಸ್ಥಾವರಗಳನ್ನು ನಿರ್ಮಿಸಲು ಅಪಾರ ತಂತ್ರಜ್ಞಾನ, ಹಣ ಹಾಗೂ ಶ್ರಮ ಬೇಕಾಗುತ್ತದೆ.

ಎಲ್ಲಾ ರಾಷ್ಟ್ರಗಳೂ ಅಣು ಸ್ಥಾವರಗಳಲ್ಲಿ ವಿದ್ಯುತ್ ಉತ್ಪಾದಿಸುತ್ತೇವೆ ಎಂದು ಹೇಳಿಕೊಂಡರೂ ರಹಸ್ಯವಾಗಿ ಅಣುಬಾಂಬ್ ಮತ್ತು ಇತರೆ ಶಸ್ತ್ರಾಸ್ತ್ರಗಳನ್ನು ತಯಾರಿಸುತ್ತಿರುವುದು ಸುಳ್ಳೇನಲ್ಲ. !

-ಕೆ. ನಟರಾಜ್, ಬೆಂಗಳೂರು 

ಚಿತ್ರ ಕೃಪೆ: ಇಂಟರ್ನೆಟ್ ತಾಣ