ಫುಟ್ ಪಾಥ್ ಭೈರ ನ ಮರ್ಡರ್

ಫುಟ್ ಪಾಥ್ ಭೈರ ನ ಮರ್ಡರ್

ಅಂದು ಸಂಜೆ ಎಂದಿನಂತೆ ಕೆಲಸ ಮುಗಿಸಿ ಆಫೀಸ್ ಕೆಳಗಡೆ ಗೆಳೆಯನ ಜೊತೆ ಕಾರಿನ ಬಳಿ ಮಾತನಾಡುತಾ ನಿಂತಿದ್ದೆ. ಅಂದು ಎಂದಿಗಿಂತ ಸ್ವಲ್ಪ ಜನಸಂದಣಿ ಹೆಚ್ಚೇ ಇತ್ತು. ನಾನು ಅವನು ಸುಮಾರು ಹೊತ್ತು ಮಾತನಾಡುತ್ತ ಅಲ್ಲಿ ಇಲ್ಲಿ ಕಣ್ಣು ಹಾಯಿಸುತ್ತ ನಿಂತಿದ್ದೆವು. ನಮ್ಮ ಪಕ್ಕದಲ್ಲೇ ಒಂದು ಮಾರುತಿ ವ್ಯಾನ್ ಬಂದು ನಿಂತಿತು. ಅದರಿಂದ ಒಂದು ಐದು ಆರು ಮಂದಿ ಕೆಳಗಿಳಿದು ಅದೇನೋ ಗುಸು ಗುಸು ಮಾತಾಡುತ್ತಿದ್ದರು. ನಾವಿಬ್ಬರು ಅದರ ಬಗ್ಗೆ ಹೆಚ್ಚು ಗಮನ ಕೊಡಲಿಲ್ಲ. ಸೂರ್ಯ ತನ್ನ ಡ್ಯೂಟಿ ಮುಗಿಸಿ ಪಶ್ಚಿಮದ ಕಡೆ ಹೊರಡುತ್ತಿದ್ದಂತೆ ನಿಧಾನವಾಗಿ ಕತ್ತಲು ಅವರಿಸತೊಡಗಿತು. ಜನ ಸಂದಣಿ ಹೆಚ್ಚಾಗುತ್ತ ಕಮ್ಮಿಯಾಗುತ್ತಿತ್ತು.ಅಷ್ಟರಲ್ಲಿ ಪಕ್ಕದ ವ್ಯಾನಿನ ಬಳಿ ನಿಂತಿದ್ದವರಲ್ಲಿ ಮಾತುಕತೆ ಜೋರಾಯಿತು.

ಸಮಯ ಸಂಜೆ ಎಳಾಗುತ್ತಿತ್ತು. ಬೀದಿ ದೀಪಗಳು ಬೆಳಗಿ ನಾವಿದ್ದ ಜಾಗದಲ್ಲಿ ಹೆಚ್ಚು ಬೆಳಕು ಬೀಳುತ್ತಿತ್ತು. ಜನ ಸಂದಣಿ ಮುಂಚೆ ಇದ್ದಷ್ಟು ಇರಲಿಲ್ಲ. ನಮಗೆ ನಂತರದ ಮೂರು ದಿನ ರಜೆ ಇದ್ದಿದ್ದರಿಂದ ನಾನು ನನ್ನ ಗೆಳೆಯ ಇನ್ನೂ ಮಾತನಾಡುತ್ತಲೇ ಇದ್ದೆವು. ಪಕ್ಕದ ವ್ಯಾನಿನ ಬಳಿ ಇದ್ದ ಜನರ ಮಾತು ಜೋರಾಗಿ ಸಾಗುತ್ತಿತ್ತು. ಅವಾಚ್ಯ ಶಬ್ಧಗಳೊಂದಿಗೆ ಬೈದು ಕೊಳ್ಳುತ್ತಿದ್ದರು. ಅಷ್ಟರಲ್ಲಿ ಅಲ್ಲಿಗೆ ಇನ್ನ ಎರಡು ಬೈಕಿನಲ್ಲಿ ಐದು ಜನ ಬಂದು ಸೀದಾ ವ್ಯಾನಿನ ಬಳಿ ಹೋಗಿ ಅವರು ಜೋರಾಗಿ ಮಾತನಾಡಲು ಶುರು ಮಾಡಿದರು. ನಮಗೆ ಏಕೋ ಸಣ್ಣಗೆ ಅನುಮಾನ ಶುರು ಆಯಿತು. ಮುಂದಿನ ಕೆಲವು ಕೆಲವು ನಿಮಿಷಗಳಲ್ಲಿ ಒಂದು ಕೆಟ್ಟ ಘಟನೆ ನಡೆಯಬಹುದು ಎಂದು ನಮ್ಮ ಊಹೆಗೆ ಬರಲಿಲ್ಲ. ಇದ್ದಕ್ಕಿದ್ದಂತೆ ಅವರಲ್ಲೊಬ್ಬ ಜೋರಾಗಿ ಅಯ್ಯೋ ಅಮ್ಮ ಎಂದು ಕಿರುಚಲು ಶುರು ಮಾಡಿದ. ನಾವು ಏನಾಯಿತು ಎಂದು ತಿರುಗಿ ನೋಡಿದ ತಕ್ಷಣ ಭಯಭೀತರಾದೆವು. ವ್ಯಾನಿನ ಬಳಿ ನಿಂತಿದ್ದ ಆರೇಳು ಮಂದಿ ಒಬ್ಬನನ್ನು ನೆಲದ ಮೇಲೆ ಹಾಕಿಕೊಂಡು ಮಚ್ಚು ಲಾಂಗುಗಳಿಂದ ಅವನನ್ನು ಮನಸೋ ಇಚ್ಛೆ ಥಳಿಸುತ್ತಿದ್ದರು. ಕ್ಷಣ ಕಾಲ ಅಲ್ಲಿ ಏನು ನಡೆಯುತ್ತಿದೆ ಎಂದು ಅರಿವಾಗುವಷ್ಟರಲ್ಲಿ ಅಲ್ಲೊಂದು ಘೋರ ನಡೆದು ಹೋಗಿತ್ತು.

ಕೂಡಲೇ ಪೋಲಿಸ್ ಜೀಪಿನ ಸೈರನ್ ಸದ್ದು ಕೇಳಿಸಿ ಅಲ್ಲಿದ್ದವರು ಓಡಲು ಶುರು ಮಾಡಿದರು. ನನ್ನ ಸ್ನೇಹಿತ ನನ್ನನ್ನು ಅಲ್ಲೇ ಬಿಟ್ಟು ಓಟ ಕಿತ್ತಿದ್ದ. ನನ್ನ ಕಾರಿನ ಬಳಿಯೇ ಒಂದು ಶವ ಬಿದ್ದಿತ್ತು. ನನಗೆ ಏನು ಮಾಡಲು ತೋಚದೆ ಅಲ್ಲಿಂದ ತೆರಳಲು ಕಾರಿನ ಬೀಗಕ್ಕೆ ಹುಡುಕುತ್ತಿದ್ದೇನೆ. ಆಗ ಅರಿವಾಯಿತು ಕಾರಿನ ಕೀ ಒಳಗೆ ಬಿಟ್ಟು ಲಾಕ್ ಮಾಡಿದ್ದೇವೆ ಎಂದು. ಏನೊಂದೂ ಯೋಚನೆ ಮಾಡದೆ ಅಲ್ಲಿಂದ ಓಡಲು ಶುರು ಮಾಡಿದೆ. ಸ್ವಲ್ಪ ದೂರ ಓಡಿ ಬಂದ ಮೇಲೆ ನನ್ನ ಸ್ನೇಹಿತ ಸಿಕ್ಕಿದ. ಏತಕ್ಕೆ ನನ್ನನ್ನು ಬಿಟ್ಟು ಓಡಿ ಬಂದೆ ಎಂದರೆ ಅಲ್ಲಿ ಸತ್ತು ಬಿದ್ದವನು ನನಗೆ ಗೊತ್ತು ಎಂದನು ಯಾರು ಎಂದು ಕೇಳಿದಾಗ ಫುಟ್ ಪಾತ್ ಭೈರ ಎಂದು ಹೇಳಿದ. ಯಾರು ಆತ ಎಂದು ಕೇಳಿದ್ದಕ್ಕೆ ಅವನು ದೊಡ್ಡ ರೌಡಿ ಎಂದು ಹೇಳುತ್ತಿದ್ದಂತೆ ಪೊಲೀಸರು ನಮ್ಮನ್ನು ಓಡಿಸಿಕೊಂಡು ಬರುತ್ತಿದ್ದರು. ಅಷ್ಟರಲ್ಲಿ ತೀಕ್ಷ್ಣವಾದ ಬೆಳಕೊಂದು ಕಣ್ಣಿಗೆ ಬಿತ್ತು.

ಆ ಬೆಳಕು ಏನೆಂದು ಸರಿಯಾಗಿ ಕಣ್ಣು ಬಿಡಲು ಪ್ರಯತ್ನಿಸಿದರೆ ಬೆಳಗಿನ ಏಳು ಗಂಟೆಗೆ ಸೂರ್ಯನ ಕಿರಣಗಳು ಕಿಟಕಿಯ ಮೂಲಕ ಕಣ್ಣಿಗೆ ಬೀಳುತ್ತಿದ್ದವು. ತಕ್ಷಣ ಎದ್ದು ಫುಟ್ ಪಾತ್ ಭೈರನ ಮರ್ಡರ್ ಕನಸೆಂದು ಅರಿವಾಗಿ ಎದ್ದು ಹೋಗಿ ಮುಖ ತೊಳೆದುಕೊಂಡು ಬಂದೆ

Comments