ಫುಡ್ ಪಾಯಿಸನ್ ಆದರೆ ಮನೆಮದ್ದು ಮಾಡಿ

ಫುಡ್ ಪಾಯಿಸನ್ ಆದರೆ ಮನೆಮದ್ದು ಮಾಡಿ

ಈಗ ಜಗತ್ತು ಬಹಳ ವೇಗದಲ್ಲಿ ಬದಲಾಗುತ್ತಿದೆ. ಯಾರಿಗೂ ಸಮಯವೇ ಇಲ್ಲ. ಮೊದಲಾದರೆ ಮನೆಯಲ್ಲೇ ಅಡುಗೆ, ಆಹಾರ. ಈಗಂತೂ ವಾರವಿಡೀ ಹೋಟೇಲ್ ತಿಂಡಿ-ಊಟ, ಫಾಸ್ಟ್ ಫುಡ್ ಸಹವಾಸ. ಮರುದಿನ ಹೊಟ್ಟೆ ತಳಮಳ. ಹೆಚ್ಚಾಗಿ ಬೀದಿಬದಿಯಲ್ಲಿನ ಶುಚಿತ್ವ ಇಲ್ಲದ ಕಡೆಗಳಲ್ಲಿ ಆಹಾರ ಸೇವಿಸುವುದರಿಂದ ಯಾರಿಗಾದರೂ ಫುಡ್ ಪಾಯಿಸನ್ ಆಗುವ ಸಾಧ್ಯತೆ ಇದೆ. ಈ ರೀತಿ ಆಹಾರ ವಿಷವಾಗುವುದರಿಂದ ಹೊಟ್ಟೆ ಕೆಟ್ಟು ಹೋಗಿ ವಾಂತಿ, ಬೇಧಿ, ತಲೆ ಸುತ್ತುವಿಕೆಯ ಲಕ್ಷಣಗಳು ಕಾಣಿಸಬಹುದು. ಕೆಲವು ಸಲ ಈ ಫುಡ್ ಪಾಯಿಸನ್ ನಿಜಕ್ಕೂ ಪಾಯಿಸನ್ (ವಿಷ) ಆಗಿ ಜೀವವನ್ನೇ ಕಸಿಯುವ ಸಾಧ್ಯತೆ ಇದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಹಾಗೂ ಕೆಲವೊಂದು ಬಗೆಯ ಅಲರ್ಜಿಯ ಸಮಸ್ಯೆ ಇರುವವರಲ್ಲಿ ಬೇಗನೇ ಮತ್ತು ನಿರಂತರ ಫುಡ್ ಪಾಯಿಸನ್ ಆಗಬಹುದು. ಫುಡ್ ಪಾಯಿಸನ್ ಆದಾಗ ಕೆಲವು ಬಗೆಯ ಮನೆಮದ್ದನ್ನು ಮಾಡುವುದರಿಂದ ಪರಿಣಾಮಕಾರಿಯಾದ ಪರಿಹಾರ ಸಿಗುತ್ತದೆ. ಮನೆಮದ್ದಿನಿಂದಲೂ ಸಮಸ್ಯೆ ಪರಿಹಾರವಾಗದೇ ಇದ್ದಲ್ಲಿ ತಜ್ಞ ವೈದ್ಯರನ್ನು ಕಾಣುವುದು ಸೂಕ್ತ.

ಲಿಂಬೆ: ಇದು ಆಂಟಿ ವೈರಲ್ ಮತ್ತು ಆಂಟಿ ಬ್ಯಾಕ್ಟೀರಿಯಲ್ ಆಗಿರುವುದರಿಂದ ವೈರಸ್ ಗಳ ನಾಶಕ್ಕೆ ಸಹಾಯ ಮಾಡುತ್ತದೆ. ಇದನ್ನು ನಿತ್ಯವೂ ಪಾನೀಯದ ರೂಪದಕ್ಕಿ ಬಳಸುವುದರಿಂದ ಫುಡ್ ಪಾಯಿಸನ್ ನಿಂದ ದೂರವಿರಬಹುದು. ವಾಕರಿಕೆಯ ಬರುವ ಸಮಯದಲ್ಲಿ ಲಿಂಬೆಯ ಸುವಾಸನೆಯನ್ನು ಆಘ್ರಾಣಿಸಿದರೆ ತಕ್ಕ ಮಟ್ಟಿನ ಆರಾಮ ದೊರೆಯುತ್ತದೆ.

ಏಲಕ್ಕಿ: ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಏಲಕ್ಕಿ ಪ್ರಮುಖ ಪಾತ್ರ ವಹಿಸುತ್ತದೆ. ವಾಕರಿಕೆ, ವಾಂತಿ ಮೊದಲಾದ ಸಮಸ್ಯೆಗಳಿದ್ದರೆ ಅದನ್ನು ಹೋಗಲಾಡಿಸುತ್ತದೆ.

ತುಳಸಿ: ಈ ಸಸ್ಯವು ಹೊಟ್ಟೆಯಲ್ಲಿರುವ ಕಲ್ಮಶವನ್ನು ಹೋಗಲಾಡಿಸುತ್ತದೆ. ಕೆಟ್ಟ ಬ್ಯಾಕ್ಟೀರಿಯಾಗಳು ಹೊಟ್ಟೆಯಲ್ಲಿ ಬೆಳೆಯದಂತೆ ನೋಡಿಕೊಳ್ಳುತ್ತದೆ. ತುಳಸಿ ಚಹಾ ಅಥವಾ ಕಷಾಯದ ರೂಪದಲ್ಲಿ ಸೇವನೆ ಆರೋಗ್ಯಕ್ಕೆ ಹಿತಕಾರಿ.

ಬೆಳ್ಳುಳ್ಳಿ: ಇದು ಉತ್ತಮ ರೋಗನಿರೋಧಕ ಶಕ್ತಿಯನ್ನು ಹಾಗೂ ಆಂಟಿ ಬ್ಯಾಕ್ಟೀರಿಯಲ್ ಅಂಶಗಳನ್ನು ಒಳಗೊಂಡಿದೆ. ಡಯೇರಿಯಾ ಮತ್ತು ಹೊಟ್ಟೆ ನೋವಿಗೆ ಇದು ಅತ್ಯುತ್ತಮ.

ಶುಂಠಿ: ಫುಡ್ ಪಾಯಿಸನ್ ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಬಲ್ಲ ವಸ್ತು ಇದು. ಇದು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಹಸಿ ಶುಂಠಿಯನ್ನು ಜಗಿದು ತಿನ್ನಲು ಕಷ್ಟವಾಗುವುದಾದರೆ ಚಹಾ, ಮಜ್ಜಿಗೆ ಅಥವಾ ಪಾನೀಯದ ಜೊತೆ ಮಿಶ್ರ ಮಾಡಿ ಸೇವನೆ ಮಾಡಿದರೆ ವಾಂತಿಯ ಸಮಸ್ಯೆಯನ್ನು ತಡೆಗಟ್ಟಬಹುದಾಗಿದೆ.

ಜೀರಿಗೆ: ಒಂದು ಕಪ್ ನೀರಿಗೆ ಸ್ವಲ್ಪ ಜೀರಿಗೆಯನ್ನು ಹುಡಿ ಮಾಡಿ ಅಥವಾ ಹಾಗೆಯೇ ಹಾಕಿ ಕುದಿಸಿ ಕುಡಿಯುವುದರಿಂದ ಹೊಟ್ಟೆಯ ಅಜೀರ್ಣದ ಸಮಸ್ಯೆಯನ್ನು ಸರಿಪಡಿಸಬಹುದಾಗಿದೆ. 

ಆಪಲ್ ವಿನೆಗಾರ್: ಬಿಸಿ ನೀರಿಗೆ ೨ ಚಮಚ ಆಪಲ್ ಸೈಡರ್ ವಿನೆಗಾರ್ (ಮಾರುಕಟ್ಟೆಯಲ್ಲಿ ಸುಲಭವಾಗಿ ದೊರೆಯುತ್ತದೆ) ಸೇರಿಸಿ ಆಹಾರ ಸೇವಿಸುವ ಮೊದಲು ಕುಡಿದರೆ ಫುಡ್ ಪಾಯಿಸನ್ ನಿಂದ ಆಗಿರುವ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.

ಮೆಂತೆ ಮತ್ತು ಮೊಸರು: ಮೆಂತೆ ಬಹಳ ಉತ್ತಮವಾದ ವಸ್ತು. ಒಂದು ಚಮಚ ಮೆಂತೆ ಹುಡಿಯನ್ನು ಮೊಸರಿನೊಂದಿಗೆ ಬೆರೆಸಿ ಸೇವಿಸಿದರೆ ಹೊಟ್ಟೆ ನೋವಿನ ಸಮಸ್ಯೆ ಬಹುಬೇಗನೇ ನಿವಾರಣೆಯಾಗುತ್ತದೆ. ಮೊಸರಿನಲ್ಲಿ ಆಂಟಿ ಬ್ಯಾಕ್ಟೀರಿಯಲ್ ಅಂಶಗಳಿದ್ದು ಇವು ಫುಡ್ ಪಾಯಿಸನ್ ಮಾಡುವ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತವೆ. 

ಕೊತ್ತಂಬರಿ: ಕೆಟ್ಟ ಬ್ಯಾಕ್ಟೀರಿಯಾಗಳನ್ನು ಸಾಯಿಸುವಲ್ಲಿ ಕೊತ್ತಂಬರಿ ಬೀಜ ಮಹತ್ವದ ಪಾತ್ರ ವಹಿಸುತ್ತದೆ.

ಬಡೆಸೋಂಪು: ಸೋಂಪು ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಜೀರಿಗೆ, ಕೊತ್ತಂಬರಿ ಹಾಗೂ ಸೋಂಪಿನ ಹುಡಿ ಮಾಡಿ ಕಷಾಯ ಮಾಡಿ ಪ್ರತೀ ದಿನ ಕುಡಿದರೆ ಆರೋಗ್ಯಕ್ಕೆ ಬಹಳ ಉತ್ತಮ.

ಜೇನುತುಪ್ಪ: ಜೇನುತುಪ್ಪದ ಸೇವನೆಯು ಹೊಟ್ಟೆಯಲ್ಲಿರುವ ಕೆಟ್ಟ ಬ್ಯಾಕ್ಟೀರಿಯಾಗಳನ್ನು ನಾಶ ಮಾಡುತ್ತವೆ. ಚಹಾ ಜೊತೆ ಜೇನು ತುಪ್ಪವನ್ನು ಮಿಶ್ರಮಾಡಿ ಕುಡಿದರೆ ಆರೋಗ್ಯಕ್ಕೆ ಬಹಳ ಹಿತಕಾರಿ.

ಇವೆಲ್ಲಾ ಫುಡ್ ಪಾಯಿಸನ್ ಆದರೆ ಮನೆಯಲ್ಲೇ ಮಾಡುವ ಮದ್ದುಗಳು. ಇವು ಆರೋಗ್ಯದ ದೃಷ್ಟಿಯಿಂದಲೂ ಬಹಳ ಉತ್ತಮ. ಆದರೆ ಯಾವುದನ್ನೂ ವಿಪರೀತ ಪ್ರಮಾಣದಲ್ಲಿ ಸೇವಿಸಲು ಹೋಗಬೇಡಿ. ಅಡ್ಡ ಪರಿಣಾಮಗಳಾಗುವ ಸಾಧ್ಯತೆ ಇದ್ದೇ ಇದೆ. ನಿಯಮಿತವಾಗಿ ಸೇವನೆ ಮಾಡುವುದು ಆರೋಗ್ಯಕ್ಕೆ ರಹದಾರಿಯಾಗಬಹುದು.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ