ಫೇಸ್ ಬುಕ್.ಕಾಮ್/ಮಾನಸ ಜೋಶಿ

ಫೇಸ್ ಬುಕ್.ಕಾಮ್/ಮಾನಸ ಜೋಶಿ

ಪುಸ್ತಕದ ಲೇಖಕ/ಕವಿಯ ಹೆಸರು
ಜೋಗಿ
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು-೫೬೦೦೦೪
ಪುಸ್ತಕದ ಬೆಲೆ
ರೂ. ೯೫.೦೦, ಮುದ್ರಣ: ೨೦೧೨

ಕಥೆಗಾರ, ಪತ್ರಕರ್ತ ಜೋಗಿಯವರು ಫೇಸ್ ಬುಕ್ ಡಾಟ್ ಕಾಮ್/ಮಾನಸ ಜೋಶಿ ಎಂಬ ವಿಲಕ್ಷಣ ಹೆಸರುಳ್ಳ ಕಥಾ ಸಂಗ್ರಹವನ್ನು ಬರೆದಿದ್ದಾರೆ. ಇದಕ್ಕೆ ಕಥೆಗಳು ಮತ್ತು ಕಥೆಯಾಗದ ಕಥೆಗಳು ಎಂದು ಹೆಸರು ಬೇರೆ ನೀಡಿದ್ದಾರೆ. ಜೋಗಿಯವರ ಕಥೆಗಳೇ ಹಾಗೆ ಕಾಡುತ್ತಾ ಇರುತ್ತವೆ. ಅವರೇ ಹೇಳುವಂತೆ ‘ಇನ್ನು ಸಣ್ಣ ಕಥೆಗಳನ್ನು ಬರೆಯಬಾರದು ಎಂಬ ಬಹುದಿನದ ನಿರ್ಧಾರ ಕರಗಿದ ನಂತರ ಹುಟ್ಟಿದ ಕಥೆಗಳು ಇವು. ಸಣ್ಣ ಕಥೆಗಳ ದೊಡ್ಡ ಸಮಸ್ಯೆ ಇದು: ಅವು ಪುಟಗಳ ಸಂಖ್ಯೆಯಲ್ಲಿ ಚಿಕ್ಕದಾಗಿದ್ದರೂ ಒಂದು ಕಾದಂಬರಿಯ ಆತ್ಮವನ್ನೇ ನುಂಗಿ ಬಿಡುತ್ತವೆ. ವೈಯಕ್ತಿಕವಾಗಿ ನನಗೆ ಸಣ್ಣ ಕಥೆಗಳಲ್ಲಿ ನಂಬಿಕೆಯೂ ಹೊರಟುಹೋಗಿದೆ. ಅವುಗಳನ್ನು ಕ್ಷಣದ ಓದಿಗೆ ಬರೆಯಬಹುದು. ಓದುಗರೂ ಅದನ್ನು ಓದಿ ಮರೆಯುತ್ತಾರೆ ಎಂಬುದು ಕ್ರಮೇಣ ಅರ್ಥವಾಗಿದೆ.’ 

ಮುನ್ನುಡಿಯಲ್ಲಿ ಬರಹಗಾರ ಗೋಪಾಲಕೃಷ್ಣ ಕುಂಟನಿಯವರು ನನಗೆ ಮಾತ್ರ ಗೊತ್ತಿರುವ ಜೋಗಿ ಕಥೆಗಳು ಎಂದು ಜೋಗಿ ಕಥೆಗಳ ಅನಾವರಣ ಮಾಡುತ್ತಾ ಹೋಗುತ್ತಾರೆ. ಪರಿವಿಡಿಯಲ್ಲಿ ಕತೆಗಳು ಮತ್ತು ಕತೆಯಾಗದ ಕತೆಗಳು ಎಂಬ ಎರಡು ವಿಭಾಗಗಳಿವೆ. ೧೩ ಕತೆಗಳಿವೆ ಹಾಗೂ ೯ ಕತೆಯಾಗದ ಕತೆಗಳಿವೆ. ಎಲ್ಲಾ ಕತೆಗಳು ಸರಾಗವಾಗಿ ಓದಿಸಿಕೊಂಡು ಹೋಗುತ್ತವೆ. 

ಪುಸ್ತಕದ ಹೆಸರಾದ ಮಾನಸ ಜೋಶಿ ಎಂಬ ಕತೆ ಎರಡು ಬೇರೆ ಬೇರೆ ಆಯಾಮಗಳಲ್ಲಿ ಮುಂದುವರೆಯುತ್ತೆ. ಸಾಮಾಜಿಕ ಜಾಲತಾಣ ಫೇಸ್ ಬುಕ್ ಮತ್ತೆ ಅದರ ಕತೆಯನ್ನು ಹೇಳುತ್ತದೆ. ಮಾನಸ ಜೋಶಿ ಎಂಬ ಟಿವಿ ರಿಪೋರ್ಟರ್ ಬಗ್ಗೆ ಈ ಕತೆ ಹೇಳುತ್ತದೆ. ವರದಿಗಾರರ ಬಿಡುವಿಲ್ಲದ ಕೆಲಸ, ಮನೆಯಲ್ಲಿ ಅತ್ತೆಯ ಉಪಟಳ, ಸದಾ ಮೀಟಿಂಗ್ ಎಂದು ಊರೂರು ತಿರುಗಾಡುವ ಗಂಡ, ಬೋರ್ಡಿಂಗ್ ಶಾಲೆಯಲ್ಲಿ ಓದುವ ಮಗ, ಮನೆ ಹಾಗೂ ಕಾರ್ ತೆಗೆದುಕೊಳ್ಳಲು ಮಾಡಿದ ಸಾಲ ಹೀಗೆ ಹಲವಾರು ವಿಧಗಳಲ್ಲಿ ಕತೆ ತೆರೆದುಕೊಳ್ಳುತ್ತದೆ. ಮತ್ತೊಂದು ಕಡೆ ಮಾನಸಜೋಶಿಯ ಫೇಸ್ ಬುಕ್ ಖಾತೆಯನ್ನು ನೋಡಿ ಗೆಳೆಯರಾಗಲು ಬಯಸುವ ತಿರುಮಲೇಶ್. ಮಾನಸ ಜೋಶಿ ಹೇಗಿರಬಹುದು? ಎಂಬೆಲ್ಲಾ ಕಲ್ಪನೆಯ ಲೋಕದಲ್ಲಿ ತೇಲಾಡುತ್ತಾನೆ. ಹೀಗೆ ಕತೆಯು ಚಿತ್ರ ವಿಚಿತ್ರ ತಿರುವುಗಳನ್ನು ತೆಗೆದುಕೊಂಡು ನಮ್ಮ ಮನಸ್ಸಲ್ಲೂ ಕತೆಯ ಝಲಕ್ ನ್ನು ಮೂಡಿಸುತ್ತದೆ. ಸುಮಾರು ೧೩೫ ಪುಟಗಳ ಈ ಪುಸ್ತಕ ಅಂಕಿತ ಪುಸ್ತಕದವರು ಪ್ರಕಾಶಿಸಿದ್ದಾರೆ.