ಫೊಂತಮಾರ

ಫೊಂತಮಾರ

ಪುಸ್ತಕದ ಲೇಖಕ/ಕವಿಯ ಹೆಸರು
ಮೂಲ: ಇನ್ಯಾತ್ಸಿಯೊ ಸಿಲೋನೆ, ಕನ್ನಡಕ್ಕೆ: ಕು ಶಿ ಹರಿದಾಸ ಭಟ್ಟ
ಪ್ರಕಾಶಕರು
ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ, ಜೆ ಸಿ ರಸ್ತೆ, ಬೆಂಗಳೂರು-೫೬೦೦೦೨
ಪುಸ್ತಕದ ಬೆಲೆ
ರೂ. ೬೦.೦೦, ಮುದ್ರಣ: ೨೦೦೭

ಬೆಂಗಳೂರಿನ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯವರು ೨೦೦೭ರಲ್ಲಿ ಹೊರತಂದಿರುವ ಇಟಾಲಿಯನ್ ಭಾಷೆಯ ಕಾದಂಬರಿ ಫೊಂತಮಾರ. ಈ ಕಾದಂಬರಿಯು ಮೊದಲು ಬಿಡುಗಡೆಯಾದದ್ದು ೧೯೫೦ರಲ್ಲಿ. ಅಂದು ಶ್ರೀ ಹೊನ್ನಯ್ಯ ಶೆಟ್ಟಿ ಇವರು ಈ ಪುಸ್ತಕದ ಪ್ರಕಾಶಕರಾಗಿದ್ದರು. ಸುಮಾರು ೪೦ ವರ್ಷಗಳ ಬಳಿಕ ೧೯೯೦ರಲ್ಲಿ ಎರಡನೇ ಮುದ್ರಣ ಕಂಡ ಕೃತಿಯು ನಂತರ ಕರ್ನಾಟಕದ ಸುವರ್ಣ ಮಹೋತ್ಸವದ ಸಮಯದಲ್ಲಿ ಈ ಪುಸ್ತಕವನ್ನು ಮರು ಮುದ್ರಣ ಮಾಡಲಾಗಿದೆ.

೧೯೫೦ರ ಸಮಯದಲ್ಲಿ ಈ ಇಟಾಲಿಯನ್ ಕಾದಂಬರಿಯನ್ನು ಕನ್ನಡಕ್ಕೆ ಅನುವಾದ ಮಾಡುವಾಗ ಕು ಶಿ ಹರಿದಾಸ ಭಟ್ಟರು ಬರೆದ ಮೊದಲ ಮಾತುಗಳನ್ನು ಗಮನಿಸಿದರೆ ನಿಮಗೆ ಕಾದಂಬರಿಯ ಬಗ್ಗೆ ಪುಟ್ಟದಾದ ಮಾಹಿತಿ ಸಿಗುತ್ತದೆ. ಇದರಿಂದ ನಿಮ್ಮ ಓದು ಸುಲಭವಾಗುತ್ತದೆ. ಅವರು ತಮ್ಮ ಅರಿಕೆಯಲ್ಲಿ “ ಓದಿದ ಕೂಡಲೆ ನನ್ನ ಮನಸ್ಸಿನ ಮೇಲೆ ಆಶ್ಚರ್ಯಕರವಾದ ಪರಿಣಾಮವನ್ನು ಮೂಡಿಸಿದ ಕಾದಂಬರಿಗಳ ಪೈಕಿ ‘ಫೊಂತಮಾರ' ಒಂದು. ಒಳ್ಳೆಯ ವಸ್ತುವನ್ನು ಕನ್ನಡಕ್ಕೆ ಇಳಿಸುವ ಬಗೆಯ ಹಂಬಲವನ್ನು ನಾನಿನ್ನೂ ತೊರೆದಿಲ್ಲವಾದುದರಿಂದ ಇದನ್ನು ಅನುವಾದಿಸಬೇಕೆಂದು ಬಯಸಿ, ಕಾದಂಬರಿಯ ಆಂಗ್ಲ ಪ್ರಕಾಶಕರಿಗೆ ಬರೆದುಕೊಂಡೆ.

ಬಹಳ ಕಾಲ ಕಳೆದ ಮೇಲೆ ಅನಿರೀಕ್ಷಿತವಾದ ಒಂದು ದಿಶೆಯಿಂದ ರೋಮ್ ನಗರದಿಂದ ಒಂದು ಪತ್ರ ಬಂತು. ಲೇಖಕ ಇನ್ಯಾತ್ಸಿಯೊ ಸಿಲೋನೆ ಅವರ ಪತ್ನಿ ತಮ್ಮ ಗಂಡನ ಪರವಾಗಿ ಅದನ್ನು ಬರೆದಿದ್ದರು. ‘ಫೊಂತವಾರ' ದಕ್ಷಿಣ ಭಾರತೀಯ ಭಾಷೆಗಳಲ್ಲೊಂದರಲ್ಲಿ ಅನುವಾದಗೊಳ್ಳುವ ಪ್ರಸಂಗವನ್ನು ಕೇಳಿ ಸಂತೋಷಗೊಂಡು, ಸಿನಾರ್ ಸಿಲೋನೆ ಕಾದಂಬರಿಯಲ್ಲಿ ಇತೀಚೆಗೆ ಮಾಡಿರುವ ತಿದ್ದಿಕೆಗಳನ್ನು ಉಪಯೋಗಿಸಲಾಗದ ನನ್ನ ಅಶಕ್ತತೆಗಾಗಿ ಖೇದ ವ್ಯಕ್ತ ಪಡಿಸಿದ, ಕಟ್ಟಕಡೆಗೆ ಅನುವಾದದ ಒಂದು ಪ್ರತಿಯನ್ನು ತಾವು ಅತ್ಯಂತ ಗೌರವ ಭಾವದಿಂದ ನೋಡುವ ಪಂಡಿತ ನೆಹರೂ ಅವರಿಗೆ ಕಳಿಸಬೇಕೆಂದು ಭಿನ್ನವಿಸಿಕೊಂಡಿದ್ದರು. ಈ ಬಗೆಯ ಅನುಕೂಲ ವಾತಾವರಣದಲ್ಲಿ ನನ್ನ ಅನುವಾದ ಸಿದ್ಧವಾಯಿತು. ಯಾವುದೋ ‘ಯುನೆಸ್ಕೋ’ ಪ್ರಕಟಣೆಯಿಂದ ‘ಮರಳಿ ಫೊಂತಮಾರಾ’ ಎಂಬ ಆ ತಿದ್ದಿಕೆಯನ್ನು ಶೋಧಿಸಿ ತೆಗೆದು ಕಾದಂಬರಿಯ ಮೂಲಕ್ಕೆ ಜೋಡಿಸಿದ ಮೇಲೆ ಮನಸ್ಸಿಗೆ ಇನ್ನಷ್ಟು ಸಮಾಧಾನವಾಯಿತು. 

ಆ ಮೇಲೆ ಕನ್ನಡದ ಬ್ರಹ್ವಂಶ ಬರೆಹಗಾರರನ್ನು ಸಾಮಾನ್ಯವಾಗಿ ಪೀಡಿಸುವ ಪ್ರಕಟಣೆಯ ಕುತ್ತನ್ನು ನೀಗಲು ಬಂಧು ಹೊನ್ನಯ್ಯ ಸೆಟ್ಟರು ಮುಂದೆ ಬಂದುದು ನನ್ನ ಸುಯೋಗವೆನ್ನಬೇಕು. ಅವರ 'ಅಂತರಂಗ' ದಲ್ಲಿ ಕಂತಿನಂತೆ ಅಚ್ಚಾಗಿ ‘ಫೊಂತಮಾರಾ’ ಈಗಾಗಲೇ ಹಲ ಕೆಲವು ಓದುಗರನ್ನು ತಲುಪಿದೆ. ಪುಸ್ತಕ ರೂಪದಲ್ಲಿ ಹೊರಡುವುದರಿಂದ ಇನ್ನಷ್ಟು ಜನ ಇದರ ಸೊಗಸನ್ನು ಉಂಡಾರೆಂದು ನಾನು ನಂಬಿದ್ದೇನೆ.

ಇಂಥ ವಿಶ್ವಾಸಕ್ಕೆ ಕಾರಣ ಕಾದಂಬರಿಯ ಚಿರನೂತನವಾದ ವಸ್ತು ಮತ್ತು ಅನುಪಮವಾದ ತಂತ್ರ. ಫಾಸಿಸ್ಟರು ಇಟಲಿಯಲ್ಲಿ ಪಟ್ಟಕ್ಕೆ ಬಂದ ದುಷ್ಕಾಲದಲ್ಲಿ ಅಲ್ಲಿಯ ಕಾಲ್ಪನಿಕ ಹಳ್ಳಿಯೊಂದು ಪಾಶವೀಶಕ್ತಿಗೆ ತಲೆ ತಗ್ಗಿಸದೇ ನಿಂತು, ಸೋತರೂ ಅಂತಃಸತ್ವವನ್ನುಳಿಸಿಕೊಂಡು ಅಜೇಯವಾಗಿ ಮೆರೆದ ಸಹಜಸುಂದರವಾದ ಈ ಚಿತ್ರಣ ತುಂಬಾ ಪ್ರಿಯವಾದುದು. ಕಾದಂಬರಿಕಾರನು ಕವಿಯಂತೆ ದ್ರಷ್ಟಾರನಾಗಬಲ್ಲನೆನ್ನುವುದಕ್ಕೆ ‘ಫೊಂತಮಾರಾ’ ಒಂದು ನಿದರ್ಶನ. ಇದನ್ನು ಸಿನಾರ್ ಸಿಲೋನೆ ಬರೆದುದು ತಮ್ಮ ನಿರ್ವಾಸನದ ಕಾಲದಲ್ಲಿ. ಇಟಲಿಯಿಂದ ಹೊರಗೆ ಸ್ವಿರ್ಝಲೆಂಡಿನ ಒಂದು ಗ್ರಾಮಾಂತರದಲ್ಲಿ. ಹಳ್ಳಿಯ ಹೆಸರೂ, ಘಟನೆಗಳ ಸೃಷ್ಟಿಯೂ, ಎಲ್ಲವೂ ಕಾಲ್ಪನಿಕ ಆದರೂ ಇಂಥವೇ ಹಲವಾರು ಘಟನೆಗಳು ತದ್ರೂಪವಾಗಿ ಫಾಸಿಸ್ಟ ಇಟಲಿಯ ಹಳ್ಳಿಗಳಲ್ಲಿ ನಡೆಯಬೇಕಾದರೆ, ಲೇಖಕ ರಾಷ್ಟ್ರದ ಜೀವಸ್ಪಂದನದ ನಾಡಿ ಪರೀಕ್ಷೆಯಲ್ಲಿ ನಿಷ್ಣತನೆಂದು ಬೇರೆ ಹೇಳಬೇಕೇ? ‘ಅವಮಾನದಿದಿರು, ಅನ್ಯಾಯದಿದಿರು, ಯಾರೂ ತಗ್ಗಿ ನಡೆಯಬಾರದು' ಎಂಬುದು ಲೇಖಕ ಸಿಲೋನೆಯ ವಾದ. ಇದು ಸಮಾಜವಾದ ಆಗಬೇಕಿಲ್ಲ, ಸಮತಾವಾದವೂ ಅಲ್ಲ, ನಿರ್ಮಲವಾದ ಮಾನವವಾದ ಹೆಗ್ಗುರುತು.” ಎಂದಿದ್ದಾರೆ. 

೧೯೯೦ರಲ್ಲಿ ಎರಡನೇ ಮುದ್ರಣದ ಸಮಯದಲ್ಲಿ ಉಡುಪಿಯ ಜೀವವಿಮಾ ನಿಗಮದ ಉದ್ಯೋಗಿ ಮತ್ತು ವಿಮರ್ಶಕರಾದ ಜಿ ರಾಜಶೇಖರ್ ಅವರು ಈ ಕೃತಿಯ ಬಗ್ಗೆ ಬರೆದ ವಿಮರ್ಶೆಯನ್ನು ಪುಸ್ತಕದ ಹಿನ್ನುಡಿಯಾಗಿ ಪ್ರಕಟ ಮಾಡಿದ್ದಾರೆ. ಆ ಸಮಯದಲ್ಲಿ ಪುಸ್ತಕದ ಹೆಸರು ‘ಘಂಟಮಾರಾ’ ಎಂದಾಗಿತ್ತು. ಇದಕ್ಕೆ ಕಾರಣ ಇಟಲಿ ಭಾಷೆಯ ಉಚ್ಛಾರದಲ್ಲಿನ ವೈವಿಧ್ಯತೆ. ೧೪೮ ಪುಟಗಳ ಈ ಕೃತಿಯು ಸುಮಾರು ೭೫ ವರ್ಷಗಳ ಹಿಂದಿನ ಇಟಲಿ ದೇಶದ ಪುಟ್ಟ ಹಳ್ಳಿಯ ಚಿತ್ರಣವನ್ನು ನಮ್ಮ ಮುಂದೆ ತೆರೆದಿಡುತ್ತದೆ.